ಕಥೆ.
ಸಧ್ಯಕಿದು ಜಮಖಂಡಿ ಸಂತಿ
ಡಾ.ಪ್ರಕಾಶ ಗ.ಖಾಡೆ
‘ಮುತ್ಯಾ, ಯಾವದೋ ಮುದುಕಿ ಬಂದ ನಿನಗ ಮಲ್ಲಪ್ಪ ಮಾಸ್ತರ ಅದಾನೇನ ಅಂತಾ ಕೇಳಾಕ ಹತ್ಯಾಳ, ಇಲ್ಲ ಅಂತ ಹೇಳಲೇನ’ ಅಂತಾ ವಿಶ್ರಾಂತ ಮಾಸ್ತರರÀ ಐದು ವರ್ಷದ ಮೊಮ್ಮಗಳು ಒಳ ಬಂದು ಕೇಳಿದಾಗ, ಪೇಪರದೊಳಗಿನ ತಮ್ಮ ಫೋಟೋದ್ದು ಮೊಬೈಲದಾಗ ಫೋಟೋ ತುಗೊಳ್ಳತಿದ್ದ ಮಲ್ಲಪ್ಪ ಮಾಸ್ತರು, ಅದನ್ನು ಬಿಟ್ಟು ‘ಯಾವ ಮುದುಕಿ’ ಅನ್ನುತ್ತಾ ತಮ್ಮ ಧೋತರಾ ಸರಿಪಡಿಸಿಕೊಳ್ಳುತ್ತಾ ಹೊರಗೆ ಬಂದರು.
ಬಂದು ನೋಡುತ್ತಾರೆ, ಆ ಮುದುಕಿ. ಮುದುಕಿಯನ್ನು ನೋಡಿದವರೆ ಒಂದ ನಮೂನಿ ತೆಲೆ ತಿರುಗಿದ ಹಾಗೆ ಆಗಿ, ನಿತ್ರಾಣದಿಂದ ಅಲ್ಲಿಯೇ ಕುಸಿದು ಕುಳಿತುಕೊಳ್ಳುತ್ತಾರೆ. ಹತ್ತಿರದಲ್ಲಿಯೇ ಇದೆಲ್ಲವನ್ನೂ ಗಮನಿಸುತ್ತಿದ್ದ ಕಿರಿಸೊಸಿ ಓಡಿ ಬಂದು ‘ಅಯ್ಯೋ ! ಮಾವಾರ ಏನಾತು’ ಅಂತಾ ಗಾಬರ್ಯಾಗಿ, ನೀರ ತಂದು ಮುಖಕ್ಕ ಚಿಮುಕಿಸಿದಳು, ಆವಾಗ ಸ್ವಲ್ಪ ಎಚ್ಚರ ಆದಾಂಗ ಆಗಿ ಸುಧಾರಿಸಿಕೊಂಡು, ತಾವು ಬಿದ್ದಿದ್ದ ಖಬರ್ ಇಲ್ಲದನ, ಬಂದ ಮುದುಕಿಗಿ ‘ಇಲ್ಯಾಕ ಬಂದಿ, ನಿನಗ ಮನಿ ಯಾರ ತೋರಿಸಿದರು’ ಎಂದು ಝಬರಿಸತೊಡಗಿದರು,
ಮಾಸ್ತರರು ಬಾಯಿ ಮಾಡುವ ಸೌಂಡಿಗಿ ಕೆಳಗಿನ ಮೇಲಿನ ಮನೆಗಳಲ್ಲಿದ್ದ ಮಾಸ್ತರರ
ಮಕ್ಕಳು ಮತ್ತು ಇಬ್ಬರು ಸೊಸೆಯಿಂದಿರು, ಮಾಸ್ತರ ಹೆಂಡತಿ, ಮೊಮ್ಮಕ್ಕಳು ಎಲ್ಲಾರು ಮೇನ್ ಗೇಟಿಗೆ ಬಂದು ಸೇರಿದರು, ಮಾಸ್ತರರ ಬಿಪಿ ಇನ್ನಷ್ಟು ಹೆಚ್ಚಾಯಿತು. ತನಗೆ ತಿಳಿದಂತೆ ಬಾಯಿ ಮಾಡುತ್ತಾ ‘ನೀ ಇನ್ನಾ ಸತ್ತಿಲ್ಲೇನ’ ಎಂದು ಜೋರು ಮಾಡುತ್ತಾ, ಮತ್ತೆ ಮೂರ್ಛೆ ಹೋಗಿ ಬಿದ್ದು ಬಿಟ್ಟರು. ಈ ಸಲಾ ಮತ್ತ ಸೊಸ್ತ್ಯಾರು ಮುಖಕ್ಕ ನೀರ ಗೊಜ್ಜಿದರು. ಆದ್ರ ಮಾಸ್ತರಗÀ ಎಚ್ಚರ ಆಗಲಿಲ್ಲ,
ಮನಿಯಾಗ ಇದ್ದ ಹಿರಿ ಮಗಾ ಓಡಿ ಬಂದ ತೆಕ್ಕಿ ಬಡಕೊಂಡ ‘ಎ..ಎಪ್ಪಾ
ಎಪ್ಪಾ’ ಎಂದು ಮ್ಯಾಲ ಕೆಳಗ ಮಾಡಿ ನೋಡಿ ,
‘ಈಗ ಅಪ್ಪನ ತಾಬಡ ತೋಬಡ ದವಾಖಾನಿಗಿ ಕರಕೊಂಡ ಹೋಗಬೇಕ’ ಅಂತಾ, ತಮ್ಮಗ ಕಾರ ಚಾಲೂ ಮಾಡಕ ಹೇಳಿ, ಮಾಸ್ತರನ್ನ ಎತಗೊಂಡ ದವಾಖಾನಿಗಿ ಓಡಿದರು, ಇತ್ತ ಬಂದ ಮುದಕಿ ‘ಅಯ್ಯ ಎವ್ವಾ ಮಾಸ್ತರಗ ಏನಾತು, ಎಷ್ಟ ದಿನದ ಮ್ಯಾಲ ಸಿಕ್ಕಿದ್ದ, ಈಗ ನೋಡಿದರ ಅರೆ ಹೆಣಾ ಆಗಿ ದವಾಖಾನಿಗಿ ಓಡಿಸಿಕೊಂಡ ಹ್ವಾದರು’ ಅಂತಾ ರಂಪಾಟ ಶುರುವಿಟ್ಟುಕೊಂಡು ಗಾಡಿ ಹಿಂದ ಓಡತೊಡಗಿದಳು.
ಈ ರಂಪಾಟಕ್ಕೆ ಜಾತ್ರೆ ಸೇರಿದಂತೆ ಜನಾ ಮಾಸ್ತರ ಮನಿ ಮುಂದ ಸೇರಿ, ‘ಏನಾತು ಏನಾತು’ ಅಂತಾ ಗಾಬರಿಗೆ ಬಿದ್ದು ಕೇಳತೊಡಗಿದರು, ಎಲ್ಲಿದೋ ಒಂದ ಮುದುಕಿ ಬಂದ ಮ್ಯಾಲ ಮಾಸ್ತರರು ಬಾಯಿ ಮಾಡಿ ಬಿಪಿ ಶುಗರ್ ಜಾಸ್ತಿಯಾಗಿ, ದವಾಖಾನಿಗಿ ಒಯ್ಯದಾರ, ಈ ಮುದುಕಿ ಯಾರೋ, ಈ ಮಾಸ್ತರಿಗೆ ಏನಾಗಬೇಕೋ ಎರಡು ಗೊತ್ತಿಲ್ಲದ ಜನಾ ದಂಗಾಗಿ ನಿಂತರು, ಎಲ್ಲಿ ಮುದುಕಿ ಅಂತಾ ಹುಡುಕುವುದರೊಳಗ ಮುದುಕಿ ಮಂಗಮಾಯವಾಗಿ ಬಿಟ್ಟಿದ್ದಳು, ನೆರೆದವರಿಗೆ ಮತ್ತು ಮಲ್ಲಪ್ಪ ಮಾಸ್ತರ ಕುಟುಂಬವರ್ಗದವರಿಗೆ ಇದು ಆಶ್ಚರ್ಯದ ಸಂಕೇತವಾಗಿ ತೋರಿತು.
*
‘ಈ ಮುದುಕಿ ಮತ್ತ ಯಾಕ ಬಂತು, ಎಷ್ಟೋ ವರ್ಷದ ಮ್ಯಾಲ ಇವತ್ತ ನೋಡಾಕ ಹತ್ತಿನಿ, ಯಾರೋ ಮುದುಕಿ ಸತ್ತ ಹೋಗೇತಿ ಅಂತಾ ಹೇಳಿದ್ದರು, ಈಗ ನೋಡಿದರ ಮತ್ತ ಹ್ಯಾಂಗ ಅದಾಳ ಹಾಂಗ ಪ್ರತ್ಯಕ್ಷ ಆಗ್ಯಾಳ, ನಮಗ ಏನ ಕಾದಿದೆಯೋ, ಎವ್ವಾ, ತದಲಬಾಗಿ ಲಕ್ಕವ್ವಾ ನೀನೇ ಕಾಪಾಡು’ ಎಂದು ಮಾಸ್ತರನ ಹೆಂಡತಿ ತುಳಜವ್ವ ದೇವರ ಜಗಲಿಗಿ ಬಂದು ಕೈ ಮುಗಿದು ಅಳಾಕ ಚಾಲೂ ಮಾಡಿದಳು.
ತುಳಜಾಬಾಯಿಯ ಇಬ್ಬರೂ ಸೊಸ್ತ್ಯಾರ ಬಂದು, ‘ಅತ್ತ್ಯಾರ ಕಾಳಜಿ ಮಾಡಬ್ಯಾಡ್ರಿ, ಮಾಮಾರನ ದವಾಖಾನಿಗಿ ಎಡ್ಮಿಟ್ ಮಾಡ್ಯಾರಂತ, ಚೆಕಪ್ ನಡದೈತಿ, ಅವ್ವಗ ಕಾಳಜಿ ಮಾಡಬ್ಯಾಡ ಹೇಳ ಅಂತಾ ಇವರ್ರು ಫೋನು ಮಾಡಿದ್ದರು’ ಎಂದು ಹಿರಿಸೊಸಿ ಹೇಳಿದಳು. ಒಂದೆಡೆ ಗಂಡನ ದವಾಖಾನಿ ಸವಾರಿ ಇನ್ನೊಂದೆಡೆ ಈ ಮುದುಕಿಯ ಆಗಮನ
ಇದರಿಂದ ತುಳಜವ್ವ ಕುಸಿದು ಹೋದಳು.
