ಸೋಮವಾರ, ಜುಲೈ 29, 2013

ಕವಿತೆ :ವಿದ್ಯಾ ಕುಂದರಗಿ

                                   ಭಾವಬದಲಿಸುವಹೊತ್ತು
 

                                       - ವಿದ್ಯಾ ಕುಂದರಗಿ
ಹಗಲು ಬೆಳಗನುಂಡು
ಇರುಳು ಮೋದವನುಂಡು
ಹುಣ್ಣಿಮೆಯಲಿ ತಿಂಗಳ ಕುಡಿದು
ಕಾರ್ಗತ್ತಲಲಿ ಅಂತರಾಳಕ್ಕಿಳಿದು
ಅರುಣನೊಂದಿಗೆ ಬೆಂದು
ವರುಣನೊಂದಿಗೆ ಚಿಗುರಿದರೂ 
ಬಿಸಿಲಿಗೆ ತಡವಿಲ್ಲದೆ ಧೂಳಾಗುವ
ಮಳೆಗೆ ತಡವಿಲ್ಲದೆ ರಾಡಿಗೊಳ್ಳುವ
ಇವಳಿಗೆ
ಬಿಸಿಲಿಗೆ ಪ್ರಾಣದುಸಿರಾಗುವ
ಮಳೆಗೆ ಹಚ್ಚಹಚ್ಚಡವಾಗುವ
ನಮ್ಯತೆ ಬೇರೆ

ಭೂರಮೆಯ ರಾಗಕ್ಕೆ
ಸೂರ್ಯನ ಪಲ್ಲವಿ
ಚಂದ್ರನ ಅನುಪಲ್ಲವಿ

19-07-2013 *


ಶುಕ್ರವಾರ, ಜುಲೈ 19, 2013

ಮುಧೋಳ ಮಳೆ..

ಮುಧೋಳ ಮಳೆ : ಹನಿಗಳ ಆಭರಣ

ಡಾ.ಶಿವಾನಂದ ಕುಬಸದ. 

     ನಮ್ಮಲ್ಲಿ ಮಳೆಯಾದರೂ ಸುದ್ದಿಯೇ...ಅದೂ ಮಳೆಗಾಲದಲ್ಲಿ ಆದರೂ ಕೂಡ! ಅಚ್ಚ ಕಪ್ಪು ಮೋಡಗಳು ಸುಳಿದಾಡುತ್ತಿದ್ದು ಅನೇಕ ದಿನಗಳಾದವು. ಮಳೆಯೇ ಇಲ್ಲ. ಅದರಿಂದಾದ ಒಂದೇ ಪರಿಣಾಮವೆಂದರೆ ಸೋಲಾರ್ ದಲ್ಲಿ ನೀರು ಕಾಯುವುದಿಲ್ಲ..! ಪುಣ್ಯಕ್ಕೆ ಬೆಳಗಾವಿಯಲ್ಲೋ ಮಹಾರಾಷ್ಟ್ರದಲ್ಲೋ ಮಳೆಸುರಿದು ನಮ್ಮ “ಘಟಪ್ರಭೆ” ಒಂದಿಷ್ಟು ನೀರು ಹೊತ್ತು ತಂದು ನಮ್ಮ ನೆಲವನ್ನು ಹಸಿರಾಗಿಸುತ್ತಾಳೆ. ನಾವು ಯದ್ವಾ ತದ್ವಾ ನೀರುಣಿಸಿ ನಮ್ಮ ಹೊಲಗಳನ್ನು ಜೌಗಾಗಿಸಿ, “ಸವುಳು-ಜವುಳು” ಕಾರ್ಯಕ್ರಮಕ್ಕೆ ಗಂಟು ಬೀಳುತ್ತೇವೆ...!!


