ಶುಕ್ರವಾರ, ಜೂನ್ 21, 2013


 ಧಾರವಾಡ ಗೆಳೆಯರ ಗುಂಪು :  ಸಾಹಿತ್ಯ ಸಮೃದ್ಧತೆಯ ಸಾಂಸ್ಕೃತಿಕ  ನೆಲೆಗಟ್ಟು


                  - ಡಾ.ಪ್ರಕಾಶ ಗ.ಖಾಡೆ

       
    ಕನ್ನಡ ಸಾಹಿತ್ಯದ ಮುಖ್ಯ ಸಾಂಸ್ಕøತಿಕ ಕೇಂದ್ರಗಳಲ್ಲಿ ಧಾರವಾಡವೂ ಒಂದು. ನವೋದಯದ ನಾಲ್ಕು ಕೇಂದ್ರಗಳಾದ ಧಾರವಾಡ,ಮೈಸೂರು,ಮಂಗಳೂರು ಮತ್ತು ಹಲಸಂಗಿ ಈ ನಾಲ್ಕು ಕೇಂದ್ರಗಳು ರೂಪಿಸಿದ ಸಾಹಿತ್ಯವು ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಬೇರೆ ಬೇರೆಯಾಗಿತ್ತು. ದೇಶದ ಸ್ವಾತಂತ್ರ್ಯ ಚಳವಳಿ, ಗಾಂದಿsೀವಾದ, ಕರ್ನಾಟಕ ಏಕೀಕರಣ, ಭಾಷೆ ಸಂಸ್ಕøತಿಗಳ ಪುರುಜ್ಜೀವನ, ಸುಧಾರಣವಾದ, ಇಂಗ್ಲಿಷ್ ರೊಮ್ಯಾಂಟಿಕ ಕಾವ್ಯದ ಪ್ರಭಾವ ಇತ್ಯಾದಿಗಳು ಆ ಕಾಲದ ಸಾಹಿತ್ಯಕ್ಕೆ ಒಟ್ಟಿನಲ್ಲಿ ವಿಶಾಲವಾದ ಏಕತೆಯನ್ನು ಒದಗಿಸಿದವು. ಆದರೆ ಈ ಉದ್ದೇಶ ಪ್ರಕಟವಾದ ರೀತಿಗಳು ಮಾತ್ರ ಆಯಾ ಭಾಗಗಳಿಗೆ ವಿಶಿಷ್ಟವಾಗಿದ್ದವು. ಆಯಾ ಭಾಗಗಳು ಎದುರಿಸಿದ ಕರ್ಷಣಗಳ ತೀವ್ರತೆಯೂ ಬೇರೆಯಾಗಿತ್ತು. ಹಾಗೆಯೇ ಅಬಿsವ್ಯಕ್ತಿಯ ಪ್ರೇರಣೆಗಳೂ ಬೇರೆಯಾಗಿದ್ದವು. ಈ ಬಿsನ್ನತೆಯಿಂದಾಗಿ ಅವುಗಳ ಕಾವ್ಯಸತ್ವ ಹಾಗೂ ಒಳರಚನೆಗಳೆಲ್ಲ ಸೂಕ್ಷ್ಮವಾದ ಹಲವಾರು ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಇಂಥ ವ್ಯತ್ಯಾಸಗಳಲ್ಲಿ ಧಾರವಾಡ ಕೇಂದ್ರಕ್ಕೆ ಇರುವ ವಿಶಿಷ್ಟತೆ ಜಾನಪದೀಯ ಹಿನ್ನೆಲೆಯ ಸತ್ವಯುತ ಕಾವ್ಯ ರಚನೆಯ ಪ್ರಧಾನ ಬಿsತ್ತಿಯಾಗಿದೆ.
