ಮಂಗಳವಾರ, ನವೆಂಬರ್ 5, 2013

ಭಾವ ಹನಿಗಳು -ಡಾ.ಖಾಡೆ

  ಭಾವ ಹನಿಗಳು
******************

ಡಾ.ಪ್ರಕಾಶ ಗ.ಖಾಡೆ


ಕೊರಡಲ್ಲಿ 
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರ ಮರೆಸುತ್ತದೆ.
**********
ಓಡುವ ಬದುಕಿನಲಿ
ಇರಬೇಕು ಸದಾ ಚಲಿಸುತ,
ಮುಗಿಯದ ಪಯಣದ
ನೆನಪುಗಳು ಅನವರತ.
*********
ಮುಂಜಾವು
ತೆರೆದುಕೊಳ್ಳುತ್ತದೆ.
ನಡುಹಗಲು
ದೂರ ನಡೆಸುತ್ತದೆ.
ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ.
*********
ಈ ದೇಹ
ಮಾಂಸ ಖಂಡಗಳ ಮುದ್ದೆ
ಹೇಳುತ್ತಾರೆ ವೇದಾಂತಿಗಳು :
ಕೇಳಿ ನೋಡಿ
ಇದರೊಳಗಿನ ಶಕ್ತಿ
ಬುದ್ದಿಮತ್ತೆ,ಎಷ್ಟೊಂದು
ಸೃಷ್ಟಿಸಿದೆ ಮತ್ತೆ ಮತ್ತೆ.
********
ಈ ಕಂಗಳು 
ಹೊರನೋಟಕ್ಕೆ
ಬರೀ ರೆಪ್ಪೆ ಒಳಗಿನ ಗುಡ್ಡೆ,
ಒಂದಿಷ್ಟು ಹನಿ ತರಿಸುವ ರಸಧಾರೆ.
ಇಷ್ಟೆ ಅಲ್ಲ
ಭಾವನೆಗಳ ಮಹಾಪೂರ.
********
ಕಗ್ಗತ್ತಲ ದಾರಿಯಲ್ಲಿ
ಬಾನ ಚುಕ್ಕಿಗಳದೇ ಬೆಳಕು :
ಬೆಂಗಾಡಿನ ಹಾದಿಯಲ್ಲಿ 
ವರತೆಗೆ ಸಿಕ್ಕುವ
ನೀರೇ ಜೀವನದಿ.
*******
ಹೋರಾಟ 
ಪ್ರತಿಭಟಣೆಗೆ ಒಂದು
ಸಣ್ಣ ಉದಾಹರಣೆ :
ಕಾಗೆ ಗೂಡಲ್ಲಿ ಬೆಳೆವ
ಮರಿ ಕೋಗಿಲೆಯ
ಬೆಳವಣಿಗೆ.
*******

ಮಂಗಳವಾರ, ಅಕ್ಟೋಬರ್ 8, 2013

ಜನಪದ ಒಗಟುಗಳು.


                                       ಜನಪದ ಒಗಟುಗಳು 

                                                                -ಡಾ.ಪ್ರಕಾಶ ಗ.ಖಾಡೆ

.
       
 ಭಾರತೀಯ ಸಂಸ್ಕøತಿ ಪರಂಪರೆಯಲ್ಲಿ ಒಗಟು ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ.. ಕನ್ನಡದಲ್ಲಿ ಒಗಟು, ಒಂಟು, ಒಡಪು, ಒಡಗತೆ ಮುಂತಾದ ಪದಗಳು ಬಳಕೆಯಲ್ಲಿವೆ. ಒಗೆ ಅಥವಾ ಎಸೆ   ಎಂಬರ್ಥದಲ್ಲಿ ಒಗಟು, ಒಡೆ-ಒಡೆಸು, ಬಿಡಿಸು ಎಂಬರ್ಥದಲ್ಲಿ ಒಗಟು ಬಳಕೆಯಲ್ಲಿದೆ.

ಒಗಟು ಎಂದರೆ ಜಟಿಲವಾದದ್ದು, ಗೋಜಲು ಗೋಜಲಾದದ್ದು, ಗೂಢವಾದದ್ದು ಎಂದು ಅರ್ಥೈಸಲಾಗುತ್ತಿದೆ. ಒಗಟುಗಳು ಒಗಟುಗಳು ಬುದ್ಧಿ ಪ್ರಧಾನವಾದವುಗಳು. ಇವು ಸಾಮಾನ್ಯವಾಗಿ ಊಹೆಯ ಮೇಲೆ ಉತ್ತರವನ್ನು ಹುಡುಕುವ, ಕೇಳಿದ ಕೂಡಲೇ ದಿU್ಪ್ಭ್ರಮೆ ಹಿಡಿಸುವ, ರಹಸ್ಯಾರ್ಥವುಳ್ಳ ಪ್ರಶ್ನಾರ್ಥಕ ಹೇಳಿಕೆಗಳು. ಪ್ರತಿಯೊಂದರಲ್ಲೂ ಸಮಸ್ಯೆಯೊಂದಿದ್ದು ಸುಲಭವಾಗಿ ಬಿಡಿಸಲಾರದ ರೀತಿಯಲ್ಲಿ ಸಂಯೋಜಿತವಾಗಿರುತ್ತವೆ. ಇದರಲ್ಲಿ ಒಡ್ಡಿದ್ದು ಒಂದಿದ್ದರೆ, ಒಡೆಸುವುದು ಮತ್ತೊಂದು ಇರುತ್ತದೆ.

 “ಒಗಟು ಅತ್ಯಂತ ಪ್ರಾಚೀನವಾದ ಮತ್ತು ವ್ಯಾಪಕವಾದ ಸೂತ್ರೀಕೃತ ಆಲೋಚನಾ ಪ್ರಕಾರಗಳಲ್ಲಿ ಒಂದಾಗಿದ್ದು ಈ ವಿಷಯದಲ್ಲಿ ಪುರಾಣ, ನೀತಿಕಥೆ, ಜನಪದ ಕಥೆ ಮತ್ತು ಗಾದೆಗಳಿಗೆ ಇದು ಸಮಾನವಾಗಿದೆ. ಒಗಟುಗಳು ಮೂಲತಃ ರೂಪಕಗಳು. ಈ ರೂಪಕಗಳು ಮೂಲ ಮಾನಸಿಕ ಪ್ರಕ್ರಿಯೆಗಳಾದ ಸಂಯೋಜನೆ, ತುಲನೆ, ಹೋಲಿಕೆ ಮತ್ತು ಮೌನಗಳ ಗ್ರಹಿಕೆಯ ಫಲ.” ಒಗಟಿಗೆ ಹೆಚ್ಚು ಶಕ್ತಿಯನ್ನು, ಆಕರ್ಷಣೆಯನ್ನು ತಂದಿರುವುದೆಂದರೆ ಈ ರೂಪಕವೇ. “ಅಲಂಕಾರಿವಾದ ಒಗಟು ರೂಪಕದೊಡನೆ ಅತ್ಯಂತ ಸಂಬಂಧವನ್ನು ಒಳಗೊಂಡಿದೆ. ಒಂದು ದೃಷ್ಟಿಯಲ್ಲಿ ಒಗಟು ಹಾಸ್ಯದ ಫಲ, ಮತ್ತೊಂದು ದೃಷ್ಟಿಯಲ್ಲಿ ಪ್ರಕೃತಿಯಲ್ಲಿ ಸಾದೃಶ್ಯವನ್ನು ಕಾಣುವ ಮನುಷ್ಯ ಸಾಮಥ್ರ್ಯದ ಫಲಿತಾಂಶ. ಊಹೆಯಿಂದ ಬಿಡಿಸಬೇಕಾದ ಸಂದಿಗ್ಧಮಯವಾದ ಹೇಳಿಕೆ. ಇದು ರೂಪಕ ಮೂಲ. ಎರಡು ವಸ್ತುಗಳ ತರ್ಕಬದ್ಧ ಸಮೀಕರಣೆ. ಜೇಮ್ಸ ಎ. ಕೆಲ್ಸೋನ ಈ ಹೇಳಿಕೆಯು ಮಾನವನಲ್ಲಿ ಸಹಜವಾಗಿಯೇ ಇರುವ ಹಾಸ್ಯ ವಿಡಂಬನೆಗಳು ಒಗಟಿನ ರಚನೆಗೆ ಕಾರಣವಾಗಿವೆ ಎಂಬುದನ್ನು ಸಾಧಿಸುತ್ತದೆ. ಮೇಲುನೋಟಕ್ಕೆ ಕೆಲವು ಒಗಟುಗಳು ಅಶ್ಲೀಲವಾಗಿ ಕಾಣುತ್ತವೆ. ಕ್ಷೇತ್ರ ಕಾರ್ಯದಲ್ಲಿ ಇಂಥ ಒಗಟುಗಳನ್ನು ಹೇಖುವ ಸಂದರ್ಭದಲ್ಲಿ ಜನಪದರಲ್ಲಿ ಯಾವ ಮುಜುಗರವು ತೋರದಿರುವದು ಅವುಗಳ ಉತ್ತರದಲ್ಲಿರುವ ಪರಿಶುದ್ಧತೆಯೇ ಕಾರಣವಾಗಿದೆ. ಇಲ್ಲಿ ಬರುವ ಪದಗಳು ಅಶ್ಲೀಲವಾಗಿದ್ದರೂ, ಅದರ ಉತ್ತರ ಮತ್ತು ಒಳ ಅರ್ಥ ಅತ್ಯಂತ ಶುದ್ಧವಾಗಿರುತ್ತದೆ. ಇಂಥ ಸಮಯದಲ್ಲಿ ಶೀಲಕ್ಕೂ, ಅಶ್ಲೀಲಕ್ಕೂ ಗೆರೆ ಎಳೆಯುವುದು ಬಹಳ ಕಷ್ಟದ ವಿಷಯ.
        “ಬಹುತೇಕ ಒಗಟುಗಳು ಭಾಷೆ ಹಾಗೂ ಸಾಹಿತ್ಯ ಸೌಂದರ್ಯದ ಅಶಂಗಳನ್ನು ರೂಢಿಸಿಕೊಂಡ ಹೇಳಿಕೆಗಳಾಗಿವೆ. ಒಗಟು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಫಲವಾಗಿz.É” ಆದಿವಾಸಿಗಳ ಬಾಳಿನಲ್ಲಿ ಪ್ರಕೃತೆಯ ಪಾತ್ರ ಮಹತ್ತರವಾದುದು. ಪ್ರಕೃತಿಗೂ ಮಾನವನಿಗೂ ಇದ್ದ ನಿಕಟ ಸಂಪರ್ಕದ ಫಲವಾಗಿ ಒಗಟು ಸೃಷ್ಟಿಯಾಗಿರಬೇಕು. ಒಗಟಿನಲ್ಲಿ ಕಾಣಬರುವ ಅನೇಕ ಪ್ರಕೃತಿಪರ ವಸ್ತು ಚಿತ್ರಗಳೇ ಇದಕ್ಕೆ ಸಾಕ್ಷಿ.
             ಎಲ್ಲಾ ಕಾಲದಾಗ ಹಸಿರ ಇರತೈತಿ      (ಗಿಳಿ)

             ಕೆಂಪ ಹುಡುಗ ಹಸಿರು ಟೊಪ್ಪಿಗಿ       (ಕೆಂಪು ಮೆಣಸಿನಕಾಯಿ)

 ಒಗಟುಗಳು ಸಾಮಾನ್ಯವಾಗಿ ಕಾವ್ಯರೂಪದಲ್ಲಿರುತ್ತವೆ. ಬುದ್ಧಿಯ ಕೌಶಲ್ಯವನ್ನು ಒರೆಗೆ ಹಚ್ಚಿ ನೋಡುವ ಇವುಗಳ ಹಿನ್ನೆಲೆಯಲ್ಲಿ ವಿಶಿಷ್ಠವಾದ ಕವಿಯ ಮನೋಧರ್ಮದ ಮಿಡಿತವನ್ನು ಕಾಣಬಹುದು. ಒಂದು ಅರ್ಥದಲ್ಲಿ ಒಂದೊಂದು ಒಗಟೂ ಪುಟ್ಟ ಭಾವಗೀತೆ” ಒಟ್ಟಾರೆ ಒಗಟು ಸಂಕ್ಷಿಪ್ತ ರೂಪದ ಒಂದು ಆಕರ್ಷಕ ರಚನೆ.
 ಒಗಟುಗಳು ಸಾಹಿತ್ಯಿಕ ಮೌಲ್ಯವನ್ನು ಒಳಗೊಂಡ ಜನಪದ ಸಾಹಿತ್ಯದ ಶ್ರೇಷ್ಠ ರಚನೆಗಳಾಗಿವೆ. ಒಗಟು ಪರಿಭಾವಿಸಿದಷ್ಟೂ ಅರ್ಥಪರೆ ಬಿಚ್ಚಿಕೊಳ್ಳುವ ಗುಣವಿಷೇಶದಿಂದ, ಶ್ರೇಷ್ಠ ಕಾವ್ಯದ ನಿಲುವಿಗೇರುವ ಅಂಶಗಳನ್ನೂ ಹೊಂದಿದೆ. ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಒಗಟು ರೂಪಕ ಮೂಲವಾದದ್ದೆಂಬುದು. ಈ ಗುಣದಿಂದಲೇ ಅದು ಧ್ವನಿಪೂರ್ಣವಾಗುತ್ತದೆ. ಧ್ವನಿ ಸಂಕ್ಷಿಪ್ತತೆಗೆ ಸಾಧನವಾದ ಸಾಂಕೇತಿಕತೆಯನ್ನು ಅರಸುತ್ತದೆ. ಹೀಗೆ ಸಾಂಕೇತಿಕತೆಯಲ್ಲಿ ಅಭಿವ್ಯಕ್ತಿಗೊಂಡ ಸಂಕ್ಷಿಪ್ತ ಕಾವ್ಯವೇ ಒಗಟು”

               ಚಿಕ್ಕ ಚಿಕ್ಕ ಹೋರಿ ಚಿಲಾರಿ ಹೋರಿ
               ಸಂಜೀಕ ಬರತೈತಿ ಕಿಲಾರಿ ಹೋರಿ   (ಕೌದಿ)
               ಓಡತೈತಿ ಕಾಲಿಲ್ಲ
               ಒತ್ತತೈತಿ ತೋಳಿಲ್ಲ              (ದಿನ)

 ಭಾವ ಹೆಪ್ಪುಗಟ್ಟಿ ಗೀತೆಯಾಗುವಂತೆ, ಭಾವ ಬುದ್ಧಿಗಳ ರಸಾಯನದಿಂದ ಗಾದೆಯಾಗುವಂತೆ, ಬುದ್ಧಿ ಹರಳಗೊಂಡು ಒಗಟಾಗುತ್ತದೆ. “ಪ್ರಾಚೀನವಾದ ಜನಪದ ಸಂಸ್ಕøತಿ ಬುದ್ಧಿ ಪ್ರತಿಭೆಗಳ ಸಂಯೋಜಿತ ಸೃಷ್ಟಿಯಾದ ಸೌಚಿದರ್ಯ, ಕಾರ್ಯಕಾರಣ ತರ್ಕಶಕ್ತಿಗಳನ್ನೊಳಗೊಂಡ, ಸಿಪ್ಪೆ ಸುಲಿಯುತ್ತಾ ತಿರುಳಿನೆಡೆಗೆ ಸೆಳೆದೊಯ್ಯುವ ಅರ್ಥಾಪೇಕ್ಷಿಯಾದ ಪದಚಕ್ರವ್ಯೂಹವೇ ಒಗಟು.”
  ಒಗಟು ಎಲ್ಲ ವಯೋಮಾನದವರಲ್ಲೂ ಉಳಿದುಕೊಂಡು ಬಂದಿವೆ. ಮಕ್ಕಳು, ಹಿರಿಯರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಇವನ್ನು ಬಳಸುತ್ತಾರೆ. ಪ್ರಾಚೀನ ಕಾಲದಿಂದಲೂ ಮಾನವ ಮನಸ್ಸು ತನ್ನ ಸುತ್ತಲಿನ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಿಂದಾಗಿ ಒಗಟುಗಳು ಹುಟ್ಟಿಕೊಂಡಿವೆ. ಎಲ್ಲ ವಿಧದ ಸಾಮರಸ್ಯಯುಕ್ತತೆ, ಅಸಂಬದ್ಧತೆಗಳೂ ಮಕ್ಕಳು ಮತ್ತು ಮಕ್ಕಳಂಥ ಮನುಷ್ಯರ ಗಮನ ಸೆಳೆಯುತ್ತವೆ. ಆದ್ದರಿಂದಲೇ ಒಗಟುಗಳು ಮಕ್ಕಳಿಗೆ ಪ್ರಿಯ. ಒಗಟುಗಳು ಮಾನಸಿಕ ಶೈಶವಾವಸ್ಥೆಯ ನಿಗೂಢತೆಗಳೂ ಹೌದು. ವಿವೇಚನೆಯೂ ಹೌದು. ನಾಗರಿಕತೆ ಮುಂದುವರೆದಂತೆ ಅವು ಇನ್ನೂ ಜೀವಂತವಾಗಿ ಉಳಿದಿವೆ. ಸರಳವಾದ ಹೋಲಿಕೆಗಳು ಶ್ಲೇಷಗಳಾದಂತೆ ಅವುಗಳಲ್ಲಿಯ ಆಸಕ್ತಿ ಮಸುಕಾಗುತ್ತಾ ಅಳಿಸುತ್ತಾ ಬಂದಂತೆ ಒಗಟುಗಳು ಮತ್ತಷ್ಟು ಸಂಕೀರ್ಣವೂ, ಪ್ರಜ್ಞಾಪೂರ್ವಕವೂ ಆಗುತ್ತವೆ” ಎಂಬುದು ಒಗಟುಗಳ ಸರ್ವಕಾಲಿಕ ಶ್ರೇಷ್ಠತೆಯನ್ನು ಸಾರುತ್ತದೆ.  #
     
                   



ಬುಧವಾರ, ಸೆಪ್ಟೆಂಬರ್ 25, 2013

ಜನವಾಣಿ ಬೇರು ಕವಿವಾಣಿ ಹೂವು « ಅವಧಿ / avadhi

ಜನವಾಣಿ ಬೇರು ಕವಿವಾಣಿ ಹೂವು « ಅವಧಿ / avadhi

ಹನಿಗಳು-ಬಸೂ

Basavaraj Sulibhavi



ಹನಿಗಳು -ಬಸೂ

ಹೊರಟಾಗ ತುಟಿಗಳು ಹೊಲಿಗೆ ಹಾಕಿಕೊಂಡಂತೆ ಮುಚ್ಚಿಕೊಂಡಿದ್ದವು
ಎದೆ ಹಿಡಿಸಲಾರದಷ್ಟು ಮಾತುಗಳ ಸೋತ ಹೆಜ್ಜೆಗಳು ಬಿಟ್ಟು ಹೋದವು
Lಮುಂಜಾನೆ ಊರ ತುಂಬ ಚಾಚಿದ ಇದ್ದವರ ಮನೆಗಳ ಹೊಗೆ
ಸದ್ದಿಲ್ಲದೆ ಒಲೆ ಹೊತ್ತಿಸದ ಮನೆಗಳ ಮುಚ್ಚಿಬಿಟ್ಟಿತು
ಕೆಂಡವಾದವನು
ಕ್ಷಣಕ್ಷಣವೂ ಬೂದಿಯಾಗುತ್ತಲೇ ಹೋಗುತ್ತಾನೆ
1
ನಿನ್ನ ಕಾಣಲೆಂದು ಎಷ್ಟು ದೂರ ನಡೆದನೆಂದು ಹಾಕಲಾರೆ ಲೆಕ್ಕ
ಭೂಮಿ ಕಂಡಿತೆಂದೇ ಹುಚ್ಚು ಮಳೆಹನಿ ಆಕಾಶದಿಂದ ಕೆಳಗುರುಳಿತು
ಈ ಕವಿತೆ ಎಂದೂ ಸೋಲಲ್ಲ
ಎಷ್ಟು ದಿನ ಉಳಿದರು ಸ್ಪರ್ಧಿಸಲು ಯಾರೊಂದಿಗೂ ಕಣಕ್ಕಿಳಿಯುವುದಿಲ್ಲ

ಭಾನುವಾರ, ಆಗಸ್ಟ್ 18, 2013

Kannada Lavani sahitya-Dr.Khade

 ವಿಶೇಷ ಲೇಖನ :

                                                   ಕನ್ನಡ ಲಾವಣಿ ಸಾಹಿತ್ಯ

                                                    -ಡಾ.ಪ್ರಕಾಶ ಗ.ಖಾಡೆ
       
     ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ‘ದಕ್ಷಿಣ ಮಹಾರಾಷ್ಟ್ರ’ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕ, ಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆ, ಡೋಲಕದ ತಾಳ ಹಿಡಿದು, ವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯ, ಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ.
   ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ, ವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.
ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ
 ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ.  ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಬಿsೀರತೆ, ಶೃಂಗಾರ, ಟೀಕೆ, ಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.
ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ
ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯ, ತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.
    ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲ, ಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮ, ಲಕ್ಷ್ಮಣ, ಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.
ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ
ಇಲ್ಲಿ ಬಳಸಿರುವ ಕಲ್ಲನಾಗರ, ಬರಿಗಾಲ, ಹುಣಚಿಬೀಜ, ಕಾರಿಕಾಯಿ, ಬಾರಿಕಾಯಿ ‘ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.
ಚರಿತ್ರೆ
 ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಪಿs್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾದಿsಕಾರ ವಹಿಸಿಕೊಂಡು ಕನ್ನಡ ಕಲಿತು, ಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆ, ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆ, ಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ‘ಕುಂಪಣಿ’ಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಪಿs್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ:
ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋದಿs ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
ಹುಲಕುಂದ ಲಾವಣಿಕಾರರು
  ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿsೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
   ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಬಿsೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಬಿsೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ  ಹೆಸರಾದರು.
     18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಡಿsಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ  ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ  ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ  ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
    ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
                                                       -ಡಾ.ಪ್ರಕಾಶ ಗ.ಖಾಡೆ
ವಿಳಾಸ: ಡಾ.ಪ್ರಕಾಶ ಗ.ಖಾಡೆ,ಸೆಕ್ಟರ್ ನಂ. 63,ನವನಗರ,ಬಾಗಲಕೋಟ  ,ಮೊ.9845500890

ಸೋಮವಾರ, ಆಗಸ್ಟ್ 12, 2013



          ಕನ್ನಡ ಸಾಹಿತ್ಯಕ್ಕೆ ಕಗ್ಗತ್ತಲ ಕಾಲವೊಂದಿತ್ತೆ ?

                          
                                                                 -ಡಾ.ಪ್ರಕಾಶ ಗ.ಖಾಡೆ
  
     (ಅಖಂಡ ಕರ್ನಾಟಕದ ಕನ್ನಡ ಸಾಹಿತ್ಯ ಸಮೃದ್ಧಿಯನ್ನು ಪರಿಗಣಿಸದೇ ,ಕೇವಲ ಮೈಸೂರು ಕರ್ನಾಟಕದ ಭಾಗದ ಸಾಹಿತ್ಯವನ್ನು ಮುಖ್ಯವಾಗಿಟ್ಟುಕೊಂಡು 17 ರಿಂದ 19 ನೆಯ ಶತಮಾನದ ಕಾಲವನ್ನು ಕನ್ನಡ ಸಾಹಿತ್ಯದ ಕಗ್ಗತ್ತಲ ಕಾಲವೆಂದು ಕರೆಯಲಾಯಿತು. ಆ ಕಾಲಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಕನ್ನಡ ಸಾಹಿತ್ಯ ರಚನೆಗಳನ್ನು ನಿರ್ಲಕ್ಷಿಸಲಾಯಿತು.ಅದರ ಒಟ್ಟು ಅಧ್ಯಯನ ನಡೆದರೆ ಖಂಡಿತ ‘ಕನ್ನಡ ದೇಸಿ ಸಾಹಿತ್ಯದ ಸುವರ್ಣಯುಗ’ವೆಂದು ಈ ಕಾಲವನ್ನು ಕರೆಯಬೇಕಾಗುತ್ತದೆ.) 

        ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಕನ್ನಡದಲ್ಲಿ ಸಾಹಿತ್ಯ ರಚನೆಯ ಕಗ್ಗತ್ತಲ ಕಾಲ ಎಂದು ಹೇಳಿಕೊಂಡು ಬರಲಾಯಿತು. ‘ಇಂಗ್ಲಿಷ್ ಗೀತಗಳು’ ತಲೆದೋರುವುದಕ್ಕೆ ಹಿಂದೆ ಕನ್ನಡ ಕವಿತೆಯ ಸ್ಥಿತಿ ಹೇಗಿತ್ತೆಂದು ಸ್ವಲ್ಪಮಟ್ಟಿಗೆ ನೆನೆದರೆ ಅದರ ಪ್ರಭಾವ ಚೆನ್ನಾಗಿ ಮನದಟ್ಟಾಗುತ್ತದೆ. ಕನ್ನಡದಲ್ಲಿ ಪ್ರೌಢಕಾವ್ಯ ರಚನೆ ಸುಮಾರು ಹದಿನೇಳುನೂರರ ವೇಳೆಗೆ ಚಿಕ್ಕದೇವರಾಯ ಒಡೆಯರ ಆಳ್ವಿಕೆಯ ಕೊನೆಯ ಹೊತ್ತಿಗೆ ನಿಂತು ಹೋಗಿತ್ತು. ಅಲ್ಲಿಂದ ಮುಂದೆ ದೌರ್ಬಲ್ಯ, ಅಸಾರತೆ, ಅನ್ಯಾಕ್ರಮಣ ಮೊದಲಾದವು ರಾಜಕೀಯ ಪ್ರಪಂಚದಲ್ಲಿ ಕಾಣಿಸಿಕೊಂಡಂತೆಯೇ ಸಾಹಿತ್ಯ ಪ್ರಪಂಚದಲ್ಲಿಯೂ ಕಾಣಿಸಿಕೊಂಡವು’ ಎಂಬುದು ತೀನಂಶ್ರೀ ಅವರ ಹೇಳಿಕೆ. ಹದಿನೆಂಟನೆಯ ಶತಮಾನದ ಸಾಹಿತ್ಯವು ಮುನ್ನಿನಷ್ಟು ಸತ್ವಪೂರ್ಣವಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ದೇಶದ ಸ್ಥಿತಿಗತಿಯೇ ಕಾರಣ. ಆ ಶತಮಾನದಲ್ಲಿ ಕರ್ನಾಟಕವನ್ನು ಬಲಿಷ್ಟÀವಾದ ರಾಜಮನೆತನವಾವುದೂ ಆಳುತ್ತಿರಲಿಲ್ಲ. ಸಾಲದಕ್ಕೆ ಪೇಶವೆ, ನಿಜಾಮ ಮುಂತಾದ ಅನ್ಯ ಭಾಷಿತರ ರಾಜಸತ್ತೆಯಲ್ಲಿ ಕನ್ನಡದ ಅನೇಕ ಪ್ರದೇಶಗಳು ಸಿಕ್ಕಿಕೊಂಡಿದ್ದವು. ಕವಿಬಳ್ಳಿಗಳಿಗೆ ಬಿದಿರಿನ ಹಂದರವನ್ನಾದರೂ ಒದಗಿಸಿದ್ದ ಮೈಸೂರಲ್ಲಿ ಚಿಕ್ಕದೇವರಾಯನ ಯೋಗ್ಯತೆಯುಳ್ಳ ಅರಸರು ಮುಂದಿನ ಒಂದು ಶತಮಾನದವರೆಗೆ ಯಾರೂ ಕಾಣಿಸಿಕೊಳ್ಳಲಿಲ್ಲ. ಹೈದರ, ಟಿಪ್ಪುಸುಲ್ತಾನರ ರಾಜ್ಯಭಾರದಲ್ಲಿ ನಡೆದ ಸಂಸ್ಕøತಿ ಸಂವರ್ಧನೆಯು ಹೇಳಿಕೊಳ್ಳುವಂತಹದೇನಲ್ಲ, ಎಂದು ಶ್ರೀನಿವಾಸ ಹಾವನೂರ ದಾಖಲಿಸುತ್ತಾರೆ.
    ಆದರೆ ಈ ಕಾಲಕ್ಕೆ ಇವೆಲ್ಲ ಸಾಹಿತ್ಯಿಕ ಚಟುವಟಿಕೆಗಳು ನಾಡಿನ ದಕ್ಷಿಣ ಭಾಗಕ್ಕೆ ಮೀಸಲಾಗಿದ್ದರೆ ಉತ್ತರದ ಆಗಿನ ನಿಜಾಮ ಕರ್ನಾಟಕದಲ್ಲಿ ಕೆಲವು ಪ್ರಸಿದ್ಧ ಹರಿದಾಸರು ಆಗಿ ಹೋದರು. ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮತ್ತು ಪ್ರಸನ್ನ ವೆಂಕಟದಾಸರು ಪ್ರಮುಖರು. ಇವರಲ್ಲಿ ಮೂವರು 18ನೆಯ ಶತಮಾನದಲ್ಲಿಯೇ ಬಾಳಿದವರು. ಪ್ರಸನ್ನ ವೆಂಕಟದಾಸರು, ವಿಜಯದಾಸರು, ಗೋಪಾಲದಾಸರು ಒಬ್ಬೊಬ್ಬರು ಮಹಾಮಹಿಮರು. ಇವರೆಲ್ಲರಲ್ಲಿ ಕವನ ಸ್ಪೂರ್ತಿಯು ಸಹಜವಾಗಿ ಹೊರಹೊಮ್ಮಿ ಸಾವಿರಾರು ಹಾಡುಗಳ ಸೃಷ್ಟಿಯಾಯಿತು. ಹಾಡು ಕೀರ್ತನೆಗಳಲ್ಲದೆ ಕಥನ ಕವನಗಳನ್ನು ರಚಿಸಿದವರಿದ್ದಾರೆ, ಬಯಲಾಟಗಳ ಪ್ರಸಂಗ ಪಠ್ಯಗಳನ್ನು ಕಟ್ಟಿದವರಿದ್ದಾರೆ. ಸಮಸ್ತ ದಾಸ ಪೀಳಿಗೆಯವರ ಅನೇಕ ಹಾಡುಗಳು ಈ ಮುನ್ನವೆ ಮುದ್ರಿತವಾಗಿ ಅವುಗಳ ಸಮೀಕ್ಷೆ ವಿಮರ್ಶೆಗಳು ನಡೆದು ಹೋಗಿದ್ದರೆ ಈ ಶತಮಾನವನ್ನು ಕತ್ತಲೆಯ ಕಾಲವೆಂದೂ ಯಾರೂ ಹೇಳುತ್ತಿರಲಿಲ್ಲ. ವಿಜಯದಾಸ, ಗೋಪಾಲದಾಸರ ಭಾವಪೂರ್ಣ ಸುಳಾದಿಗಳು ಮತ್ತು ಜಗನ್ನಾಥದಾಸರ ‘ಹರಿಕಥಾಮೃತಸಾರ’ ಇವುಗಳನ್ನು ಕನ್ನಡಕ್ಕೆ ನೀಡಿದ 18ನೆಯ ಶತಮಾನ ಅದೆಂತು ನಿಸ್ಸತ್ವವೆನಿಸಿತು? ಎಂಬ ಹಾವನೂರ ಅವರ ಮಾತುಗಳು ಕನ್ನಡವನ್ನು ಅಖಂಡವಾಗಿ ಕಾಣುವ ಮತ್ತು ಒಂದು ಭಾಗದ ಕೊಡುಗೆಯನ್ನು ಕತ್ತಲಲ್ಲಿಟ್ಟು ನೋಡುವ ತಿಳುವಳಿಕೆಗಳನ್ನು ಎಚ್ಚರಿಸಿದಂತಿದೆ. ಆದರೆ ಈ ತಿಳುವಳಿಕೆಗಳಿಗೆ ಉತ್ತರವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ನಡೆದ ಕನ್ನಡ ಕಾವ್ಯದ ದೇಸಿ ಕಾಣ್ಕೆಗಳನ್ನು ದಾಖಲಿಸುವುದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದೆ
    ಹೊಸಗನ್ನಡದ ಅರುಣೋದಯವನ್ನು ಗುರುತಿಸುವಾಗಲೂ ಜನಪದೀಯ ನೆಲೆಗಟ್ಟಿನಿಂದ ಬಂದ ಲಾವಣಿ, ತತ್ವಪದ, ಭಜನೆ ಮೊದಲಾದ ಕಾವ್ಯಗಳನ್ನು ಮತ್ತೆ ದೂರಸರಿಸಲಾಗಿರುವುದೂ ಒಂದು ದುರಂತವೆನಿಸುತ್ತದೆ. ‘ಹೊಸಗನ್ನಡದ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಬಿsಸಿ ಹಟ್ಟಿಯಂಗಡಿ ನಾರಾಯಣರಾಯರು, ಬಿ.ಎಂ.ಶ್ರೀ. ಅವರ ರಚನೆಗಳಿಂದ ಗುರುತಿಸುವುದು ನಮಗೆ ವಾಡಿಕೆಯಾಗಿದೆ. ಆದರೆ ವಾಸ್ತವವಾಗಿ ಹೊಸಗನ್ನಡದ ಅರುಣೋದಯವನ್ನು ತತ್ತ್ವಪದಗಳು ಮತ್ತು ತತ್ತ್ವಪದಕಾರರಿಂದಲೇ ಆರಂಬಿsಸಬೇಕಾಗಿದೆ. ಜನಪದ ಸಾಹಿತ್ಯವಾಗಲಿ, ವಚನ ಸಾಹಿತ್ಯವಾಗಲಿ ಪೂರ್ವಧ್ಯಾನಿತವಾದ ಅಥವಾ ಪ್ರe್ಞÁಪೂರ್ವಕವಾದ ಕಾವ್ಯಸೃಷ್ಟಿಯಲ್ಲ. ಇವರಾರಿಗೂ ತಮ್ಮ ರಚನೆಗಳು ಸಾಹಿತ್ಯವೆಂಬ ಭ್ರಮೆ ಇರಲಿಲ್ಲ. ವಚನಗಳು ಸೃಷ್ಟಿಯಾದ 500 ವರ್ಷಗಳ ನಂತರ ಅದಕ್ಕೆ ಸಾಹಿತ್ಯವೆಂಬ ಮನ್ನಣೆ ಲಬಿsಸಿದೆ. ಅಂತೆಯೇ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದ್ದಾಗ ಮೂಡಿ ಬಂದ ಕನ್ನಡದ ತತ್ವಪದಗಳು ಮತ್ತು ತತ್ವಪದಕಾರರು ಇದುವರೆಗೆ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಪ್ರತಿಷ್ಟಿತ ಗ್ರಂಥಗಳಲ್ಲಿ ಸ್ಥಾನಗಿಟ್ಟಿಸಿಲ್ಲದಿರುವುದು ಕಾಣುತ್ತೇವೆ.