ಇಂದು ಮಧ್ಯಾಹ್ನ ಸಣ್ಣಗೆ ಮಳೆ ಸುರಿದಾಗ ನಮ್ಮ ಮನೆಯದುರಿನ ತೂಗುಕುರ್ಚಿಯಲ್ಲಿ ಕುಂತು ಅದನ್ನು ನೋಡಿದ್ದೇ ಒಂದು ಅದ್ಭುತ ಅನುಭವ. ಸೃಷ್ಟಿಯ ಮಾಯೆಯೇ ಅಂಥದು.. ಸಣ್ಣಗೆ ಸುರಿದ ಮಳೆಯ ಹನಿಗಳನ್ನು ಗಿಡದ ಎಲೆಗಳು ಧರಿಸಿ, ಆಮೇಲೆ ಸ್ವಲ್ಪವೇ ಬಾಗಿ, ಹನಿಗಳು ಧೊಪ್ಪನೆ ಬಿದ್ದು ಪೆಟ್ಟಾಗಬಾರದೆಂದು ಪ್ರೀತಿಯಿಂದ ನೆಲಕ್ಕಿಳಿಸುವ ಪರಿಯ ಕಂಡು ಸೋಜಿಗ ನನಗೆ. ಹೂವುಗಳೆಲ್ಲ ತೃಪ್ತಿಯಿಂದ ಮುಖವರಳಿಸಿ ಕಣ್ಣು ಹಿಗ್ಗಿಸಿ ಮಳೆಯನ್ನು ಇಳೆಗೆ ಬರಮಾಡಿಕೊಳ್ಳುತ್ತಿರುವ೦ತೆ ಕಾಣುತ್ತಿದ್ದವು. ಹುಲ್ಲುಹಾಸು ಹುರುಪುಗೊಂಡು ಹನಿಗಳ ಆಭರಣ ಧರಿಸಲು ಸಜ್ಜಾಗಿ ನಿಂತಿತ್ತು.

ಇಂಥ ದೃಶ್ಯ ನಮಗೊದಗುವುದೇ ಅಪರೂಪ. ಮಳೆ ಬರುವಾಗ ಒಂದೋ ನಾವು ರಾತ್ರಿಯ ನಿದ್ದೆಯಲ್ಲಿರುತ್ತೇವೆ. ಬೆಳಗಾಗೆದ್ದು ರಸ್ತೆ ರಾಡಿಯಾದಾಗಲೇ ಗೊತ್ತು ಮೋಡಗಳು ಕರಗಿದ್ದವೆನ್ನುವುದು. ಸೋಮಾರಿ ಮನಸ್ಸು ಖುಷಿ ಪಡುತ್ತಿರುತ್ತದೆ, “ಇವತ್ತು ವಾಕಿಂಗ್ ಇಲ್ಲ” ಎಂದು..! ಇಲ್ಲವೇ ಮಧ್ಯಾಹ್ನದ ರೋಗಿಗಳ ಮಧ್ಯೆ ಮಳೆ ನೋಡುವದಂತೂ ದೂರ ಬಂದ ಅತಿಥಿಗಳನ್ನು ಮಾತಾಡಿಸುವುದೂ ಅಸಾಧ್ಯ.

ಇಂದು ‘’ಅಷಾಢ ಏಕಾದಶಿ’’ ಪೇಷಂಟ ಕಡಿಮೆ. ಹೀಗಾಗಿ ಈ ಭಾಗ್ಯ ಒದಗಿ ಬಂತು..!!

ಭಾನುವಾರ, ಜುಲೈ 14, 2013

ಹನಿಗವಿತೆಗಳು

ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ

***
ಈ ಪ್ರೀತಿ
ಜಗದ ರೀತಿ
ಎಲ್ಲಕ್ಕೂ ಒಂದು ನೀತಿ
ಆದರೂ ಸದಾ
ಜೊತೆಯಲ್ಲೇ
ಇರುತ್ತದೆ ಒಂದು ಭೀತಿ
- ಡಾ.ಪ್ರಕಾಶ ಗ. ಖಾಡೆ

***

ನಮಗೆ ಮಾತ್ರ
ಒಂದು ಕಟ್ಟು ಕಟ್ಟಳೆ
ಎಲ್ಲಿದೆ ಹೇಳಿ
ಹಾರುವ ಹಕ್ಕಿಗೆ
ಬೆಳೆವ ಪೈರಿಗೆ
ಜಗದಗಲದ ವಿಸ್ತಾರದ ಹೆರಿಗೆ

- ಡಾ.ಪ್ರಕಾಶ ಗ. ಖಾಡೆ
***
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಂದ

- ಡಾ.ಪ್ರಕಾಶ ಗ. ಖಾಡೆ

ಶನಿವಾರ, ಜುಲೈ 13, 2013

ಹನಿಗವಿತೆ :ಗುರುನಾಥ ಬೋರಗಿ


ಹನಿಗವಿತೆ

ವಿರಹಿ,ನಾನೊಬ್ಬನೇ
ಅಲ್ಲ ಗೆಳತೀ...
ತೀರ ತಬ್ಬಿಕೊಳ್ಳುವ
ಹಂಬಲ,
ಕಡಲ ಅಲೆಗಳಿಗೂ ಇದೆ
-ಗುರುನಾಥ ಬೋರಗಿ

ಕವಿತೆ :ಸುರೇಶ ಎಲ್.ರಾಜಮಾನೆ,ಮುಧೋಳ.