 ‘ರಾಜಕೀಯವಾಗಿ ಈ ಕಾಲದಲ್ಲಿ ಈ ಭಾಗ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಈ ಚೌಕಟ್ಟಿನೊಳಗೆ ಹಲವು ಭಾಗಗಳು ಮರಾಠರ ಸಂಸ್ಥಾನಗಳಾಗಿದ್ದವು.ಧಾರವಾಡ ಭಾಗವು  ಮುಂಬಯಿ ರಾಜ್ಯಕ್ಕೆ ಸೇರಿದ್ದರಿಂದಾಗಿ ಇಲ್ಲಿಯ ರಾಜಕೀಯ, ಶೈಕ್ಷಣಿಕ ಸಂಪರ್ಕಗಳು ಮರಾಠಿ ಸಂಸ್ಕøತಿಯ ಪ್ರಾಬಲ್ಯದಲ್ಲಿದ್ದ ಪುಣೆ ಮುಂಬಯಿಗಳಿಗೆ ನಿಕಟವಾಗಿದ್ದವು. ಹೀಗಾಗಿ ಧಾರವಾಡ ಕೇಂದ್ರವು ಬ್ರಿಟಿಷ್ ರಾಜಸತ್ತೆ ಮತ್ತು ಮರಾಠಿ ಸಾಂಸ್ಕøತಿಕ ಸತ್ತೆಗಳೆರಡರ ಜೊತೆಗೂ ಏಕಕಾಲಕ್ಕೆ ಸೆಣಸಿ ತನ್ನ ಅಸ್ತಿತ್ವ ಗುರುತಿಸಿ ಕೊಳ್ಳಬೇಕಾಯಿತು. ಒಂದೆಡೆ ಕನ್ನಡ ಕಟ್ಟುವ ಕೆಲಸ ಮತ್ತೊಂದೆಡೆ ಆ ಕಾಲಕ್ಕೆ ತೀವ್ರವಾಗಿದ್ದ ರಾಷ್ಟ್ರೀಯ ಚಳವಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುವ ಕಾರ್ಯ ಎರಡನ್ನೂ ಈ ಕೇಂದ್ರದ ಕವಿಗಳು ಒಟ್ಟಿಗೇ ತೋರಿದರು. ಹೀಗಾಗಿ ಬೇರೆ ಭಾಗದ ಕಾವ್ಯಗಳಿಗಿಂತ ಧಾರವಾಡ ಕೇಂದ್ರದಲ್ಲಿ ರಾಷ್ಟ್ರಪ್ರೇಮದ ಗೀತೆಗಳು, ನಾಡಗೀತೆಗಳು, ಭಾವಗೀತಗಳಾಗಿ, ಲಾವಣಿಗಳಾಗಿ ವ್ಯಾಪಕವಾಗಿ ರಚಿತವಾದವು ಮತ್ತು ಅವುಗಳನ್ನು ಹಾಡಿಕೊಂಡು ಬರಲಾಯಿತು.
    ಅಖಂಡ ಕರ್ನಾಟಕದ ಪರಿಕಲ್ಪನೆಯನ್ನಿಟ್ಟುಕೊಂಡು ಕನ್ನಡಿಗರೆಲ್ಲರೂ ಕೊಡವರು, ತುಳುವರು, ಬಡಗರು, ಸಾರಸ್ವತರು, ಮೈಸೂರವರು, ಉತ್ತರದವರು ಹಾಡಬೇಕಾದ ‘ನನ್ನದು ಈ ಕನ್ನಡ ನಾಡು’ ಸಂಪಾದಿತ ಕವನ ಸಂಕಲನವನ್ನು ಧಾರವಾಡದ ಗೆಳೆಯರ ಗುಂಪಿನ ಕವಿಗಳು 1928ರಲ್ಲಿ ತಂದರು. ಇದು ಶ್ರೀ ಅವರು ಮೈಸೂರು ಭಾಗದಲ್ಲಿ ಸಂಪಾದಿಸಿದ ‘ಕನ್ನಡ ಬಾವುಟ’ (1938) ಬರುವುದಕ್ಕೆ ಹತ್ತು ವರ್ಷ ಮೊದಲೇ ಬಂದಿತ್ತು. ಕರ್ನಾಟಕ ಏಕೀಕರಣಕ್ಕೆ ಮುನ್ನುಡಿಯಾಗಿ ಬಂದ ‘ನನ್ನದು ಈ ಕನ್ನಡ ನಾಡು’ ಸಂಕಲನದಲ್ಲಿ ಚಿಕುಪಾಧ್ಯಾಯ, ನೃಪತುಂಗ, ಬಿ.ಎಂ.ಶ್ರೀ, ಕವಿಶಿಷ್ಯ, ಮಂ. ಕಾಮತ, ಆದಿಪಂಪ, ಸರ್ವಜ್ಞ, ಆಂಡಯ್ಯ ಇವರೊಂದಿಗೆ ಅಂಬಿಕಾತನಯದತ್ತ, ಆನಂದ ಕಂದ, ರಸಿಕ ರಂಗ (ರಂ.ಶ್ರೀ.ಮುಗಳಿ) ಹಾಗೂ ವಿನಾಯಕ ಅವರ ಕವಿತೆಗಳು ಭಾಷಾ ಪ್ರೀತಿಯೊಡನೆ, ಕಾವ್ಯ ಪ್ರೀತಿಯನ್ನು ಹುಟ್ಟು ಹಾಕಿದವು. ಗೆಳೆಯರ ಗುಂಪಿನ ಈ ಸಾಂಘಿಕ ಸಾಹಿತ್ಯಕ ಕಾರ್ಯ ಆ ಕಾಲಕ್ಕೆ ಒಟ್ಟಿಗೆ ಅನೇಕ ಕವಿಗಳನ್ನು ರೂಪಿಸಿತು. 