ಭಾನುವಾರ, ಆಗಸ್ಟ್ 18, 2013

Kannada Lavani sahitya-Dr.Khade

 ವಿಶೇಷ ಲೇಖನ :

                                                   ಕನ್ನಡ ಲಾವಣಿ ಸಾಹಿತ್ಯ

                                                    -ಡಾ.ಪ್ರಕಾಶ ಗ.ಖಾಡೆ
       
     ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ‘ದಕ್ಷಿಣ ಮಹಾರಾಷ್ಟ್ರ’ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕ, ಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆ, ಡೋಲಕದ ತಾಳ ಹಿಡಿದು, ವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯ, ಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ.
   ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ, ವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.
ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ
 ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ.  ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಬಿsೀರತೆ, ಶೃಂಗಾರ, ಟೀಕೆ, ಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.
ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ
ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯ, ತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.
    ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲ, ಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮ, ಲಕ್ಷ್ಮಣ, ಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.
ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ
ಇಲ್ಲಿ ಬಳಸಿರುವ ಕಲ್ಲನಾಗರ, ಬರಿಗಾಲ, ಹುಣಚಿಬೀಜ, ಕಾರಿಕಾಯಿ, ಬಾರಿಕಾಯಿ ‘ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.
ಚರಿತ್ರೆ
 ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಪಿs್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾದಿsಕಾರ ವಹಿಸಿಕೊಂಡು ಕನ್ನಡ ಕಲಿತು, ಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆ, ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆ, ಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ‘ಕುಂಪಣಿ’ಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಪಿs್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ:
ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋದಿs ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
ಹುಲಕುಂದ ಲಾವಣಿಕಾರರು
  ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿsೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
   ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಬಿsೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಬಿsೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ  ಹೆಸರಾದರು.
     18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಡಿsಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ  ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ  ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ  ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
    ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
                                                       -ಡಾ.ಪ್ರಕಾಶ ಗ.ಖಾಡೆ
ವಿಳಾಸ: ಡಾ.ಪ್ರಕಾಶ ಗ.ಖಾಡೆ,ಸೆಕ್ಟರ್ ನಂ. 63,ನವನಗರ,ಬಾಗಲಕೋಟ  ,ಮೊ.9845500890

ಸೋಮವಾರ, ಆಗಸ್ಟ್ 12, 2013



          ಕನ್ನಡ ಸಾಹಿತ್ಯಕ್ಕೆ ಕಗ್ಗತ್ತಲ ಕಾಲವೊಂದಿತ್ತೆ ?

                          
                                                                 -ಡಾ.ಪ್ರಕಾಶ ಗ.ಖಾಡೆ
  
     (ಅಖಂಡ ಕರ್ನಾಟಕದ ಕನ್ನಡ ಸಾಹಿತ್ಯ ಸಮೃದ್ಧಿಯನ್ನು ಪರಿಗಣಿಸದೇ ,ಕೇವಲ ಮೈಸೂರು ಕರ್ನಾಟಕದ ಭಾಗದ ಸಾಹಿತ್ಯವನ್ನು ಮುಖ್ಯವಾಗಿಟ್ಟುಕೊಂಡು 17 ರಿಂದ 19 ನೆಯ ಶತಮಾನದ ಕಾಲವನ್ನು ಕನ್ನಡ ಸಾಹಿತ್ಯದ ಕಗ್ಗತ್ತಲ ಕಾಲವೆಂದು ಕರೆಯಲಾಯಿತು. ಆ ಕಾಲಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಕನ್ನಡ ಸಾಹಿತ್ಯ ರಚನೆಗಳನ್ನು ನಿರ್ಲಕ್ಷಿಸಲಾಯಿತು.ಅದರ ಒಟ್ಟು ಅಧ್ಯಯನ ನಡೆದರೆ ಖಂಡಿತ ‘ಕನ್ನಡ ದೇಸಿ ಸಾಹಿತ್ಯದ ಸುವರ್ಣಯುಗ’ವೆಂದು ಈ ಕಾಲವನ್ನು ಕರೆಯಬೇಕಾಗುತ್ತದೆ.) 

        ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಕನ್ನಡದಲ್ಲಿ ಸಾಹಿತ್ಯ ರಚನೆಯ ಕಗ್ಗತ್ತಲ ಕಾಲ ಎಂದು ಹೇಳಿಕೊಂಡು ಬರಲಾಯಿತು. ‘ಇಂಗ್ಲಿಷ್ ಗೀತಗಳು’ ತಲೆದೋರುವುದಕ್ಕೆ ಹಿಂದೆ ಕನ್ನಡ ಕವಿತೆಯ ಸ್ಥಿತಿ ಹೇಗಿತ್ತೆಂದು ಸ್ವಲ್ಪಮಟ್ಟಿಗೆ ನೆನೆದರೆ ಅದರ ಪ್ರಭಾವ ಚೆನ್ನಾಗಿ ಮನದಟ್ಟಾಗುತ್ತದೆ. ಕನ್ನಡದಲ್ಲಿ ಪ್ರೌಢಕಾವ್ಯ ರಚನೆ ಸುಮಾರು ಹದಿನೇಳುನೂರರ ವೇಳೆಗೆ ಚಿಕ್ಕದೇವರಾಯ ಒಡೆಯರ ಆಳ್ವಿಕೆಯ ಕೊನೆಯ ಹೊತ್ತಿಗೆ ನಿಂತು ಹೋಗಿತ್ತು. ಅಲ್ಲಿಂದ ಮುಂದೆ ದೌರ್ಬಲ್ಯ, ಅಸಾರತೆ, ಅನ್ಯಾಕ್ರಮಣ ಮೊದಲಾದವು ರಾಜಕೀಯ ಪ್ರಪಂಚದಲ್ಲಿ ಕಾಣಿಸಿಕೊಂಡಂತೆಯೇ ಸಾಹಿತ್ಯ ಪ್ರಪಂಚದಲ್ಲಿಯೂ ಕಾಣಿಸಿಕೊಂಡವು’ ಎಂಬುದು ತೀನಂಶ್ರೀ ಅವರ ಹೇಳಿಕೆ. ಹದಿನೆಂಟನೆಯ ಶತಮಾನದ ಸಾಹಿತ್ಯವು ಮುನ್ನಿನಷ್ಟು ಸತ್ವಪೂರ್ಣವಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ದೇಶದ ಸ್ಥಿತಿಗತಿಯೇ ಕಾರಣ. ಆ ಶತಮಾನದಲ್ಲಿ ಕರ್ನಾಟಕವನ್ನು ಬಲಿಷ್ಟÀವಾದ ರಾಜಮನೆತನವಾವುದೂ ಆಳುತ್ತಿರಲಿಲ್ಲ. ಸಾಲದಕ್ಕೆ ಪೇಶವೆ, ನಿಜಾಮ ಮುಂತಾದ ಅನ್ಯ ಭಾಷಿತರ ರಾಜಸತ್ತೆಯಲ್ಲಿ ಕನ್ನಡದ ಅನೇಕ ಪ್ರದೇಶಗಳು ಸಿಕ್ಕಿಕೊಂಡಿದ್ದವು. ಕವಿಬಳ್ಳಿಗಳಿಗೆ ಬಿದಿರಿನ ಹಂದರವನ್ನಾದರೂ ಒದಗಿಸಿದ್ದ ಮೈಸೂರಲ್ಲಿ ಚಿಕ್ಕದೇವರಾಯನ ಯೋಗ್ಯತೆಯುಳ್ಳ ಅರಸರು ಮುಂದಿನ ಒಂದು ಶತಮಾನದವರೆಗೆ ಯಾರೂ ಕಾಣಿಸಿಕೊಳ್ಳಲಿಲ್ಲ. ಹೈದರ, ಟಿಪ್ಪುಸುಲ್ತಾನರ ರಾಜ್ಯಭಾರದಲ್ಲಿ ನಡೆದ ಸಂಸ್ಕøತಿ ಸಂವರ್ಧನೆಯು ಹೇಳಿಕೊಳ್ಳುವಂತಹದೇನಲ್ಲ, ಎಂದು ಶ್ರೀನಿವಾಸ ಹಾವನೂರ ದಾಖಲಿಸುತ್ತಾರೆ.
    ಆದರೆ ಈ ಕಾಲಕ್ಕೆ ಇವೆಲ್ಲ ಸಾಹಿತ್ಯಿಕ ಚಟುವಟಿಕೆಗಳು ನಾಡಿನ ದಕ್ಷಿಣ ಭಾಗಕ್ಕೆ ಮೀಸಲಾಗಿದ್ದರೆ ಉತ್ತರದ ಆಗಿನ ನಿಜಾಮ ಕರ್ನಾಟಕದಲ್ಲಿ ಕೆಲವು ಪ್ರಸಿದ್ಧ ಹರಿದಾಸರು ಆಗಿ ಹೋದರು. ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮತ್ತು ಪ್ರಸನ್ನ ವೆಂಕಟದಾಸರು ಪ್ರಮುಖರು. ಇವರಲ್ಲಿ ಮೂವರು 18ನೆಯ ಶತಮಾನದಲ್ಲಿಯೇ ಬಾಳಿದವರು. ಪ್ರಸನ್ನ ವೆಂಕಟದಾಸರು, ವಿಜಯದಾಸರು, ಗೋಪಾಲದಾಸರು ಒಬ್ಬೊಬ್ಬರು ಮಹಾಮಹಿಮರು. ಇವರೆಲ್ಲರಲ್ಲಿ ಕವನ ಸ್ಪೂರ್ತಿಯು ಸಹಜವಾಗಿ ಹೊರಹೊಮ್ಮಿ ಸಾವಿರಾರು ಹಾಡುಗಳ ಸೃಷ್ಟಿಯಾಯಿತು. ಹಾಡು ಕೀರ್ತನೆಗಳಲ್ಲದೆ ಕಥನ ಕವನಗಳನ್ನು ರಚಿಸಿದವರಿದ್ದಾರೆ, ಬಯಲಾಟಗಳ ಪ್ರಸಂಗ ಪಠ್ಯಗಳನ್ನು ಕಟ್ಟಿದವರಿದ್ದಾರೆ. ಸಮಸ್ತ ದಾಸ ಪೀಳಿಗೆಯವರ ಅನೇಕ ಹಾಡುಗಳು ಈ ಮುನ್ನವೆ ಮುದ್ರಿತವಾಗಿ ಅವುಗಳ ಸಮೀಕ್ಷೆ ವಿಮರ್ಶೆಗಳು ನಡೆದು ಹೋಗಿದ್ದರೆ ಈ ಶತಮಾನವನ್ನು ಕತ್ತಲೆಯ ಕಾಲವೆಂದೂ ಯಾರೂ ಹೇಳುತ್ತಿರಲಿಲ್ಲ. ವಿಜಯದಾಸ, ಗೋಪಾಲದಾಸರ ಭಾವಪೂರ್ಣ ಸುಳಾದಿಗಳು ಮತ್ತು ಜಗನ್ನಾಥದಾಸರ ‘ಹರಿಕಥಾಮೃತಸಾರ’ ಇವುಗಳನ್ನು ಕನ್ನಡಕ್ಕೆ ನೀಡಿದ 18ನೆಯ ಶತಮಾನ ಅದೆಂತು ನಿಸ್ಸತ್ವವೆನಿಸಿತು? ಎಂಬ ಹಾವನೂರ ಅವರ ಮಾತುಗಳು ಕನ್ನಡವನ್ನು ಅಖಂಡವಾಗಿ ಕಾಣುವ ಮತ್ತು ಒಂದು ಭಾಗದ ಕೊಡುಗೆಯನ್ನು ಕತ್ತಲಲ್ಲಿಟ್ಟು ನೋಡುವ ತಿಳುವಳಿಕೆಗಳನ್ನು ಎಚ್ಚರಿಸಿದಂತಿದೆ. ಆದರೆ ಈ ತಿಳುವಳಿಕೆಗಳಿಗೆ ಉತ್ತರವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ನಡೆದ ಕನ್ನಡ ಕಾವ್ಯದ ದೇಸಿ ಕಾಣ್ಕೆಗಳನ್ನು ದಾಖಲಿಸುವುದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದೆ
    ಹೊಸಗನ್ನಡದ ಅರುಣೋದಯವನ್ನು ಗುರುತಿಸುವಾಗಲೂ ಜನಪದೀಯ ನೆಲೆಗಟ್ಟಿನಿಂದ ಬಂದ ಲಾವಣಿ, ತತ್ವಪದ, ಭಜನೆ ಮೊದಲಾದ ಕಾವ್ಯಗಳನ್ನು ಮತ್ತೆ ದೂರಸರಿಸಲಾಗಿರುವುದೂ ಒಂದು ದುರಂತವೆನಿಸುತ್ತದೆ. ‘ಹೊಸಗನ್ನಡದ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಬಿsಸಿ ಹಟ್ಟಿಯಂಗಡಿ ನಾರಾಯಣರಾಯರು, ಬಿ.ಎಂ.ಶ್ರೀ. ಅವರ ರಚನೆಗಳಿಂದ ಗುರುತಿಸುವುದು ನಮಗೆ ವಾಡಿಕೆಯಾಗಿದೆ. ಆದರೆ ವಾಸ್ತವವಾಗಿ ಹೊಸಗನ್ನಡದ ಅರುಣೋದಯವನ್ನು ತತ್ತ್ವಪದಗಳು ಮತ್ತು ತತ್ತ್ವಪದಕಾರರಿಂದಲೇ ಆರಂಬಿsಸಬೇಕಾಗಿದೆ. ಜನಪದ ಸಾಹಿತ್ಯವಾಗಲಿ, ವಚನ ಸಾಹಿತ್ಯವಾಗಲಿ ಪೂರ್ವಧ್ಯಾನಿತವಾದ ಅಥವಾ ಪ್ರe್ಞÁಪೂರ್ವಕವಾದ ಕಾವ್ಯಸೃಷ್ಟಿಯಲ್ಲ. ಇವರಾರಿಗೂ ತಮ್ಮ ರಚನೆಗಳು ಸಾಹಿತ್ಯವೆಂಬ ಭ್ರಮೆ ಇರಲಿಲ್ಲ. ವಚನಗಳು ಸೃಷ್ಟಿಯಾದ 500 ವರ್ಷಗಳ ನಂತರ ಅದಕ್ಕೆ ಸಾಹಿತ್ಯವೆಂಬ ಮನ್ನಣೆ ಲಬಿsಸಿದೆ. ಅಂತೆಯೇ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದ್ದಾಗ ಮೂಡಿ ಬಂದ ಕನ್ನಡದ ತತ್ವಪದಗಳು ಮತ್ತು ತತ್ವಪದಕಾರರು ಇದುವರೆಗೆ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಪ್ರತಿಷ್ಟಿತ ಗ್ರಂಥಗಳಲ್ಲಿ ಸ್ಥಾನಗಿಟ್ಟಿಸಿಲ್ಲದಿರುವುದು ಕಾಣುತ್ತೇವೆ.