‘ಅತ್ಯಾರ, ಆ ಮುದುಕಿ ಯಾರ ಗೊತ್ತೈತೇನ, ಯಾಕ ಮಾಮಾರನ್ನ ಹುಡುಕಿಕೊಂಡು ಬಂದೈತಿ, ನಾನು ಈ ಮನಿಗಿ ಬಂದ ಇಷ್ಟ ವರ್ಷಾ ಆಯ್ತು, ಒಂದ ಸಲಾನೂ ಈ ಮುದುಕಿನ ನೋಡಿಲ್ಲಾ, ಈಗ ಹರ್ಯಾಗೆದ್ದು ಬಂದು ನಮ್ಮ ಮನಿ ನೆಮ್ಮದಿನ ಕೆಡಿಸಿ ಬಿಟ್ಟಳು, ಗಾಡಿ ಹಿಂದ ಓಡಿ ಹ್ವಾದಾಕಿ ಒಮ್ಮಿಗ ಮಂಗಮಾಯವಾಗಿ ಬಿಟ್ಟಳಲ್ಲ’ ಎಂದು ಹಿರಿ ಸೊಸಿ ಗಾಬರಿಯಾಗಿ ಹೇಳಿದಳು. ಮತ್ತೆ ಎಲ್ಲರ ಮುಖದಲ್ಲಿ ದೊಡ್ಡ ಪ್ರಶ್ನೆ ಮೂಡಿತು, ಈ ಮುದುಕಿ ಯಾರು, ಮಾಮಾರು ಮುದುಕಿ ನೋಡಿ ಯಾಕ ಮೂರ್ಛೆ ಹೋಗಿ ಬಿದ್ದರು, ಮತ್ತ ಮುದುಕಿ ಮಂಗಮಾಯ ಯಾಕ ಆದಳು ಎಂದು ಇಬ್ಬರೂ ಸೊಸ್ತ್ಯಾರು ಮುಖಾ ಮುಖಾ ನೋಡಿದರು.
*
ಮಲ್ಲಪ್ಪ ಮಾಸ್ತರ ಮನಿಗಿ ಹಿರಿಸೊಸಿ ಬಂದು ಆರ ವರ್ಷ ಆಗಿತ್ತು, ಅದರ ಹಿಂದಿನ ವರ್ಷನ ಮಾಸ್ತರು ಮೂರ ಮಹಡಿದು ಮನಿ ಕಟ್ಟಿ, ಓಪನಿಂಗ್ ಮಾಡಿ ಮರು ವರ್ಷನ ಹಿರಿಯ ಮಗನ ಲಗ್ನಾ ಮನಿ ಮುಂದ ಅದ್ದೂರಿ ಮಾಡಿದ್ದರು, ಆ ಮ್ಯಾಲ ಮೂರ ವರ್ಷ ಬಿಟ್ಟ ಎರಡನೇ ಮಗನ ಲಗ್ನಾನೂ ಮಾಡಿದ್ದರು, ಮೂರನೆಯ ಮಗಾ ಡಾಕ್ಟರ್ ಕಲಿತ ಬೆಳಗಾವಿಯೊಳಗ ಪ್ರ್ಯಾಕ್ಟಿಸ್ ಮಾಡತಿದ್ದಾ, ಇನ್ನಾ ಲಗ್ನಾ ಮಾಡಿರಲಿಲ್ಲ. ಹೊಸಾ ಮನಿ ಆಗಿ ಮಾಸ್ತರು ಮೊಮ್ಮಕ್ಕಳನ್ನು ಆಡಿಸಿಕೊಂಡು ಚಿಂತಿ ಇಲ್ಲದ ಚೆಂದಾಗಿ ಇರಬೇಕಾದ್ರ , ಈ ಮುದುಕಿಯೊಂದು ಹರ್ಯಾಗೆದ್ದು ಒಕ್ಕರಿಸಿ, ಇಡೀ ಮಲ್ಲಪ್ಪ ಮಾಸ್ತರ ಮನಿಗಿ ಸಿಡಿಲ ಬಡಿದಾಂಗ ಮಾಡಿದ್ದಳು.
ಅತ್ತ ಮಾಸ್ತರು ದವಾಖಾನ್ಯಾಗ ಬೆಡ್ ಮ್ಯಾಲ ಮಲಗಿ ಸಕಲ ಪರೀಕ್ಷೆಗಳಿಗೆ ಅಂದರೆ ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ, ಈ.ಸಿ.ಜಿ. ಹೀಂಗ ತರಹೇವಾರಿ ಪರೀಕ್ಷೆಗಳು , ನಡೆದು ಕಣ್ಣ ಮ್ಯಾಲ ಮಾಡಿ ಮಲಗಿದ್ದರು, ಇತ್ತ ಮಾಸ್ತರರ ಹೆಂಡತಿ ತುಳಜವ್ವ ಬೆಡ್ ರೂಮ್ ಸೇರಿ, ನನಗ ಥಂಡಿ ಭಾಳ ಐತಿ ಅಂತಾ ದೊಡ್ಡ ಚಾದರ ಹಚಗೊಂಡ ಮಲಗಿಕೊಂಡಳು. ಸೊಸ್ತ್ಯಾರ ಮಾಡಿಕೊಟ್ಟ ಚಾ ಕುಡಿದು ಮಲಗಿದಾಕಿಗಿ ನೆನಪುಗಳು ಹಿಂದ ಹಿಂದಕ ಹೋದವು.
*
ತುಳಜವ್ವ ಮಲ್ಲಪ್ಪ ಮಾಸ್ತರ ಕೈ ಹಿಡಿದು ಹೊಸದಾಗಿ ನಡಿಯಾಕ ಬಂದಾಗ ಕೂಡು ಕುಟುಂಬದೊಳಗ ಚೆಂದ ಮನಿತಾನ ನೋಡಕೊಂಡ ಇದ್ದಳು. ಮುಂದ ಮಾಸ್ತರಗ ದೂರದ ಹಳ್ಳಿಗಿ ವರ್ಗ ಆಗಾನ ಸ್ವತಂತ್ರ ಮನಿ ಮಾಡೋದಾತ. ಹಳ್ಳಿಯೊಳಗ ಇರಾಕ ಚಲೋ ಬಾಡಿಗಿ ಮನಿ ಇರಲಿಲ್ಲ. ಹೀಂಗಾಗಿ ಜಮಖಂಡ್ಯಾಗ ಮನಿ ನೋಡಿ ಬಂದು ಮಾಸ್ತರು, ಹಾಲ ಉಕ್ಕಿಸಿ ಹೆಂಡತಿನ ಕರಕೊಂಡ ಬಂದ ಮನಿ ಹೊಕ್ಕರು. ದಿನಾ ಸೈಕಲ್ಲಮ್ಯಾಗ ಸಾಲಿಗಿ ಹೋಗಿ ಬರತಿದ್ದರು, ತುಳಜವ್ವ ಬುತ್ತಿ ಮಾಡಿ ಕಟ್ಟತಿದ್ದಳು. ಸಣ್ಣ ಪಗಾರ, ಮಾಸ್ತರಗ ಅಂತಾದೇನ ಹೇಳಿಕೊಳ್ಳುವಷ್ಟು ಆಸ್ತಿ ಇರಲಿಲ್ಲ, ಇಲ್ಲಿ ಬಂದು, ಬಂದ ಪಗಾರದಾಗ ಚೆಂದಾಗಿ ಮನಿ ನಡೆಸಿದ್ದರು, ಹೀಂಗ ಮಾಸ್ತರದು ಆರಕ್ಕೆ ಏರದೇ, ಮೂರಕ್ಕೆ ಇಳಿಯದೇ ಸಂಸಾರ ಚೆಂದಾಗಿ ನಡೆದಿತ್ತು,
ವರ್ಷ ತುಂಬುದರೊಳಗ ತುಳಜವ್ವ ಹೊಟ್ಟೀಲೆ ಆಗಿ ಡಿಲೆವರಿಗೆ ತನ್ನ ತವರ ಊರ ಅಥಣಿಗಿ ಹ್ವಾದಳು. ಮಾಸ್ತರ ತನ್ನ ಅಡಗಿ ತಾನ ಮಾಡಕೊಂಡ ಸಾಲಿಗಿ ಹೋಗಾಕ ಚಾಲೂ ಮಾಡಿದರು. ಸೂಟಿ ಇದ್ದಾಗ ರಾಮತೀರ್ಥ ಅರಮನಿ, ಕಡಪಟ್ಟಿ ಬಸವೇಶ್ವರ ಗುಡಿ, ಮಧುರಖಂಡಿ ಮಹಾಲಕ್ಷ್ಮಿ, ಕುಂಚನೂರ ಮಹಾದೇವನ ಗುಡಿ ಹೀಂಗ ತಿರಿಗ್ಯಾಡಿ ಹೊತ್ತ ಕಳಿತಿದ್ದರು.