1929ರಲ್ಲಿ ಆಲೂರು ವೆಂಕಟರಾಯರು ‘ಜಯಕರ್ನಾಟಕ’ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಗೆಳೆಯರ ಗುಂಪಿಗೆ ವಹಿಸಿದರು. 1930 ರಲ್ಲಿ ‘ಹಕ್ಕಿ ಹಾರುತಿದೆ’ ಎಂಬ ಕವನ ಸಂಕಲನವನ್ನು ಗುಂಪಿನ ಗೆಳೆಯರು ಪ್ರಕಟಿಸಿದರು. ‘ಕನ್ನಡ ನವೋದಯ ಕಾಲದಲ್ಲಿ ಹೊಸ ಕಾವ್ಯದ ಹೊಸ ಸಾಹಿತ್ಯದ ಪ್ರಾರಂಭ ಮಾಡಿದ ಗೆಳೆಯರ ಗುಂಪು ಬೇಂದ್ರೆಯವರ ನೇತೃತ್ವದಲ್ಲಿ ಹಿರಿದಾದ ಕಾರ್ಯ ಮಾಡಿತು. ಈ ಗುಂಪಿನ ಪ್ರೇರಣೆ, ಪ್ರಭಾವ ಸಮಗ್ರ ಕನ್ನಡ ಸಾಹಿತ್ಯ ಪಡೆದದ್ದನ್ನು ಅಲ್ಲಗಳೆಯಲಾಗದು. ಸಾಹಿತ್ಯಿಕವಾಗಿ ಈ ಭಾಗದ ಕಾವ್ಯ ಪಡೆದುಕೊಂಡ ಪ್ರೇರಣೆಗಳು ಮತ್ತು ತಾಳಿದ ರೂಪಗಳು ಕೂಡ ಬಿsನ್ನವಾಗಿವೆ. ಇಂಗ್ಲಿಷ್ ಕಾವ್ಯದ ಪ್ರಭಾವ ಇಲ್ಲಿ ಅಷ್ಟಾಗಿ ಹೇಳಿಕೊಳ್ಳುವಷ್ಟಿರಲಿಲ್ಲ, ಇಲ್ಲಿಯ ಕಾವ್ಯ ಜಾನಪದ ಮೂಲವನ್ನೇ ಅವಲಂಬಿಸಿತು.
                                                                    ದ.ರಾ.ಬೇಂದ್ರೆ
     ‘ಗೆಳೆಯರ ಗುಂಪಿ’ನವರ ಕನ್ನಡ ಕಾಯಕಕ್ಕೆ ಇಲ್ಲಿ ಶಾಂತ ಕವಿಗಳು, ಕಾವ್ಯಾನಂದ ಪುಣೇಕರ, ಶ್ರೀಧರ ಖಾನೋಳಕರ ಮುಂತಾದವರು ಮುಂಬೆಳಗಿನ ಕಾಲದಲ್ಲಿ ಹಳೆಯ ರೀತಿಯಲ್ಲಿಯೇ ಹೊಸತವನ್ನು ತರಲು ಪ್ರಯತ್ನಿಸಿ ಕನ್ನಡ ಮತ್ತು ದೇಸೀ ಮೂಲ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಕಾವ್ಯ ಹೊಸತನದ ಕಡೆಗೆ ಮುಖ ಮಾಡಿತು. ಪದ್ಯಗಳಿಗಾಗಿಯೇ ‘ಪ್ರಭಾತ’ ಎಂಬ ಪತ್ರಿಕೆ ಆರಂಭವಾಯಿತು. ಇದು ಎರಡು ವರ್ಷ ನಡೆದು 1920ರಲ್ಲಿ ನಿಂತು ಹೋಯಿತು. ಇದೇ ಕಾಲಕ್ಕೆ “ಮರಾಠಿ, ಹಿಂದೂಸ್ಥಾನಿ ಮುಂತಾದ ಅನ್ಯ ಭಾಷೆಗಳೊಳಗಿನ ಕವಿತೆಗಳನ್ನು ಕನ್ನಡ ಕವಿತೆಗಳನ್ನೂ ಬೆರೆಸಿಕೊಂಡು ಭತ್ತ ಮೊಸರು ಕೂಡಿಸಿ ಕಲಸಿದಂತೆ” ಕೀರ್ತನಗಳನ್ನು ನಡೆಸುವುದನ್ನು ಖಂಡಿಸಲು ಶಾಂತ ಕವಿಗಳು ಅಚ್ಚಗನ್ನಡದಲ್ಲಿ ಬರೆದ ಕೀರ್ತನಗಳು ಜನರ ಮಾತಿನ ಹತ್ತಿರ ಭಾಷೆಯಲ್ಲಿದ್ದು ಜನಪ್ರಿಯವಾದವು. ಒಂದು ರೀತಿಯಲ್ಲಿ ಈ ಭಾಗದಲ್ಲಿ ಜನಪದ ಗೀತೆಗಳಲ್ಲಿ ಆಸಕ್ತಿ ಹೆಚ್ಚಲು ಈ ಕೀರ್ತನೆಗಳ ಪ್ರಕಟಣೆಯೂ ಕಾರಣವಾಯಿತು. ಇಲ್ಲಿ ಮುಖ್ಯವಾಗಿ ಹಲವಾರು ಅನುಭಾವಿಗಳು ಹುಟ್ಟು ಹಾಕಿದ್ದ ಅನುಭಾವ ಕಾವ್ಯ ಪರಂಪರೆ ಇಲ್ಲಿನ ಕವಿಗಳಿಗೆ ದೇಸೀಯತೆಯ ಸಂದರ್ಭವನ್ನು ಕಟ್ಟಿಕೊಟ್ಟಿತ್ತು.
