ಶನಿವಾರ, ಜೂನ್ 29, 2013

ಪುಸ್ತಕ ವಿಮರ್ಶೆ :ನೆಲಮೂಲ ಸಂಸ್ಕೃತಿ.

ಪುಸ್ತಕ ವಿಮರ್ಶೆ
ಜನಪದ ಸಂಸ್ಕೃತಿಯ ಕ್ರಿಯಾಶೀಲತೆಯ ಸಂಕಥನ

                               - ಡಾ.ವೀರೇಶ ಬಡಿಗೇರ


‘ನೆಲಮೂಲ ಸಂಸ್ಕೃತಿ'
 (ಜನಪದ ಲೇಖನಗಳು)
ಡಾ.ಪ್ರಕಾಶ ಗ.ಖಾಡೆ ,
ಕಿಟಕಿ ಪ್ರಕಾಶನ,ನಂ.117,2ನೇ ಕ್ರಾಸ್,ದಕ್ಷಿಣ,
ಅನಿಕೇತನ ರಸ್ತೆ, ಮೈಸೂರು -570023
ಪ್ರಕಟಣೆಯ ವರ್ಷ :2010

ಡಾ. ಪ್ರಕಾಶ್ ಖಾಡೆಯವರು ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ಜಾನಪದ ವಿವಿಧ ಮಜಲುಗಳ ಮೇಲೆ ಕೆಲಸ ಮಾಡುತ್ತ ಅವುಗಳ ಮೇಲೆ ಬೆಳಕು ಚೆಲ್ಲುತ್ತ ಬಂದ ಗಂಭೀರ ಬರಹಗಾರರಲ್ಲೊಬ್ಬರಾಗಿದ್ದಾರೆ. ಅವರು 29 ಲೇಖನಗಳನ್ನೊಳಗೊಂಡ ‘ನೆಲಮೂಲ ಸಂಸ್ಕøತಿ’ ಕೃತಿಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಜನಪದ ಅಧ್ಯಯನಕ್ಕೆ ಹೊಸ ಕೊಡುಗೆ ನೀಡಿದ್ದಾರೆ. ಇದು ಅವರ ಸತತ ಪ್ರಯತ್ನ ಹಾಗೂ ಬದ್ಧತೆಯ ಫಲವೆಂದೇ ನನ್ನ ಭಾವನೆ.
ಖಾಡೆಯವರ ಜನಪದ ಅಧ್ಯಯನದ ಮುಖ್ಯ ಶಕ್ತಿ ಎಂದರೆ ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯದ ಮೂಲಕ ಅಪರೂಪದ ಕಲಾಪ್ರಕಾರಗಳನ್ನು ಗುರುತಿಸಿ ಪರಿಚಯಿಸುವ ಹಾಗೂ ವಿಶ್ಲೇಷಿಸುವಲ್ಲಿ ಅವರ ವಿಶಿಷ್ಟತೆಯನ್ನು ಕಾಣುತ್ತೇವೆ. ‘ಗರದಿ ಗಮ್ಮತ್ತಿನ ಕೊನೆಯ ಪೆಟ್ಟಿಗೆ’, ‘ಹೊನವಾಡದ ಜೋಗರಾಣಿಗೆ ಸುಡಗಾಡಿನಲ್ಲಿ ಪೂಜೆ’, ಅಪ್ಪಟ ಗ್ರಾಮೀಣ ಕ್ರೀಡೆ ಅಟ್ಟ್ಯಾ ಪಟ್ಟ್ಯಾದಂತಹ ಅಸ್ತಿತ್ವವನ್ನೇ ಕಳೆದುಕೊಂಡಿರುವ ನೋಡಲೂ ಸಿಗಲು ಅಸಾಧ್ಯವಾಗಿರುವ ಕ್ರಿಯಾ ಸಂಪ್ರದಾಯಗಳನ್ನು ದಾಖಲಿಸಿರುವುದು ಮೆಚ್ಚುವಂಥ ಮಾತಾಗಿದೆ.
ಜಾನಪದಕ್ಕೆ ಸಾವಿಲ್ಲ ಅದು ವಿವಿಧ ಆಕಾರದಲ್ಲಿ ಮರುರೂಪ ಪಡೆಯುತ್ತಲೇ ಇರುತ್ತದೆ. ಅಂಥ ಭಿನ್ನರೂಪದ ಪುನರಾವತಾರದ ಹೆಜ್ಜೆಗಳನ್ನು ಇಲ್ಲಿನ ಎಲ್ಲ ಲೇಖನಗಳಲ್ಲಿ ಕಾಣುತ್ತೇವೆ. ‘ಹೊಸಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು  ದಾಖಲಾರ್ಹವಾದುದು.