  ಇಲ್ಲಿ ನಡೆದ ದೇಸಿ ಕಾವ್ಯ ಪ್ರಕ್ರಿಯೆಯು ತೀನಂಶ್ರೀ ಅವರ ಗಮನಕ್ಕೆ ಬಾರದೇ ಹೋಗಿರುವುದು ಈ ಕಾಲವನ್ನು ‘ಅಸಾರತೆ’ ಎಂದು ಸಾರಲಾಯಿತು. 18, 19ನೆಯ ಶತಮಾನಗಳು ಕನ್ನಡದಲ್ಲಿ ಅಪಾರ ಸಂಖ್ಯೆಯ ಕಥನಗೀತಗಳೂ, ಲಾವಣಿಗಳೂ, ಮಹಾಕಾವ್ಯಗಳೂ, ತತ್ವಪದಗಳೂ ರಚನೆಯಾದ ಕಾಲ ಎಂಬುದು ತೀನಂಶ್ರೀ ಅವರಿಗೆ ಯಾಕೆ ಹೊಳೆಯಲಿಲ್ಲವೊ? ಅವರ ಕಾಲಕ್ಕೆ ಅಂತಹ ಸಾಹಿತ್ಯ ಸಂಗ್ರಹವೂ ಆಗಿತ್ತು. ಸ್ವತಃ ಅವರೂ ಜನಪದ ಸಾಹಿತ್ಯದ ಮೇಲೆ ಬರವಣಿಗೆ ಮಾಡಿದವರಾಗಿದ್ದರು ಬಹಳ ಸರಳವಾಗಿ ಇದು ಶಿಷ್ಟ ಸಾಹಿತ್ಯ ಚರಿತ್ರೆಕಾರರ ಪೂರ್ವಗ್ರಹಿಕೆ, ಅನಾಮತ್ತಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕೃಷಿ ಮಾಡಲಾರಂಬಿsಸಿದ ಸಾಹಿತಿಗಳಿಗೆ, ವಿಚಾರವಂತರಿಗೆ ಸ್ಥಳೀಯವಾದ ಈ ಮೌಖಿಕ ಸಂಪ್ರದಾಯಗಳು ಮೈಲಿಗೆ ಎನಿಸಿದ್ದವು. ಇಂಗ್ಲಿಷಿನಲ್ಲಿ ವ್ಯವಹರಿಸುವುದೇ ಗೌರವ ಮತ್ತು ನಾಗರಿಕ ಲಕ್ಷಣ ಎನ್ನುವ ವಸಾಹತು ಪ್ರe್ಞÉ ಸ್ಥಳೀಯವಾದದ್ದನ್ನು ಉಪೇಕ್ಷೆಗೆ ಒಳಗಾಗುವಂತೆ ಮಾಡಿತು. ಇಂದಿನ ಸಂದರ್ಭದಲ್ಲಿ ನಿಂತು ಉಪಲಬ್ಧವಾಗುತ್ತಿರುವ ಸ್ಥಳೀಯ ಸಾಂಸ್ಕøತಿಕ ಆಕರಗಳ ಹಿನ್ನೆಲೆಯಲ್ಲಿ 18-19ನೆಯ ಶತಮಾನವನ್ನು ಪುನರಾವಲೋಕಿಸುವುದು ಜರೂರಾಗಿದೆ. ಹೀಗೆ ಬರಡು ಕಾಲವೆಂದು ಹೇಳಿಕೊಂಡು ಬರಲಾಗಿದ್ದ ಸಂದರ್ಭದಲ್ಲಿ ಇಲ್ಲಿ ಜನಪದ ನೆಲೆಗಟ್ಟಿನಲ್ಲಿ ಮೂಡಿಬಂದ ಸಾಹಿತ್ಯವನ್ನು ಒಪ್ಪಿಕೊಳ್ಳದೆ ಹಾಗೂ ಗುರುತಿಸಿ ಮನ್ನಣೆ ನೀಡದೆ ಹೋಗಲಾಯಿತು.
    ಈ ಅಪಾಯಕಾರಿ ಚಿಂತನಾ ಕ್ರಮಗಳು ಹುಟ್ಟುಹಾಕಿದ ಸಂದರ್ಭಗಳು ಒಟ್ಟು ಜನಪದರ ಕಾಣ್ಕೆಯನ್ನು ನಿರ್ಲಕ್ಷಿಸಿದವು. ದೇಶೀಯ ಕಾವ್ಯವನ್ನೂ ಕಟ್ಟಿದ ಯಾರೂ ಆಧುನಿಕ ಚಿಂತಕರಿಗೆ ಶ್ರೇಷ್ಟರಾಗಿ ಕಾಣಲಿಲ್ಲ. ಹೋಗಲಿ ಅವರ ಮೌಲ್ಯಯುತ ಸಾಧನೆಗೆ ತಕ್ಕುದಾದ ಗೌರವವನ್ನೂ ಕೊಡಲಿಲ್ಲ. ಅಸಾರತೆ ಮತ್ತು ಸ್ಥಗಿತಗೊಂಡ ಕಾಲವೆಂದು ಹೇಳುವ ಕಾಲಘಟ್ಟದಲ್ಲಿಯೇ ಇವರು ಹುಟ್ಟುಹಾಕಿದ ದೇಸೀತನ ತನ್ನ ಶ್ರೇಷ್ಟತೆಯನ್ನು ಕಾಯ್ದುಕೊಂಡಿತ್ತೆಂದೆ ಹೇಳಬೇಕು. ಯಾಕೆಂದರೆ ಈ ಕಾಲಘಟ್ಟದಲ್ಲಿಯೇ ಸಾಧು ಸಂತರು, ತತ್ವ್ನ್ತಪದಕಾರರು, ಬುಡಕಟ್ಟು ನಾಯಕರು, ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ, ಅದರ ಜೀವ ವಿರೋದಿs ನೆಲೆಗಳ ವಿರುದ್ಧ ತಮ್ಮ  ಅನುಭಾವಿಕ ನೆಲೆಯಿಂದ ಲೋಕಾನುಭವದಿಂದ ಖಂಡಿಸಿದವರು ಚಳುವಳಿ ಮಾಡಿದವರು. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದವರು. ಪ್ರಭುತ್ವ ವಿರೋದಿs ನೆಲೆಗಳನ್ನು ಎತ್ತಿ ಹಿಡಿದ ಇವರು ನವೋದಯ ಸಂದರ್ಭದ ಪ್ರಮುಖ ಧಾರ್ಮಿಕ ನಿಲುವಾದ ಧರ್ಮ ನಿರಪೇಕ್ಷಕ ನೆಲೆಗೆ ತಳಹದಿ ಹಾಕಿಕೊಟ್ಟವರು. ಈ ಸೆಳಕುಗಳು ಲಾವಣಿಕಾರರಿಗೂ ಪ್ರಮುಖ ಪ್ರೇರಣೆಯಾಗಿದ್ದವು. ಸ್ಥಳೀಯ ಚಾರಿತ್ರಿಕ ಹಾಗೂ ಸಾಂಸ್ಕøತಿಕ ಸಂಗತಿಗಳಿಗೆ ಮಹತ್ವಕೊಟ್ಟು ಜನರೊಡಲಿಂದ ಹುಟ್ಟಿಬಂದ ಸ್ವಾನುಭವಪ್ರಧಾನವಾದ ದೇಸಿ ಪರವಾಗಿ ಅರಳಿಕೊಂಡಿದ್ದ ಈ ನೀತಿ ಸಂಪ್ರದಾಯದಂಥ ಎಷ್ಟೊ ಸ್ಥಳೀಯ ಅಬಿsವ್ಯಕ್ತಿಗಳನ್ನು ಇಲ್ಲಿ ನಿರ್ಲಕ್ಷಿಸಲಾಯಿತು. ಪಾಶ್ಚಾತ್ಯ ಸಿದ್ಧಾಂತಗಳ ಮೇಲೆ ರೂಪುಗೊಂಡ ನವೋದಯ ಚಳುವಳಿಗಳು ಇಂಥ ದೇಸಿತನಗಳನ್ನು ಉಪೇಕ್ಷೆ ಮಾಡಿದವು. ಸಮಾಜಮುಖಿ ಚಲನೆಗಿಂತ ವ್ಯಕ್ತಿ ಕೇಂದ್ರಿತ ಚಿಂತನಾಕ್ರಮಕ್ಕೆ ಇಲ್ಲಿ ಪ್ರಾಧಾನ್ಯ ದೊರಕಿತು. ಹಳೆಯದೆಲ್ಲಾ                 ವಿಸ್ಮ್ನೃತಿಗೊಳಗಾಯಿತು ಎಂಬುದನ್ನು ಡಾ.ವೀರೇಶ ಬಡಿಗೇರ ಸ್ಪಷ್ಟವಾಗಿಯೇ ಗುರುತಿಸುತ್ತಾರೆ.
   ಹೀಗೆ ಲಾವಣಿ, ತತ್ತ್ವಪದ ಮೊದಲಾದ ಸ್ಥಳೀಯ ಕಾವ್ಯ ಪ್ರಕಾರಗಳು ಒಂದೆಡೆ ಈ ನೆಲೆಯಲ್ಲಿ ತಮ್ಮ ಅಸ್ತಿತ್ವ ರೂಪಿಸಿಕೊಳ್ಳುವ ಹೊತ್ತಿನಲ್ಲಿ ನಾವು ಯಾವುದನ್ನೂ ಆಧುನಿಕವೆಂದು ಕರೆದುಕೊಂಡು ಬಂದೆವೋ, ಅವು ಈ ನೆಲದ ಇಂಥ ಪ್ರೇರಣೆಗಳಿಂದ ಹೊರತಾಗಲಿಲ್ಲ. ಒಂದೆಡೆ ಪಶ್ಚಿಮದ ಕಾವ್ಯರೂಪಗಳಿಂದ ಪ್ರಭಾವಿತರಾಗಿ ಅವುಗಳಿಗೆ ಸಂವಾದಿಯಾಗಿ ಹೊಸ ರೂಪಗಳನ್ನು ಕನ್ನಡದಲ್ಲಿ ಆವಿಷ್ಕಾರಮಾಡುವ ಪ್ರಯತ್ನಗಳು ಅನುವಾದ, ರೂಪಾಂತರ, ಅಳವಡಿಕೆ ಇತ್ಯಾದಿಗಳ ಮೂಲಕ ಕೆಲವರಿಂದ ಪ್ರಾರಂಭವಾದರೂ ಈ ಹೊಸ ರೂಪಗಳ ಒಳಕ್ಕೆ ತುಂಬಿಕೊಳ್ಳಬೇಕಾದ ಹೂರಣ ಈ ನೆಲದ ಮಣ್ಣಿನಿಂದ ಬೆಳೆದುಕೊಂಡಿದ್ದೇ ಆಗಿರಬೇಕೆಂಬ ತಿಳಿವು ಇಂಥ ಹಿನ್ನೆಲೆಯಲ್ಲಿತ್ತೆಂಬುದು ಮಹತ್ವದ ಸಂಗತಿಯಾಗಿದೆ ಕನ್ನಡದಲ್ಲಿ ಕಾಲಕಾಲಕ್ಕೆ ಕಾಣಿಸಿಕೊಂಡ ಇಂಥ ಹೊಸ ರೂಪಗಳಿಗೆ ಜಾನಪದ ನೀಡಿದ ಪ್ರೇರಣೆ, ಪ್ರಭಾವಗಳು ಅದರ ಪ್ರಾಧಾನ್ಯವನ್ನು ಸಾರುತ್ತವೆ.