 ಜಾನಪದದ ಸೆಳೆತ  :
    ಗೆಳೆಯರ ಗುಂಪಿನ ಆಶಯಗಳು ಆರಂಭಕ್ಕೆ ಹೊಸ ಕಾವ್ಯ ಕಟ್ಟುವ ಪರಿದಿsಯಲ್ಲಿ ಹಲವಾರು ವಿಷಯಗಳು ಸೇರಿಕೊಂಡಿದ್ದವು. ಪ್ರತಿಯೊಬ್ಬರೂ ಕವನ ರಚನೆಯ ಸಾಧನೆಯನ್ನು ಮಾಡಬೇಕು, ಕವಿತ್ವ ಎಂಬುದು ಕೇವಲ ಮಾನವ ಸೃಷ್ಟಿಯಲ್ಲ. ಅದು ಪರಮಾತ್ಮನ ಅನುಗ್ರಹದ ಅನುಭಾವ ಮಾರ್ಗ ಎಂದು ಒಂದು ಚೌಕಟ್ಟು ಹಾಕಿಕೊಂಡು ಕಾವ್ಯ ಕೃಷಿಗೆ ಇಳಿದಿದ್ದ ಕವಿಗಳ ಗುಂಪಿನಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು ಮತ್ತು ಅವರ ಗೆಳೆಯರು ಸೇರಿಕೊಳ್ಳುವ ಮೂಲಕ ‘ಜಾನಪದ ಚಿಂತನೆ’ ಆರಂಭವಾಯಿತು. ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸುವ ಕಾರ್ಯವನ್ನು ಆರಂಬಿsಸಿದರು. ಇದಕ್ಕೆ ಹಿನ್ನೆಲೆಯಾಗಿ ‘ಹಲಸಂಗಿ ಗೆಳೆಯರ’ ಗುಂಪು ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹಿಸಿದ ಜನಪದ ಹಾಡು, ತ್ರಿಪದಿ, ಕಥನ ಕವನ, ಲಾವಣಿಗಳನ್ನು ಪ್ರಕಟಿಸಿದರು. ಮುಂದೆ ಕಾವ್ಯಗುಣದ ದೃಷ್ಟಿಯಿಂದ ಅದ್ವಿತೀಯವೆನಿಸಿದ ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಮಲ್ಲಿಗೆ ದಂಡೆ’ ಜನಪದ ಗೀತ ಸಂಕಲನಗಳು ಪ್ರಕಟವಾದವು. ಈ ಜನಪದ ಕಾಯಕದ ಪ್ರಭಾವದಿಂದ ಉತ್ತರ ಕರ್ನಾಟಕದ ಯಾವ ಕವಿಯೂ ಜಾನಪದ ಸೆಳೆತದಿಂದ ಪಾರಾಗಲಿಲ್ಲವೆನ್ನುವುದು ಮಹತ್ವದ ಸಂಗತಿಯಾಗಿದೆ.

