ಮಂಗಳವಾರ, ಏಪ್ರಿಲ್ 30, 2013

ಡಾ,ಶಿವಾನಂದ ಕುಬಸದ : ಹನಿಗವಿತೆ.





ಹನಿಗವಿತೆ : 












ಡಾ.ಶಿವಾನಂದ ಕುಬಸದ

ಸ್ವರ್ಣ ಲಂಕೆಗೆ ಅಂದು ಹತ್ತಿದ ಬೆಂಕಿ
ಇಂದಿಗೂ ಹೋಗಿಲ್ಲ ಸಂಪೂರ್ಣ ನಂದಿ
ಯಾಕೆಂದರೆ ಈಗಲೂ ಇದ್ದಾರೆ ಬಾಲಕ್ಕೆ 
ಬೆಂಕಿಯಿಟ್ಟು ಮೋಜು ನೋಡುವ ಮಂದಿ


          ***

ಪ್ರವೀಣಕುಮಾರ ದೈವಜ್ಞಾಚಾರ್ ಅವರ ಕವಿತೆಗಳು.

        ಕವನ ಸಿರಿ :


             

                      ಪ್ರವೀಣಕುಮಾರ ದೈವಜ್ಞಾಚಾರ್


ಅತ್ತೂ ಕರೆದು
ರಂಪ ಮಾಡುವ ಮಗುವೆ
ನಿನಗೇಕೆ ಹಿಡಿಯಲಾಗದ
ಬಣ್ಣದ ಚಿಟ್ಠೆಯ ಗೊಡವೆ
ನೀ
ಕೇಳುವಿಯಾದರೆ ನನ್ನ ಮೊರೆ
ನೋಡುತ್ತಿರು, ಹಾರಿಬಿಡುವೆ
ಚಿಟ್ಟೆಯಾಗಿ ನಿನ್ನ ಕಣ್ಣೆದುರೆ

******


ನೀ ನನ್ನೊಡನಿರಲು
ಮಾತನಾಡುತ್ತಲೇ ಇರಬೇಕೆಂಬ
ನಿಯಮವಿಲ್ಲ ಗೆಳತಿ,
ಸುಮ್ಮನಿದ್ದರೂ ಆದೀತು
ಮಾತು ಬರದ ಮಗುವಿನಂತೆ
*****


ಆಗಸಕ್ಕೆ ಕೈಚಾಚಿ

ತುದಿ ಬೆರಳಲ್ಲೆ ಕೂಡಿಸುವೆ
ಚುಕ್ಕೆಗಳನು

ಕೂಡದ ಸುಖಕ್ಕೆ
ಮನಸು ಹಲುಬುತ್ತದೆ

***

ಅಂಗೈಯಗಲ
ಹರಿವ ನೀರಿಗೆ
ಕೈಯೊಡ್ಡಿ ನಿಲುವೆ

ಬೆರಳ ಸಂದಿಯಲಿ
ತೂರಿ ಹೋಗುವಎಚ್ಚರಿಕೆ!

*****

ಕನಸಲ್ಲಿ ಬಂದವಳೆ
ಎದೆಯಲ್ಲಿ ನಿಂತವಳೆ
ನಿನಗೊಂದು ಮಾತು ಹೇಳುವುದಿದೆ

ಕನಸು ಹೃದಯಗಳೆರಡೂ
ನಿನ್ನವಲ್ಲ, ಇಲ್ಲಿ
ಅತಿಕ್ರಮಣ ನಿಷೇಧವಿದೆ!
-ಪ್ರವೀಣಕುಮಾರ ದೈವಜ್ಙಾಚಾರ್.