ಜನಪದ ಹಾಡು ಪರಂಪರೆಯಲ್ಲಿನ ಮೌಖಿಕ ಸೃಷ್ಟಿ ಕ್ರಿಯೆಯನ್ನು ಅಕ್ಷರ ಲೋಕಕ್ಕೆ ತಂದಾಗ ಅವುಗಳ ಪಠ್ಯೀಕರಣ ಜರುಗಿತು. ಸಂಗ್ರಹ, ಸಂಪಾದನೆಗಳು ನಡೆದಾಗ ಜನಪದ ಗೀತ ಪ್ರಕಾರಗಳು, ನಾಲಗೆಯಿಂದ ನಾಡವರಿಗೆ ಅಕ್ಷರ ರೂಪವಾಗಿ ಕಣ್ಣ ನೋಟಕ್ಕೆ ಸಿಕ್ಕಾಗ ಓದುವ, ಓದಿ ತಿಳಿದುಕೊಳ್ಳುವ ಬಗೆ ಸಾರ್ವತ್ರಿಕವಾಯಿತು. ಅವುಗಳ ಶ್ರೇಷ್ಟತೆಯ ಅರಿವಾಗತೊಡಗಿತು. ಹಳ್ಳಿಯ ಲಾವಣಿ ಸಾಂಗತ್ಯಗಳನ್ನು ಉತ್ಸಾಹ ಶಾಲಿಗಳು ಹೊಸದಾಗಿ ಕೂಡಿಸಿ ಪ್ರಕಟಿಸಿದಾಗಲೆಲ್ಲಾ ಸಾಹಿತ್ಯ ಬೆಳವಣಿಗೆಗೆ ಮಹೋಪಕಾರವಾಗಿದೆ. ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಈ ಬಗೆಯ ಕಾರ್ಯವು ಕವಿತೆಯ ಪುನರುಜ್ಜೀವನಕ್ಕೆ ಸಹಕಾರಿಯಾಯಿತು. ನಮ್ಮ ಸಾಹಿತ್ಯದಲ್ಲಿಯೂ ಅದಕ್ಕೆ ನಿದರ್ಶನವನ್ನು ಆಗಲೇ ಅಂಬಿಕಾತನಯದತ್ತರ ಪ್ರಣಯ ಗೀತೆಗಳಲ್ಲಿ ಗುರುತಿಸಬಹುದು. ಜನಪದ ಸಾಹಿತ್ಯದ ಸಂಗ್ರಹ, ಪ್ರಕಟಣ ಕಾರ್ಯಗಳಲ್ಲಿ ಧಾರವಾಡ ಗೆಳೆಯರ ಗುಂಪಿನ ಈ ಕವಿಗಳು ಹಳ್ಳಿಯ ಪದಗಳ ಜೀವಾಳವನ್ನು ಚೆನ್ನಾಗಿ ಹೀರಿ, ಅದನ್ನೇ ತಮ್ಮ ವಾಣಿಯಲ್ಲಿ ಆಡಿಸುತ್ತಿರುವುದು ಆಶ್ಚರ್ಯವೇನೂ ಅಲ್ಲ ಎಂಬುದನ್ನೇ ಮುಂದೆ ತೀನಂಶ್ರೀ ಅವರೇ ನಿರೂಪಿಸಬೇಕಾಯಿತು.