ಕವಿ ಮತ್ತು ಕವಿತೆಯನ್ನು ಒಂದು ಜನಪ್ರಿಯ ನೆಲೆಯಲ್ಲಿ ತಂದು ಜನಸಾಮಾನ್ಯರ ನಾಲಿಗೆಯ ಮೇಲೆ ತಮ್ಮ ರಚನೆಗಳು ಉಳಿಯುವಂತೆ ಮಾಡುವುದರೊಂದಿಗೆ ವಿದ್ವತ್‍ವಲಯವೆಂದು ಹೇಳಿಕೊಂಡು ಬಂದ ವಸಾಹತುಶಾಹಿ ಪ್ರಜ್ಞೆಯ ಮನೋಭಾವದ ಲೇಖಕರನ್ನು ಅಚ್ಚರಿಗೊಳಿಸಿ ನಾದದ ಗುಂಗು ಹಿಡಿಸಿದ ‘ಪರಿಯನ್ನು’ ಖಾಡೆಯವರು ಗುರುತಿಸುವಲ್ಲಿಯೇ ಪುನರಾವತಾರದ ಕಲ್ಪನೆಗಳ ನಿಹಿತಗೊಂಡಿದೆ. ತಮ್ಮ ಪಿಎಚ್.ಡಿ. ಅಧ್ಯಯನದಲ್ಲಿ ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ ಗುರುತಿಸುವಲ್ಲಿ ಅವರ ತೋರಿದ ಹೊಸತನ ಪರಂಪರೆಯನ್ನೇ ಮುರಿದು ಕಟ್ಟುವ ಕ್ರಮವಾಗಿದೆ.
ಸಂಗ್ರಹ ಎನ್ನುವುದು ಸಂರಕ್ಷಣೆ ಹಾಗೂ ಪೋಷಣೆಯ ಸಂಗೋಪನ ರೂಪ. ನವೋದಯ ಕಾಲದಿಂದ ಹಿಡಿದು ಇಂದಿನವರೆಗೂ ವಿದ್ವಾಂಸರು ಸಂಗ್ರಹಿಸಿದ ಕತೆಗಳು, ಗೀತೆಗಳು, ಒಗಟುಗಳು, ಲಾವಣಿಗಳು, ಅಸಂಖ್ಯ. ಖಾಡೆಯವರು ಅಂಥ ಪರಂಪರೆಯನ್ನು ಮುಂದುವರಿಸಿದ್ದಾರೆ. ವಿಶೇಷವಾಗಿ ಜಾನಪದ ಆಕರಗಳ ಸಂಗ್ರಹ ಕಾರ್ಯಕ್ಕೆ ಬುನಾದಿ ಹಾಕಿದವರು ಗುಳೇದಗುಡ್ಡದ ಬಾಳಿ ಇಂಟೆ (1874) ಹಾಗೂ ಬದಾಮಿಯ ಪರಯ್ಯ ವೀರಭದ್ರಯ್ಯ ಗಣಾಚಾರಿ; ನಾರಾಯಣ ಅಯ್ಯಾಜಿಯವರು ಅನ್ನುವುದು ಮತ್ತೊಂದು ಹೊಸ ವಿಚಾರವಾಗಿದೆ. ಐತಿಹಾಸಿಕ ಲಾವಣಿ ಸಂಗ್ರಹದಲ್ಲಿ ಪ್ಲೀಟರಿಗೆ ಹೆಗಲು ಕೊಟ್ಟು ನಿಂತ ಇವರು ಬಾಗಲಕೋಟ ಜಿಲ್ಲೆಯ (ಆಗಿನ ವಿಜಾಪುರ ಜಿಲ್ಲೆ) ಜಾನಪದ ಸಾಹಿತ್ಯ ಮೊದಲಿಗೆ ದಾಖಲೆಯಾಗುವಂತೆ ಮಾಡಿದ್ದಾರೆ. ನಂತರ ಡಾ. ಬಿ.ಎಸ್. ಗದ್ದಗಿಮಠ ಅವರ ಸಂಗ್ರಹಕಾರ್ಯವಲ್ಲದೆ ಸಂಶೋಧನೆಯನ್ನೇ ಮಾಡಿ ಪದವಿ ಪಡೆದಿದ್ದು ಜಾನಪದಕ್ಕೆ ಅಕಾಡೆಮಿಕ್ ವಲಯದಲ್ಲಿ ಪ್ರಾಶಸ್ತ್ಯವೇ ಇರದ ದಿನಮಾನಗಳಲ್ಲಿ ಎನ್ನುವುದು ಮುಖ್ಯ ಅಂಶ. ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯೇ ಮೊದಲು ಹಾಗೂ ನವೋದಯ ಸಾಹಿತ್ಯದ ಮೊದಲ ಬೇರುಗಳು ಹಲಸಂಗಿಯಿಂದಲೇ ಚಿಗುರಿದ್ದು ಎಂದು ಖಾಡೆಯವರು ಸಾಧಿಸಿ ತೋರಿಸಿರುವುದು ಮೆಚ್ಚತಕ್ಕಂತ ಸಂಗತಿಯಾಗಿದೆ.
