ಗುರುವಾರ, ಏಪ್ರಿಲ್ 16, 2015

ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ತೆರೆ

ಪುಟ್ಟರಾಜರಿಗೆ ಭಾರತರತ್ನ ನೀಡಿ

ಗದಗ: ಸಾವಿರಾರು ಅಂಧ ಮಕ್ಕಳ ಬಾಳಿಗೆ ಬೆಳಕು ನೀಡಿದ ಪುಟ್ಟರಾಜ ಗವಾಯಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿ ಗೌರವಿಸಬೇಕು ಎಂದು ವಿಶ್ರಾಂತ ಕುಲಪತಿ  ಡಾ. ಎಸ್.ಪಿ.ಹಿರೇಮಠ ಹೇಳಿದರು. 
ನಗರದ ತೋಂಟದಾರ್ಯ ಮಠ­ದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಮಹೋತ್ಸವದ ಮಂಗಲೋ­ತ್ಸವ­ದಲ್ಲಿ ಐದು ಗ್ರಂಥ ಬಿಡುಗಡೆಗೊಳಿಸಿ ಮಾತ­ನಾಡಿದ ಅವರು, ಪುಟ್ಟರಾಜರು ಸ್ವತಃ ಅಂಧರಾಗಿದ್ದರೂ  76 ಪುಸ್ತಕ ರಚಿಸಿ­ರುವುದು ವಿಸ್ಮಯವಾಗಿದೆ. ತಮ್ಮ ಬದುಕನ್ನು ಸಂಗೀತ, ಸಾಹಿತ್ಯ ಹಾಗೂ  ಅಂಧರ ಸೇವೆಗೆ ಮೀಸಲಿರಿಸಿದರು. ಸಂಗೀತ ಶಿಕ್ಷಣ ಪಡೆದ ಅನೇಕ ಶಿಷ್ಯರು ದೇಶ, ವಿದೇಶಗಳಲ್ಲಿ ಪ್ರಖ್ಯಾತ ಕಲಾ­ವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಸಾಧಕ  ಪುಟ್ಟರಾಜರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡುವ ಮೂಲಕ ಗೌರವಿಸಬೇಕು ಎಂದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಜಿ.ಬಿ ಖಾಡೆ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ.  ಹಿಂದಿನ ದಿನಗಳಲ್ಲಿ ಸಾಹಿತ್ಯ ಸಂಗ್ರಹಿಸಲು ಹಳ್ಳಿಗಳಿಗೆ ಅಲೆದಾಡ­ಬೇಕಿತ್ತು. ಆದರೆ, ಇಂದು ಸಾಹಿತ್ಯ ಸಂಗ್ರಹ ಸರಳವಾಗಿದೆ ಎಂದರು.
ಜಿ.ಬಿ.ಖಾಡೆ ಹಾಗೂ ಡಾ.ಸತ್ಯಾನಂದ ಪಾತ್ರೋಟ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ರಬಕವಿ ಬ್ರಹ್ಮಾನಂದಾಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹಾಗೂ  ರಟಕಲ್ ರೇವಣಸಿದ್ಧ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಡಾ.ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ       ಮತ್ತಿತರರು ಪಾಲ್ಗೊಂಡಿದ್ದರು. 
ರಮೇಶ ಕಲ್ಲನಗೌಡರ ರಚಿಸಿದ ಡಾ. ಪುಟ್ಟರಾಜಕವಿ ಗವಾಯಿಗಳು, ಡಾ. ಎಸ್.ಪಿ. ಹಿರೇಮಠ ರಚಿಸಿದ ರಾವ್‌ ಬಹಾದ್ದೂರ ಷಣ್ಮುಖಪ್ಪ ಅಂಗಡಿ, ಕೆ.ಎಂ. ರೇವಣ್ಣ ರಚಿಸಿದ ಜನಪದ ತಜ್ಞ ಕೆ.ಆರ್. ಲಿಂಗಪ್ಪ, ಡಾ.ಎಂ.ಎಂ. ಕಲಬುರ್ಗಿ ಅವರ ಕೃತಿ ಕಿತ್ತೂರು ಸಂಸ್ಥಾನ ಸಾಹಿತ್ಯ ಭಾಗ-3, ಸಂಗಮ್ಮ ಕರವೀರ ಶೆಟ್ಟರ ಅವರ ಕೃತಿ ಸಂಗಮ್ಮ ಕರವೀರಶೆಟ್ರ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರೊ. ರಮೇಶ ಕಲ್ಲನಗೌಡರ ಗ್ರಂಥ ಪರಿಚಯಿಸಿದರು. ಬಸವರಾಜ ಅಡವಳ್ಳಿ, ಗೋಡನಾಯಕದಿನ್ನಿಯ ರೇವಣ­ಸಿದ್ದಯ್ಯ ಹಿರೇಮಠ ಹಾಗೂ ಸಂಗಡಿಗರು ವಚನ ಸಂಗೀತ ನೀಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿ­ದರು. ಬಾಹುಬಲಿ ಜೈನರ, ಗೀತಾಂಜಲಿ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.

