ಸೋಮವಾರ, ಮಾರ್ಚ್ 28, 2016

ಅವಧಿ.-ಡಾ.ಖಾಡೆ ಕವಿತೆಗಳು.

ಮಲಗಿದವರ ಕನಸುಗಳಿಗೆ ಬೆಂಕಿ ಹಚ್ಚಿ..

Dr.Khade Prakash-PP

ಡಾ ಪ್ರಕಾಶ ಗ ಖಾಡೆ
ಬೆರಗಾಗಬೇಕಿಲ್ಲ
ಬೆವರ ಹಸಿವುಂಡ ಹಸಿರಿಗೆ,
ಬೆರಗಾಗಬೇಕಿಲ್ಲ
ಬಸವಳಿದು ಉಳಿದ ಹೆಸರಿಗೆ,
ಬೆರಗಾಗಬೇಕಿಲ್ಲ
ಬೆಂಕಿಯಲ್ಲಿ ಬೆಂದ ಕಬ್ಬಿಣಕ್ಕೆ,
ಬೆರಗಾಗಬೇಕಿಲ್ಲ
ಸುಟ್ಟುಕೊಂಡು ಕುದ್ದ ಅನ್ನಕ್ಕೆ,
ಬೆರಗಾಗಬೇಕಿಲ್ಲ
ನೋವುಂಡು ಹೆತ್ತ ಒಡಲಿಗೆ,
ಬೆರಗಾಗಬೇಕಿಲ್ಲ
ಗಾಣಕ್ಕೆ ಸಿಕ್ಕ ಕಬ್ಬಿಗೆ,
ಬೆರಗಾಗುವದಾದರೆ
ಆಗಿಬಿಡಿ ಕನಸ ಕದ್ದವರ
ಹುಸಿ ಕನಸಿನ ಗೋಪುರಕ್ಕೆ
ಮತ್ತೆ ನಾಳಿನ ಭ್ರಮೆಗಳಿಗೆ.

traditional lamp
ಕಬ್ಬ ಹಿಂಡಿ ರಸವ ಪಡೆವರು
ರವದಿಯ ತಿಪ್ಪೆಗೆಸೆದು.
ರಸವ ಸವಿದವರು ವಿರಸ ಹೆತ್ತರು.
ರವದಿ ಗೊಬ್ಬರವಾಗಿ ಹೊಸ ಹೂವ ಅರಳಿಸಿತು.
ಬದುಕು ಉಣದವರ ಹಸಿವಿಗೆ
ಏನು ಕೊಟ್ಟರೂ ತುಂಬದ ಹೊಟ್ಟೆ.
traditional lamp

ನನಗೆ ಮಾತುಗಳ
ಕೇಳಬೇಕಿತ್ತು
ಮೌನವಿದ್ದವರ ಬಳಿಹೋದೆ.
ನನಗೆ ಕೋಪಿಸಿಕೊಂಡವರ
ನೋಡಬೇಕಿತ್ತು
ಮುಗುಳ್ನಗುವವರ ಬಳಿಹೋದೆ.
ನನಗೆ ನೆತ್ತಿಸುಡುವ
ಉರಿಬಿಸಿಲು ಬೇಕಿತ್ತು
ಹಾಲು ಚೆಲ್ಲಿದ ಬೆಳದಿಂಗಳ ಅರಸಿ ಹೋದೆ.
ನನಗೆ ಈಗ ಅಸಮಾಧಾನವಿಲ್ಲ
ಹೋದಲ್ಲಿ ಬಂದಲ್ಲಿ
ಸಮಾಧಾನದ ಗಾಳಿ ಬೀಸುತ್ತಿದೆ
ದೇವರೆಂಬವರು ಮನುಷ್ಯರಾಗಿದ್ದಾರೆ
traditional lamp

ನನಗೆ ಕನಸುಗಳಿದ್ದವು
ಜೊತೆಯಲ್ಲಿ ನೀವಿದ್ದೀರೆಂದು,
ನನಗೆ ಕತ್ತಲೆಯ ಭಯವಿರಲಿಲ್ಲ
ಬೆಳಕಾಗಿ ನೀವಿದ್ದೀರೆಂದು,
ನನಗೆ ನೋವಿನ ಅನುಭವ ಗೊತ್ತಿರಲಿಲ್ಲ
ಸಾಂತ್ವನ ಹಂಚಲು ನೀವಿದ್ದೀರೆಂದು,
ನನಗೆ ನಾಳೆಗಳ ನಂಬಿಕೆ ಇರಲಿಲ್ಲ
ಇಂದೂ ನನ್ನೊಂದಿಗೆ ನೀವಿದ್ದೀರೆಂದು,
ಈಗ ಹೃದಯಕ್ಕೆ ಮಾತು ಬಂದಿದೆ,
ಮನಸ್ಸಿನ ತುಂಬ ನೀವಿದ್ದೀರೆಂದು,
ಕಾಲಕ್ಕೆ ಬೆರಗಾಗಿ ನಿಜದ ಬದುಕಾಗಿ
ನಂಬುಗೆ ಹುಸಿಯಾಗಿ ಸಾಗಿದ್ದೇ ದಾರಿ
ಈಗ ಹೇಳಲು ಏನೂ ಉಳಿದಿಲ್ಲ ನೀವಿದ್ದೀರೆಂದು.
traditional lamp