ಶಾಲಿಗಿ ಹೋಗಬೇಕಾದರ ಶುಭ್ರ ಬಿಳಿ ಅಂಗಿ, ಶುಭ್ರ ಧೋತಾರ ಉಟಗೊಂಡ ಹ್ವಾಂಟ್ರ ಅಂದ್ರ
ಊರಾನ ಮಂದೀ ಸಾಕ್ಷಾತ್ ದೇವರ ಕಂಡಾಂಗ ಆಗಿ ನಮಸ್ಕಾರ ಮಾಡತಿದ್ದರು, ಪಾಠ ಹೇಳುವುದರಲ್ಲಿ, ಮಕ್ಕಳಿಗೆ ಹಾಡು ನೃತ್ಯ ಕಲಿಸುವುದರಲ್ಲಿ ಎತ್ತಿದ ಕೈ, ಶಾಲೆಗಾಗಿ ನಾನು ಏನಾದರೂ ಅನ್ಯಾಯ ಮಾಡಿದರೇ, ಆವತ್ತೇ ನನಗೆ ಸಾವು ಬರಲಿ ಅಂತಾ ಪಂಡರಪುರ ವಿಠ್ಠಲನ ಮೇಲೆ ಆಣೆ ಮಾಡಿದ್ದರು, ಮತ್ತೆ ಅದೇ ರೀತಿಯಿಂದ ಊರಲ್ಲಿ, ಶಾಲೆಯಲ್ಲಿ ನಡೆದುಕೊಂಡಿದ್ದರು, ಹೀಗಾಗಿ ಮಲ್ಲಪ್ಪ ಮಾಸ್ತರ ಅಂದ್ರ ಊರಲ್ಲಿ ಒಂದು ಬಗೆಯ ಗೌರವ, ಮರ್ಯಾದೆ,
ಊರಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಹೆಣ್ಣ ಗಂಡ ನೋಡಲಿಕ್ಕೆ ಹೋಗುವುದ ಇರಲಿ, ಮಲ್ಲಪ್ಪ ಮಾಸ್ತರರನ್ನು ಕರೆದುಕೊಂಡೆ ಹೋಗುತ್ತಿದ್ದರು, ಎಷ್ಟೋ ಮದುವೆಗಳನ್ನು, ಹೆಣ್ಣು ಗಂಡಿನ ಮಾತುಕಥಿಗಳನ್ನು ತಮ್ಮ ಮಾತಿನಿಂದ ಈ ಮಾಸ್ತರು ನಡೆಸಿ ಇಲ್ಲವೇ ಗೆಲ್ಲಿಸಿಕೊಡುತ್ತಿದ್ದರು, ಒಟ್ಟಿನಲ್ಲಿ ಸಾಲಿ ಮಲ್ಲಪ್ಪ ಮಾಸ್ತರು ಈ ಹಳ್ಳಿಗೆ ದೇವತಾ ಮನುಷ್ಯರಾಗಿದ್ದರು. ಡಿಲೆವರಿಗೆ ಹೋಗಿದ್ದ ತುಳಜವ್ವ ಅಥಣಿ ದವಾಖಾನಿಯೊಳಗ ಗಂಡ ಮಗುವಿಗಿ ಜನ್ಮಕೊಟ್ಟಾಳ, ತಾಯಿ ಮಗಾ ಆರಾಮ ಅದಾರ ಅಂತಾ ಮಾವನ ಮನೆಯಿಂದ ಮಾಸ್ತರರಿಗೆ ಪತ್ರ ಬಂತು. ಐದ ತಿಂಗಳ ತುಂಬಿದಮ್ಯಾಲ ಕೂಸಿನೊಂದಿಗೆ ಮಲ್ಲಪ್ಪ ಮಾಸ್ತರು ಅಥಣಿಯಿಂದ ಹೆಂಡತಿಯನ್ನು ಕರೆದುಕೊಂಡು ಬಂದರು. ಮತ್ತ ಹೊಸ ಜೀವನಾ ಚಾಲೂ ಆತು, ನೋಡ ನೋಡತನ ಮೂರ ಗಂಡ ಮಕ್ಕಳಾದವು, ಪ್ಯಾಟ್ಯಾಗ ಮನಿ, ಹಳ್ಳ್ಯಾಗ ಡ್ಯೂಟಿ ಮಾಡಿಕೊಂಡು ಒಂದ ಹಳ್ಳ್ಯಾಗ ಹತ್ತ ವರ್ಷ ಕಳೆದಿದ್ದರು.
ಈ ನಡುವೆ ಮಲ್ಲಪ್ಪ ಮಾಸ್ತರು ಒಂದ ದಿನಾ ಸಂಜೀಮುಂದ ಸಾಲಿ ಮುಗಿಸಿ
ತಮ್ಮ ಬಾಡಿಗಿ ಮನಿಗಿ ಬಂದು ಮೂಲ್ಯಾಗ ಒಂದ ಗಂಟ ಮುಚ್ಚಿಟ್ಟಿದ್ದರು, ರಾತ್ರಿ ಮಕ್ಕಳು ಮಲಗಿದ ಮ್ಯಾಲ ಹೆಂಡತಿನ ಕರೆದು, ಅವಳ ಮುಂದ ಗಂಟ ಬಿಚ್ಚಿದರು, ಅಲ್ಲಿ ಕಂಡದ್ದು ಥರಥರದ ಬಂಗಾರದ ಆಭರಣಗಳು, ಪೆಂಡಿ ಕಟ್ಟಿದ ನೋಟಗಳು.
ತುಳಜವ್ವ ನೋಡಿ ಗಾಬರಿ ಆಗಿ ‘ಅಯ್ಯ ಶಿವನ ಎಲ್ಲಿಂದ ತಂದೀರಿ ಇವನ್ನ, ತುಡುಗ ಗಿಡಗ ಮಾಡಿರೇನ, ಎಷ್ಟೊಂದು ಬಂಗಾರ ಸಾಮಾನ ಅದಾವು, ಮತ್ತ ನೋಟ್ ಎಷ್ಟ ಅದಾವು, ನಿಮಗ ಇವೆಲ್ಲಾ ಎಲ್ಲಿ ಸಿಕ್ಕವು’ ಎಂದು ಮೈ ಬೆವರಿ ಗಾಬರಿಯಾಗಿ ಕೇಳಿದಳು, ಮಾಸ್ತರು ಇವೆಲ್ಲಾ ಗಟ್ಟಿ ಬಂಗಾರ, ಏನ ಇಲ್ಲವೆಂದರೂ ಒಂದ ಮೂವತ್ತ, ನಲವತ್ತ ತೊಲಿ ಅದಾವು. ಮತ್ತ ಈ ರೂಪಾಯಿ ಒಂದ ಹತ್ತಿಪ್ಪತ್ತ ಸಾವಿರ ಅದಾವು, ಮಾಸ್ತರ ಹೇಳು ಲೆಕ್ಕಕ್ಕ ಇವತ್ತಿನ ದಿನಕ್ಕ ಒಂದ ಲಕ್ಷ ಅಂದ್ರ ಒಂದ ಕೋಟಿ ಇದ್ದಾಂಗ, ಎಂದು ವಿವರಿಸಿದರು. ತುಳಜವ್ವನ ತೆರೆದ ಬಾಯಿ ತೆರದಾಂಗ ಇತ್ತು.
ಮಲ್ಲಪ್ಪ ಮಾಸ್ತರಿಗೆ ಗಂಟ ಸಿಗುವುದಕ್ಕ ಮತ್ತ ಹೆಡ್ ಮಾಸ್ತರ ಆಗಿ ಬ್ಯಾರೆ ಊರಿಗೆ ವರ್ಗಾವಣೆಯಾಗುವುದಕ್ಕ ಸರಿ ಹೋಯಿತು. ಊರಲ್ಲಿ ಜನಪ್ರಿಯರಾಗಿದ್ದ ಮಾಸ್ತರು ಈ ಸಾಲಿಯಿಂದ ಬಿಡುಗಡೆಯಾಗಿ ಬ್ಯಾರೆ ಊರಿಗಿ ಹೋಗಬೇಕಾದರ ಊರಾನ ಮಂದಿ ಕಣ್ಣೀರ ಹಾಕಿದರು, ಎಂತಾ ಚಲೋ ಮಲ್ಲಪ್ಪ ಮಾಸ್ತರ ಎಂದು ಬಿಳ್ಕೊಟ್ಟಿದ್ದರು. ಅಲ್ಲಿಂದ ಬ್ಯಾರೆ ಹಳ್ಳ್ಯಾಗ ಹತ್ತ ವರ್ಷ ಕಳೆದು, ಮುಂದ, ರಿಟಾಯರ್ಡ ಆಗಿ ಈ ಸಿಟಿಯೊಳಗ ಮೂರ ಮಹಡಿ ಮನಿ ಕಟ್ಟಿ, ಇಬ್ಬರ ಮಕ್ಕಳ ಲಗ್ನಾ ಮಾಡಿ , ಮೊಮ್ಮಕ್ಕಳ ಜೋಡಿ ಚೆಂದಾಗಿ ಇರತಿರಬೇಕಾದರ ಈ ಮುದುಕಿ ಸಲುವಾಗಿ ಇವತ್ತು ದವಾಖಾನಿ ಸೇರಿದ್ದರು.
*
ಹಿಂದಿನ ನೆನಪುಗಳೊಂದಿಗೆ ಬೆಡ್ ರೂಮ್ದಲ್ಲಿ ಮಲಗಿದ್ದ ತುಳಜಾಬಾಯಿಗೆ ಮೊಮ್ಮಗಳು ಓಡಿ ಬಂದು ‘ಅಜ್ಜೀ’ ಎಂದು ಕೂಗಿದಾಗ ನೆನಪಿನ ಲೋಕದಿಂದ ವಾಸ್ತವಕ್ಕೆ ಬಂದರು. ಕಿರಿ ಸೊಸಿ ಬಂದು, ಅತ್ಯಾರ ಈ ಬಿಸಿ ನೀರ ಕುಡಿರಿ, ಅಡಗಿ ತಯ್ಯಾರ ಆಗೇತಿ, ಮಾವಾರು ಸ್ವಲ್ಪ ಆರಾಮ ಆಗ್ಯಾರ ಅಂತಾ, ಮತ್ತ ಏನೇನೋ ಪರೀಕ್ಷೆ ಮಾಡ್ಯಾರಲ್ಲ, ಅವತರದು ರಿಜೆಲ್ಟ್ ಬರಬೇಕಂತ , ಸಂಜೀ ಮುಂದ ಡಾಕ್ಟರು ಡಿಚಾರ್ಜ ಬಗ್ಗೆ ಹೇಳತಾರಂತ, ಇವರ ಬಂದು ಬುತ್ತಿ ಒಯ್ಯತೀನಿ ಅಂದಾರ, ನೀವಟ ಊಟಾ ಮಾಡ ಏಳ್ರೀ, ಇವರಿಗಿ ಬರುವಾಗ ಥಂಡಿ ಜ್ವರಾ ಕಡಿಮಿ ಆಗೋ ಗುಳಿಗಿ ತರಾಕ ಹೇಳಿನಿ’ ಎಂದು ಅತ್ತೆಗೆ ಎಂದಿಲ್ಲದ ಪ್ರೀತಿ ತೋರಿ ಉಪಚರಿಸಿದಳು.
ಹೌದು ಇಬ್ಬರೂ ಸೊಸ್ತ್ಯಾರು ಅತ್ತೆ ಮಾವರನ್ನು ಅಷ್ಟಾಗಿ ಸೇರತಿರಲಿಲ್ಲ, ಮನೆಯೊಂದು ಮೂರ ಬಾಗಿಲಾಗಿತ್ತು, ಮಾಸ್ತರಿಗೆ ತುಳಜವ್ವನ ಅಡಗಿ ಮಾಡಿ ಹಾಕತಿದ್ದಳು, ತಾವ ಮಾಡಿ ತಾವ ತಿಂತಿದ್ದರು. ಮತ್ತ ಸೋಸ್ತ್ಯರು ತಮ್ಮದ ತಾವ ಮಾಡಿ ಉಣತಿದ್ದರು. ಇದ ಹೊರಗಿನ ಮಂದಿಗಿ ಕಾಣತಿರಲಿಲ್ಲ, ಆದ್ರ ಒಳಗಿನ ಹುಳುಕ ಮುಚ್ಚಿಕೊಂಡು ಮಲ್ಲಪ್ಪ ಮಾಸ್ತರು ಹೊರಗ ದೊಡ್ಡ ಫೋಜು ಕೊಡತಿದ್ದರು.