   ಒಟ್ಟು ಈ ಚಿಂತನೆಗಳು ಕನ್ನಡ ಕಾವ್ಯ ಪಡೆದುಕೊಂಡು ಬಂದ ಪ್ರೇರಣೆ, ಪ್ರಭಾವಗಳಿಗೆ ಒಟ್ಟು ದೇಶೀಯ ಕಾಣ್ಕೆಯನ್ನು ದೂರವಿಟ್ಟು ನೋಡದೆ, ಅದರ ಒಳಗಡೆಯೇ ನಡೆಯುತ್ತಿದ್ದ ಈ ಚಲನಶೀಲತೆಯನ್ನು ಕಾವ್ಯದ ಜೀವಂತಿಕೆಗೆ ಕಾರಣವಾದ ಸಂದರ್ಭಗಳನ್ನು ಪುಷ್ಟೀಕರಿಸಿದಂತಾಗುತ್ತದೆ. “ವಸಾಹತೀಕರಣಗೊಂಡ ದೇಶಗಳಲ್ಲಿ ವಿಜೇತರ ಸಂಸ್ಕøತಿಯ ಮಾದರಿಗಳು ವಿವೇಚನೆಯಿಲ್ಲದೆ ಪಡೆಯುವಂತೆ ಸಾಹಿತ್ಯ ತತ್ವಗಳನ್ನು ಪಡೆದುಕೊಂಡಾಗ ನಿರ್ಮಾಣಗೊಳ್ಳುವ ಅತಂತ್ರಭಾವನೆಯೇ ದೇಸಿವಾದದ ಒಲವಿಗೆ ಕಾರಣವಾಗಿದೆ. ಕನ್ನಡ ನವೋದಯದ ಕೂಸನ್ನು ಶೆಲ್ಲಿ, ವಡ್ಸ್‍ವರ್ತ್, ಬ್ರಾಡ್ಲೆಯರ ಸಾಹಿತ್ಯ ತತ್ವಗಳ ತೊಟ್ಟಿಲು ಪೆÇರೆಯಿತು” ಎಂದು ಹೇಳುವ ರಹಮತ್ ತರೀಕೆರೆ  ಅವರು “ಆದರೂ ನವೋದಯದ ಬರಹಗಾರರು ದೇಸಿ ಪರಂಪರೆಯ ಹೊಕ್ಕಳು ಬಳ್ಳಿಯನ್ನು ಕತ್ತರಿಸಿಕೊಂಡಿರಲಿಲ್ಲ” ಎನ್ನುವಲ್ಲಿ ನವೋದಯಕ್ಕೆ ಜೀವ ಚೇತನವನ್ನು ದೇಸಿಯತೆಯೇ ನೀಡಿತೆನ್ನುವುದನ್ನು ಪ್ರಧಾನವಾಗಿ ಪ್ರಮಾಣಿಕರಿಸುವುದಿದೆ.
    ಹೀಗೆ ನಮ್ಮ ಕವಿಗಳು ಜನಪದದತ್ತ ಕಾವ್ಯ ಸಂವಹವನ್ನು ವಿಸ್ತರಿಸಿಕೊಂಡ ನೆಲೆಗಳು ಹುಟ್ಟುಹಾಕಿದ ಕೊಡುಗೆಗಳು ಇಲ್ಲಿ ಜನಪರವಾದದ್ದು ಜನಪದದ ಮಹತ್ವ ಸಾರುತ್ತವೆ. ಒಬ್ಬ ಕವಿಯ ಅಥವಾ ಆ ಕಾಲದ ಕವಿಗಳ ಸಾಹಿತ್ಯ ದೇಸಿಯವಾಗುವುದು ಎಂದರೆ ಕವಿ ತಾನು ಬೆಳೆದು ಬಂದ ಸಮಾಜ, ಸಂಸ್ಕøತಿ, ಪರಂಪರೆಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು, ಅವುಗಳೊಂದಿಗೆ ಆತ್ಮೀಯವಾದ ಸೃಜನಶೀಲ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು, ನಮ್ಮ ಸಾಹಿತ್ಯದ ಪಾಶ್ಚಾತ್ಯೀಕರಣದ ತೀವ್ರತೆಯ ಬಗ್ಗೆ ಎಚ್ಚರವಹಿಸುವುದು, ನಮ್ಮ ಪರಂಪರೆಯಲ್ಲಿಯ ಜೀವಂತಿಕೆಯು, ಅರ್ಥಪೂರ್ಣವೂ ಆದ ನೆಲೆಗಳನ್ನು ಉಳಿಸಿಕೊಂಡು ಅವುಗಳನ್ನು ಇಂದಿನ ಅಗತ್ಯತೆಗೆ ತಕ್ಕಂತೆ ಹೊಸ ರೀತಿಯಲ್ಲಿ ಹೊಸ ಅರ್ಥಕ್ಕಾಗಿ ಬಳಸಿ, ಬೆಳೆಸಿ ಭಾರತೀಯವಾಗಿ ವಿಶಿಷ್ಟವಾದ ಸಾಹಿತ್ಯ ಪರಂಪರೆಯೊಂದನ್ನು ನಿರ್ಮಿಸುವುದು. ಕನ್ನಡ ನವೋದಯ ಕಾವ್ಯ ಈ ಕಾರ್ಯವನ್ನು ತುಂಬಾ ಎಚ್ಚರದಿಂದಲೇ ಮಾಡಿತು.