ಮಳೆ ಹಾಡು ಪಾಡು
- ಸುರೇಶ ಎಲ್.ರಾಜಮಾನೆ

ಮಳಿ ಬಂತು ಬಾಳ ಜೋರ
 ನಾನಾವಾಗ
ಹದಿನಾರ ವರ್ಷದ ಪೋರ
 ಶಾಲಿಗಿ ಹೋಗಿದ್ದೆ
ಎಂಟು ಕಿಲೋಮಿಟರ್ ದೂರ
 ಸೈಕಲ್ ಮ್ಯಾಲೆ ನಾ ಸಾಹುಕಾರ


ದಾರಿಯೊಳಗ
ಮುಂದಿನ ಗಾಲಿ ಪಂಚರ್
 ಬರ ಬರ ಬನ್ನಿ
ಅಲ್ಲೊಂದಿತ್ತು ಹುಂಚಿ ಮರ
 ಅಲ್ಲೆ ನಿಂತನಿ ಮತ್ತ ಶುರುವಾತು
ಮಳಿಕಿಂತ
ಗಿಡದ ಮ್ಯಾಲಿನ ಹನಿಗೋಳ ಕಾರಬಾರ

ಬ್ಯಾಡ ಅಂದಾವ್ನ
ಹೊಂಟ್ನಿ ಹಂಗ ಮಳ್ಯಾಗ
 ಮನಿಗಿ ಹೋಗಿ ನೋಡಿದ್ರ ಹೊಳಿ
ನಮ್ ಗುಡಸಲಿನ್ಯಾಗ
ಹಾದ ಹೋದಂಗಾಗಿತ್ತು
 ಅಡಿಗಿ ಮನ್ಯಾಗ ಗಡಿಗೀಲೆ ನೀರ ಎತ್ತಿ ಹಾಕಾಕ
 ತೋಡಿದಂಗಿತ್ತು ಒಂದ ಬಾವಿ

ಅಪ್ಪ
ದನಗೋಳ ಗುಡಸಲಿನ್ಯಾಗ ಜೋತ ಬಿದ್ದರೋ
ಕಟ್ಟಿಗಿ ಕಂಬಕ್ಕೊಂದ
ಕಟ್ಟಿಗಿ ಆಸರ ಕೊಡ್ತಿದ್ದ

ಅವ್ವ
ಅಜ್ಜಿ ಹೊಲದಿದ್ದ ಕೌದಿಯೊಳಗ
 ಕಟ್ಟ ಇಟ್ಟಿದ್ದ ಸ್ವೇಟರ್ ಹಾಕೊಂಡು
 ಕಡ್ಲಿ ಹುರಿತಿದ್ಲು
ಆ ಜಳ ಬಿಸಿ ಪರಿಮಳ

ಹಾಸಿಗಿಯೊಳಗ ನಾ
ನನಗೆರಡು ಅಂಗಿ
 ಮೊಳಕಾಲ್ನ ಮುಖಕ್ಕ ಹತ್ತುವಂಗ ಜಗ್ಗಿ
ಮುಖ ಅಷ್ಟ
 ಹೊರಗ ಹಾಕಿದರ ಸಿಡಿಲಿನ ಶಬ್ದ
ಮತ್ತ ಮಗ್ಗಲ ಮನಿ
 ತಗಡು ಗಡ ಗಡ ಸೌಂಡ ಮಾಡ್ತಿತ್ತು

ಒಳಗೊಳಗ ಖುಷಿ ನಮ್ದು ಬಿಲ್ಡಿಂಗ್ ಇಲ್ಲ
ಬಿದ್ರ ಸಾಯುದಿಲ್ಲ; ಆದರೂ
ಗುಡಿಸಲ ತಟ್ಟಿ ಗಟ್ಟಿಲ್ಲ ಅಂತ
ಮನಸಿಗಿ ಬ್ಯಾಸರ
 ಮನಸಿನ್ಯಾಗ ನೆನೆದ ನೆನಪು
 ಅಯ್ಯೋ! ದೇವ್ರ
ಯಾವಾಗ ಬರತಾನಪ್ಪ ಸೂರ್ಯ ....||