*
ಎಲ್ಲಾರೂ ತಿಳಿದಾಂಗ ಮುದುಕಿಯೇನು ಮಂಗಮಾಯವಾಗಿರಲಿಲ್ಲ. ಆದ್ರ ಮುದುಕಿಯನ್ನು ಯಾರಿಗೂ ಕಾಣಲಾರದಾಂಗ ಒಂದ ಹುಡುಗಿ ಸ್ಕೂಟಿ ಮ್ಯಾಲ ಕುಂಡರಿಸಿಕೊಂಡ ಪರಾರಿಯಾಗಿದ್ದಳು, ಮಲ್ಲಪ್ಪ ಮಾಸ್ತರ ಮನಿ ಮುಂದ ಸುಖಾಂತ್ಯವಾಗಿ ಪ್ರಸಂಗ ಮುಗಿಯಬಹುದು ಅಂತಾ ಬಂದಾಕಿದು, ಜೋರ ರಾದ್ದಾಂತ ನಡೆದು , ಜಾತ್ರಿ ಸೇರಿದಾಂಗ ಜನಾ ಸೇರಿದ ಮ್ಯಾಲ, ಮುದುಕಿನ ಕರಕೊಂಡು ಜೋರ ಸ್ಕೂಟಿ ಚಾಲೂ ಮಾಡಿಕೊಂಡು ಹುಡುಗಿ ಕುಂಬಾರಹಳ್ಳದ ದಾರಿ ಹಿಡಿದ ಹಿರಿಹೊಳಿ ದಾಟಿ , ತಮ್ಮ ಹಳ್ಳಿ ಸೇರಿದ್ದಳು.
ಈ ಹಳ್ಯಾಗೂ ಈ ಮುದುಕಿ ಈ ಹುಡುಗಿ ಎಲ್ಲಿಗಿ ಹೋಗಿ ಬಂದ್ರು ಅಂತಾ ಒಟ್ಟ ಗೊತ್ತ ಮಾಡಿಕೊಟ್ಟಿರಲಿಲ್ಲ. ಆದ್ರ ಈ ಹುಡುಗಿ ಬ್ಯಾರೆ ಯಾರೂ ಆಗಿರಲಿಲ್ಲ, ಈ ಮುದುಕಿ ಮೊಮ್ಮಗಳ ಆಗಿದ್ದಳು, ಮುದುಕಿಯ ಒಬ್ಬಾಕಿನ ಮಗಳನ್ನು ಚಿಕ್ಕಲಕಿಗಿ ಕೊಟ್ಟಿದ್ದರು. ಆಕಿ ಮೊದಲ ಹೆರಿಗೆಯೊಳಗ ಈ ಕೂಸಿನ್ನ ಭೂಮಿಗೆ ಬಿಟ್ಟು
ಆಕಾಶ ಸೇರಿದ್ದಳು. ಮಗಳ ಗಂಡನ ಮನಿಯಾವರು ನಿಮ್ಮ ಮಗಳ ಸತ್ತ ಹ್ವಾದ ಮ್ಯಾಲ ಈ ಪಾಪಿ ಅಪಶಕುನದ ಕೂಸ ನಮಗ ಬ್ಯಾಡ ಅಂತಾ ಮುದಕಿ ಹಿಂದ ಕೊಟ್ಟ ಕಳಿಸಿದ್ದರು, ಇದ ಮುದುಕಿ ಕೂಸಿನ ಹೀಂಗ ಬೆಳಸಿದಳಲ್ಲಾ ,ಯಾವುದಕ್ಕೂ ಕಡಿಮೆ ಇಲ್ಲದಾಂಗ ಬೆಳೆಸಿ ಸಾಲಿ ಕಲಿಸಿ ಶ್ಯಾಣ್ಯಾ ಮಾಡಿದ್ದಳು, ಬಾಗಲಕ್ವಾಟಿಯೊಳಗ ನರ್ಸ ಕೋರ್ಸ ಮುಗಿಸಿಕೊಂಡು ಬಂದಿದ್ದಳು, ನಾಳಿ ದಿವಸ ಜಮಖಂಡಿ ಹೊಸಾ ದವಾಖಾನಿಯೊಳಗ ನರ್ಸ ಆಗಿ ನೌಕರಿ ಚಾಲೂ ಮಾಡಾಕಿ ಇದ್ದಳು.
*
ಇವತ್ತು ಮಲ್ಲಪ್ಪ ಮಾಸ್ತರರು ರಿಪೋರ್ಟ ಎಲ್ಲಾ ಬಂದಿದ್ದವು, ಮಾಸ್ತರಿಗೆ ಸಣ್ಣ ಅಪರೇಷನ್ ಮಾಡಿ ಆರಾಮ ಮಾಡಿ ಕಳಿಸತೇವು, ವಾರೊಪ್ಪತ್ತು ಇಲ್ಲೇ ದವಾಖಾನ್ಯಾಗ ಇರಬೇಕಂತ ಹೇಳಿದ್ದರು. ಇದು ಮಾಸ್ತರ ಮಕ್ಕಳಿಗೆ ಮತ್ತು ಸೊಸ್ತ್ಯಾರಿಗೆ ಪೀಕಲಾಟಕ್ಕಿಟ್ಟುಕೊಂಡಿತು, ಅವರು ಕೈ ಚೆಲ್ಲಿ ನಮಗ ನೋಡೋದು ಆಗುದಿಲ್ಲ ಅಂದ್ರು. ಅದಕ್ಕ ಒಂದ ಕಾರಣವಿತ್ತು, ಮಲ್ಲಪ್ಪ ಮಾಸ್ತರರು ಹದಿನೈದ ವರ್ಷಗಳ ಹಿಂದ ಏನ ಗಂಟ ಸಿಕ್ಕಿತ್ತಲ್ಲಾ ಆ ಗಂಟನ್ಯಾಗಿರೋ ಡಜನ್ಗಟ್ಟಲೇ ಬಂಗಾರ ಆಭರಣಗಳನ್ನು ಬ್ಯಾಂಕಿನ ಲಾಕರ್ದಾಗ ಇಟ್ಟಿದ್ದರು, ಪ್ರತಿ ವರ್ಷ ದೀಪಾವಳಿಗಿ ಬಿಡಿಸಿಕೊಂಡು ಬಂದು ಲಕ್ಷ್ಮೀ ಪೂಜೆಗೆ ಇಡುತ್ತಿದ್ದರು. ಪೂಜೆ ಮುಗಿದ ಮ್ಯಾಲ ಮತ್ತ ಹ್ಯಾಂಗಿತ್ತ ಹಾಂಗ ಲಾಕರ್ದಾಗ ಇಟ್ಟ ಬರತಿದ್ದರು, ಹೊಸದಾಗಿ ನಡಿಯಾಕ ಬಂದ ಸೊಸ್ತ್ಯಾರ ಕಣ್ಣು ಈ ಆಭರಣಗಳ ಮ್ಯಾಲ ಬಿದ್ದಿತ್ತು. ತಮ್ಮ ಹೆಂಡತಿ ತುಳಜವ್ವನನ್ನೂ
ಸೇರಿ ಮಾಸ್ತರು ಈ ಆಭರಣಗಳನ್ನು ಯಾರಿಗೂ ಧರಿಸಲಿಕ್ಕೆ ಕೊಟ್ಟಿರಲಿಲ್ಲ,
ಒಮ್ಮಿ ಹಿರಿ ಸೊಸಿ ‘ನಮ್ಮ ತಮ್ಮನ ಲಗ್ನ ಮುಧೋಳ ಹೇಮರಡ್ಡಿ ಮಲ್ಲಮ್ಮನ ಕಲ್ಯಾಣ ಮಂಟಪದಾಗ ಐತಿ ನಮ್ಮ ಮಂದಿ ಮೈತುಂಬ ಬಂಗಾರ ಹಾಕ್ಕೊಂಡ ಬರ್ತಾರ ಮಾವಾರ ಲಾಕರ್ದಾನ ಬಂಗಾರ ಬಿಡಿಸಿಕೊಂಡ ಬರ್ರೀ, ನಾ ಹಾಕ್ಕೊಂಡ ಲಗ್ನಕ್ಕ ಹೋಗತೇನಿ’ ಅಂದಿದ್ದಳು, ಮಾಸ್ತರು ಸಿಟ್ಟಾಗಿ ‘ಯಾರಿಗೂ ಆ ಆಭರಣ ಮುಟ್ಟಿಸಿ ಕೊಡೊದಿಲ್ಲಾ ಸುಮ್ಮನ ಆಸೆ ಇಟಗೋಬ್ಯಾಡ್ರಿ’ ಎಂದು ಬೈದಿದ್ದರು, ‘ಇಲ್ಲಾ ನಾ ಮದುವಿ ಮುಗದ ಮ್ಯಾಲ ಹ್ಯಾಂಗ ಐತಿ ಹಾಂಗ ತಂದ ಕೊಡತಿನಿ’ ಅಂದ್ರು ಮಾಸ್ತರು ಕಡ್ಡಿ ಮುರದಂಗ ಹೇಳಿಬಿಟ್ಟಿದ್ದರು ‘ಅದರÀ ಒಂದ ಗುಂಜಿ ಮೊದಲ ಮಾಡಿ ಏನೂ ಕೊಡೊದಿಲ್ಲಾ, ತೊಟಗೊಳ್ಳಾಕು ಕೊಡೊದಿಲ್ಲ’ ಅಂತಾ ನಿಷ್ಟುರವಾಗಿ ಹೇಳಿದ್ದರು, ಮಾಸ್ತರ ಗುಣಾ ಗೊತ್ತಿದ್ದ ತುಳಜಾಬಾಯಿ ಸುಮ್ಮನಿದ್ದಳು. ಆದ್ರ ಸೊಸ್ತ್ಯಾರ ಯಾಕ ಕೇಳತಾರು ಇಡೀ ದಿನಾ ರಂಪಾಟ ಮಾಡಿ ದೊಡ್ಡ ರಾದ್ದಾಂತ ಮಾಡಿದರು. ಮುಧೋಳದಾಗ ತನ್ನ ತಮ್ಮನ ಲಗ್ನಾ ಮುಗಿಸಿಬಂದ ಹಿರಿಸೊಸಿ ಮನಿಗಿ ಬಂದು ಬ್ಯಾರೆ ಒಲಿ ಹೂಡಿದಳು. ಇದನ್ನ ನೋಡಿದ ಕಿರಿ ಸೊಸಿನೂ ಬ್ಯಾರೆ ಒಲಿ ಹೂಡಿದಳು, ಮನಿ ಒಂದು ಮೂರ ಒಲಿ ಆಯ್ತು. ಒಂದ ಮನಿಯಾಗ ಇದ್ರು ಬ್ಯಾರೆ ಮಾಡಕೊಂಡು ಉಣ್ಣುದಾತ ಇದು ಐದಾರು ವರ್ಷಗಳಿಂದ ನಡೆದಿತ್ತು.