ಶನಿವಾರ, ಏಪ್ರಿಲ್ 4, 2015

ನುಡಿ ನಮನ

ಅಭಿನವ ಸರ್ವಜ್ಞನಿಗೊಂದು ನುಡಿ ನಮನ''
(ಕವಿ ಡಾ. ಆರ್ ಸಿ ಮುದ್ದೇಬಿಹಾಳ ಅವರ ಕುರಿತು)  
-ಮಲ್ಲಿಕಾರ್ಜುನ ಬೃಂಗಿಮಠ,ವಿಜಯಪುರ
ಕನ್ನಡಕ್ಕೆ ಮೂರು ಮಹಾಕಾವ್ಯ ನೀಡಿದೆ
35 ಸಾವಿರಕ್ಕೂ ಹೆಚ್ಚು ತ್ರಿಪದಿ ಬರೆದೆ
50ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದೆ
ಇನ್ನು 50ತ್ತು ಪುಸ್ತಕ ಬರೆದಿಟ್ಟು [ಅಪ್ರಕಟಿತ] ಶಿವನಪಾದ ಸೇರಿದೆ
ಸಿಂಧೂರ ಲಕ್ಷ್ಮಣ, ಬಸವಣ್ಣನ ಮಾಹಾಕಾವ್ಯಲೋಕಾರ್ಪಣೆಮಾಡಿದೆ
ಜಗದ ಕೆಟ್ಟ ನೀತಿ ನಿಯಮಗಳಿಗೆ ಕಾವ್ಯ ಖಡ್ಗದಿ ತೀಡಿದೆ
ನೂರಾರು ಊರುಗಳು ತಪ್ಪದೇ ತಿರುಗಿದೆ
ಪರಿಶುದ್ಧ ಭಾವದಿ ಸಾಹಿತ್ಯ ನಮಗೆ ನೀಡಿದೆ
ಪ್ರಚಾರ ಪಡೆಯದೇ, ಪ್ರಶಸ್ತಿಗೆ ರಾಜಕೀಯ ಜನರ ಬಾಲಗೋಚಿಯಾಗದೆ
ದಿಗ್ಗಜನಾಗಿ ನಡೆ ನುಡಿಯಿಂದ ಪ್ರಮಾಣಿಕ ನಿಷ್ಠುರನಾಗಿ ನಡೆದೆ
ತಪ್ಪು ಮಾಡಿದವು ಸಾಹಿತ್ಯ ಪರಿಷತ್ತುಗಳು ನಿಮ್ಮನ್ನು ಅಧ್ಯಕ್ಷನನ್ನಾಗಸದೇ
ನಿರ್ಲಕ್ಷ್ಯಮಾಡಿದರೂ ಛಲಬಿಡದೆ ಸಾಹಿತ್ಯ ಬರೆದೆ
ಅಭಿಮಾನಿಗಳಿಗೆ ಉತ್ತಮ ಸಾಹಿತ್ಯ ಪುಸ್ತಕ ನೀಡಿದೆ.
ಆಯುರ್ವೇದ ಗ್ರಂಥಗಳನ್ನು ಬರೆದೆ
2004 ರ ನವೆಂಬರ 22 ರಂದು ಭೃಂಗಿಮಠ ವೇದಿಕೆಯಿಂದ ಸನ್ಮಾನಗೊಂಡೆ
ಕನ್ನಡದಲ್ಲೇ ಅತಿ ಹೆಚ್ಚ ಪುಸ್ತಕ ಬರೆದೆ
ಕನ್ನಡ, ಹಿಂದಿ, ಇಂಗ್ಲೀಷ, ಸಂಸ್ಕ್ರತ,ಉರ್ದು, ಮರಾಟಿ ಭಾಷೆ ಪಂಡಿತನೆನಸಿದೆ
ಆಯುರ್ವೇದ ಯುನಾನಿ ಬಾರತೀಯ ಸಂಸ್ಕ್ಋತಿಯ ವ್ಯದ್ಯ ಪದ್ದತಿ ಕನ್ನಡಕ್ಕೆ ಬರೆದೆ
ನಿಮ್ಮ ನಿರ್ಲಕ್ಷಿಸಿ ಕನ್ನಡ ಸಾ ಪರಿಷತ್ತುಗಳು ಮೋಸ ಮಾಡಿವೆ
ಈ ರೀತಿಯಾದದ್ದಕ್ಕೆ ನಮ್ಮಲ್ಲೂ ಬೇಸರವಿದೆ
ನಿಮ್ಮಗೆ ನ್ಯಾಯ ಕೊಡಿಸಲು ನಾನು ಬಡೆದಾಡಿದೆ ಹಲವು ಸಂಘಸಂಸ್ಥೆಗಳಿಗೆ ನಿಮ್ಮ ಸನ್ಮಾನಿಸಲು ಕೋರಿದೆ
ನಿಮ್ಮ ಘಟ್ಟಿತನ ನನ್ನ ಮನ ಸ್ಪಂದಿಸಿದೆ ನಿಮ್ಮ ನಿಷ್ಟುರತೆಯನಗೆ ಹಿಡಿಸಿದೆ
ನಿಜವಾಗಿಯೂ ಕನ್ನಡ ಸಾಹಿತ್ಯ ವಲಯ ನಿಮ್ಮನ್ನು ನಿರ್ಲಕ್ಷಿಸಿ ಮೋಸಿಸಿದೆ
ನಿಮ್ಮಾತ್ಮಕ್ಕೆ ಶಾಂತಿ ದೊರೆಯಬೇಕಾದರೆ ನಿಮ್ಮ ಸಮಗ್ರ ಸಾಹಿತ್ಯ ಪ್ರಕಟಿಸಲು ಸಾಹಿತ್ಯ ಪರಿಷತ್ತುಗಳಿಗೆ ನನ್ನ ಮನ ಆಗ್ರಹಿಸಿದೆ
ಇದೋ ಡಾ; ಆರ್ ಸಿ ಮುದ್ದೇಬಿಹಾಳ ದಿಗ್ಗಜ ಆತ್ಮವೇ ನಿನ್ನ ನೆನೆದು ನಾ ಈ ನುಡಿ ಅರ್ಪಿಸಿದೆ.