ಕತ್ತಲೆಗೆ ಬೆಳಕ
ಹೊತ್ತಿಸುವುದು ಬೇಡಾಗಿದೆ,
ಇರುಳಲ್ಲೂ ಸುಳ್ಳುಗಳೇ
ಸತ್ಯದ ಬಾಗಿಲು ಮುಚ್ಚಿವೆ,
ಕಣ್ಣಿದ್ದವರೂ ಏನೂ
ಕಾಣಿಸುತ್ತಿಲ್ಲ ಎಂಬ
ಕನವರಿಕೆಯಲ್ಲಿ ಮುಳುಗಿದ್ದಾರೆ,
ದಾರಿಗೆ ಮುಳ್ಳನ್ನು
ಹೂವ ತಂದವರೇ ಹಚ್ಚಿದ್ದಾರೆ,
ತುಂಬಿದ ಕೊಡಕ್ಕೂ
ಕಂಡಕಂಡಲ್ಲಿ ತೂತು ಕೊರೆದಿದ್ದಾರೆ,
ಮನದ ಸ್ವಚ್ಚತೆಗೆ ತನುವ ಮೈಲಿಗೆಯಾಗಿಸಿ
ಹೃದಯದ ಗಾಯಗಳಿಗೆ
ಹೊಸ ನೋವುಗಳ
ಪಾಳಿಗೆ ಬಿಟ್ಟಿದ್ದಾರೆ,
ಇಂಥದೇ ನಾಳೆ ಇರುತ್ತದೆ ಎಂದು ಯಾರು ಹೇಳಿದರು.
ಕನಸುಗಳಿಗೆ ತೆರೆದಷ್ಟು ಆಕಾಶ
ಬಯಲ ತುಂಬ ಬೆಳಕಿನ ಪ್ರಕಾಶ.
traditional lamp

ಬರೆಯುವವರ
ಕೊಲ್ಲುವ ಕಟುಕರ ಆತ್ಮಕ್ಕೆ
ಶಾಂತಿ ಕೋರಲು
ಓದುವದ ನಿಲ್ಲಿಸಬೇಕೆಂದಿದ್ದೇನೆ,
ಕೇಳಿಸಿಕೊಳ್ಳದ
ಕಿವಿ ಪೊರೆಯ ಮುಚ್ಚಿಕೊಂಡವರ
ಎದಿರು ತಲೆ ಚಚ್ಚಿಕೊಳ್ಳದೇ
ಮಾತಿಗೆ ಕೀಲಿ ಜಡೆಯಬೇಕೆಂದಿದ್ದೇನೆ.
ಯಾವ ಹಾಡಲ್ಲೂ
ಹೃದಯದಲ್ಲಿ ಅದ್ದಿ ತೆಗೆದ ಪದಗಳಿಲ್ಲದೇ
ರಕ್ತ ಕಾರುವ ಭಾವಗಳ ನಾಗಾಲೋಟಕ್ಕೆ
ತತ್ತರಿಸಿ ಹೋಗದೆ ಶಾಂತಿ
ಬೀಜಗಳ
ಜತನವಾಗಿಟ್ಟುಕೊಳ್ಳಬೇಕೆಂದಿದ್ದೇನೆ.
ಎಲ್ಲವೂ ಇದ್ದು ಬದುಕುವ
ಜೀವ ಜಾತ್ರೆಗೆ ಯಾರೂ ಕರೆದುಕೊಂಡು ಹೋಗಬೇಕಿಲ್ಲ,
ಎಲ್ಲರೂ ಖರೀದಿಗೆ ನಿಂತಿದ್ದಾರೆ
ಮಲಗಿದವರ ಕನಸುಗಳಿಗೆ
ಬೆಂಕಿ ಹಚ್ಚಿ.
-ಡಾ.ಪ್ರಕಾಶ ಗ.ಖಾಡೆ