*
ವಾರ ಕಾಲ ಮಾವಾರ ಚಾಕ್ರಿ ಮಾಡಲು ಸೊಸೆಯಂದಿರು ನಿರಾಕರಿಸಿದ್ದರು, ಅವರಲ್ಲಿ ಬಂಗಾರದ ಆಭರಣಗಳ ಆಸೆ ಜೀವಂತವಿತ್ತು. ಗಂಡಂದಿರು ಅಸಹಾಯಕರಾದರು. ಯಾವಾಗ ಮಕ್ಕಳು ಸೊಸ್ತ್ಯಾರು ನೋಡುವದಿಲ್ಲ ಎಂದರೋ ಬೆಳಗಾವಿಯಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿದ್ದ ಕಿರಿಯ ಮಗನನ್ನು ಕರೆಸಿಕೊಂಡರು. ಮರುದಿನ ಇದೇ ದವಾಖಾನಿಗಿ ಡಾಕ್ಟರ್ಗೆ ಹೇಳಿ ಇಲ್ಲಿಯೇ ಪ್ರ್ಯಾಕ್ಟಿಸ್ ಗೆ ಕಿರಿಮಗಾ ಸೇರಿಕೊಂಡು ಅಪ್ಪನ ಆರೈಕೆ ಮಾಡತೊಡಗಿದನು. ಇದೇ ಹೊತ್ತಿಗೆ ಇವತ್ತೇ ಈ ಮುದುಕಿಯ ಮೊಮ್ಮಗಳು ಇಲ್ಲಿ ನರ್ಶ ಆಗಿ ಸೇರಿದ್ದಳು. ಈಗ ಮಾಸ್ತರ ಚಿಂತಿ ಕಡೀತು ತುಳಜವ್ವ ಆರಾಮ ಆಗಿ ಮಾಸ್ತರ ನೋಡು ಸಲುವಾಗಿ ದವಾಖಾನಿಯಲ್ಲಿ ಉಳಿದಳು, ಹ್ಯಾಂಗೂ ಮಗಾ ನೋಡಾಕ ಇದ್ದಾ, ಅಷ್ಟ ಅಲ್ಲಾ ಹೊಸದಾಗಿ ನರ್ಸ ಹುದ್ದೆ ಸೇರಿದ್ದ ಹುಡುಗಿಗೆಯನ್ನು ಹೊಸ ಡಾಕ್ಟರ್ ಕೈಕೆಳಗೆ ಕೆಲಸ ಮಾಡಲು ಬಿಟ್ಟಿದ್ದರು.
ನೋಡ ನೋಡುತ್ತಿರುವಂತೆ ಹೊಸ ನರ್ಸ ಹುಡುಗಿಯ ಕೈಗುಣದಿಂದ ಅವಳ ಕಾಳಜಿ ಕಕ್ಕುಲಾತಿಯಿಂದ ಮಾಸ್ತರು ಆರಾಮವಾದರು, ಮೊದಲಿನಂತೆ ಲವಲವಿಕೆಯಿಂದ ಕೂಡಿದರು. ಅವಳು ಮನೆಯ ಒಬ್ಬ ಸದಸ್ಯಳಂತೆ ಕಂಡು ಬಂದಳು, ಅಷ್ಟು ಆತ್ಮೀಯತೆ ಮಾಸ್ತರಲ್ಲಿ ಮತ್ತು ತುಳಜವ್ವನಲ್ಲಿ ಬೆಳೆಯಿತು. ಅಷ್ಟೇ ಅಲ್ಲಾ ನಮಗ ಕಿರಿಯ ಮಗನಿಗೆ ಇವಳು ತಕ್ಕುದಾದÀ ಹೆಂಡತಿಯಾಗ್ತಾಳೆ ಅಂತಾ ಮಾತನಾಡಿಕೊಂಡರು, ಕಿರಿಯ ಮಗನೂ ಅಷ್ಟೇ ,ಅವಳ ಕಾರ್ಯ ಕಂಡು ,ತಮ್ಮ ತಂದೆ ತಾಯಿಯರನ್ನು ಕಾಣುವ ಪ್ರೀತಿ ಕಂಡು ಅವಳನ್ನು ಮೆಚ್ಚಿದ್ದನು, ಅವಳಲ್ಲೂ ಈ ಕುಟುಂಬ ಸೇರಬೇಕೆಂಬ ತವಕವಿತ್ತು.
*
ಮೊಮ್ಮಗಳು ಊರಿಗೆ ಹೋಗಿ ತನ್ನ ಅಜ್ಜಿಗೆ ಮತ್ತ ಊರ ಮಂದಿಗೆ ಹೊಸದಾಗಿ ಕೆಲಸ ಸಿಕ್ಕಿದ್ದಕ್ಕಾಗಿ ಫೇಡೆ ಹಂಚಿದಳು. ಮತ್ತ ತನ್ನ ಅಜ್ಜಿಯ ಮುಂದ ಮಾಸ್ತರರ ಗುಣಗಾನ ಮಾಡಿದಳು .ಇದು ಅಜ್ಜಿಗೆ ಆಶ್ಚ್ಯರ್ಯದ ಸಂಕೇತವಾಗಿ ತೋರಿತು. ಮೊಮ್ಮಗಳನ್ನ ಮುದ್ದು ಮಾಡಿ, ಅವಳಿಗೆ ಬೇಕಾದ್ದು ಉಣಿಸಿ, ತಿಣಿಸಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಒಂದೆರಡು ಕಥೆ ಹೇಳುವ ಹೊತ್ತಿಗೆ ಅಜ್ಜಿಯ ತೊಡೆಯ ಮೇಲೆ ನಿದ್ರೆಗೆ ಜಾರಿದ್ದಳು.
ಮೊಮ್ಮಗಳು ನಿದ್ರೆಗೆ ಜಾರಿದಾಗ ಈ ಮುದುಕಿಯೂ ತನ್ನ ಹಿಂದಿನ ನೆನಪುಗಳಿಗೆ ಜಾರಿದಳು, ಅದು ಇಪ್ಪತ್ತ ವರ್ಷಗಳ ಹಿಂದೆ. ಇದ್ದ ಗಂಡ ಯಾವದೋ ಜಡ್ಡ ಬಂದು ತೀರಿ ಹೋಗಿದ್ದ, ಮತ್ತ ವರ್ಷ ಒಪ್ಪತ್ತಿನಾಗ್ಯ ಮದುವಿ ಮಾಡಿಕೊಟ್ಟ ತನ್ನ ಮಗಳೂ ಈ ಕೂಸ ಕೊಟ್ಟ ಅವಳೂ ಶಿವನ ಪಾದ ಸೇರಿದ್ದಳು. ಈಗ ದೊಡ್ಡ ಮನೆಯಲ್ಲಿ ತಾನೊಬ್ಬಳೆ. ಗಂಡ ನೂರಾರು ಕುರಿ ಸಾಕಿ , ಮೇಯಿಸಿಕೊಂಡು ಬಂದು ಪ್ರತಿ ಉಗಾದಿಗೆ ತೊಲಿಗಟ್ಟಲೇ ಬಂಗಾರ ಮಾಡಿ ತನ್ನ ಹೆಂಡತಿಗೆ ಆಭರಣ ಮಾಡಿಸತಿದ್ದ, ಹೀಂಗ ಮಾಡಿಸಿದ್ದ ಆಭರಣಗಳೇ ಡಜನಗಟ್ಟಲೆ ಆಗಿದ್ದವು. ಮುದುಕಿ ಹರೆದಾಗ ಇದ್ದಾಗ ಮಂದಿಗಿ ಕಣ್ಣಿಗಿ ಬೀಳಬಾರದಂತ ಮನಿಯಾಗ ಒಂದ ಕಡೆ ಮುಚ್ಚಿಟ್ಟಿದ್ದಳು. ಇದ್ದ ಗಂಡ, ಮಗಳು ಹ್ವಾದ ಮ್ಯಾಲೆ ಈ ಬಂಗಾರ ತನ್ನ ಮೊಮ್ಮಗಳಿಗಿ ಬರಲಿ ಅಂತಾ ಆಸೆ ಇಟಗೊಂಡು, ಇಷ್ಟ ಬಂಗಾರ ನಮ್ಮ ಹಳ್ಯಾಗ ಇಟಗೊಂಡ ಮತ್ತ ಮರಳಿ ಕೊಡೋ ನಂಬಿಗಸ್ಥ ಮನಿಷ್ಯಾ ಯಾರ ಅದಾರ ಅಂತಾ ಹುಡಕತ್ತಿದ್ದಳು. ಇಂಥಾ ವ್ಯಾಳೆದಾಗ ಹುಡುಕುತ್ತಿರುವ ಬಳ್ಳಿ ಕಾಲ್ತೊಡಕಿದಂತೆ ಈ ಮಲ್ಲಪ್ಪ ಮಾಸ್ತರು ಸಿಕ್ಕಿದ್ದರು.
ಮುದುಕಿ ಮೊಮ್ಮಗಳು ಮಲ್ಲಪ್ಪ ಮಾಸ್ತರ ಸಾಲಿಗಿ ಕಲಿಯಲಿಕ್ಕೆ ಹೋಗತಿತ್ತು, ಒಂದನೇ ಈಯತ್ತೆ ಕಲಿಯುವಾಗ
ಈ ಹುಡುಗಿ ರೂಪ, ಲವಲವಿಕೆ ನೋಡಿ ಮುದ್ದು ಮಾಡಿದ್ದರು, ಅಷ್ಟ ಅಲ್ಲಾ ಈ ಮಗುವಿಗೆ ಚೆಂದಾಗಿ ಪಾಠ ಹೇಳಿದ್ದರು, ದಿನಾ ಮನಿಗಿ ಬಂದ ಮೊಮ್ಮಗಳು ಮಾಸ್ತರ ಗುಣಗಾನ ಮಾಡತಿತ್ತು. ಒಂದ ದಿನಾ ಸಾಲಿಗಿ ಹೋಗಿ ಮಾಸ್ತರ ನೋಡಿ ತನ್ನ ತಾಯಿ ಇಲ್ಲದ ಮೊಮ್ಮಗಳನ್ನು ಪ್ರೀತಿಯಿಂದ ಕಾಣುವುದಕ್ಕಾಗಿ ಅವರನ್ನು ಕಂಡು ಅಕ್ಕರೆಯಿಂದ ಮಾತಾಡಿಸಿ, ‘ನಾಳಿ ಶನಿವಾರ ಸಾಲಿ ಬಿಟ್ಟ ಮ್ಯಾಲ ನಮ್ಮ ಮನಿಗಿ ಬಂದ ಊಟಾ ಮಾಡಿ ಹೋಗ್ರಿ’ ಅಂತಾ ವಿನಂತಿಸಿಕೊಂಡಳು. ಅದರಂತೆ ಮಲ್ಲಪ್ಪ ಮಾಸ್ತರು ಮುದುಕಿಯ ಮನೆಗೆ ಬಂದ್ರು, ಮುದುಕಿ ಬಿಸಿ ರೊಟ್ಟಿ, ತುಂಬಗಾಯಿ ಬದನಿಕಾಯಿ, ಬಳ್ಳೊಳ್ಳಿ ಚಟ್ನಿ, ಮೊಸರಾ, ಅಗಸಿ, ಗುರೆಳ್ಳ ಹಿಂಡಿ, ಶೇಂಗಾ ಹೋಳಿಗಿ, ತುಪ್ಪಾ ಹೀಂಗ ಬಗಿ ಬಗಿ ಅಡುಗೆ ಮಾಡಿ ಉಣಿಸಿದಳು. ಮೊಮ್ಮಗಳನ್ನ ಕರಕೊಂಡ ಊಟಾ ಮಾಡಿದರು, ಮೊಮ್ಮಗಳು ಆಟಾ ಆಡಾಕ ಹೊರಗ ಹೋಯಿತು.