ಬೇಂದ್ರೆ, ಮಧುರಚೆನ್ನ, ಆನಂದ ಕಂದ, ಶ್ರೀಧರ ಖಾನೋಳ್ಕರ, ವಿನಾಯಕ, ರಂ.ಶ್ರೀ.ಮುಗಳಿ, ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ ಮೊದಲಾದ ಅನೇಕರು ಈ ಜಾನಪದವನ್ನು ತಮ್ಮದೇ ರೀತಿಯಲ್ಲಿ ಬಳಸಿಕೊಂಡರು. “ಬೇಂದ್ರೆ, ಖಾನೋಳ್ಕರ, ಆನಂದ ಕಂದ, ಕಂಬಾರರಂತೂ ಜನಪದ ಕಾವ್ಯ ಛಂದಸ್ಸಿನ ಮೂಲಾಂಶವಾದ ಅಂಶಗಣವನ್ನು ವ್ಯಾಪಕವಾಗಿ, ವೈವಿಧ್ಯಪೂರ್ಣವಾಗಿ ಬಳಸಿಕೊಂಡು ಆಧುನಿಕ ಕಾವ್ಯದ ಲಯಕ್ಕೆ ಹೊಸದೊಂದು ಬೀಸನ್ನು, ಚೆಲುವನ್ನು ತಂದರು. ಆಡುಮಾತಿನ ಬಳಕೆ ಈ ಭಾಗದ ಅನೇಕ ಕವಿಗಳ ಅಂಕಿತವಾಯಿತು. ಉಳಿದ ಭಾಗಗಳ ಕನ್ನಡ ಕವಿಗಳ ಮೇಲೆ ಜನಪದ ಕಾವ್ಯ ಇಂಥ ಪ್ರತ್ಯಕ್ಷ ಮತ್ತು ದಟ್ಟ ಪ್ರಭಾವವನ್ನು ಬೀರಲಿಲ್ಲ” ಎಂಬ ಗಿರಡ್ಡಿ ಗೋವಿಂದರಾಜ ಅವರ ಮಾತು ನಿಚ್ಚಳವಾಗಿದೆ.
                                                                  ಆನಂದ ಕಂದ
     ಧಾರವಾಡ ಕೇಂದ್ರದ ‘ಗೆಳೆಯರ ಗುಂಪು’ ಕಾವ್ಯಕ್ಷೇತ್ರದಲ್ಲಿ ಉಂಟು ಮಾಡಿದ ಶ್ರದ್ಧಾಪೂರ್ಣ ಕಾಯಕ ಕನ್ನಡಕ್ಕೇ ಹೊಸತಾದುದು. 1921-1933ರ ಹನ್ನೆರಡು ವರ್ಷಗಳು ‘ಗೆಳೆಯರ ಗುಂಪಿನ’ ಮಹತ್ವದ ವರ್ಷಗಳು.
ಗೆಳೆತನದ ಹೊಸ ಹೊಳವು, ನನ್ನ ಕನ್ನಡ ಕುಲದ
ಕನಸೊಂದು ಹೊಳೆದಾಡಿ ಸೆಳೆದಾಡಿತು
ಹೊಸ ಗೆಳೆಯನೊಬ್ಬನ ಎಡೆಬಿಡದ ಸಹವಾಸ
ಆ ಕಣಸ ಕನ್ನಡಿ ತೊಳೆದಾಡಿತು
ಎಂದು ಹಾಡಿದ ಬೇಂದ್ರೆ ಅವರು ಸಾಹಿತ್ಯದ ಗುಂಪು ಕಟ್ಟಿ ತಮ್ಮ ಅಯಸ್ಕಾಂತದ ವ್ಯಕ್ತಿತ್ವದಿಂದ ಎಲ್ಲರನ್ನೂ ಸೆಳೆದುಕೊಂಡರು. ಹೊಸ ಸಾಹಿತ್ಯದ ಅರಿವು ಅಗತ್ಯ ಇವುಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಗೆಳೆಯರ ಗುಂಪಿನ ಕವಿಗಳು ಅರಿತುಕೊಂಡರು. “ತಮಗೆ ವ್ಯವಸ್ಥಿತವಾದ ಕನ್ನಡ ಅಭ್ಯಾಸ ನಡೆದುದು ಗುಂಪಿನ ನಡುವೆ” ಎಂದು ಬೆಟಗೇರಿ ಕೃಷ್ಣಶರ್ಮರು ಹೇಳಿದ್ದಾರೆ. “ಗುಂಪಿನ ಮೂಲಕ ಇಂದಿನ ಕನ್ನಡ ಸಾಹಿತ್ಯದ, ಕರ್ನಾಟಕದ ಪರಿಚಯ ನನಗಾಯಿತು” ಎಂದರು ಗೋಕಾಕರು, “ಸ್ಫೂರ್ತಿ ಉತ್ಸಾಹಗಳನ್ನು ತುಂಬಿ ಹೊಸ ದರ್ಶನವನ್ನು ಇನ್ನೊಬ್ಬರಲ್ಲಿ ಸಂಚಾರಗೊಳಿಸುವುದಲ್ಲದೆ ಅದರ ದೌರ್ಬಲ್ಯವನ್ನರಿತು ಯೋಗ್ಯ ವಿಮರ್ಶೆಯಿಂದ ಅದನ್ನು ಕಳೆಯುವ ಅದ್ಭುತ ಶಕ್ತಿ ಬೇಂದ್ರೆಯವರಲ್ಲಿದೆ” ಎಂದು ಮುಗಳಿಯವರು ಹೇಳಿದ್ದಾರೆ. ಗೆಳೆಯರ ಗುಂಪಿನ ಒಡನಾಡಿಯಾಗಿದ್ದ ಸಿಂಪಿ ಲಿಂಗಣ್ಣನವರು “ಕವಿತಾ ವಾಚನದಲ್ಲಿ ಒಂದೇ ಧಾಟಿ, ಬರಹಗಳಲ್ಲಿ ಒಂದೇ ಶೈಲಿ” ಎಂದು ಬಣ್ಣಿಸಿದ್ದಾರೆ. ಈ ಗೆಳೆಯರ ಸವಿ ಅನುಭವಿಸಿದ ಬೇಂದ್ರೆಯವರು “ನಾಡಿನ ಜೀವನವನ್ನು ಹಬ್ಬವನ್ನಾಗಿ ಮಾರ್ಪಡಿಸಿಕೊಳ್ಳುವ ಯೋಗದಲ್ಲಿ ಮೆಟ್ಟುಗಳಾದವು. ಅನೇಕ ಹಿರಿಕಿರಿಯರೊಡನೆ ನನ್ನ ಜೀವ ಸೇರಿಕೊಂಡಿತು. ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪ ಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು” ಎನ್ನುವಲ್ಲಿ ಗೆಳೆಯರ ಗುಂಪಿನ ಸಾರ್ಥಕತೆ ಅರಿವಾಗುತ್ತದೆ.
      ಇದೇ ವೇಳೆಯಲ್ಲಿ 1918-19ರ ಹೊತ್ತಿನಲ್ಲಿ ಮಧುರಚೆನ್ನರು ಹಲಸಂಗಿಯಲ್ಲಿ ಸಾಹಿತ್ಯ ಮಂಡಲ ಸ್ಥಾಪಿಸಿ, ಅದಕ್ಕೆ ‘ಶಾರದಾ ಮಂಡಲ’ ಎಂದು ಹೆಸರಿಟ್ಟಿದ್ದರು. ಆಗ ಬೇಂದ್ರೆ ಮತ್ತು ಮಧುರಚೆನ್ನರ ಪರಿಚಯವಿರಲಿಲ್ಲ. ಇಬ್ಬರೂ ಸ್ಥಾಪಿಸಿದ ಸಾಹಿತ್ಯ ಮಂಡಲಕ್ಕೆ ‘ಶಾರದಾ ಮಂಡಲ’ ಎಂಬ ಒಂದೇ ಹೆಸರು ಇದ್ದದ್ದು ಅಪೂರ್ವಯೋಗಾಯೋಗ. ಇಬ್ಬರಿಗೂ ಭೇಟಿಯಾದದ್ದು 1923ರಲ್ಲಿ. ಇಬ್ಬರ ತಾಯಿಯ ಹೆಸರು ಅಂಬವ್ವ. ಇವರಿರ್ವರು ಗೆಳೆಯರು ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ’ ಎಂಬಂತೆ ಕೊನೆಯವರೆಗೂ ಗೆಳೆಯರಾಗಿದ್ದರು. ಹಲಸಂಗಿ ಗೆಳೆಯರ ಗುಂಪು ಮತ್ತು ಧಾರವಾಡ ಗೆಳೆಯರ ಗುಂಪು ಒಂದೇ ರೀತಿಯಲ್ಲಿ ಒಂದೇ ಕಾಲಕ್ಕೆ ಉದಯವಾಗುವುದರೊಂದಿಗೆ ಗುಂಪಿನ ನಾಯಕರಾದ ಬೇಂದ್ರೆ, ಮಧುರಚೆನ್ನರಲ್ಲಿ ಕಾವ್ಯ, ಅನುಭಾವ ಮತ್ತು ಜಾನಪದದ ಬೆಸುಗೆ ಬಿಡಿಸಲಾರದಷ್ಟು ಗಟ್ಟಿಯಾಗಿತ್ತು.