  ಇಲ್ಲಿ ನಡೆದ ದೇಸಿ ಕಾವ್ಯ ಪ್ರಕ್ರಿಯೆಯು ತೀನಂಶ್ರೀ ಅವರ ಗಮನಕ್ಕೆ ಬಾರದೇ ಹೋಗಿರುವುದು ಈ ಕಾಲವನ್ನು ‘ಅಸಾರತೆ’ ಎಂದು ಸಾರಲಾಯಿತು. 18, 19ನೆಯ ಶತಮಾನಗಳು ಕನ್ನಡದಲ್ಲಿ ಅಪಾರ ಸಂಖ್ಯೆಯ ಕಥನಗೀತಗಳೂ, ಲಾವಣಿಗಳೂ, ಮಹಾಕಾವ್ಯಗಳೂ, ತತ್ವಪದಗಳೂ ರಚನೆಯಾದ ಕಾಲ ಎಂಬುದು ತೀನಂಶ್ರೀ ಅವರಿಗೆ ಯಾಕೆ ಹೊಳೆಯಲಿಲ್ಲವೊ? ಅವರ ಕಾಲಕ್ಕೆ ಅಂತಹ ಸಾಹಿತ್ಯ ಸಂಗ್ರಹವೂ ಆಗಿತ್ತು. ಸ್ವತಃ ಅವರೂ ಜನಪದ ಸಾಹಿತ್ಯದ ಮೇಲೆ ಬರವಣಿಗೆ ಮಾಡಿದವರಾಗಿದ್ದರು ಬಹಳ ಸರಳವಾಗಿ ಇದು ಶಿಷ್ಟ ಸಾಹಿತ್ಯ ಚರಿತ್ರೆಕಾರರ ಪೂರ್ವಗ್ರಹಿಕೆ, ಅನಾಮತ್ತಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕೃಷಿ ಮಾಡಲಾರಂಬಿsಸಿದ ಸಾಹಿತಿಗಳಿಗೆ, ವಿಚಾರವಂತರಿಗೆ ಸ್ಥಳೀಯವಾದ ಈ ಮೌಖಿಕ ಸಂಪ್ರದಾಯಗಳು ಮೈಲಿಗೆ ಎನಿಸಿದ್ದವು. ಇಂಗ್ಲಿಷಿನಲ್ಲಿ ವ್ಯವಹರಿಸುವುದೇ ಗೌರವ ಮತ್ತು ನಾಗರಿಕ ಲಕ್ಷಣ ಎನ್ನುವ ವಸಾಹತು ಪ್ರe್ಞÉ ಸ್ಥಳೀಯವಾದದ್ದನ್ನು ಉಪೇಕ್ಷೆಗೆ ಒಳಗಾಗುವಂತೆ ಮಾಡಿತು. ಇಂದಿನ ಸಂದರ್ಭದಲ್ಲಿ ನಿಂತು ಉಪಲಬ್ಧವಾಗುತ್ತಿರುವ ಸ್ಥಳೀಯ ಸಾಂಸ್ಕøತಿಕ ಆಕರಗಳ ಹಿನ್ನೆಲೆಯಲ್ಲಿ 18-19ನೆಯ ಶತಮಾನವನ್ನು ಪುನರಾವಲೋಕಿಸುವುದು ಜರೂರಾಗಿದೆ. ಹೀಗೆ ಬರಡು ಕಾಲವೆಂದು ಹೇಳಿಕೊಂಡು ಬರಲಾಗಿದ್ದ ಸಂದರ್ಭದಲ್ಲಿ ಇಲ್ಲಿ ಜನಪದ ನೆಲೆಗಟ್ಟಿನಲ್ಲಿ ಮೂಡಿಬಂದ ಸಾಹಿತ್ಯವನ್ನು ಒಪ್ಪಿಕೊಳ್ಳದೆ ಹಾಗೂ ಗುರುತಿಸಿ ಮನ್ನಣೆ ನೀಡದೆ ಹೋಗಲಾಯಿತು.
    ಈ ಅಪಾಯಕಾರಿ ಚಿಂತನಾ ಕ್ರಮಗಳು ಹುಟ್ಟುಹಾಕಿದ ಸಂದರ್ಭಗಳು ಒಟ್ಟು ಜನಪದರ ಕಾಣ್ಕೆಯನ್ನು ನಿರ್ಲಕ್ಷಿಸಿದವು. ದೇಶೀಯ ಕಾವ್ಯವನ್ನೂ ಕಟ್ಟಿದ ಯಾರೂ ಆಧುನಿಕ ಚಿಂತಕರಿಗೆ ಶ್ರೇಷ್ಟರಾಗಿ ಕಾಣಲಿಲ್ಲ. ಹೋಗಲಿ ಅವರ ಮೌಲ್ಯಯುತ ಸಾಧನೆಗೆ ತಕ್ಕುದಾದ ಗೌರವವನ್ನೂ ಕೊಡಲಿಲ್ಲ. ಅಸಾರತೆ ಮತ್ತು ಸ್ಥಗಿತಗೊಂಡ ಕಾಲವೆಂದು ಹೇಳುವ ಕಾಲಘಟ್ಟದಲ್ಲಿಯೇ ಇವರು ಹುಟ್ಟುಹಾಕಿದ ದೇಸೀತನ ತನ್ನ ಶ್ರೇಷ್ಟತೆಯನ್ನು ಕಾಯ್ದುಕೊಂಡಿತ್ತೆಂದೆ ಹೇಳಬೇಕು. ಯಾಕೆಂದರೆ ಈ ಕಾಲಘಟ್ಟದಲ್ಲಿಯೇ ಸಾಧು ಸಂತರು, ತತ್ವ್ನ್ತಪದಕಾರರು, ಬುಡಕಟ್ಟು ನಾಯಕರು, ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ, ಅದರ ಜೀವ ವಿರೋದಿs ನೆಲೆಗಳ ವಿರುದ್ಧ ತಮ್ಮ  ಅನುಭಾವಿಕ ನೆಲೆಯಿಂದ ಲೋಕಾನುಭವದಿಂದ ಖಂಡಿಸಿದವರು ಚಳುವಳಿ ಮಾಡಿದವರು. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದವರು. ಪ್ರಭುತ್ವ ವಿರೋದಿs ನೆಲೆಗಳನ್ನು ಎತ್ತಿ ಹಿಡಿದ ಇವರು ನವೋದಯ ಸಂದರ್ಭದ ಪ್ರಮುಖ ಧಾರ್ಮಿಕ ನಿಲುವಾದ ಧರ್ಮ ನಿರಪೇಕ್ಷಕ ನೆಲೆಗೆ ತಳಹದಿ ಹಾಕಿಕೊಟ್ಟವರು. ಈ ಸೆಳಕುಗಳು ಲಾವಣಿಕಾರರಿಗೂ ಪ್ರಮುಖ ಪ್ರೇರಣೆಯಾಗಿದ್ದವು. ಸ್ಥಳೀಯ ಚಾರಿತ್ರಿಕ ಹಾಗೂ ಸಾಂಸ್ಕøತಿಕ ಸಂಗತಿಗಳಿಗೆ ಮಹತ್ವಕೊಟ್ಟು ಜನರೊಡಲಿಂದ ಹುಟ್ಟಿಬಂದ ಸ್ವಾನುಭವಪ್ರಧಾನವಾದ ದೇಸಿ ಪರವಾಗಿ ಅರಳಿಕೊಂಡಿದ್ದ ಈ ನೀತಿ ಸಂಪ್ರದಾಯದಂಥ ಎಷ್ಟೊ ಸ್ಥಳೀಯ ಅಬಿsವ್ಯಕ್ತಿಗಳನ್ನು ಇಲ್ಲಿ ನಿರ್ಲಕ್ಷಿಸಲಾಯಿತು. ಪಾಶ್ಚಾತ್ಯ ಸಿದ್ಧಾಂತಗಳ ಮೇಲೆ ರೂಪುಗೊಂಡ ನವೋದಯ ಚಳುವಳಿಗಳು ಇಂಥ ದೇಸಿತನಗಳನ್ನು ಉಪೇಕ್ಷೆ ಮಾಡಿದವು. ಸಮಾಜಮುಖಿ ಚಲನೆಗಿಂತ ವ್ಯಕ್ತಿ ಕೇಂದ್ರಿತ ಚಿಂತನಾಕ್ರಮಕ್ಕೆ ಇಲ್ಲಿ ಪ್ರಾಧಾನ್ಯ ದೊರಕಿತು. ಹಳೆಯದೆಲ್ಲಾ                 ವಿಸ್ಮ್ನೃತಿಗೊಳಗಾಯಿತು ಎಂಬುದನ್ನು ಡಾ.ವೀರೇಶ ಬಡಿಗೇರ ಸ್ಪಷ್ಟವಾಗಿಯೇ ಗುರುತಿಸುತ್ತಾರೆ.
   ಹೀಗೆ ಲಾವಣಿ, ತತ್ತ್ವಪದ ಮೊದಲಾದ ಸ್ಥಳೀಯ ಕಾವ್ಯ ಪ್ರಕಾರಗಳು ಒಂದೆಡೆ ಈ ನೆಲೆಯಲ್ಲಿ ತಮ್ಮ ಅಸ್ತಿತ್ವ ರೂಪಿಸಿಕೊಳ್ಳುವ ಹೊತ್ತಿನಲ್ಲಿ ನಾವು ಯಾವುದನ್ನೂ ಆಧುನಿಕವೆಂದು ಕರೆದುಕೊಂಡು ಬಂದೆವೋ, ಅವು ಈ ನೆಲದ ಇಂಥ ಪ್ರೇರಣೆಗಳಿಂದ ಹೊರತಾಗಲಿಲ್ಲ. ಒಂದೆಡೆ ಪಶ್ಚಿಮದ ಕಾವ್ಯರೂಪಗಳಿಂದ ಪ್ರಭಾವಿತರಾಗಿ ಅವುಗಳಿಗೆ ಸಂವಾದಿಯಾಗಿ ಹೊಸ ರೂಪಗಳನ್ನು ಕನ್ನಡದಲ್ಲಿ ಆವಿಷ್ಕಾರಮಾಡುವ ಪ್ರಯತ್ನಗಳು ಅನುವಾದ, ರೂಪಾಂತರ, ಅಳವಡಿಕೆ ಇತ್ಯಾದಿಗಳ ಮೂಲಕ ಕೆಲವರಿಂದ ಪ್ರಾರಂಭವಾದರೂ ಈ ಹೊಸ ರೂಪಗಳ ಒಳಕ್ಕೆ ತುಂಬಿಕೊಳ್ಳಬೇಕಾದ ಹೂರಣ ಈ ನೆಲದ ಮಣ್ಣಿನಿಂದ ಬೆಳೆದುಕೊಂಡಿದ್ದೇ ಆಗಿರಬೇಕೆಂಬ ತಿಳಿವು ಇಂಥ ಹಿನ್ನೆಲೆಯಲ್ಲಿತ್ತೆಂಬುದು ಮಹತ್ವದ ಸಂಗತಿಯಾಗಿದೆ ಕನ್ನಡದಲ್ಲಿ ಕಾಲಕಾಲಕ್ಕೆ ಕಾಣಿಸಿಕೊಂಡ ಇಂಥ ಹೊಸ ರೂಪಗಳಿಗೆ ಜಾನಪದ ನೀಡಿದ ಪ್ರೇರಣೆ, ಪ್ರಭಾವಗಳು ಅದರ ಪ್ರಾಧಾನ್ಯವನ್ನು ಸಾರುತ್ತವೆ.
ಜನಪದ ಹಾಡು ಪರಂಪರೆಯಲ್ಲಿನ ಮೌಖಿಕ ಸೃಷ್ಟಿ ಕ್ರಿಯೆಯನ್ನು ಅಕ್ಷರ ಲೋಕಕ್ಕೆ ತಂದಾಗ ಅವುಗಳ ಪಠ್ಯೀಕರಣ ಜರುಗಿತು. ಸಂಗ್ರಹ, ಸಂಪಾದನೆಗಳು ನಡೆದಾಗ ಜನಪದ ಗೀತ ಪ್ರಕಾರಗಳು, ನಾಲಗೆಯಿಂದ ನಾಡವರಿಗೆ ಅಕ್ಷರ ರೂಪವಾಗಿ ಕಣ್ಣ ನೋಟಕ್ಕೆ ಸಿಕ್ಕಾಗ ಓದುವ, ಓದಿ ತಿಳಿದುಕೊಳ್ಳುವ ಬಗೆ ಸಾರ್ವತ್ರಿಕವಾಯಿತು. ಅವುಗಳ ಶ್ರೇಷ್ಟತೆಯ ಅರಿವಾಗತೊಡಗಿತು. ಹಳ್ಳಿಯ ಲಾವಣಿ ಸಾಂಗತ್ಯಗಳನ್ನು ಉತ್ಸಾಹ ಶಾಲಿಗಳು ಹೊಸದಾಗಿ ಕೂಡಿಸಿ ಪ್ರಕಟಿಸಿದಾಗಲೆಲ್ಲಾ ಸಾಹಿತ್ಯ ಬೆಳವಣಿಗೆಗೆ ಮಹೋಪಕಾರವಾಗಿದೆ. ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಈ ಬಗೆಯ ಕಾರ್ಯವು ಕವಿತೆಯ ಪುನರುಜ್ಜೀವನಕ್ಕೆ ಸಹಕಾರಿಯಾಯಿತು. ನಮ್ಮ ಸಾಹಿತ್ಯದಲ್ಲಿಯೂ ಅದಕ್ಕೆ ನಿದರ್ಶನವನ್ನು ಆಗಲೇ ಅಂಬಿಕಾತನಯದತ್ತರ ಪ್ರಣಯ ಗೀತೆಗಳಲ್ಲಿ ಗುರುತಿಸಬಹುದು. ಜನಪದ ಸಾಹಿತ್ಯದ ಸಂಗ್ರಹ, ಪ್ರಕಟಣ ಕಾರ್ಯಗಳಲ್ಲಿ ಧಾರವಾಡ ಗೆಳೆಯರ ಗುಂಪಿನ ಈ ಕವಿಗಳು ಹಳ್ಳಿಯ ಪದಗಳ ಜೀವಾಳವನ್ನು ಚೆನ್ನಾಗಿ ಹೀರಿ, ಅದನ್ನೇ ತಮ್ಮ ವಾಣಿಯಲ್ಲಿ ಆಡಿಸುತ್ತಿರುವುದು ಆಶ್ಚರ್ಯವೇನೂ ಅಲ್ಲ ಎಂಬುದನ್ನೇ ಮುಂದೆ ತೀನಂಶ್ರೀ ಅವರೇ ನಿರೂಪಿಸಬೇಕಾಯಿತು.
   ಒಟ್ಟು ಈ ಚಿಂತನೆಗಳು ಕನ್ನಡ ಕಾವ್ಯ ಪಡೆದುಕೊಂಡು ಬಂದ ಪ್ರೇರಣೆ, ಪ್ರಭಾವಗಳಿಗೆ ಒಟ್ಟು ದೇಶೀಯ ಕಾಣ್ಕೆಯನ್ನು ದೂರವಿಟ್ಟು ನೋಡದೆ, ಅದರ ಒಳಗಡೆಯೇ ನಡೆಯುತ್ತಿದ್ದ ಈ ಚಲನಶೀಲತೆಯನ್ನು ಕಾವ್ಯದ ಜೀವಂತಿಕೆಗೆ ಕಾರಣವಾದ ಸಂದರ್ಭಗಳನ್ನು ಪುಷ್ಟೀಕರಿಸಿದಂತಾಗುತ್ತದೆ. “ವಸಾಹತೀಕರಣಗೊಂಡ ದೇಶಗಳಲ್ಲಿ ವಿಜೇತರ ಸಂಸ್ಕøತಿಯ ಮಾದರಿಗಳು ವಿವೇಚನೆಯಿಲ್ಲದೆ ಪಡೆಯುವಂತೆ ಸಾಹಿತ್ಯ ತತ್ವಗಳನ್ನು ಪಡೆದುಕೊಂಡಾಗ ನಿರ್ಮಾಣಗೊಳ್ಳುವ ಅತಂತ್ರಭಾವನೆಯೇ ದೇಸಿವಾದದ ಒಲವಿಗೆ ಕಾರಣವಾಗಿದೆ. ಕನ್ನಡ ನವೋದಯದ ಕೂಸನ್ನು ಶೆಲ್ಲಿ, ವಡ್ಸ್‍ವರ್ತ್, ಬ್ರಾಡ್ಲೆಯರ ಸಾಹಿತ್ಯ ತತ್ವಗಳ ತೊಟ್ಟಿಲು ಪೆÇರೆಯಿತು” ಎಂದು ಹೇಳುವ ರಹಮತ್ ತರೀಕೆರೆ  ಅವರು “ಆದರೂ ನವೋದಯದ ಬರಹಗಾರರು ದೇಸಿ ಪರಂಪರೆಯ ಹೊಕ್ಕಳು ಬಳ್ಳಿಯನ್ನು ಕತ್ತರಿಸಿಕೊಂಡಿರಲಿಲ್ಲ” ಎನ್ನುವಲ್ಲಿ ನವೋದಯಕ್ಕೆ ಜೀವ ಚೇತನವನ್ನು ದೇಸಿಯತೆಯೇ ನೀಡಿತೆನ್ನುವುದನ್ನು ಪ್ರಧಾನವಾಗಿ ಪ್ರಮಾಣಿಕರಿಸುವುದಿದೆ.
    ಹೀಗೆ ನಮ್ಮ ಕವಿಗಳು ಜನಪದದತ್ತ ಕಾವ್ಯ ಸಂವಹವನ್ನು ವಿಸ್ತರಿಸಿಕೊಂಡ ನೆಲೆಗಳು ಹುಟ್ಟುಹಾಕಿದ ಕೊಡುಗೆಗಳು ಇಲ್ಲಿ ಜನಪರವಾದದ್ದು ಜನಪದದ ಮಹತ್ವ ಸಾರುತ್ತವೆ. ಒಬ್ಬ ಕವಿಯ ಅಥವಾ ಆ ಕಾಲದ ಕವಿಗಳ ಸಾಹಿತ್ಯ ದೇಸಿಯವಾಗುವುದು ಎಂದರೆ ಕವಿ ತಾನು ಬೆಳೆದು ಬಂದ ಸಮಾಜ, ಸಂಸ್ಕøತಿ, ಪರಂಪರೆಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು, ಅವುಗಳೊಂದಿಗೆ ಆತ್ಮೀಯವಾದ ಸೃಜನಶೀಲ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು, ನಮ್ಮ ಸಾಹಿತ್ಯದ ಪಾಶ್ಚಾತ್ಯೀಕರಣದ ತೀವ್ರತೆಯ ಬಗ್ಗೆ ಎಚ್ಚರವಹಿಸುವುದು, ನಮ್ಮ ಪರಂಪರೆಯಲ್ಲಿಯ ಜೀವಂತಿಕೆಯು, ಅರ್ಥಪೂರ್ಣವೂ ಆದ ನೆಲೆಗಳನ್ನು ಉಳಿಸಿಕೊಂಡು ಅವುಗಳನ್ನು ಇಂದಿನ ಅಗತ್ಯತೆಗೆ ತಕ್ಕಂತೆ ಹೊಸ ರೀತಿಯಲ್ಲಿ ಹೊಸ ಅರ್ಥಕ್ಕಾಗಿ ಬಳಸಿ, ಬೆಳೆಸಿ ಭಾರತೀಯವಾಗಿ ವಿಶಿಷ್ಟವಾದ ಸಾಹಿತ್ಯ ಪರಂಪರೆಯೊಂದನ್ನು ನಿರ್ಮಿಸುವುದು. ಕನ್ನಡ ನವೋದಯ ಕಾವ್ಯ ಈ ಕಾರ್ಯವನ್ನು ತುಂಬಾ ಎಚ್ಚರದಿಂದಲೇ ಮಾಡಿತು.
  ಕನ್ನಡ ನವೋದಯ ಕಾವ್ಯ ರೂಪ ತಾಳುವ ಹೊತ್ತಿನಲ್ಲಿ ಎರಡು ಸಂಸ್ಕøತಿಗಳು ಮುಖಾಮುಖಿಯಾದದ್ದರ ಪರಿಣಾಮಗಳನ್ನು ಎದುರಿಸಬೇಕಾಯಿತು. ತನ್ನದು, ತಾನು ಎಂದು ಅನುಭವವಾಗುತ್ತಿದ್ದ ಕಾಲದಲ್ಲಿ, ಬೇರೊಂದು ದೇಶವು ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಾವು ಗುಲಾಮರಾದುದರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದ ಕಾಲದಲ್ಲಿ ಎರಡೂ ಏಕಕಾಲಕ್ಕೆ ಭಾರತದಲ್ಲಿ ಸಂಭವಿಸಿದವು. ಕನ್ನಡಿಗರ ಮಟ್ಟಿಗೆ ಇವೆರಡನ್ನೂ ಸಾಹಿತ್ಯದಲ್ಲಿ ಸ್ವೀಕರಿಸಿ ಬದುಕಿನ ಸಂದರ್ಭದಲ್ಲಿಟ್ಟುಕೊಂಡ ಸಾಧನೆ ನವೋದಯ ಸಾಹಿತ್ಯದ್ದು ಅಲ್ಲದೆ ಹಳೆಯದರಲ್ಲಿ ಹೊಸದನ್ನು ಒಂದುಗೂಡಿಸಿಕೊಂಡು ಹಿತಮಿತವಾದ ಹೊಸತನವನ್ನು ಸಾದಿsಸಬೇಕು ಎಂಬ ಸಮದೃಷ್ಟಿಯೂ ಈ ಸಾಹಿತ್ಯಕ್ಕೆ ಬಂದಿತು. ಕನ್ನಡ ಸಂಸ್ಕøತಿಯ ಉತ್ತಮಾಂಶಗಳಲ್ಲಿ ಸಾವಿರಾರು ವರ್ಷಗಳಿಂದ ಈ ದೃಷ್ಟಿ ಬೆಳೆದು ಬಂದಿತ್ತು. ಹೊಸತನ ಅತಿರೇಕಗಳಿಗೆ ಇದು ಬಹುಮಟ್ಟಿಗೆ ಕಡಿವಾಣಹಾಕಿತು. ಹೀಗೆ ಹೊರಗಿನ ಪ್ರಭಾವಗಳಿಗೆ ಒಳಗಿನ ಪ್ರೇರಣೆ ಮತ್ತು ಪರಂಪರೆಯಿಂದ ಬಂದ ಸಮನ್ವಯ ದೃಷ್ಟಿ ಇವು ಕೂಡಿಕೊಂಡು ಹೊಸಗನ್ನಡ ಸಾಹಿತ್ಯದ ಜನನಕ್ಕೆ ಕಾರಣವಾದವು. ಬರಿ ಹೊರಗಿನ ಪ್ರಭಾವಗಳಿಂದಲೇ ಹೊಸ ಸಾಹಿತ್ಯವು ಹುಟ್ಟಿತೆನ್ನುವುದು ಪೂರ್ಣಸತ್ಯವಲ್ಲ ಎಂಬುದು ರಂ.ಶ್ರೀ.ಮುಗಳಿ ಅವರ ಅಬಿsಮತ. ನವೋದಯ ಕಾವ್ಯ ಈ ನೆಲದ ಒಳಗಿನ ಜೀವಸತ್ವ ಪಡೆದುಕೊಂಡು ರೂಪ ತಾಳುವ ಸಂದರ್ಭ ವಸಾಹತುಶಾಹಿಯ ಪ್ರಭಾವಿ ಅನುಕರಣೆ ಒಂದು ಬಗೆಯ ಸಂಕರಸೃಷ್ಟಿಗೆ ಕಾರಣವಾದುದ್ದನ್ನು ಸಾರುತ್ತದೆ.
   ಒಟ್ಟಾರೆ ಹೊಸಗನ್ನಡ ಕಾವ್ಯ ಹಂತ ಹಂತದಲ್ಲೂ ಪಾಶ್ಚಾತ್ಯ ಪ್ರೇರಣೆಯಿಂದಲೇ ಹೊಸ ರೂಪಗಳನ್ನು ಆವಿಷ್ಕಾರಗೊಳಿಸಿಕೊಂಡಿತೆನ್ನುವುದನ್ನು ಬದಿಗಿಟ್ಟು ಇಲ್ಲಿ ಮೂಡಿದ ಹಲವು ನೆಲೆಗಳಲ್ಲಿ ನಡೆದ ಪ್ರಯೋಗಗಳು ಮುಖ್ಯವಾಗಬೇಕಿದೆ. ಸ್ಥಳೀಯ ಕಾವ್ಯ ಸಂವಹನ ಉಂಟುಮಾಡಿದ ಜಾಗೃತಿಯ ಕಾರಣವಾಗಿ ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಒಳಗಡೆ ನಡೆದ ಹೊಸ ಸಂಸ್ಕøತಿಯ ಬೇರಿನಾಳಕ್ಕೆ ಇಳಿದ ದೇಸಿ ಸಂಸ್ಕøತಿಯ ಜೀವರಸ ಒಟ್ಟು ಚೇತನಕ್ಕೆ ಕಾರಣವಾಯಿತು. ಹಾಗಾಗಿ ಹೊಸತನದ ವೈಭವೀಕರಣದಲ್ಲಿ ಕಾರಣವಾದ ಸ್ಥಳೀಯ ಕಾವ್ಯ ಪ್ರಕಾರಗಳನ್ನು ನಿರ್ಲಕ್ಷಿಸದೆ ಪ್ರಧಾನ ಆಕರವಾಗಿ ಕಾಣುವ ಮತ್ತು ಗುರುತಿಸಿ ಪ್ರಕಟಪಡಿಸುವ ಜವಾಬ್ದಾರಿಯೊಂದಿಗೆ ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ.   –ಡಾ.ಪ್ರಕಾಶ ಗ.ಖಾಡೆ