  ಕನ್ನಡ ನವೋದಯ ಕಾವ್ಯ ರೂಪ ತಾಳುವ ಹೊತ್ತಿನಲ್ಲಿ ಎರಡು ಸಂಸ್ಕøತಿಗಳು ಮುಖಾಮುಖಿಯಾದದ್ದರ ಪರಿಣಾಮಗಳನ್ನು ಎದುರಿಸಬೇಕಾಯಿತು. ತನ್ನದು, ತಾನು ಎಂದು ಅನುಭವವಾಗುತ್ತಿದ್ದ ಕಾಲದಲ್ಲಿ, ಬೇರೊಂದು ದೇಶವು ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಾವು ಗುಲಾಮರಾದುದರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದ ಕಾಲದಲ್ಲಿ ಎರಡೂ ಏಕಕಾಲಕ್ಕೆ ಭಾರತದಲ್ಲಿ ಸಂಭವಿಸಿದವು. ಕನ್ನಡಿಗರ ಮಟ್ಟಿಗೆ ಇವೆರಡನ್ನೂ ಸಾಹಿತ್ಯದಲ್ಲಿ ಸ್ವೀಕರಿಸಿ ಬದುಕಿನ ಸಂದರ್ಭದಲ್ಲಿಟ್ಟುಕೊಂಡ ಸಾಧನೆ ನವೋದಯ ಸಾಹಿತ್ಯದ್ದು ಅಲ್ಲದೆ ಹಳೆಯದರಲ್ಲಿ ಹೊಸದನ್ನು ಒಂದುಗೂಡಿಸಿಕೊಂಡು ಹಿತಮಿತವಾದ ಹೊಸತನವನ್ನು ಸಾದಿsಸಬೇಕು ಎಂಬ ಸಮದೃಷ್ಟಿಯೂ ಈ ಸಾಹಿತ್ಯಕ್ಕೆ ಬಂದಿತು. ಕನ್ನಡ ಸಂಸ್ಕøತಿಯ ಉತ್ತಮಾಂಶಗಳಲ್ಲಿ ಸಾವಿರಾರು ವರ್ಷಗಳಿಂದ ಈ ದೃಷ್ಟಿ ಬೆಳೆದು ಬಂದಿತ್ತು. ಹೊಸತನ ಅತಿರೇಕಗಳಿಗೆ ಇದು ಬಹುಮಟ್ಟಿಗೆ ಕಡಿವಾಣಹಾಕಿತು. ಹೀಗೆ ಹೊರಗಿನ ಪ್ರಭಾವಗಳಿಗೆ ಒಳಗಿನ ಪ್ರೇರಣೆ ಮತ್ತು ಪರಂಪರೆಯಿಂದ ಬಂದ ಸಮನ್ವಯ ದೃಷ್ಟಿ ಇವು ಕೂಡಿಕೊಂಡು ಹೊಸಗನ್ನಡ ಸಾಹಿತ್ಯದ ಜನನಕ್ಕೆ ಕಾರಣವಾದವು. ಬರಿ ಹೊರಗಿನ ಪ್ರಭಾವಗಳಿಂದಲೇ ಹೊಸ ಸಾಹಿತ್ಯವು ಹುಟ್ಟಿತೆನ್ನುವುದು ಪೂರ್ಣಸತ್ಯವಲ್ಲ ಎಂಬುದು ರಂ.ಶ್ರೀ.ಮುಗಳಿ ಅವರ ಅಬಿsಮತ. ನವೋದಯ ಕಾವ್ಯ ಈ ನೆಲದ ಒಳಗಿನ ಜೀವಸತ್ವ ಪಡೆದುಕೊಂಡು ರೂಪ ತಾಳುವ ಸಂದರ್ಭ ವಸಾಹತುಶಾಹಿಯ ಪ್ರಭಾವಿ ಅನುಕರಣೆ ಒಂದು ಬಗೆಯ ಸಂಕರಸೃಷ್ಟಿಗೆ ಕಾರಣವಾದುದ್ದನ್ನು ಸಾರುತ್ತದೆ.
   ಒಟ್ಟಾರೆ ಹೊಸಗನ್ನಡ ಕಾವ್ಯ ಹಂತ ಹಂತದಲ್ಲೂ ಪಾಶ್ಚಾತ್ಯ ಪ್ರೇರಣೆಯಿಂದಲೇ ಹೊಸ ರೂಪಗಳನ್ನು ಆವಿಷ್ಕಾರಗೊಳಿಸಿಕೊಂಡಿತೆನ್ನುವುದನ್ನು ಬದಿಗಿಟ್ಟು ಇಲ್ಲಿ ಮೂಡಿದ ಹಲವು ನೆಲೆಗಳಲ್ಲಿ ನಡೆದ ಪ್ರಯೋಗಗಳು ಮುಖ್ಯವಾಗಬೇಕಿದೆ. ಸ್ಥಳೀಯ ಕಾವ್ಯ ಸಂವಹನ ಉಂಟುಮಾಡಿದ ಜಾಗೃತಿಯ ಕಾರಣವಾಗಿ ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಒಳಗಡೆ ನಡೆದ ಹೊಸ ಸಂಸ್ಕøತಿಯ ಬೇರಿನಾಳಕ್ಕೆ ಇಳಿದ ದೇಸಿ ಸಂಸ್ಕøತಿಯ ಜೀವರಸ ಒಟ್ಟು ಚೇತನಕ್ಕೆ ಕಾರಣವಾಯಿತು. ಹಾಗಾಗಿ ಹೊಸತನದ ವೈಭವೀಕರಣದಲ್ಲಿ ಕಾರಣವಾದ ಸ್ಥಳೀಯ ಕಾವ್ಯ ಪ್ರಕಾರಗಳನ್ನು ನಿರ್ಲಕ್ಷಿಸದೆ ಪ್ರಧಾನ ಆಕರವಾಗಿ ಕಾಣುವ ಮತ್ತು ಗುರುತಿಸಿ ಪ್ರಕಟಪಡಿಸುವ ಜವಾಬ್ದಾರಿಯೊಂದಿಗೆ ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ.   –ಡಾ.ಪ್ರಕಾಶ ಗ.ಖಾಡೆ

  ವಿಳಾಸ : ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890