‘ಮಧುರ ಗೀತ’ವ ಹಾಡಿ, ‘ನನ್ನ ನಲ್ಲ’ನ ಒಲಿಸಿ
ಹಲಸಂಗಿ ನಾಡಿನಲಿ ನೆಲಿಸಿ ನಿಂತ,
ನನ್ನ ‘ಚೆನ್ನ’ನಿಗೆಣೆಯ ಗೆಣೆಯರಾರಾರಿಹರು
ಅವನೆ ಅವನಿಗು ಹೆಚ್ಚು ಅವನಿಗಿಂತ
ಉತ್ತು ನೆಲಹೊಲಗಳನು ಬಿತ್ತಿದನು ಬೀಜಗಳ
ಉತ್ತಮಿಕೆ ಬೆಳೆ ಬರಲಿ ಎಂದು ಬಯಸಿ,
ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು
ಎಡತಾಕಿ ಬೆವರಿಟ್ಟು ಬಯಲ ತೋಯಿಸಿ
ಮಧುರಚೆನ್ನರಗಿಂತ ಮಿಗಿಲಾದ ಗೆಳೆಯರಿಲ್ಲ ಎಂದು ಹೇಳಿದ ಬೇಂದ್ರೆಯವರು “ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು” ಎಂಬಲ್ಲಿ ನಗರ-ಗ್ರಾಮೀಣ, ಶಿಷ್ಟ-ಜಾನಪದವನ್ನು ಬೆಸೆದ ರೂಪ ಸಾದೃಶ್ಯವಿದೆ. ಈ ಕಾರ್ಯದಲ್ಲಿ ಎಡತಾಕಿ ಬೆವರಿಟ್ಟು ಬಯಲ ಬೆಳವಲನಾಡ ತೋಯಿಸಿ ಸಾಧನೆ ಮೆರೆದ ಮಧುರಚೆನ್ನರ ಸಿದ್ಧಿಯನ್ನು ಪ್ರಕಟಪಡಿಸಿದೆ.
        ಧಾರವಾಡದ ‘ಗೆಳೆಯರ ಗುಂಪಿ’ನಲ್ಲಿ ಆರಂಭದಲ್ಲಿ ಬೇಂದ್ರೆಯವರ ವಿದ್ಯಾರ್ಥಿಗಳು, ಸಹಪಾಠಿಗಳು ಇದ್ದರು. ಶ್ರೀಧರ ಖಾನೋಳಕರ, ಚಿದಂಬರ ನಗರ, ಬ್ಯಾಳಿ, ಶಾಂತಗಿರಿ, ಬಾಗಲವಾಡಿ, ತಿವಾರಿ, ರಾಮು ಅಭ್ಯಂಕರ, ಪ್ರಲ್ಹಾದ ನರೇಗಲ್, ಗೋವಿಂದ ಚುಳಕಿ, ವಸಂತರಾವ್ ಹುರಳೀಕೊಪ್ಪಿ, ರಾಯದುರ್ಗ, ಶ್ರೀಮತಿ ರೇವಡಿ ನಾಡಗೌಡ, ಶ್ರೀಮತಿ ಲೀಲಾವತಿ ಮಾಗಡಿ, ಕೃಷ್ಣಕುಮಾರ ಕಲ್ಲೂರ, ನಾರಾಯಣ ಸಂಗಮ, ಶೇ.ಗೋ. ಕುಲಕರ್ಣಿ. ನಂತರ ಈ ಗುಂಪಿಗೆ ವಿನೀತ ರಾಮಚಂದ್ರರಾವ್, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಸಾಲಿ ರಾಮಚಂದ್ರರಾಯರು, ಬೇಂದ್ರೆ ಲಕ್ಷ್ಮಣರಾವ್, ಬುರ್ಲಿ ಬಿಂದುಮಾಧವ ಮೊದಲಾದವರ ಸೇರ್ಪಡೆಯಾಯಿತು. ನಂತರ ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಜಿ.ಬಿ. ಜೋಶಿ, ಮಕ್ತಾಲಿ, ಮಳೆಯೆ ಗೋವರ್ಧರಾಯರು, ಎನ್.ಕೆ.ಕುಲಕರ್ಣಿ, ಎಸ್.ಆರ್.ಮಳಗಿ, ಶ್ರೀನಿವಾಸ ಕುಲಕರ್ಣಿ, ಟಿ.ರುಬೆನ್, ಸಿದ್ಧವನಹಳ್ಳಿ ಕೃಷ್ಣಶರ್ಮ ಹಲಸಂಗಿ, ವಿಜಾಪುರ, ಹೈದರಾಬಾದ್,  ಸಂಡೂರು, ಕೊಪ್ಪಳ, ಅಥಣಿ, ಮೈಸೂರು, ಬೆಂಗಳೂರು ಮೊದಲಾದ ಊರುಗಳಿಗೆ ಗೆಳೆಯರ ಗುಂಪಿನವರು ಮಾಡಿದ ಉಪನ್ಯಾಸ, ಕವಿತಾ ವಾಚನ, ಸಾಹಿತ್ಯಿಕ ಚರ್ಚೆಗಳ ಮೂಲಕ ಗೆಳೆಯರ ಗೆಳೆಯರು ಸೇರುತ್ತಾ ಹೋಗಿ ಗುಂಪು ವಿಶಾಲವಾಯಿತು.