  ವಿಳಾಸ : ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890
                               



ಸೋಮವಾರ, ಜುಲೈ 29, 2013

ಕವಿತೆ :ವಿದ್ಯಾ ಕುಂದರಗಿ

                                   ಭಾವಬದಲಿಸುವಹೊತ್ತು
 

                                       - ವಿದ್ಯಾ ಕುಂದರಗಿ
ಹಗಲು ಬೆಳಗನುಂಡು
ಇರುಳು ಮೋದವನುಂಡು
ಹುಣ್ಣಿಮೆಯಲಿ ತಿಂಗಳ ಕುಡಿದು
ಕಾರ್ಗತ್ತಲಲಿ ಅಂತರಾಳಕ್ಕಿಳಿದು
ಅರುಣನೊಂದಿಗೆ ಬೆಂದು
ವರುಣನೊಂದಿಗೆ ಚಿಗುರಿದರೂ 
ಬಿಸಿಲಿಗೆ ತಡವಿಲ್ಲದೆ ಧೂಳಾಗುವ
ಮಳೆಗೆ ತಡವಿಲ್ಲದೆ ರಾಡಿಗೊಳ್ಳುವ
ಇವಳಿಗೆ
ಬಿಸಿಲಿಗೆ ಪ್ರಾಣದುಸಿರಾಗುವ
ಮಳೆಗೆ ಹಚ್ಚಹಚ್ಚಡವಾಗುವ
ನಮ್ಯತೆ ಬೇರೆ

ಭೂರಮೆಯ ರಾಗಕ್ಕೆ
ಸೂರ್ಯನ ಪಲ್ಲವಿ
ಚಂದ್ರನ ಅನುಪಲ್ಲವಿ

19-07-2013 *


ಶುಕ್ರವಾರ, ಜುಲೈ 19, 2013

ಮುಧೋಳ ಮಳೆ..

ಮುಧೋಳ ಮಳೆ : ಹನಿಗಳ ಆಭರಣ

ಡಾ.ಶಿವಾನಂದ ಕುಬಸದ. 

     ನಮ್ಮಲ್ಲಿ ಮಳೆಯಾದರೂ ಸುದ್ದಿಯೇ...ಅದೂ ಮಳೆಗಾಲದಲ್ಲಿ ಆದರೂ ಕೂಡ! ಅಚ್ಚ ಕಪ್ಪು ಮೋಡಗಳು ಸುಳಿದಾಡುತ್ತಿದ್ದು ಅನೇಕ ದಿನಗಳಾದವು. ಮಳೆಯೇ ಇಲ್ಲ. ಅದರಿಂದಾದ ಒಂದೇ ಪರಿಣಾಮವೆಂದರೆ ಸೋಲಾರ್ ದಲ್ಲಿ ನೀರು ಕಾಯುವುದಿಲ್ಲ..! ಪುಣ್ಯಕ್ಕೆ ಬೆಳಗಾವಿಯಲ್ಲೋ ಮಹಾರಾಷ್ಟ್ರದಲ್ಲೋ ಮಳೆಸುರಿದು ನಮ್ಮ “ಘಟಪ್ರಭೆ” ಒಂದಿಷ್ಟು ನೀರು ಹೊತ್ತು ತಂದು ನಮ್ಮ ನೆಲವನ್ನು ಹಸಿರಾಗಿಸುತ್ತಾಳೆ. ನಾವು ಯದ್ವಾ ತದ್ವಾ ನೀರುಣಿಸಿ ನಮ್ಮ ಹೊಲಗಳನ್ನು ಜೌಗಾಗಿಸಿ, “ಸವುಳು-ಜವುಳು” ಕಾರ್ಯಕ್ರಮಕ್ಕೆ ಗಂಟು ಬೀಳುತ್ತೇವೆ...!!


ಇಂದು ಮಧ್ಯಾಹ್ನ ಸಣ್ಣಗೆ ಮಳೆ ಸುರಿದಾಗ ನಮ್ಮ ಮನೆಯದುರಿನ ತೂಗುಕುರ್ಚಿಯಲ್ಲಿ ಕುಂತು ಅದನ್ನು ನೋಡಿದ್ದೇ ಒಂದು ಅದ್ಭುತ ಅನುಭವ. ಸೃಷ್ಟಿಯ ಮಾಯೆಯೇ ಅಂಥದು.. ಸಣ್ಣಗೆ ಸುರಿದ ಮಳೆಯ ಹನಿಗಳನ್ನು ಗಿಡದ ಎಲೆಗಳು ಧರಿಸಿ, ಆಮೇಲೆ ಸ್ವಲ್ಪವೇ ಬಾಗಿ, ಹನಿಗಳು ಧೊಪ್ಪನೆ ಬಿದ್ದು ಪೆಟ್ಟಾಗಬಾರದೆಂದು ಪ್ರೀತಿಯಿಂದ ನೆಲಕ್ಕಿಳಿಸುವ ಪರಿಯ ಕಂಡು ಸೋಜಿಗ ನನಗೆ. ಹೂವುಗಳೆಲ್ಲ ತೃಪ್ತಿಯಿಂದ ಮುಖವರಳಿಸಿ ಕಣ್ಣು ಹಿಗ್ಗಿಸಿ ಮಳೆಯನ್ನು ಇಳೆಗೆ ಬರಮಾಡಿಕೊಳ್ಳುತ್ತಿರುವ೦ತೆ ಕಾಣುತ್ತಿದ್ದವು. ಹುಲ್ಲುಹಾಸು ಹುರುಪುಗೊಂಡು ಹನಿಗಳ ಆಭರಣ ಧರಿಸಲು ಸಜ್ಜಾಗಿ ನಿಂತಿತ್ತು.

ಇಂಥ ದೃಶ್ಯ ನಮಗೊದಗುವುದೇ ಅಪರೂಪ. ಮಳೆ ಬರುವಾಗ ಒಂದೋ ನಾವು ರಾತ್ರಿಯ ನಿದ್ದೆಯಲ್ಲಿರುತ್ತೇವೆ. ಬೆಳಗಾಗೆದ್ದು ರಸ್ತೆ ರಾಡಿಯಾದಾಗಲೇ ಗೊತ್ತು ಮೋಡಗಳು ಕರಗಿದ್ದವೆನ್ನುವುದು. ಸೋಮಾರಿ ಮನಸ್ಸು ಖುಷಿ ಪಡುತ್ತಿರುತ್ತದೆ, “ಇವತ್ತು ವಾಕಿಂಗ್ ಇಲ್ಲ” ಎಂದು..! ಇಲ್ಲವೇ ಮಧ್ಯಾಹ್ನದ ರೋಗಿಗಳ ಮಧ್ಯೆ ಮಳೆ ನೋಡುವದಂತೂ ದೂರ ಬಂದ ಅತಿಥಿಗಳನ್ನು ಮಾತಾಡಿಸುವುದೂ ಅಸಾಧ್ಯ.

ಇಂದು ‘’ಅಷಾಢ ಏಕಾದಶಿ’’ ಪೇಷಂಟ ಕಡಿಮೆ. ಹೀಗಾಗಿ ಈ ಭಾಗ್ಯ ಒದಗಿ ಬಂತು..!!

ಭಾನುವಾರ, ಜುಲೈ 14, 2013

ಹನಿಗವಿತೆಗಳು

ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ

***
ಈ ಪ್ರೀತಿ
ಜಗದ ರೀತಿ
ಎಲ್ಲಕ್ಕೂ ಒಂದು ನೀತಿ
ಆದರೂ ಸದಾ
ಜೊತೆಯಲ್ಲೇ
ಇರುತ್ತದೆ ಒಂದು ಭೀತಿ
- ಡಾ.ಪ್ರಕಾಶ ಗ. ಖಾಡೆ

***

ನಮಗೆ ಮಾತ್ರ
ಒಂದು ಕಟ್ಟು ಕಟ್ಟಳೆ
ಎಲ್ಲಿದೆ ಹೇಳಿ
ಹಾರುವ ಹಕ್ಕಿಗೆ
ಬೆಳೆವ ಪೈರಿಗೆ
ಜಗದಗಲದ ವಿಸ್ತಾರದ ಹೆರಿಗೆ

- ಡಾ.ಪ್ರಕಾಶ ಗ. ಖಾಡೆ
***
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಂದ

- ಡಾ.ಪ್ರಕಾಶ ಗ. ಖಾಡೆ

ಶನಿವಾರ, ಜುಲೈ 13, 2013

ಹನಿಗವಿತೆ :ಗುರುನಾಥ ಬೋರಗಿ


ಹನಿಗವಿತೆ

ವಿರಹಿ,ನಾನೊಬ್ಬನೇ
ಅಲ್ಲ ಗೆಳತೀ...
ತೀರ ತಬ್ಬಿಕೊಳ್ಳುವ
ಹಂಬಲ,
ಕಡಲ ಅಲೆಗಳಿಗೂ ಇದೆ
-ಗುರುನಾಥ ಬೋರಗಿ

ಕವಿತೆ :ಸುರೇಶ ಎಲ್.ರಾಜಮಾನೆ,ಮುಧೋಳ.