=ಸುರೇಶ್.ಎಲ್.ರಾಜಮಾನೆ(ಸೂರ್ಯ*), ರನ್ನಬೆಳಗಲಿ.
  ತಾ|| ಮುಧೋಳ ಜಿ|| ಬಾಗಲಕೋಟ

ಶುಕ್ರವಾರ, ಜುಲೈ 12, 2013

ಕವಿತೆಗಳು :ವಿದ್ಯಾ ಕುಂದರಗಿ

ಕಡಲ ದಂಡೆಯಲ್ಲಿ

ಭಾವಕಡಲ ದಂಡೆಯಲ್ಲಿ
ಅವಿಶ್ರಾಂತ ಅಲೆಗಳು
ಮರಳ ಹಾಸಿನ ಮೇಲೆ
ಕ್ಷಣ ನಿಲ್ಲದ ಚೆಲ್ಲಾಟ,

ಬಂಧ ಸಂಬಂಧವೇನೋ.....
ಒಂದರಂತಿನ್ನೊಂದು,
ಒಂದರೊಳಗೊಂದು........
ಮತ್ತೊಂದು, ಮಗದೊಂದು.........
ಒಂದAರ್ಹಿಂದೊಂದು ಬೆಂಬಿಡದ
ನಿತ್ಯ ನಿರಂತರ ಓಟ

ಎಲ್ಲಿಯೂ ತಪ್ಪದ ತಾಳ,
ನೀರ ಮುಸುಕಿನ ಒಳಗೆ
ಉಸುಕಿನೊಂದಿಗಿನ ಮೇಳ,

ನೂರು ಮುತ್ತುಗಳ ಒಡಲು
ನದಿಗಳೊಂದಿಗೆ ನಡೆದು ಬಂದ
ಸಾವಿರ ಜೀವಗಳಿಗೆ ಮಡಿಲು,

ದಣಿವಿಲ್ಲ, ದಾವಂತವಿಲ್ಲ......
ಎಂದಿಗೂ ನಿಲ್ಲುವುದಿಲ್ಲ
ಮೈಯನೆಂದೂ ಮರೆಯುವುದಿಲ್ಲ
ಸತತ ಸಂಗ ತೊರೆಯುವುದಿಲ್ಲ,

ಅಂತಸ್ಪುರಣದ ಒಡಲತಂತಿಗೆ
ಸೋಲನರಿಯದ ಮಿಡಿತ........
ಯಾವ ಜನುಮದ ತೀರವೋ
ನಿಲ್ಲಲಾರದ ತುಡಿತ.
                     - ವಿದ್ಯಾ  ಕುಂದರಗಿ.    
          

ಬಿಸಿಲ ಬೆಳಗಿನ ಸಡಗರ

ಇಂದು ಮಳೆಗೆ ರಜೆ 
ಬಿಸಿಲ ಬೆಳಗಿನ ಸಡಗರ 
ಸ್ವಾತಂತ್ರ್ಯ ಸಾರುವ 
ಗುಬ್ಬಚ್ಚಿ ಹಿಂಡು 
ಬೆಳಗಿನ ಬೆಡಗು 
ಹೊತ್ತು ತಂದಂತೆ

      ಇಬ್ಬನಿ

ಮುಸುಕು ಹಾಕಿದ ಪುಷ್ಪ 
ಮುಖ ತೆರೆದು, ನಸುನಾಚಿ 
ಕೈ ಮಾಡಿ ಕರೆದಂತೆ   
ನವೀರು ಬಣ್ಣಗಳ ಬೀರಿ 
ಹಾರಿ ಬರುವ ದುಂಬಿಪತಂಗ
ಪ್ರಣಯ ಪಯಣಕ್ಕೆ ಸಿದ್ದವಾದಂತೆ