ಊಟ ಆದಮ್ಯಾಲ ಮುದುಕಿ ಒಳಗ ಹೋಗಿ ಗುಳೇದಗುಡ್ಡ ಖನದಾಗ ಕಟ್ಟಿದ್ದ ಒಂದ ಗಂಟ ತಂದಳು. ಮಾಸ್ತರ ಮುಂದ ಇಟ್ಟಳು. ‘ಮಲ್ಲಪ್ಪ ಮಾಸ್ತರ ನನ್ನದೊಂದು ವಿನಂತಿ ಐತಿ, ಈ ಗಂಟಿನ್ಯಾಗ ಬರೋಬ್ಬರಿ ಒಂದ ಡಜನ್ನ ಬಂಗಾರದ ಆಭರಣ ಅದಾವು, ನಮ್ಮ ಹಿರ್ಯಾ ಮಾಡಿಟ್ಟಿದ್ದು, ಮಗಳಿಗಿ ಕೊಡಬೇಕಂದ್ರ ಅವಳು ಈ ಕೂಸಿನ ಕೊಟ್ಟ ಮ್ಯಾಲ ಹ್ವಾದಳು, ಇವು ಈ ಮೊಮ್ಮಗಳಿಗಿ ಸೇರಿದ್ದು, ಇವೆಲ್ಲಾ ಇವತ್ತು ನಿಮಗ ಒಪ್ಪಸತಿನಿ, ಆಕಿ ದೊಡ್ಡಾಕಿ ಆಗಿ ಸಾಲಿ ಕಲಿತು, ಆಕಿ ಲಗ್ನದ ವ್ಯಾಳೆದಾಗ ನಿಮ್ಮ ಕೈಯಾರ ಆಕಿ ಕೈಗೆ ಒಪ್ಪಿಸಬೇಕ, ಮತ್ತ ನಾ ಅಲ್ಲಿತನಾ ಇರತನೋ ಇಲ್ಲೋ ಗೊತ್ತಿಲ್ಲ, ಆದ್ರ ಒಂದ ಸಾಮಾನ ಕಡಿಮಿ ಇಲ್ಲದಾಂಗ ನೀವು ಅವಳಿಗೆ ಒಪ್ಪಿಸ್ತಿನಿ ಅಂತಾ ವಚನಾ ಕೊಡಿ’್ರ ಅಂದಳು. ಆಗ ಮಲ್ಲಪ್ಪ ಮಾಸ್ತರು ಯಾರೋ ಪರಿಚಿತರಲ್ಲದ ಈ ಮುದುಕಿ ಇವತ್ತು ಈ ಸಾಲಿ ಮಾಸ್ತರ ಮ್ಯಾಲ ನಂಬಿಗಿ ಇಟ್ಟು ಈ ಇಪ್ಪತ್ತ ಮೂವತ್ತ ತೊಲಿ ಬಂಗಾರ ಒಪ್ಪಸತಾಳ ಅಂದ್ರ ನಾನು ಮಾಸ್ತರ ಆಗಿದ್ದಕ್ಕೂ ಹೆಮ್ಮೆ ಆಗತೈತಿ ಅಂತಾ ಅನಿಸಿ ಮುದುಕಿಗಿ ಹೇಳಿದರು, ‘ನೋಡವಾ ತಾಯಿ, ನಾನು ಸೌಂದತ್ತಿ ಎಲ್ಲವ್ವನ ಮ್ಯಾಲ ಆಣಿ ಮಾಡಿ ಹೇಳ್ತಿನಿ, ಇದರಾಂದ ಒಂದ ಗುಂಜಿ ಕಡಿಮಿ ಇಲ್ಲದ ನಿನ್ನ ಮೊಮ್ಮಗಳಿಗಿ ಒಪ್ಪಸತೀನಿ, ನೀ ಏನು ಕಾಳಜಿ ಮಾಡಬ್ಯಾಡ’ ಅಂದ್ರು. ಆ ಮ್ಯಾಲ ಮುದುಕಿ ಒಳಗ ಹೋಗಿ ನೋಟಿನ ಪುಡಕಾ ಹಿಡಕೊಂಡ ಬಂದ್ಲು, ‘ಎಪ್ಪಾ ಇವೇನ ಭಾಳ ಇಲ್ಲಾ, ಇವನ್ನು ನಿನ್ನ ಕಡೆ ಇಟಗೋ, ನಿನಗೂ ಅಡಚಣಿ ಇದ್ದರ ಖರ್ಚ ಮಾಡ, ಆದ್ರ ಹಬ್ಬ ಹುಣ್ಣಿವಿಗಿ ನನಗ ಯಾವಾಗರೇ ಹರಕತ್ತ ಬಿದ್ದಾಗ ಏಟ ಬೇಕ ಅಷ್ಟ ಕೊಡುವಿ’ ಅಂತಾ ಹೇಳಿ ಕೊಟ್ಟಿದ್ದಳು. ಮಾಸ್ತರರಲ್ಲಿ ಆನಂದದ ಕಣ್ಣೀರು ಉದುರಿದವು,
*
ಈ ಹಳ್ಳಿಯ ಮುಗ್ದ ಜನಾ ಮಾಸ್ತರ ಮೇಲೆ ಇಟ್ಟ ನಂಬುಗೆಗೆ ಶರಣು ಎಂದು ಊರಿಗೆ ಬಂದು ರಾತ್ರಿ ತಮ್ಮ ಹೆಂಡತಿ ತುಳಜಾಬಾಯಿಗೆ ಈ ಗಂಟು ತೋರಿಸಿದ್ದರು, ತುಳಜಾಬಾಯಿಯೂ ಅಷ್ಟೇ ಅನ್ಯರ ದುಡ್ಡು ಹಾವಿನ ಬಾಯಾನ ದುಡ್ಡು ಇದ್ದಾಂಗ ಅವನ್ನ ಬಳಸಬಾರದು ಅಂತಾ ಗೊತ್ತಿತ್ತು, ಹೀಂಗಾಗಿ ಅವಳು ಯಾವ ಆಸೆಯನ್ನೂ ಈ ಸಂಪತ್ತಿನ ಮೇಲೆ ಇಟ್ಟುಕೊಂಡಿರಲಿಲ್ಲ. ಬಾಡಿಗೆ ಮನೆಯಲ್ಲಿದ್ದಾಗ ಒಂದೆರಡು ಬಾರಿ ತುಳಜವ್ವ ಈ ಮುದುಕಿಯನ್ನು ಕಂಡಿದ್ದಳು, ಆಗಾಗ ದುಡ್ಡು ಕಡಮಿ ಬಿದ್ದಾಗ ಮಾಸ್ತರ ಕಡೆ ಇಸಿದುಕೊಂಡು ಹೋಗುತ್ತಿದ್ದಳು, ಈಗ ಜಮಖಂಡಿಯಲ್ಲಿ ಹೊಸ ಮನಿ ಕಟ್ಟಿಸದ ಮ್ಯಾಲ ಮುದುಕಿ ಎಲ್ಲಿ ಮಾಸ್ತರ ತನ್ನ ಬಂಗಾರ ಮಾರಿ ಮನಿ ಮಾಡ್ಯಾನ ಅಂತಾ ತಿಳಿಕೊಂಡು ಊರಾನು ಒಂದೆರಡು ಉಡಾಳ ಹುಡುಗರನ್ನು ಕರೆದುಕೊಂಡು ಎರಡು ವರ್ಷಗಳ ಹಿಂದೆ ಬಂದು ರಂಪಾಟ ಮಾಡಿದ್ದಳು, ಯಾಕೆಂದರೆ ಬಂಗಾರ ಇಟ್ಟುಕೊಳ್ಳುವಾಗ ಒಂದ ಮಾತಾಗಿತ್ತು ಈ ವಿಷಯ ನಮಗ ಬಿಟ್ಟು ಬ್ಯಾರೆ ಯಾರಿಗೂ ಹೇಳಬಾರದೆಂದು,ಅದರಂತೆ ಮುದುಕಿ ಊರಾನ ಹುಡುಗರಿಗೆ ಬಂಗಾರದ ವಿಷಯ ಹೇಳಿರಲಿಲ್ಲ, ಮಾಸ್ತರ ರೊಕ್ಕಾ ಕೊಡಾವ ಅದಾನ ಬರ್ರೀ ಅಂತಾ ಕರಕೊಂಡ ಬಂದಿದ್ದಳು, ಈ ಹುಡುಗರು ಕಲಿಸಿದ ಗುರುಗಳ ಅನಲಾರದ ಯಾಸಿ ಟೀಸಿ ಮಾತಾಡಿದ್ದಕ್ಕೆ ಸಿಟ್ಟು ಬಂದು ಒದರಾಡಿ ಬೈದು ಮುದುಕಿಯ ಸಮೇತ ಓಡಿಸಿದ್ದರು, ಇದಾಗಿ ಎರಡಮೂರು ವರ್ಷ ಕಳೆದ ಮೇಲೆ ಈ ಬಾರಿ ಸ್ಕೂಟಿಯ ಮೇಲೆ ಮೊಮ್ಮಗಳನ್ನು ಕರೆದುಕೊಂಡು ಮಾಸ್ತರ ಮನಿಗೆ ಬಂದಿದ್ದಳು, ಈ ಪ್ರಸಂಗವೂ ಸುಖಾಂತ್ಯವಾಗದೇ ಇದ್ದಾಗ ಬಂಗಾರದ ವಿಷಯ ಪಬ್ಲಿಕ್ ಆಗುತ್ತದೆಂದು ಹೆದರಿ ಮೊಮ್ಮಗಳು ಅಜ್ಜಿಯನ್ನು ಮಂಗಮಾಯ ಮಾಡುವರಂತೆ ತನ್ನ ಊರಿಗೆ ಕರೆದುಕೊಂಡು ಬಂದಿದ್ದಳು.