ಮಳೆ ಹಾಡು ಪಾಡು
- ಸುರೇಶ ಎಲ್.ರಾಜಮಾನೆ

ಮಳಿ ಬಂತು ಬಾಳ ಜೋರ
 ನಾನಾವಾಗ
ಹದಿನಾರ ವರ್ಷದ ಪೋರ
 ಶಾಲಿಗಿ ಹೋಗಿದ್ದೆ
ಎಂಟು ಕಿಲೋಮಿಟರ್ ದೂರ
 ಸೈಕಲ್ ಮ್ಯಾಲೆ ನಾ ಸಾಹುಕಾರ


ದಾರಿಯೊಳಗ
ಮುಂದಿನ ಗಾಲಿ ಪಂಚರ್
 ಬರ ಬರ ಬನ್ನಿ
ಅಲ್ಲೊಂದಿತ್ತು ಹುಂಚಿ ಮರ
 ಅಲ್ಲೆ ನಿಂತನಿ ಮತ್ತ ಶುರುವಾತು
ಮಳಿಕಿಂತ
ಗಿಡದ ಮ್ಯಾಲಿನ ಹನಿಗೋಳ ಕಾರಬಾರ

ಬ್ಯಾಡ ಅಂದಾವ್ನ
ಹೊಂಟ್ನಿ ಹಂಗ ಮಳ್ಯಾಗ
 ಮನಿಗಿ ಹೋಗಿ ನೋಡಿದ್ರ ಹೊಳಿ
ನಮ್ ಗುಡಸಲಿನ್ಯಾಗ
ಹಾದ ಹೋದಂಗಾಗಿತ್ತು
 ಅಡಿಗಿ ಮನ್ಯಾಗ ಗಡಿಗೀಲೆ ನೀರ ಎತ್ತಿ ಹಾಕಾಕ
 ತೋಡಿದಂಗಿತ್ತು ಒಂದ ಬಾವಿ

ಅಪ್ಪ
ದನಗೋಳ ಗುಡಸಲಿನ್ಯಾಗ ಜೋತ ಬಿದ್ದರೋ
ಕಟ್ಟಿಗಿ ಕಂಬಕ್ಕೊಂದ
ಕಟ್ಟಿಗಿ ಆಸರ ಕೊಡ್ತಿದ್ದ

ಅವ್ವ
ಅಜ್ಜಿ ಹೊಲದಿದ್ದ ಕೌದಿಯೊಳಗ
 ಕಟ್ಟ ಇಟ್ಟಿದ್ದ ಸ್ವೇಟರ್ ಹಾಕೊಂಡು
 ಕಡ್ಲಿ ಹುರಿತಿದ್ಲು
ಆ ಜಳ ಬಿಸಿ ಪರಿಮಳ

ಹಾಸಿಗಿಯೊಳಗ ನಾ
ನನಗೆರಡು ಅಂಗಿ
 ಮೊಳಕಾಲ್ನ ಮುಖಕ್ಕ ಹತ್ತುವಂಗ ಜಗ್ಗಿ
ಮುಖ ಅಷ್ಟ
 ಹೊರಗ ಹಾಕಿದರ ಸಿಡಿಲಿನ ಶಬ್ದ
ಮತ್ತ ಮಗ್ಗಲ ಮನಿ
 ತಗಡು ಗಡ ಗಡ ಸೌಂಡ ಮಾಡ್ತಿತ್ತು

ಒಳಗೊಳಗ ಖುಷಿ ನಮ್ದು ಬಿಲ್ಡಿಂಗ್ ಇಲ್ಲ
ಬಿದ್ರ ಸಾಯುದಿಲ್ಲ; ಆದರೂ
ಗುಡಿಸಲ ತಟ್ಟಿ ಗಟ್ಟಿಲ್ಲ ಅಂತ
ಮನಸಿಗಿ ಬ್ಯಾಸರ
 ಮನಸಿನ್ಯಾಗ ನೆನೆದ ನೆನಪು
 ಅಯ್ಯೋ! ದೇವ್ರ
ಯಾವಾಗ ಬರತಾನಪ್ಪ ಸೂರ್ಯ ....||

=ಸುರೇಶ್.ಎಲ್.ರಾಜಮಾನೆ(ಸೂರ್ಯ*), ರನ್ನಬೆಳಗಲಿ.
  ತಾ|| ಮುಧೋಳ ಜಿ|| ಬಾಗಲಕೋಟ

ಶುಕ್ರವಾರ, ಜುಲೈ 12, 2013

ಕವಿತೆಗಳು :ವಿದ್ಯಾ ಕುಂದರಗಿ

ಕಡಲ ದಂಡೆಯಲ್ಲಿ

ಭಾವಕಡಲ ದಂಡೆಯಲ್ಲಿ
ಅವಿಶ್ರಾಂತ ಅಲೆಗಳು
ಮರಳ ಹಾಸಿನ ಮೇಲೆ
ಕ್ಷಣ ನಿಲ್ಲದ ಚೆಲ್ಲಾಟ,

ಬಂಧ ಸಂಬಂಧವೇನೋ.....
ಒಂದರಂತಿನ್ನೊಂದು,
ಒಂದರೊಳಗೊಂದು........
ಮತ್ತೊಂದು, ಮಗದೊಂದು.........
ಒಂದAರ್ಹಿಂದೊಂದು ಬೆಂಬಿಡದ
ನಿತ್ಯ ನಿರಂತರ ಓಟ

ಎಲ್ಲಿಯೂ ತಪ್ಪದ ತಾಳ,
ನೀರ ಮುಸುಕಿನ ಒಳಗೆ
ಉಸುಕಿನೊಂದಿಗಿನ ಮೇಳ,

ನೂರು ಮುತ್ತುಗಳ ಒಡಲು
ನದಿಗಳೊಂದಿಗೆ ನಡೆದು ಬಂದ
ಸಾವಿರ ಜೀವಗಳಿಗೆ ಮಡಿಲು,

ದಣಿವಿಲ್ಲ, ದಾವಂತವಿಲ್ಲ......
ಎಂದಿಗೂ ನಿಲ್ಲುವುದಿಲ್ಲ
ಮೈಯನೆಂದೂ ಮರೆಯುವುದಿಲ್ಲ
ಸತತ ಸಂಗ ತೊರೆಯುವುದಿಲ್ಲ,

ಅಂತಸ್ಪುರಣದ ಒಡಲತಂತಿಗೆ
ಸೋಲನರಿಯದ ಮಿಡಿತ........
ಯಾವ ಜನುಮದ ತೀರವೋ
ನಿಲ್ಲಲಾರದ ತುಡಿತ.
                     - ವಿದ್ಯಾ  ಕುಂದರಗಿ.    
          

ಬಿಸಿಲ ಬೆಳಗಿನ ಸಡಗರ

ಇಂದು ಮಳೆಗೆ ರಜೆ 
ಬಿಸಿಲ ಬೆಳಗಿನ ಸಡಗರ 
ಸ್ವಾತಂತ್ರ್ಯ ಸಾರುವ 
ಗುಬ್ಬಚ್ಚಿ ಹಿಂಡು 
ಬೆಳಗಿನ ಬೆಡಗು 
ಹೊತ್ತು ತಂದಂತೆ

      ಇಬ್ಬನಿ

ಮುಸುಕು ಹಾಕಿದ ಪುಷ್ಪ 
ಮುಖ ತೆರೆದು, ನಸುನಾಚಿ 
ಕೈ ಮಾಡಿ ಕರೆದಂತೆ   
ನವೀರು ಬಣ್ಣಗಳ ಬೀರಿ 
ಹಾರಿ ಬರುವ ದುಂಬಿಪತಂಗ
ಪ್ರಣಯ ಪಯಣಕ್ಕೆ ಸಿದ್ದವಾದಂತೆ

. ಹೂ ಪತ್ರದ ಕೆಳಗೆ ....
 ಕ್ರೀಮಿಕೀಟಗಳ ಕಿಟಲೆ .................. 
ಮೆಲ್ಲನೆ ಸೂಯುವ ಗಾಳಿ
ಕಿವಿಯಲ್ಲಿ ಕಿಲಕಿಲ ನಕ್ಕಂತೆ......
ತಲೆದೂಗುತ್ತವೆ ಗಿಡ ಬಳ್ಳಿಗಳು 
ನೆರೆಹೊರೆಯು ಮಾತನಾಡಿಕೊಂಡಂತೆ............
ಬಿಸಿಲ ಬೆಳಗಿನ ಹೊಳೆತಕ್ಕೆ
ಟೊಂಗೆಟಿಸಿಲುಗಳು ತೂಗಿ
ಸಂದುಸಂದುಗಳು ಚಿಗುರೊಡೆದಂತೆ
ನಿನ್ನೆವರೆಗೆ ಜಡಿದ ಮಳೆಯಲ್ಲಿ
ತೊಪ್ಪೆಯಾದ ಭಾವಗಳು
ಹಸಿಯನುಂಡು ಹಚ್ಚಗಾದಂತೆ
ಬೆಚ್ಚಗಿನ ಬಂಧದಲಿ 
ಉಸಿರ ಬಿಸಿ ತಣ್ಣಗಾದಂತೆ
ಮತ್ತೆ ಮಳೆಯನ್ನು 
ಒತ್ತಾಯದಿಂದ ಕರೆತಂದು
ದಂದುಗಕ್ಕೆ ಹಾಜರಾದಂತೆ.

•ವಿದ್ಯಾ ಕುಂದರಗಿ

ಗುರುವಾರ, ಜುಲೈ 11, 2013

ವಿದ್ಯಾ ಕುಂದರಗಿಯವರ ಕವಿತೆಗಳು

 ಬೆಳೆಯುವ ಭೂಮಿಯಾದವರು
  -ವಿದ್ಯಾ ಕುಂದರಗಿ

ಈ ಭುವಿಯಲ್ಲಿ
ಹಸಿರೊಂದೇ ಬೆಳೆಯುವುದಿಲ್ಲ.....
ಹಸಿವೂ ಬೆಳೆಯುತ್ತದೆ.
ಮಾವೋಂದೆ ಚಿಗುರುವುದಿಲ್ಲ.....
ಬೇವೂ ಚಿಗುರುತ್ತದೆ.
ಕೋಗಿಲೆಯೊಂದೇ ಕೂಗುವುದಿಲ್ಲ......
ಕಾಗೆ ಗೂಬೆಗಳು ಆಲಾಪಿಸುತ್ತವೆ.
ಬೆಳದಿಂಗಳಷ್ಟೇ ಬೀರುವುದಿಲ್ಲ......
ಬಿಸಿಲೂ ರಣಗುಡುತ್ತದೆ.

ಜಡಿ ಮಳೆ ಇಂಗಿ ಹೋಗಿ
ತಂಪು ಮಾತ್ರ ಉಳಿಯುವುದಿಲ್ಲ......
ಊರಿದ ಹೆಜ್ಜೆ ಕಿತ್ತೆಳಿಸಲು
ಕಸರತ್ತು ಬಯಸುವ
ಕೆಸರೂ ಉಳಿಯುತ್ತದೆ.

ಸಹಿಸಿ ಬದುಕುವ ಜನರಿದ್ದಾರೆ
ಬಿಸಿಲ ಚರ್ಮದಲೂ
ಶುಭ್ರ ಹೃದಯವಿದ್ದವರು .......
ಮಣ್ಣ ಹುಡಿಯಲ್ಲಿ ಹುಡಿಯಾಗಿ
ದುಡಿದು, ಧಣಿಕರಿಗೆ ಸರಕಾಗಿ,
ಅವರ ಗೋಣಿಗಳ ತುಂಬಿ,
ಹೊಟ್ಟೆ ಬಿರಿಯೆ ಸುರಿದು
ತಾವ್ಹಸಿದು,ನೋವಿನಲೂ ನಕ್ಕವರು.

ಮಳೆ ಇಲ್ಲದೆ ಬೆಳೆದು
ಕೈಕೆಸರಾಗದೆ ಮೊಸರುಂಡವರ
ಅಕ್ಷರದ ಅಟ್ಟಹಾಸಕೆ ಹೆದರಿ
ಹಿಂಜರಿದವರು.
ಬೇವಿನಂತೆ ಚಿಗುರುತ್ತಾರೆ.
ಕಾಗೆಗೂಬೆಗಳೊಡನೆ ಹಾಡುತ್ತಾರೆ.
ಕೆಸರಿನೊಂದಿಗೆ ತಂಪಾಗುತ್ತಾರೆ.
ಬಿಸಿಲಿನೊಂದಿಗೆ ಒಣಗುತ್ತಾರೆ.
ವ್ಯತಿರಿಕ್ತವಾದ ಎಲ್ಲವನ್ನೂ ಸಹಿಸಿ
ಬದುಕ ಸಾಗಿಸುತ್ತಾರೆ.

ಸಿಮೆಂಟ್ ಕಾಡಿನವರ ಗುರಿಗಳು
ಇವರಿಗೆ ಗೋರಿಗಳಾದರೂ,
ದುಡಿಯುವ ಕೈಗಳಲ್ಲದೆ
ಬಿತ್ತುವ ಬೀಜವೂ ಆದವರು.
ಕಾಳು ತುಂಬುವ ಕಣಜವಲ್ಲದೆ
ಬೆಳೆಯುವ ಭೂಮಿ ಆದವರು
ಇವರು
ಬೆಳೆಯುವ ಭೂಮಿಯೂ ಆದವರು.
         *
                                                                                       
  ಆದ್ಯಂತಗಳ ನಡುವಿನ ಅರ್ಧಸತ್ಯ


ನಿನ್ನ ಹಾಗೇಯೇ.......
ಮತೇರಿಸುವ ಕಂಗಳಲ್ಲಿ
ಬೆಸೆಯಬೇಕಿತ್ತೇ ಭಾವಗಳ?
ಹೊಗೆಸುತ್ತಿದ ತುಟಿಗಳ
ಚುಂಬಿಸಬೇಕಿತ್ತೇ?
ಪಾಪದ ಪಿಂಡಗಳ ಹೆರಲು
ತಿಟೆ ತೀರಿಸಲೇ ಬೇಕೆ?

ನಿನ್ನ ಹಾಗೆಯೇ......
ಘಮ್ಮೇನ್ನುವ ಗಬ್ಬು ನಾತಕ್ಕೆ
ಮೂಗು ಕಟ್ಟಿದರೂ
ಇಕ್ಕಟ್ಟಿನಲ್ಲೂ ಉಸಿರಬೇಕಿತ್ತೇನೆ?
ಗೆಳತಿ............................
ವಿಕೃತವಾದರೂ ಬದುಕ
ತಬ್ಬಿಕೊಳ್ಳಬೇಕಿತ್ತೇ?
ಅಂಧಕ್ಕಾರದಲ್ಲೂ ಹೃದಯ
ಬಿಚ್ಚಬೇಕಿತ್ತೇನೇ?
ಸಂಪ್ರದಾಯಕೆ
ಬಲಿಯಾಗಲೇಬೇಕೆ ಜೀವ?

ಒಂಟಿಯಾಗಿ ಸುರಿಸಿದ್ದು
ಬೆವರಲ್ಲವೇ?
ಏಕಾಂಗಿಯಾಗಿ ನೆರಳಿದ್ದು
ನೋವಲ್ಲವೆ?
ಒಂಟಿ ಹಕ್ಕಿಯ ಹಾಡಿಗೆ
ಎಲ್ಲವೂ ಕಿವುಡೆ?

ಅತಂತ್ರ ದಂಡೆಯ ಮೇಲೆ
ಪರತಂತ್ರ ಬದುಕಿನ
ತನನ ತಾಣಗಳಿಗೆ
ಹೆಜ್ಜೆ ಹೊಂದಿಸಿದ್ದರೆ......
ದುಡಿದ ದುಡಿತಗಳು
ನೊಂದ ನೋವುಗಳು
ಬೇಡುವ ಬಯಕೆಗಳು
ನಿನ್ನ, ನಿನ್ನಂಥವರ
ಅರ್ಥಹೀನ ದೃಷ್ಟಿಯಲ್ಲಿ
ನಿಜವಾಗುತ್ತಿದ್ದುವೇನೋ?
ಅವಕ್ಕೆ ಮೌಲ್ಯವಿರುತ್ತಿತ್ತು.
ಹೌದೇನೇ?