. ಹೂ ಪತ್ರದ ಕೆಳಗೆ ....
 ಕ್ರೀಮಿಕೀಟಗಳ ಕಿಟಲೆ .................. 
ಮೆಲ್ಲನೆ ಸೂಯುವ ಗಾಳಿ
ಕಿವಿಯಲ್ಲಿ ಕಿಲಕಿಲ ನಕ್ಕಂತೆ......
ತಲೆದೂಗುತ್ತವೆ ಗಿಡ ಬಳ್ಳಿಗಳು 
ನೆರೆಹೊರೆಯು ಮಾತನಾಡಿಕೊಂಡಂತೆ............
ಬಿಸಿಲ ಬೆಳಗಿನ ಹೊಳೆತಕ್ಕೆ
ಟೊಂಗೆಟಿಸಿಲುಗಳು ತೂಗಿ
ಸಂದುಸಂದುಗಳು ಚಿಗುರೊಡೆದಂತೆ
ನಿನ್ನೆವರೆಗೆ ಜಡಿದ ಮಳೆಯಲ್ಲಿ
ತೊಪ್ಪೆಯಾದ ಭಾವಗಳು
ಹಸಿಯನುಂಡು ಹಚ್ಚಗಾದಂತೆ
ಬೆಚ್ಚಗಿನ ಬಂಧದಲಿ 
ಉಸಿರ ಬಿಸಿ ತಣ್ಣಗಾದಂತೆ
ಮತ್ತೆ ಮಳೆಯನ್ನು 
ಒತ್ತಾಯದಿಂದ ಕರೆತಂದು
ದಂದುಗಕ್ಕೆ ಹಾಜರಾದಂತೆ.

•ವಿದ್ಯಾ ಕುಂದರಗಿ

ಗುರುವಾರ, ಜುಲೈ 11, 2013

ವಿದ್ಯಾ ಕುಂದರಗಿಯವರ ಕವಿತೆಗಳು

 ಬೆಳೆಯುವ ಭೂಮಿಯಾದವರು
  -ವಿದ್ಯಾ ಕುಂದರಗಿ

ಈ ಭುವಿಯಲ್ಲಿ
ಹಸಿರೊಂದೇ ಬೆಳೆಯುವುದಿಲ್ಲ.....
ಹಸಿವೂ ಬೆಳೆಯುತ್ತದೆ.
ಮಾವೋಂದೆ ಚಿಗುರುವುದಿಲ್ಲ.....
ಬೇವೂ ಚಿಗುರುತ್ತದೆ.
ಕೋಗಿಲೆಯೊಂದೇ ಕೂಗುವುದಿಲ್ಲ......
ಕಾಗೆ ಗೂಬೆಗಳು ಆಲಾಪಿಸುತ್ತವೆ.
ಬೆಳದಿಂಗಳಷ್ಟೇ ಬೀರುವುದಿಲ್ಲ......
ಬಿಸಿಲೂ ರಣಗುಡುತ್ತದೆ.

ಜಡಿ ಮಳೆ ಇಂಗಿ ಹೋಗಿ
ತಂಪು ಮಾತ್ರ ಉಳಿಯುವುದಿಲ್ಲ......
ಊರಿದ ಹೆಜ್ಜೆ ಕಿತ್ತೆಳಿಸಲು
ಕಸರತ್ತು ಬಯಸುವ
ಕೆಸರೂ ಉಳಿಯುತ್ತದೆ.

ಸಹಿಸಿ ಬದುಕುವ ಜನರಿದ್ದಾರೆ
ಬಿಸಿಲ ಚರ್ಮದಲೂ
ಶುಭ್ರ ಹೃದಯವಿದ್ದವರು .......
ಮಣ್ಣ ಹುಡಿಯಲ್ಲಿ ಹುಡಿಯಾಗಿ
ದುಡಿದು, ಧಣಿಕರಿಗೆ ಸರಕಾಗಿ,
ಅವರ ಗೋಣಿಗಳ ತುಂಬಿ,
ಹೊಟ್ಟೆ ಬಿರಿಯೆ ಸುರಿದು
ತಾವ್ಹಸಿದು,ನೋವಿನಲೂ ನಕ್ಕವರು.

ಮಳೆ ಇಲ್ಲದೆ ಬೆಳೆದು
ಕೈಕೆಸರಾಗದೆ ಮೊಸರುಂಡವರ
ಅಕ್ಷರದ ಅಟ್ಟಹಾಸಕೆ ಹೆದರಿ
ಹಿಂಜರಿದವರು.
ಬೇವಿನಂತೆ ಚಿಗುರುತ್ತಾರೆ.
ಕಾಗೆಗೂಬೆಗಳೊಡನೆ ಹಾಡುತ್ತಾರೆ.
ಕೆಸರಿನೊಂದಿಗೆ ತಂಪಾಗುತ್ತಾರೆ.
ಬಿಸಿಲಿನೊಂದಿಗೆ ಒಣಗುತ್ತಾರೆ.
ವ್ಯತಿರಿಕ್ತವಾದ ಎಲ್ಲವನ್ನೂ ಸಹಿಸಿ
ಬದುಕ ಸಾಗಿಸುತ್ತಾರೆ.