*
ಅಜ್ಜಿಯ ತೊಡೆಯ ಮೇಲೆ ಮಲಗಿದ್ದ ಮೊಮ್ಮಗಳು ಈಗ ಎದ್ದು ಕುಳಿತಳು, ‘ಅಜ್ಜಿ ನಾಳಿ ಸ್ವಾಮಾರ ಮಲ್ಲಪ್ಪ ಮಾಸ್ತರು ಮತ್ತ ತುಳಜಕ್ಕ ಅಕ್ಕೊರು ಮನಿಗಿ ಬರಾಕ ಹೇಳ್ಯಾರ’ ಎಂದು ಖುಷಿಯ ಸಂಗತಿ ತಿಳಿಸಿದಳು, ಅಜ್ಜಿಗೆ ಒಳಗೊಳಗೆ ಖುಷಿಯಾಯ್ತು, ಈವರೆಗೂ ತಾನು ಅವರ ಬಳಿಯಲ್ಲಿ ಬಂಗಾರದ ಆಭರಣಗಳನ್ನು ಇಟ್ಟುಕೊಳ್ಳಲು ಕೊಟ್ಟ ಸಂಗತಿ ಮೊಮ್ಮಗಳಿಗೆ ತಿಳಿಸಿರಲಿಲ್ಲ ಇತ್ತ ಈ ಹುಡುಗಿ ಮುದುಕಿಯ ಮೊಮ್ಮಗಳು ಎಂಬ ಸಂಗತಿ ಮಾಸ್ತರರಿಗೂ ಮತ್ತು ತುಳಜವ್ವನವರಿಗೂ ತಿಳಿದಿರಲಿಲ್ಲ.
ಇಂದು ಸೋಮವಾರ ಮಾಸ್ತರ ಮನಿ ಮುಂದೆ ಸ್ಕೂಟಿಯ ಮ್ಯಾಲಿಂದ ಈ ಹುಡುಗಿಯೂ ಮತ್ತು ಆ ಮುದುಕಿಯೂ ಇಳಿದರು. ಕಿಡಕಿಯಿಂದ ಸೊಸ್ತ್ಯಾರು ನೋಡಿ, ಅಯ್ಯೋ ಮತ್ತ ಈ ಮುದುಕಿ ಬಂತಲ್ಲಾ ಎಂದು ಗಾಬರಿಯಾಗಿ ಈ ಸಲಾ ಮಾವಾರ ಹೆಣಾ ಬಿತ್ತು ಎಂದು ಉರಿದುಕೊಂಡರು, ಆದರೆ ಆಗಿದ್ದೇ ಬೇರೆ ಮನೆಗೆ ಬರುವಾಗ ತನ್ನ ಅಜ್ಜಿಯನ್ನು ಕರೆದುಕೊಂಡು ಬರುವದಾಗಿ ನರ್ಸ ತಿಳಿಸಿದಂತೆ ಮನೆಗೆ ಬಂದಿದ್ದಳು. ಮಲ್ಲಪ್ಪ ಮಾಸ್ತರು, ತುಳಜವ್ವ ಮತ್ತ ಕಿರಿಯ ಮಗಾ ಗೇಟಿನವರೆಗೂ ಬಂದು ಅತ್ಯಂತ ಪ್ರೀತಿಯಿಂದ ಅಜ್ಜಿ ಮೊಮ್ಮಗಳನ್ನು ಒಳಗೆ ಕರೆದುಕೊಂಡು ಹೋದರು,
ಮಂಜಾನೆ ಅತ್ಯಂತ ಖುಷಿಯಿಂದ ಓಡಾಡಿಕೊಂಡು ಸಂಭ್ರಮಿಸಿದರು, ಹತ್ತುವರೆ ಸುಮಾರು ಮಲ್ಲಪ್ಪ ಮಾಸ್ತರು ಬ್ಯಾಂಕಿನ ಕಡೆ ಹೋಗಿ ಲಾಕರ್ದಲ್ಲಿದ್ದ ಎಲ್ಲ ಆಭರಣಗಳನ್ನು ಬಿಡಿಸಿಕೊಂಡು ಬಂದರು. ಮನೆಯ ಟ್ರಂಕದಲ್ಲಿದ್ದ ಗುಳೇದಗುಡ್ಡ ಖಣ ತೆಗೆದುಕೊಂಡು ಅದರಲ್ಲಿ ಎಲ್ಲ ಆಭರಣಗಳನ್ನು ಕಟ್ಟಿ, ಊಟದ ಹೊತ್ತಿಗೆ ತಮ್ಮ
ಇಬ್ಬರು ಸೊಸೆಯಂದಿರನ್ನು ಮತ್ತು ಮೂರೂ ಮಕ್ಕಳನ್ನು ಕರೆದು ಎಲ್ಲರ ಉಪಸ್ಥಿತಿಯಲ್ಲಿ ‘ನಾನು ಆ ಹಳ್ಳಿಯೊಳಗ ನೌಕರಿ ಮಾಡುವಾಗ ಈ ಮಾಸ್ತರ ಮ್ಯಾಲ ವಿಶ್ವಾಸವಿಟ್ಟು ಈ ಆಭರಣಗಳನ್ನೆಲ್ಲಾ , ಈ ಎಮ್ಮಾ ನನ್ನ ಕಡೆ ಇಟ್ಟುಕೊಳ್ಳಲು ಕೊಟ್ಟಿದ್ದಳು, ಮತ್ತ ಮೊಮ್ಮಗಳು ದೊಡ್ಡವಳಾದ ಮೇಲೆ ಅವಳಿಗೆ ಒಪ್ಪಿಸಲು ತಿಳಿಸಿದ್ದಳು. ಅದರಂತೆ ಈ ದಿನ ಶುಭ ದಿನ ಇವತ್ತು ಕೂಡಿ ಬಂದಿದೆ. ನಿಮ್ಮೆಲ್ಲರ ಸಮ್ಮುಖದಲ್ಲಿ ನಾನು ಈ ತಾಯಿಗೆ ಬಂಗಾರ ಒಪ್ಪಿಸುತ್ತಿದ್ದೇನೆ’ ಎಂದು ಗಂಟು ಬಿಚ್ಚಿ ‘ನೋಡ ಎಮ್ಮಾ ಒಂದ ಗುಂಜಿ ಕಡಮಿ ಇಲ್ಲದ ನೀ ಕೊಟ್ಟ ಒಂದ ಡಜನ್ ಆಭರಣ ಎಲ್ಲಾ ಅದಾವು’ ಎಂದು ಎಣಿಸಿ ಮತ್ತೆ ಗಂಟು ಕಟ್ಟಿ ಮುದುಕಿಯ ಉಡಿಯಲ್ಲಿಟ್ಟರು.
ಮುಗ್ದ ಮುದುಕಿಗೆ ಮಾತು ಬರಲಿಲ್ಲ, ಮಾಸ್ತರ ಅಂದ್ರ ಸ್ವತಃ ನಡೆದಾಡೋ ದೇವರಂತ ಕೇಳಿನಿ ಇವತ್ತ ಸಾರ್ಥಕವಾಯ್ತು ಎಂದು ಬಂಗಾರದ ಗಂಟನ್ನು ಮತ್ತು ತನ್ನ ಮೊಮ್ಮಗಳನ್ನು ಮುದುಕಿ ಒಂದೇ ತೆಕ್ಕೆಯಲ್ಲಿ ತೆಗೆದುಕೊಂಡು ಮಲ್ಲಪ್ಪ ಮಾಸ್ತರ ಮತ್ತು ತುಳಜವ್ವನವರ ಕಾಲಿಗೆ ನಮಸ್ಕರಿಸಿ ‘ನನ್ನದೊಂದ ಮಾತ ನಡೆಸಿಕೊಡ್ರಿ ,ಈ ಬಂಗಾರ ಈ ಬಂಗಾರದಂಥ ಮೊಮ್ಮಗಳನ್ನ ನಿಮಗ ಒಪ್ಪಿಸ್ತೀನಿ, ನಿಮ್ಮ ಮನಿ ಸೊಸಿಯಾಗಿ ಮಾಡಿಕೊಂಡು ಮನಿ ತುಂಬಿಸಿಕೊಳ್ಳಿರಿ’ ಅಂತಾ ಕೈ ಮುಗಿದಳು. ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದ ಇಬ್ಬರು ಸೊಸೆಯಂದಿರು ತನ್ನ ಮಾವನವರ ದೊಡ್ಡಸ್ತಿಕೆ ಮುಂದೆ ಕುಬ್ಜರಾಗಿ ನಿಂತರು, ಮಾವಾರ ನಮ್ಮನ ಕ್ಷಮಿಸಿ ಬಿಡ್ರಿ, ಈ ಬಂಗಾರದ ಮೇಲೆ ಆಸೆ ಮಾಡಿ ನಾವು ಬಂಗಾರಂಥ ಮಾವ , ಅತ್ತಿಗೆ ಸರಿಯಾಗಿ ನಡಿಸಿಕೊಳ್ಳಲಿಲ್ಲ, ಬಂಗಾರಕ್ಕಿಂತ ಬದಕ ಮುಖ್ಯ ಅನ್ನೋದು ಕಲಿಸಿಕೊಟ್ಟಿರಿ, ಇನ್ನ ಮ್ಯಾಲ ನಾವು ಎಲ್ಲರೂ ಕೂಡಿ ಇರೋಣ ,ಮದುವಿ ಚೆಂದ ಮಾಡಿ ಈ ಹುಡುಗಿ ಮನಿ ತುಂಬಿಸಿಕೊಳ್ಳೋಣ’ ಎಂದು ಅತ್ತೆ, ಮಾವರ ನಮಸ್ಕರಿಸಿ ಒಂದಾದರು. ಎಲ್ಲರಲ್ಲೂ ಕವಿದ ಕಾರ್ಮೋಡ ಬಯಲಾಗಿ ಹೊಸ ಬೆಳಕು ಬಿದ್ದಿತ್ತು.