ಹಾಗಿದ್ದರೆ ಹೇಳೇ...........
ಹಾಗಿದ್ದರೆ ಹೇಳೇ
ಕಣ್ಣಿದ್ದು ಕುರುಡಾಗಿ
ಕಿವಿಯಿದ್ದು ಕಿವುಡಾಗಿ
ವಿಚಾರ ಶೂನ್ಯಳಾಗಿ
ಅಖಂಡ ಸತ್ಯದ ಆದ್ಯಂತಗಳ ನಡುವಿನ
ಪಂಚೇಂದ್ರೀಯ ರಹಿತ ಮುತ್ತೈದೆ.........
ಬದುಕು ಬಳಲಿತೇಕೇ
ಹೀಗೇ ಏಕಾಂಗಿಯಾಗಿ...............?
ಬಲಿಯಾಯಿತೇಕೇ
ಒಬ್ಬಂಟಿಯಾಗಿ................?
ಹೇಳೇ.................
ಅದು ತುಂಬು ಬದುಕೇ ?
ಹೇಳೇ.................
ಅದು ತುಂಬು ಬದುಕೇ                            
           *




*
ವಿದ್ಯಾ ಕುಂದರಗಿ,
ಉಪನ್ಯಾಸಕರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ಧಾರವಾಡ
ಮೊ. - 9900221367

ಸೋಮವಾರ, ಜುಲೈ 8, 2013

ಮಕ್ಕಳ ಸಾಹಿತ್ಯ ಹೀಗಿರಲಿ..-ಡಾ.ಪ್ರಕಾಶ ಗ.ಖಾಡೆ

                    ಮಕ್ಕಳ ಸಾಹಿತ್ಯ ಹೀಗಿರಲಿ..
                                                          -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

         ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು ಕಟ್ಟಿಕೊಡುವ ಕೆಲಸ ಆ ಕಾಲದಲ್ಲಿ ಬೆಳಗಾವಿ ಮತ್ತು ಧಾರವಾಡಗಳಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳಿಂದ ನಡೆಯಿತು.ಹೀಗೆ ನಡೆದ ಪ್ರಕ್ರಿಯೆಯು ಮಕ್ಕಳ ಸಾಹಿತ್ಯದ ರಚನೆಗಳಿಗೆ ಸಾರ್ವತ್ರಿಕತೆಯನ್ನು ಒದಗಿಸಿಕೊಟ್ಟಿತು.ಸಾಹಿತ್ಯದ ಎಲ್ಲ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕೆ ಇದೆ.ಸರಳವಾದ ಶಬ್ದ,ಪದಗಳ ಪುನರುಕ್ತಿ,ಲಯಗಾರಿಕೆ,ಪ್ರಾಸ,ನಾಟಕೀಯ ಸಂಭಾಷಣೆ ಮುಂತಾದ ಲಕ್ಷಣಗಳನ್ನು ಪಡೆದುಕೊಂಡಿರುವ ಮಕ್ಕಳ ಸಾಹಿತ್ಯ ಪ್ರಧಾನವಾಗಿ ಮಕ್ಕಳಲ್ಲಿ ಜ್ಞಾನದಾಹವನ್ನು ತಣಿಸಿ ಸೃಜನಾತ್ಮಕತೆಯನ್ನು ,ಕಲ್ಪನಾಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ.
ಮಕ್ಕಳ ಸಾಹಿತ್ಯವನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಬಹುದು.
1.ಶಿಶು ಪ್ರಾಸದ ರಚನೆಗಳು : ಮೂರರಿಂದ ಆರು ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರಾಣಿ ,ಪಕ್ಷಿಗಳ ಬಗ್ಗೆ ಕುತೂಹಲವಿರುತ್ತದೆ.ಮಗು ತನ್ನ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯಿಸಿಕೊಳ್ಳುವ ಪರಿಯೇ ಬೆರಗು ಹುಟ್ಟಿಸುತ್ತದೆ.ಇಂಥಲ್ಲಿ ನಮ್ಮ ರಚನೆಗಳು ಪುಟ್ಟ ಪುಟ್ಟ ಸಾಲುಗಳ ಮೂಲಕ ಮಗುವಿನ ಮನಸ್ಸನ್ನು ಸೆಳೆದುಕೊಳ್ಳುವಂತೆ ಇರಬೇಕಾಗುತ್ತದೆ. ‘ಒಂದು ಎರಡು ಬಾಳೆಲೆ ಹರಡು.’, ‘ನನ್ನಪಾಟಿ ಕರಿಯದು ಸುತ್ತು ಕಟ್ಟು ಬಿಳಿಯದು’,‘ಬೇಬಿ ಬೇಬಿ ಸಣ್ಣಾಕಿ’,’ಬಸ್ಸು ಬಂತು ಬಸ್ಸು’..ಇಂಥ ಮೊದಲಾದ ರಚನೆಗಳನ್ನು ಮಕ್ಕಳು ಅಭಿನಯದ ಮೂಲಕ ಕಲಿಯುವ ಪರಿ ಚೈತನ್ಯದಾಯಕವಾಗಿದೆ.ಇಂಥಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸುವುದು ಕೇವಲ ಗಿಳಿ ಪಾಠ ಮಾತ್ರವಾಗಿ ಬಿಡುತ್ತದೆ.ಈ ಅಪಾಯವನ್ನು ಮೀರಿ ನಮ್ಮ ಸಾಹಿತಿಗಳು ಬರೆಯಬೇಕಾಗಿದೆ.
  2. ಅತಿಮಾನುಷ ಕಥೆಗಳು : ಆರರಿಂದ ಒಂಬತ್ತು ವರ್ಷದ ಎಳೆಯ ಮಕ್ಕಳು ಸಾಹಸ,ಚಮತ್ಕಾರಿಕ ಮತ್ತು ನೀತಿದಾಯಕ ಕಥನ ಗೀತೆ,ಕಥೆಗಳಿಗೆ ಮಾರುಹೊಗುತ್ತಾರೆ.ಇಂಥ ರಚನೆಗಳಿಗೆ ಆಕರ್ಷಿತರಾಗುತ್ತಾರೆ.ಅಜ್ಜಿಯ ಕಥೆಗಳು,ಕುತೂಹಲ ತಣಿಸುವ ರಂಜನೀಯ ಕಥೆಗಳು,ಅತಿಮಾನುಷ ಕಥೆಗಳು ಈ ಬಗೆಯ ರಚನೆಗಳ ಮೂಲಕ ಮಕ್ಕಳು ಹೊಸದೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ.ಪ್ರಾಣಿ ,ಪಕ್ಷಿಗಳ ಸಾಹಸ ಕಥೆಗಳು,ಕಣ್ಣಿಗೆ ಕಾಣದ ಲೋಕದ ಜನರ ಚಮತ್ಕಾರಗಳು ಈ ವಯಸ್ಸಿನ ಮಕ್ಕಳಿಗೆ ಬೇಕು.ರೋಚಕ ರಚನೆಯ ಸಾಹಿತ್ಯ ನಮ್ಮ ಮಕ್ಕಳ ಸಾಹಿತಿಗಳಿಂದ ಹೆಚ್ಚಾಗಿ ಬರಬೇಕಾಗಿದೆ.
3.ಮೌಲ್ಯಾಧಾರಿತ ರಚನೆಗಳು : ಒಂಬತ್ತರಿಂದ ಹದಿಮೂರು ವರ್ಷ ವಯಸ್ಸಿನ ಮಕ್ಕಳು ಅಕ್ಷರ ಬಲ್ಲವರು ಹಾಗೂ ಒಂದಿಷ್ಟು ತಿಳುವಳಿಕೆ ಉಳ್ಳವರೂ ಆಗಿರುತ್ತಾರೆ.ಇಂಥ ಮಕ್ಕಳಿಗೆ ಸ್ನೇಹ,ಸಹಕಾರ,ರಾಷ್ಟ್ರಪ್ರೇಮ,ಗೌರವ, ಪ್ರಾಮಾಣಿಕತೆ ಮೊದಲಾದ ಮೌಲ್ಯ ಬಿತ್ತುವ ರಚನೆಗಳು ಬೇಕು.ಜೊತೆಗೆ ಚಾರಿತ್ರಿಕ.ಪೌರಾಣಿಕ,ಮಹಾಪುರುಷರ ಕಥೆಗಳು ,ವೈಜ್ಞಾನಿಕ ಅದ್ಭುತಗಳು,ಸಮಕಾಲೀನರ ಸಾಹಸಗಳು ಮೊದಲಾದ ಸಂಗತಿಗಳ ಕಡೆ ಈ ವಯೊಮಾನದ ಮಕ್ಕಳು ಆಕರ್ಷಿತರಾಗುತ್ತಾರೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ.
ಇಂಥ ಮೊದಲಾದ ರಚನೆಗಳು ಈ ವಯೋಮಾನದ ಮಕ್ಕಳಿಗೆ ಅರ್ಥವಾಗುವುದರೊಂದಿಗೆ,ತುಂಬಾ ರುಚಿಸುತ್ತವೆ.ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಆಸಕ್ತಿಗಳು ಇರುವುದರಿಂದ ಅವರ ಗ್ರಹಣ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಬರೆಯಬೇಕಾದ ಅನಿವಾರ್ಯತೆ ಮಕ್ಕಳ ಸಾಹಿತಿಗಳದ್ದಾಗಿರುತ್ತದೆ. ಮಕ್ಕಳ ಮನಸ್ಸು ಬಾಯಿ ತೆರೆದ ಖಾಲಿ ಬುಟ್ಟಿ ಅದರಲ್ಲಿ ಕಸ ತುಂಬದೇ ರಸ ತುಂಬುವ ಕೆಲಸ ಮಾಡಬೇಕಾದ ಜವಾಬ್ದಾರಿ ಮಕ್ಕಳ ಸಾಹಿತಿಗಳಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ಇವತ್ತು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ.ಹೊಸ ಭಾವ ಹೊಸ ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ, ವಿಜ್ಞಾನ, ವೈದ್ಯಕೀಯ ,ಪರಿಸರ, ಆಕಾಶ ,ಗ್ರಹಣಗಳು, ಕಂಪ್ಯೂಟರ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯವನ್ನು ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ. ಯಾವುದೇ ಮಗು ಅರ್ಧ ಬೆಳೆದ ಮನುಷ್ಯನಲ್ಲ ಮಕ್ಕಳು ಅವರಷ್ಟಕ್ಕೆ ಪರಿಪೂರ್ಣ ವ್ಯಕ್ತಿಗಳು. ಕಾರಣ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನ ಶೀಲರಾಗುವಂತೆ ಮಾಡುವ ಮತ್ತು ತಮ್ಮ ಸುತ್ತಲ ಪ್ರಪಂಚವನ್ನು ಅರಿಯುವಂತೆ ಮಾಡುವ ಯಾವುದೇ ಬರವಣಿಗೆಯೂ ಮಕ್ಕಳ ಸಾಹಿತ್ಯವೆನಿಸಿಕೊಳ್ಳುತ್ತದೆ.ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರಿಕರಾಗಿರುವ ಮಕ್ಕಳು ತಾನೇ ಹೊರಬೇಕು.ಅದಕ್ಕೆ ಸಜ್ಜುಗೊಳಿಸುವ ಸಾಹಿತ್ಯ ಮಕ್ಕಳ ಸಾಹಿತ್ಯವಾಗಿರುವುದು ಅತ್ಯಂತ ಮುಖ್ಯವಾಗಿದೆ.ಆದರೆ ಒಂದು ಅನುಮಾನ ಇನ್ನು ಮುಂದಿನ ದಿನಮಾನಗಳಲ್ಲಿ  ಬರಬಹುದಾದ ಬದಲಾವಣೆಗಳು ನಮ್ಮ ಉಹೆಗೂ ನಿಲುಕದಿರುವದರಿಂದ ನಾವು ನಮ್ಮ ಮಕ್ಕಳನ್ನು ಯಾವ ಭವಿಷ್ಯತ್ತಿಗೆ ತಯಾರು ಮಾಡಬಹುದು? ಎಂಬ ಪ್ರಶ್ನೆ ಮಕ್ಕಳ ಸಾಹಿತಿಗಳನ್ನು ಕಾಡದೇ ಇರಲಾರದು.
=====================================================================
-
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ
            ಮೊ.9845500890

ಶನಿವಾರ, ಜುಲೈ 6, 2013

ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ-ಡಾ.ಖಾಡೆ

 ವಿಶೇಷ ಲೇಖನ :
                                                   
                              ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ 

                                                                 -ಡಾ.ಪ್ರಕಾಶ ಗ.ಖಾಡೆ
( ಜನತೆಯ ಸಂಸ್ಕೃತಿಯ ಶಿಲಾಶಾಸನಗಳಾಗಿರುವ ಜನಪದರ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.)

