ಬುಧವಾರ, ಜನವರಿ 1, 2014

ಹೊಸ ವರ್ಷದ ಅಂಗಳ ತುಂಬ...

ಬಸೂ ಅವರ ದ್ವಿಪದಿಗಳು.






















ಹಣತೆ ಹೊಸ ವರ್ಷದ ತೈಲದಿಂದ ತುಂಬಿತು
ಆ ಉರಿವ ಸೊಡರು ಮತ್ತಷ್ಟು ಸಣ್ಣದಾಯಿತು
2
ಲೋಕವೆಲ್ಲ ಹೊಸ ವರ್ಷದ ಸಂಭ್ರಮದಲಿ ಮುಳುಗಿತ್ತು
ನಿಶಬ್ದವಾಗಿ ದೇಹ ಕಟ್ಟಡದ ಒಂದು ಕಲ್ಲು ಉದುರಿ ಬಿದ್ದಿತು
3
ಇರುಳ ಕೆಚ್ಚಲಿಗೆ ಯಾರು ಕೈಯಿಟ್ಟರೋ
ನೆಲದವ್ವನ ಪಾತ್ರೆ ತುಂಬ ನೊರೆ ನೊರೆ ಹಾಲು
4
ಹೊಸ ವರ್ಷದ ಅಂಗಳದ ತುಂಬ ಮಗಳು ಬಣ್ಣ ಬಣ್ಣದ ರಂಗೋಲಿ ಚಿತ್ರವಿಟ್ಟಳು
ನಡುಮನೆಯಲಿ ಹಸಿ ಆರಿದ ದೇಹದ ಬಟ್ಟೆ ಕಂಡು ಅವ್ವನ ಕಣ್ಣು ತುಂಬಿಕೊಂಡವು
5
ಮಾಗಿಯ ಕಾಲದ ನದಿಗಿಳಿಬಿಟ್ಟ ಬೆರಳು ಜುನುಗುಟ್ಟಿ ಸೆಟೆದುಕೊಂಡವು
ಬೆರಳು ಬೆಚ್ಚಗಾಗಲು ತುಟಿಗೆ ಸವರಿಕೊಂಡರೆ ತುಟಿ ಸುಟ್ಟು ಕಪ್ಪಗಾದವು
6
ಗಾಳಿ ಬೀಸಿದ್ದರೆ ಆ ದಿನ ಗೌಡರ ಹುಡುಗನ ಬುತ್ತಿಗಂಟಿನ ರೊಟ್ಟಿ ನನ್ನೆಡೆಗೆ ಹಾರಿಬರುತ್ತಿತ್ತು
ಆ ಹುಡುಗ, ರೊಟ್ಟಿಗಿಂತ ಬೀಸದ ಗಾಳಿಯ ಚಿತ್ರವೇ ಯಾಕೊ ನನ್ನಲ್ಲಿನ್ನೂ ಉಳಿದುಬಿಟ್ಟಿದೆ
7
ಅವಳು ದಿನಕ್ಕೊಮ್ಮೆಯಾದರೂ ಅನ್ನುತ್ತಾಳೆ ನಿನ್ನದು ಮಾಗಿದ ಮನಸು ಗೆಳೆಯಾ
ಮಾಗಿದ ಹಣ್ಣು ತೊಟ್ಟಲ್ಲಿ ತುಂಬ ಹೊತ್ತು ನಿಲ್ಲದು ಎನ್ನಲಾಗದೆ ಮೌನವಾಗುತ್ತೇನೆ
8
ಹಗಲು ಎಲ್ಲವೂ ಸಲೀಸಾಗಿಯೇ ನಡೆದುಹೋಯಿತು
ನಾನ್ಯಾರು ನೀನ್ಯಾರೆಂದು ತಿಳಿಸಲು ರಾತ್ರಿಯೇ ಬರಬೇಕಾಯಿತು
9
ಬೀಸಿಬಂದ ಗಾಳಿಗೆ ಅವಳ ಚಿತ್ರವಿದ್ದ ಹಾಳೆ ಹಾರಿಹೋಯಿತು
ಅವನ ಕೈಯಲಿ ಮತ್ತೆ ಚಿತ್ರ ಬರೆವ ಕ್ಷಣಗಳು ಹುಟ್ಟಿಕೊಂಡವು
10
ಆ ಬೆಳಗು ಮಾಗಿಯ ತಣ್ಣನೆಯ ಗಾಳಿ ಎದೆಗೆ ಬಡಿಯಿತು
ಆತ್ಮದ ನೋವುಗಳಿಗೆ ಹೆಸರೇ ಇಲ್ಲವೆಂದು ಹಿಂತಿರುಗಿತು
11
ವರುಷವಿಡೀ ಸಾಲದಂತೆ ಬೆಳೆದ ಖಾಲಿತನ
ಮಾಗಿಯ ಗಾಳಿ ಸ್ಪರ್ಷಕೆ ದ್ವಿಗುಣಗೊಂಡಿತು


-ಬಸವರಾಜ ಸೂಳಿಬಾವಿ.