ಕ್ಷೇತ್ರದಿಂದ ತರುವ ಸಾಮಾನ್ಯ ಮಾಹಿತಿಗಳನ್ನು ಒಪ್ಪವಾಗಿ ಜೋಡಿಸುವಲ್ಲಿ ಖಾಡೆಯವರ ಪರಿಶ್ರಮ ಎದ್ದು ಕಾಣುತ್ತದೆ. ಕ್ಷೇತ್ರದಿಂದ ಪಡೆದ ಅಪೂರ್ವ ಮಾಹಿತಿಗಳು ಈ ಹೊತ್ತಿಗೆಯಲ್ಲಿವೆ. ಲೇಖನಗಳು ತುಂಬಾ ಸಾಂದರ್ಭಿಕವೆನಿಸಿದರೂ ಅವು ಗರ್ಭೀಕರಿಸಿಕೊಂಡಿರುವ ಮಾಹಿತಿ ಕಡೆಗಣಿಸುವಂಥವಲ್ಲ. ಕೃಷ್ಣಾ ತೀರದ ಒಗಟುಗಳು, ಬದಲಾಗುತ್ತಿರುವ ಜನಪದ ಆಚರಣೆ ಓಕುಳಿ, ಜನಪದ ನಾಗರಪಂಚಮಿ, ತತ್ವಪದ, ರಿವಾಯತ ಪದಗಳು, ಕುಂದರಗಿ ಕಂಬಳಿ ಮುಂತಾದ ಕಲಾ ಪ್ರಕಾರಗಳು ಸಂಪ್ರದಾಯ ಆಚರಣೆಗಳು ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿವೆ. ವಿಶೇಷವಾಗಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿರುವ ಊರುಗಳ ಸಹಜ ಸಂಸ್ಕøತಿ ಸಂಬಂಧಗಳು ಇಂದು ಹರಿಗಡಿದಿವೆ. ಜಾನಪದ ಬದುಕು ಎನ್ನುವುದು ಅದೊಂದು ಸಂಯೋಜಿತ ಬದುಕು ಹಾಗೂ ಸಾವಯವ ಸ್ವಭಾವದ್ದು. ಕೂಡಿ ಕಟ್ಟುವ ಅಲ್ಲಿನ ಕ್ರಿಯಾಶೀಲತೆ ಹಲವು ಸಂಕಥನಗಳಿಗೆ ರೂಪಕೊಡುವಂಥದ್ದು. ಕೃಷಿಭೂಮಿ ಇಲ್ಲವಾಗಿ, ಸಹಜ ಉದ್ಯೋಗಗಳು ಕಡಿಮೆಯಾಗಿ, ಸ್ವಾವಲಂಬಿತನ ಎನ್ನುವುದು ಮನುಷ್ಯರಲ್ಲಿ ಮಾಯವಾಗುತ್ತಿದೆ. ಅಂಥ ಹೊತ್ತಲ್ಲಿ ಕಲಾ ಸಂಪ್ರದಾಯಗಳು ಬದುಕಿನ ರೀತಿ ನೀತಿಗಳು ರೂಪಗೊಳ್ಳಲು ಸಾಧ್ಯವಿಲ್ಲ. ಕಳೆದು ಹೋಗುತ್ತಿರುವ ಅಂತಹ ನೂರಾರು ಸಂವೇದನೆಗಳನ್ನು ಖಾಡೆಯವರು ಇಲ್ಲಿ ದೃಶ್ಯೀಕರಿಸಿದ್ದಾರೆ.
ಒಟ್ಟಿನಲ್ಲಿ ಡಾ. ಪ್ರಕಾಶ ಖಾಡೆಯವರ ಇಲ್ಲಿನ ಎಲ್ಲ ಲೇಖನಗಳು ಒಂದು ವಿಸ್ತಾರವಾದ ಜಾನಪದ ಸಂಸ್ಕೃತಿಯನ್ನು ತೆರೆದು ತೋರುತ್ತಿರುತ್ತವೆ. ಇಲ್ಲಿನ ಅಪೂರ್ವ ಮಾಹಿತಿಗಳು ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತವೆ. ಇಲ್ಲಿನ ಬರಹದ ಹಿಂದಿರುವ ಉತ್ಸಾಹ, ಬದ್ಧತೆ, ಹಠ ಇಂಥ ಪ್ರೇರಣೆಗೆ ಕಾರಣವಾಗಿದೆ.
                                - ಡಾ.ವೀರೇಶ ಬಡಿಗೇರ

---------------------------------------------------------
ಡಾ. ವೀರೇಶ ಬಡಿಗೇರ, ಮುಖ್ಯಸ್ಥರು, ಹಸ್ತಪ್ರತಿಶಾಸ್ತ್ರ ವಿಭಾಗ, ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ,ವಿದ್ಯಾರಣ್ಯ,ಕಮಲಾಪುರ
ತಾ.ಹೊಸಪೇಟ ,ಜಿ.ಬಳ್ಳಾರಿ  ಮೊ.9448845789