       ಕನ್ನಡದಲ್ಲಿ ಈಗ ಚುಟುಕು ಸಾಹಿತ್ಯ ರಚನೆಯ ಭರಾಟೆ ನಡೆಯುತ್ತಿದೆ. ಹಿರಿಯ ತಲೆಮಾರಿನ ಕವಿಗಳೊಂದಿಗೆ ಇವತ್ತು ಹೊಸ ತಲೆಮಾರಿನ ಯುವ ಜನಾಂಗ ಈ ಬಗೆಯ ರಚನೆಯಲ್ಲಿ ತೊಡಗಿರುವುದು ಈ ಪ್ರಕಾರದ ಜನಪ್ರಿಯತೆ ಸಾರುತ್ತದೆ. ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತವಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಿಕವಾಗಿ ಮನಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯ. ಈ ಬಗೆಯ ರಚನೆಗಳಿಗೆ ಸೀಮೆ-ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನಾಧರಿಸಿ ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲ ಹೊತ್ತು ಚಿಂತನೆಗೆ ತೊಡಗಿಸಬೇಕು.
    ಚುಟುಕು ರಚನೆ ನಮ್ಮ ಅಕ್ಷರಸ್ಥ ಕವಿಗಳ ಕೈಯಲ್ಲಿ ಮಾತ್ರ ರಚನೆ ಆಗುವಂಥದು ಅಲ್ಲ. ಅದು ಅನೇಕ ಬಾರಿ ಅನಕ್ಷರಸ್ಥ ಜನರಾಡುವ ಮಾತಿನಲ್ಲಿ ಹೊರಹೊಮ್ಮುತ್ತದೆ. ಅನುಭವಸ್ಥ ಜನ ಸೃಷ್ಟಿಸುವ ಅನೇಕ ನಾಣ್ನುಡಿ ಗಾದೆಮಾತುಗಳು ಒಂದು ಬಗೆಯಲ್ಲಿ ನಮ್ಮ ಇಂದಿನ ಚುಟುಕು ರಚನೆಗಳನ್ನು ಹೋಲುತ್ತವೆ. ಒಂದು ಉದಾಹರಣೆಯ ಮೂಲಕ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳೋಣ. ಹಳ್ಳಿಗಳಲ್ಲಿ ಅನೇಕ ಬಗೆಯ ಜನರನ್ನು ಕಾಣುತ್ತೇವೆ. ಅವರ ವೃತ್ತಿ ಮನೋಭಾವದ ಮೂಲಕ ಅವರನ್ನು ಗುರುತಿಸುತ್ತೇವೆ. ಇಲ್ಲಿ ಒಂದು ಕಲ್ಲು ಎರಡು ಕುಟುಂಬಗಳ ಬದುಕಿಗೆ ಆಧಾರವಾದ ಬಗೆಗೆ ನಮ್ಮ ಜನಪದರಲ್ಲಿ ಒಂದು ನಾಣ್ನುಡಿ ಹೀಗೆ ಹೇಳುತ್ತದೆ.
    ಬಿದ್ದ ಕಲ್ಲ ಅಗಸಗ
    ಎದ್ದ ಕಲ್ಲ ಪೂಜಾರಿಗೆ
    ಇಲ್ಲಿ ಬರುವ ಕಲ್ಲು ಪಡೆದುಕೊಳ್ಳುವ ಕ್ರಿಯಾ ಮೌಲ್ಯವನ್ನು ಗಮನಿಸಿ, ಅಗಸನು ಬಟ್ಟೆ ತೊಳೆಯುವ ಕಾಯಕಕ್ಕೆ ಕಲ್ಲು ಬಳಸಿಕೊಂಡರೆ, ಪೂಜಾರಿ ಅದನ್ನು  ದೇವರು ಮಾಡಿ ಪೂಜೆ ಪುನಸ್ಕಾರಗಳೊಂದಿಗೆ, ಭಕ್ತರಿಂದ ಬರುವ ಪ್ರಸಾದದಿಂದ ತನ್ನ ಮನೆಯನ್ನು ನಿರ್ವಹಿಸಬಲ್ಲವನಾಗುತ್ತಾನೆ. ಇಂಥ ಸಂಗತಿಗಳನ್ನು ಚುಟುಕಾಗಿ ಕಟ್ಟಿಕೊಡುವ ಅನೇಕ ರಚನೆಗಳನ್ನು ನಮ್ಮ ಜಾನಪದ ಭಂಡಾರದಲ್ಲಿ ಸಿಕ್ಕುತ್ತವೆ. ಜಾನಪದವನ್ನೇ ಉಸಿರಾಗಿಸಿಕೊಂಡಿದ್ದ ನಮ್ಮ ಪೂರ್ವಜರು ಬದುಕಿನ ಅನುಭವಾಮೃತವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಯಾವುದೇ ಒಂದು ವ್ಯವಸ್ಥೆ ಸರಿ ದಾರಿಯಲ್ಲಿ ನಡೆಯಬೇಕಾದರೆ ಆ ವ್ಯವಸ್ಥೆಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಈ ಮಾತನ್ನು ಜನಪದರು ಹೇಳುವುದು ಹೀಗೆ;
         ಹಿರೇರಿಲ್ಲದ ಮನಿ ಅಲ್ಲ,
          ಗುರು ಇಲ್ಲದ ಮಠ ಅಲ್ಲ.

         ವ್ಯವಸ್ಥೆಯನ್ನು ಸರಿದಾರಿಗೆ ತರುವುದು ಅನಿವಾರ್ಯವಾಗಿರುವ ಮುಖಂಡತ್ವವನ್ನು ಈ ರಚನೆ ಸಾರುತ್ತದೆ. ಮನೆ ಮತ್ತು ಮಠಕ್ಕೆ ಒಂದು ಪರಿಪೂರ್ಣತೆ ಬರಬೇಕಾದರೆ ಅದನ್ನು ನಿರ್ವಹಿಸುವ ಕೇಂದ್ರಿಕೃತ ಬದುಕನ್ನು ಇಲ್ಲಿ ಕಾಣುತ್ತೇವೆ. ಇಂದು ರಚನೆಯಾಗುತ್ತಿರುವ ಅನೇಕ ಚುಟುಕುಗಳು ನಮ್ಮ ಬದುಕನ್ನು ಪ್ರತಿನಿಧಿಸುತ್ತಿವೆ. ಇಂದು ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆ ಮೊದಲಾದ ಪಿಡುಗುಗಳ ಬಗ್ಗೆ ಅನೇಕರು ಬರೆದಿದ್ದಾರೆ. ಈ ಬಗೆಯ ರಚನೆಗಳನ್ನು ಜಾನಪದರಲ್ಲೂ ಕಾಣಬಹುದು.
        ಅಮ್ಮನವರು
         ಪಟ್ಟಕ್ಕೆ ಬರುವಾಗ,
         ಅಯ್ಯನವರು
         ಚಟ್ಟಕ್ಕೆ ಏರಿದರು.
         ಇದು ಬಾಲ್ಯವಿವಾಹವನ್ನು ಮತ್ತು ಅದರ ದಾರುಣತೆಯ ದುಷ್ಪರಿಣಾಮ ಸೂಚಿಸುವ ರಚನೆ. ವಯಸ್ಸಿನ ಅಂತರ ಅರಿಯದೇ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಳ್ಳುವ ಜನರ ಮುಖಕ್ಕೆ ರಾಚುವಂತೆ ಇಂಥ ರಚನೆಗಳನ್ನು ಜಾನಪದರು ಕೊಟ್ಟಿದ್ದಾರೆ.  ಇಂಥದೇ ಇನ್ನೊಂದು ರಚನೆ.
          ಆಡುವ  ಹುಡುಗಿಗೆ,
          ಕಾಡುವ ಕೂಸು.
          ಆಡಿ ನಲಿದಾಡಬೇಕಾದ ವಯಸ್ಸಿನಲ್ಲಿ ಹೆಣ್ಣುಮಗು ಸಂಸಾರದ ಭಾರ ಹೊರುವ ಮತ್ತು ಮಕ್ಕಳ ಪಾಲನೆಯಲ್ಲಿ ತನ್ನ ಬದುಕನ್ನು ಕಳೆದುಕೊಳ್ಳುವ ಚಿತ್ರಣ ಈ ರಚನೆಯಲ್ಲಿದೆ. ಗಾದೆಗಳು ವೇದಕ್ಕೆ ಸಮ ಎಂಬ ಮಾತಿದೆ. ವೇದದಷ್ಟೇ ಮೌಲ್ಯವನ್ನು ನಾವು ನಮ್ಮ ಗಾದೆಗಳಲ್ಲಿ ಗುರುತಿಸಿದ್ದೇವೆ. ಗಾದೆಗಳ ರಚನೆಯ ಹಿಂದೆ ಅನೇಕರ ಬದುಕು ಕೆಲಸ ಮಾಡಿರುತ್ತದೆ. ಈ ಗಾದೆಗಳು ಜಗತ್ತಿನ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿವೆ. ಭಾಷೆಯಿರುವ ಕಡೆಯಲ್ಲೆಲ್ಲ ಗಾದೆಗಳಿವೆ. ಗಾದೆ ಇಲ್ಲದ ಭಾಷೆ ಇಲ್ಲ. ಭಾಷೆ ಇಲ್ಲದ ಜನಾಂಗವಿಲ್ಲ. ಗಾದೆಗಳು ಇಂದಿನ ಚುಟುಕು ಸಾಹಿತ್ಯ ರಚನೆಯನ್ನೇ ಹೋಲುತ್ತವೆ.  ಪುರಾಣ ಇತಿಹಾಸಗಳೊಂದಿಗೆ ಅವರ ಜ್ಞಾನಕ್ಷೇತ್ರ ವಿಸ್ತರಿಸುತ್ತದೆ.ಪೂರ್ವಜರ ಅನುಭಾವದ ನುಡಿಗಳು ಯಾವುದಕ್ಕೂ ಹೊರತಾಗಿಲ್ಲ.
        ಹೆಣ್ಣಿನಿಂದ ರಾವಣ ಕೆಟ್ಟ
        ಮಣ್ಣಿನಿಂದ ಕೌರವ ಕೆಟ್ಟ  
ಎಂಬ ಮಾತು ದುರುಳ ಸಂಸ್ಕøತಿಯ ಅವನತಿಯನ್ನು ಬಯಲು ಮಾಡುತ್ತದೆ.ತವರು ಸಂಸ್ಕøತಿಯನ್ನು ಬಣ್ಣಿಸುವ ಮತ್ತು ಪರಿಚಯಿಸುವ ಅನೇಕ ರಚನೆಗಳು ನಮ್ಮ ಜಾನಪದಲ್ಲಿವೆ.ತವರಿನಲ್ಲಿ ಹೆಣ್ಣು ಪ್ರಧಾನ ಮತ್ತು ಕೇಂದ್ರ ಸ್ಥಾನ.ಹೆಣ್ಣಿನ ಸುತ್ತ ಸುತ್ತುವ ಅನೇಕ ಜನಪದ ರಚನೆಗಳು ಅವಳ ಬದುಕನ್ನು ಪರಿಚಯಿಸುವ ವಿಶ್ವಕೋಶಗಳಾಗಿವೆ.
       ಗಂಜಿಯ ಕುಡಿದರೂ
       ಗಂಡನ ಮನಿಲೇಸು
ಎಂಬಲ್ಲಿ ತವರು ಮನೆಯಲ್ಲಿ ಎಷ್ಟು ಆಸ್ತಿ ಇದ್ದರೂ ಅದು ಹೆಣ್ಣಿಗೆ ಕೊನೆಯ ತನP ಜೊತೆ ಇರುವುದಿಲ್ಲ.ಯಾರ ಹಂಗಿಲ್ಲದೇ ಉಣ್ಣುವ ತನ್ನ ಮನೆಯ ಗಂಜೀಯೇ ಶ್ರೇಷ್ಠವಾದುದು ಎಂಬುದು ಜನಪದರ ನೀತಿ ವಾಕ್ಯ.ಉಪಕಾರ ಸ್ಮರಣೆಗೆ ಒಂದು ರಚನೆ ಹೀಗಿದೆ.
       ಕಲ್ಲಲ್ಲಿ ಇಟ್ಟವನ
       ಬೆಲ್ಲದಲ್ಲಿ ಇಡಬೇಕು.
ಎಂಬಲ್ಲಿ ಅಪಕಾರ ಮಾಡಿದರೂ ಉಪಕಾರ ಮಾಡು ಎಂಬ ನೀತಿ ಇದೆ.ವ್ಯಂಗ್ಯ,ವಿಡಂಬನೆಗಳಿಂದಲೂ ಜನಪದರ ರಚನೆಗಳು ಹೊರತಾಗಿಲ್ಲ.ಚುಟುಕು ಕವಿತೆಗಳ ಲಕ್ಷಣಗಳಲ್ಲಿ ವಿಡಂಬನೆ,ಕಟಕಿ,ವ್ಯಂಗ್ಯವು ಪ್ರಧಾನವಾದುದು.
      ಅಂಗಡ್ಯಾಗ ಇರೋದು ಕಪಾಟ
      ನಮ್ಮ ರಾಯರ ತೆಲಿ ಸಪಾಟ
ಎಂಬಲ್ಲಿ ವಿಡಂಬನೆ ಇದೆ.ಜನಪದರ ಕಲ್ಪನೆಯ ಸೊಗಸು ಹೃದಯಪೂರ್ಣವಾದುದು.ತನ್ನ ಗಂಡನ ಹೆಸರು ಹೇಳುವ ಒಡಪಿನ ಒಂದು ರಚನೆ ಹೀಗಿದೆ.
      ಬೆಳದಿಂಗಳ ಬೆಳಕ
      ಕಲ್ಲ ಸಕ್ಕರಿ ಹಳಕ
      ನಕ್ಷತ್ರ ಮ್ಯಾಲ ಕುಂತ
      ಅಕ್ಷರ ಬರೀತಾನ
ಇಂದು ರಚನೆಯಾಗುತ್ತಿರುವ ಚುಟುಕುಗಳು ಒಳಗೊಳ್ಳುವ ಎಲ್ಲ ಲಕ್ಷಣಗಳನ್ನು ಅವಕ್ಕೂ ಮಿಗಿಲಾಗಿ ಜನಪದರ ರಚನೆಗಳಲ್ಲಿ ಕಾಣುತ್ತೇವೆ.ಜನತೆಯ ಸಂಸ್ಕøತಿಯ ಶಿಲಾಶಾಸನಗಳಾಗಿರುವ ಈ ಬಗೆಯ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು.ಸಂಕೀರ್ಣತೆಯತ್ತ ವಾಲುತ್ತಿರುವ ಇಂದಿನ ಚುಟುಕುಗಳು,ಹನಿಗವನಗಳು ಪ್ರಧಾನವಾಗಿ ಸಮಾಜಮುಖಿಯಾದರೂ ಅವು ಬಯಸುವ ಲಯಗಾರಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.ನಮ್ಮ ಯುವ ಪೀಳಿಗೆಯ ಬರಹಗಾರರು ಹನಿಗವನ ರಚನೆಗೆ ತೊಡಗುವ ಮೊದಲು ಜನಪದರ ಆಡುನುಡಿಯ ಸೊಗಸಿನಲ್ಲಿ ಬೆರೆತು ಅವರ ನುಡಿಗಟ್ಟುಗಳನ್ನು ಅರಗಿಸಿಕೊಳ್ಳಬೇಕು.ಅಂದಾಗ ಅಪರೂಪದ ರಚನೆಗಳು ಚುಟುಕು ಸಾಹಿತ್ಯ ಪ್ರಕಾರದಲ್ಲಿ ದಕ್ಕುತ್ತವೆ.ವಿಶಾಲ ಜೀವನಾನುಭವದ ಚುಟುಕು ಸಾಹಿತ್ಯಕ್ಕೆ ಜನಪದವೇ ಮೂಲ ಮತ್ತು ಅನಿವಾರ್ಯವಾಗಿದೆ.
                                                                                            - ಡಾ.ಪ್ರಕಾಶ ಗ.ಖಾಡೆ.
==============================================
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ-587103,ಮೊ.-9845500890