      ಹೀಗೆ ಒಂದು ಧ್ಯೇಯವನ್ನಿಟ್ಟುಕೊಂಡು ಹುಟ್ಟಿಕೊಂಡು ಬಂದ ಗೆಳೆಯರ ಗುಂಪು ಧಾರವಾಡ ಕೇಂದ್ರದ ಸಾಂಸ್ಕøತಿಕ ವ್ಯಾಪ್ತಿಯನ್ನು ಭೌಗೋಲಿಕವಾಗಿಯೂ, ಸಾಹಿತ್ಯಿಕವಾಗಿಯೂ ವಿಸ್ತರಿಸಿತು. ಈ ವಿಸ್ತರಣೆಯಲ್ಲಿ ಹೊಸ ಕಾವ್ಯವನ್ನು ಜನಪ್ರಿಯಗೊಳಿಸುವುದರೊಂದಿಗೆ, ಜನಪದ ಸತ್ವದ ಪುನರುಜ್ಜೀವನಕ್ಕೆ ಗೆಳೆಯರ ಗುಂಪು ಕನ್ನಡ ನವೋದಯದ ಸಂದರ್ಭದಲ್ಲಿ ಪ್ರಧಾನವಾದ ಕೆಲಸ ಮಾಡಿತು. ಕಾವ್ಯದಲ್ಲಿ ಆ ಕಾಲಕ್ಕೆ ಕಾಣಿಸಿಕೊಂಡ ಲಾವಣಿ ಮಟ್ಟುಗಳನ್ನು, ತಮ್ಮ ಕವಿತೆಗಳಲ್ಲಿ ಬಳಸಿಕೊಂಡರು.ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಪ್ರಕಟಿಸಲು ಉತ್ತೇಜನ ನೀಡುವ ಮೂಲಕ, ಜನಪದ ಗೀತೆಗಳಲ್ಲಿನ ಲಯ, ಭಾಷೆ, ನುಡಿಗಟ್ಟು ಸಮೃದ್ಧವಾಗಿ ತಮ್ಮ ಕಾವ್ಯಕ್ಕೆ ತಂದರು. ಹೊಸ ಕವಿತೆಗೆ ಬೇಕಾದ ಹೊಸ bsÀಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು.ಶಂಬಾ ಜೋಶಿ, ರಂ.ಶ್ರೀ. ಮುಗಳಿ ಮೊದಲಾದವರು ಸಂಶೋಧನೆ ಕಡೆಗೆ ದೃಷ್ಟಿಕೊಟ್ಟರೆ, ವಿ.ಕೃ.ಗೋಕಾಕ, ಶ್ರೀಧರ ಖಾನೋಳಕರ ಕಾವ್ಯರಚನೆಗೆ ದೃಷ್ಟಿಕೊಟ್ಟು ಅಭ್ಯಾಸ ನಡೆಸಿದರು.ಬೆಟಗೇರಿ ಕೃಷ್ಣಶರ್ಮ, ಬೇಂದ್ರೆ, ಮಧುರಚೆನ್ನ ಜಾನಪದ ರೀತಿಗಳನ್ನು ಕಲೆಹಾಕಿ ಅವುಗಳ ಸತ್ವವನ್ನು ಅರಿತು ಅವುಗಳನ್ನು ಸಾಹಿತ್ಯ ರೀತಿಯೆಂದು ಗುರುತಿಸಿ ಬಳಸಿದರು.‘ಜಯ ಕರ್ನಾಟಕ’ ಮೂಲಕ ಕನ್ನಡ ಭಾಷೆಗೆ ಸಾಹಿತ್ಯ ಸಂಸ್ಕಾರ ತಂದು ಕೊಡುವುದರ ಜೊತೆಗೆ ಹೊಸ ರೀತಿಯ ಬರವಣಿಗೆ ಈ ಗುಂಪು ಪ್ರಾರಂಬಿsಸಿತು. ಒಟ್ಟಾರೆ ಧಾರವಾಡ ಕೇಂದ್ರವು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಬಹು ಮುಖ್ಯವಾದ ಸಾಂಸ್ಕøತಿಕ ಕೇಂದ್ರವಾಗಿ ಗುರುತಿಸಿಕೊಂಡಿತು.
                                                        -ಡಾ.ಪ್ರಕಾಶ ಗ.ಖಾಡೆ

ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’, ಸರಸ್ವತಿ ಬಡಾವಣೆ,ಸಂಖ್ಯೆ 63,ನವನಗರ,ಬಾಗಲಕೋಟ
        ಮೊ. 9845500890