#
ಪರಿಚಯ
ಡಾ.ಪ್ರಕಾಶ ಗ.ಖಾಡೆ
ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10 ನೇ ಜೂನ 1965 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ತೊದಲಬಾಗಿಯಲ್ಲಿ, ಪ್ರೌಢ ಶಿಕ್ಷಣವನ್ನು ಬಾದಾಮಿ ತಾಲೂಕಿನ ಕೆರೂರು, ಬಿ.ಎ.ಕನ್ನಡ ಪದವಿ ಶಿಕ್ಷಣವನ್ನು ಇಳಕಲ್ಲು, ಎಂ.ಎ.ಕನ್ನಡ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿಕೊಂಡರು. ಮುಂದೆ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ವಿಷಯದ ಮೇಲೆ ಪ್ರೊ.ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧ ಮಂಡಿಸಿ 2005 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಭಾಜನರಾದರು. ಈ ವರೆಗೆ ಕಾವ್ಯ, ಕಥೆ, ನಾಟಕ, ಜೀವನ ಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನು ಪ್ರಕಟವಾಗಿವೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕøತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಕಾವ್ಯ ನಾದದ ಧ್ಯಾನ,ಬಾಗಲಕೋಟೆ ಹೋಳಿ, ಬಾದಾಮಿ ಸ್ವಾತಂತ್ರ್ಯ ಹೋರಾಟ, ಹಲಸಂಗಿ ಸಾಹಿತ್ಯದ ದೇಸಿಯತೆ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನಗಳು ಮುಂತಾದವು ಇವರ ಪ್ರಕಟಿತ ಕೃತಿಗಳು.
ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ,ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ, ಬೆಳಗಾವಿಯ ಮುಚಳಂಬಿ ಕಥಾ ಪ್ರಶಸ್ತಿ, ಹರಿಹರದ ಹರಿಹರಶ್ರೀ ಪ್ರಶಸ್ತಿ, ಬೀಳಗಿ, ಸಮೀರವಾಡಿ. ಅರಕೇರಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ, ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಸಮಗ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಇವರ ಲೇಖನಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಕೊವಿಡ್-19
ಕೊರೊನಾ ಕಾಲ ಘಟ್ಟದ ಲಾಕ್ ಡೌನ್ ವೇಳೆಯಲ್ಲಿ ಪ್ರತಿ ದಿವಸ ಮನೆಯಲ್ಲಿದ್ದುಕೊಂಡೆ "ದೇಸಿ:ಕನ್ನಡದ ಅನನ್ಯತೆ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. "ಬೆಳಕಾಯಿತು ಬಾಗಲಕೋಟೆ' ಹೆಸರಿನಲ್ಲಿ ಫೇಸ್ ಬುಕ್ಕ್ ಲೈವ್ ದಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು ಸರಣಿ ಉಪನ್ಯಾಸಗಳನ್ನು ಏರ್ಪಡಿಸಿಕೊಂಡು ಬಂದಿದ್ದಾರೆ, 140 ಕ್ಕೂ ಹೆಚ್ಚು ಉಪನ್ಯಾಸಗಳು ಪ್ರಸಾರವಾಗಿವೆ. ಇವರ ಕೂಡಿ ಕಟ್ಟಿದ ಕನ್ನಡ, ಒಲುಮೆ ಹಾಡಿಗೆ ಗೀತೆಗಳು
ಯುಟ್ಯೂಬ್ ಮೂಲಕ ಜಗದೆಲ್ಲೆಡೆ ಜನಪ್ರಿಯವಾಗಿವೆ. 2023 ಜೂನದಲ್ಲಿ ಜರುಗಿದ್ದ ರಾಜ್ಯ ಮಟ್ಟದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ,2024 ನವೆಂಬರದಲ್ಲಿ ವಿಜಯಪುರದಲ್ಲಿ ಜರುಗಿದ ಪುಸ್ತಕ ಪರಿಷತ್ತು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದರು.
ಡಾ.ಪ್ರಕಾಶ ಗ.ಖಾಡೆ ಅವರ ಸಧ್ಯಕಿದು ಜಮಖಂಡಿ ಸಂತಿ ಕಥೆಯನ್ನು ಅವರ 2023 ರಲ್ಲಿ ಪ್ರಕಟವಾದ ‘ಬಾಳುಕುನ ಪುರಾಣ’ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಈ ಕಥೆಯು 2021 ನೇ ಸಾಲಿನ ಮುಂಬಯಿಯ ಮೊಗವೀರ ದೀಪಾವಳಿ ಕಥಾ ಸ್ಪರ್ಧೆಯ ಬಹುಮಾನಕ್ಕೆ ಪ್ರಾಪ್ತವಾಗಿದೆ.
ಆಶಯ
ಸಧ್ಯಕಿದು ಜಮಖಂಡಿ ಸಂತಿ ಕಥೆಯು ವಸ್ತು, ಪರಿಸರ, ಸಂಗತಿ, ಭಾಷೆ, ನಿರೂಪಣಾ ಶೈಲಿಯಿಂದ
ಹೊಸತಾಗಿದೆ. ಬದುಕಿನಲ್ಲಿ ಸತ್ಯ, ಪ್ರಾಮಾಣಿಕತೆ, ನಂಬುಗೆ, ವಿಶ್ವಾಸ, ಸಹನೆ, ಸ್ವಾಭಿಮಾನಗಳ ಒಟ್ಟು ಮೊತ್ತ ಕಥೆಯ ಸಮನ್ವಯತೆಯನ್ನು ಸಾಧಿಸಿದೆ. ಕಥೆಯು ಮಲ್ಲಪ್ಪ ಹೆಸರಿನ ಮಾಸ್ತರರ ಪ್ರಾಮಾಣಿಕತೆಯನ್ನು ನಿರೂಪಿಸುತ್ತದೆ. ಮಾಸ್ತರರು ತಮ್ಮ ಶಿಸ್ತು, ಸಂಯಮ, ಸ್ವಾಭಿಮಾನ, ಪ್ರಾಮಾಣಿಕತೆ, ಹಾಗೂ ಕರ್ತವ್ಯಪರತೆಗೆ ಹೆಸರಾದವರು. ಮುದುಕಿಯೊಬ್ಬಳು ತನ್ನ ಬಂಗಾರದ ಒಡವೆಗಳನ್ನು ಆಸೆಬುರುಕರಿಂದ ರಕ್ಷಿಸಿಕೊಳ್ಳಲು ಮಲ್ಲಪ್ಪ ಮಾಸ್ತರರ ಬಳಿ ಇಟ್ಟು ಆಮೇಲೆ ತೆಗೆದುಕೊಳ್ಳುತ್ತೇನೆ ಎಂದು ಹೋಗುತ್ತಾಳೆ. ಸ್ವಲ್ಪ ದಿನಗಳಲ್ಲಿಯೆ ಮಾಸ್ತರರಿಗೆ ವರ್ಗವಾಗುತ್ತದೆ. ಎಷ್ಟೋ
ವರ್ಷಗಳಾದ ಮೇಲೆ ಮಲ್ಲಪ್ಪ ಮಾಸ್ತರರು ಅವಳ ದಾಗೀನುಗಳನ್ನು ಗುಲಗಂಜಿಯಷ್ಟು ಕಡಿಮೆ ಮಾಡದೆ ಮರಳಿಸುವುದು ಕಥೆಯ ವಸ್ತುವಾಗಿದೆ. ಮಾಸ್ತರರ ಜೀವನ ಜಂಜಾಟ, ಮಕ್ಕಳು-ಸೊಸೆಯರೊಂದಿಗಿನ ಘರ್ಷಣೆ, ಬಹುಶ: ಪ್ರತಿಯೊಬ್ಬರ ಮನೆಯಲ್ಲಿ ಇರಬಹುದಾದ ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆಯವರು ಯತ್ನಿಸಿರುವುದು ಈ ಕತೆಯಲ್ಲಿ ಮೆಚ್ಚತಕ್ಕ ಅಂಶವಾಗಿದೆ. ಒಂದು ದಿನ ಮಾಸ್ತರರ ಮನೆಗೆ ಮುದುಕಿ ಅಚಾನಕ್ಕಾಗಿ ಬರುವುದರೊಂದಿಗೆ, ಅವಳನ್ನು ಕಂಡು ವೃದ್ಥರಾಗಿರುವ ಮಾಸ್ತರರು ಮೂರ್ಛೆ ಬೀಳುವುದರೊಂದಿಗೆ ಕತೆಯನ್ನು ಕುತೂಹಲಕರವಾಗಿ ಪ್ರಕಾಶ ಅವರು ಆರಂಭಿಸಿದ್ದಾರೆ. ಮಾಸ್ತರರ ಜಂಜಾಟಗಳು ಮಕ್ಕಳ ಸೊಸೆಯಂದಿರ ಜಗಳಾಟ, ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆ ಪ್ರಯತ್ನಿಸಿದ್ದಾರೆ.
ಕೃಷ್ಣಾತೀರ ಪ್ರದೇಶದ ಕಥೆಗಾರರಾಗಿದ್ದ ದು.ನಿಂ.ಬೆಳಗಲಿ, ರಾವ್ ಬಹಾದ್ದೂರ್, ಸತ್ಯಕಾಮ ಮುಂತಾದ ಕಥೆಗಾರರು ಕಟ್ಟಿಕೊಟ್ಟ ಪಾರಂಪರಿಕ ಲೋಕದ ಮರುದರ್ಶನ ಹಾಗೂ ಕಳೆದುಹೋದ ಕಾಲವನ್ನು ವರ್ತಮಾನಕ್ಕೆ ಜೋಡಿಸುವ ಪ್ರಯತ್ನವೊಂದನ್ನು ಪ್ರಕಾಶ ಖಾಡೆಯವರು ಈ ಕತೆಯ ಮೂಲಕ ಇಲ್ಲಿ ಮುಂದುವರೆಸಿದ್ದಾರೆ. ಸನ್ನಿವೇಶ, ಪಾತ್ರಗಳು, ಇಲ್ಲಿನ ಭಾಷಿಕ ಸೌಂದರ್ಯ ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಗ್ರಾಮ್ಯ ಭಾಷಾ ಸೊಗಸು ಕಥೆಗಳ ಒಟ್ಟು ಆಕರ್ಷಣೆಗೆ ಜೊತೆಯಾಗಿದೆ.
ಜಮಖಂಡಿ ಪ್ರಾಂತದ ದೇಸೀ ಭಾಷೆಯ ಪದ ಬಳಕೆ ಈ ಕಥೆಯ ಶೋಭೆ ಹೆಚ್ಚಿಸಿದೆ. ‘ನೊಂದವರ ನೋವ ನೋಯದವರೆತ್ತ ಬಲ್ಲರು’ ಎಂಬ ವಚನ ಸಾಲಿನ ದಾರ್ಶನೀಯತೆ
ಕಥೆಯಲ್ಲಿ ಪ್ರಜ್ವಲಿಸಿದೆ.
#
ವಿಳಾಸ : ಡಾ.ಪ್ರಕಾಶ ಗ.ಖಾಡೆ. ಮನೆ ನಂ. ಎಸ್. 135, ಸೆಕ್ಟರ್ ನಂ. 63, ನವನಗರ,ಬಾಗಲಕೋಟೆ -587103
ಮೊ. 9845500890
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