ಸಿಮೆಂಟ್ ಕಾಡಿನವರ ಗುರಿಗಳು
ಇವರಿಗೆ ಗೋರಿಗಳಾದರೂ,
ದುಡಿಯುವ ಕೈಗಳಲ್ಲದೆ
ಬಿತ್ತುವ ಬೀಜವೂ ಆದವರು.
ಕಾಳು ತುಂಬುವ ಕಣಜವಲ್ಲದೆ
ಬೆಳೆಯುವ ಭೂಮಿ ಆದವರು
ಇವರು
ಬೆಳೆಯುವ ಭೂಮಿಯೂ ಆದವರು.
         *
                                                                                       
  ಆದ್ಯಂತಗಳ ನಡುವಿನ ಅರ್ಧಸತ್ಯ


ನಿನ್ನ ಹಾಗೇಯೇ.......
ಮತೇರಿಸುವ ಕಂಗಳಲ್ಲಿ
ಬೆಸೆಯಬೇಕಿತ್ತೇ ಭಾವಗಳ?
ಹೊಗೆಸುತ್ತಿದ ತುಟಿಗಳ
ಚುಂಬಿಸಬೇಕಿತ್ತೇ?
ಪಾಪದ ಪಿಂಡಗಳ ಹೆರಲು
ತಿಟೆ ತೀರಿಸಲೇ ಬೇಕೆ?

ನಿನ್ನ ಹಾಗೆಯೇ......
ಘಮ್ಮೇನ್ನುವ ಗಬ್ಬು ನಾತಕ್ಕೆ
ಮೂಗು ಕಟ್ಟಿದರೂ
ಇಕ್ಕಟ್ಟಿನಲ್ಲೂ ಉಸಿರಬೇಕಿತ್ತೇನೆ?
ಗೆಳತಿ............................
ವಿಕೃತವಾದರೂ ಬದುಕ
ತಬ್ಬಿಕೊಳ್ಳಬೇಕಿತ್ತೇ?
ಅಂಧಕ್ಕಾರದಲ್ಲೂ ಹೃದಯ
ಬಿಚ್ಚಬೇಕಿತ್ತೇನೇ?
ಸಂಪ್ರದಾಯಕೆ
ಬಲಿಯಾಗಲೇಬೇಕೆ ಜೀವ?

ಒಂಟಿಯಾಗಿ ಸುರಿಸಿದ್ದು
ಬೆವರಲ್ಲವೇ?
ಏಕಾಂಗಿಯಾಗಿ ನೆರಳಿದ್ದು
ನೋವಲ್ಲವೆ?
ಒಂಟಿ ಹಕ್ಕಿಯ ಹಾಡಿಗೆ
ಎಲ್ಲವೂ ಕಿವುಡೆ?

ಅತಂತ್ರ ದಂಡೆಯ ಮೇಲೆ
ಪರತಂತ್ರ ಬದುಕಿನ
ತನನ ತಾಣಗಳಿಗೆ
ಹೆಜ್ಜೆ ಹೊಂದಿಸಿದ್ದರೆ......
ದುಡಿದ ದುಡಿತಗಳು
ನೊಂದ ನೋವುಗಳು
ಬೇಡುವ ಬಯಕೆಗಳು
ನಿನ್ನ, ನಿನ್ನಂಥವರ
ಅರ್ಥಹೀನ ದೃಷ್ಟಿಯಲ್ಲಿ
ನಿಜವಾಗುತ್ತಿದ್ದುವೇನೋ?
ಅವಕ್ಕೆ ಮೌಲ್ಯವಿರುತ್ತಿತ್ತು.
ಹೌದೇನೇ?

ಹಾಗಿದ್ದರೆ ಹೇಳೇ...........
ಹಾಗಿದ್ದರೆ ಹೇಳೇ
ಕಣ್ಣಿದ್ದು ಕುರುಡಾಗಿ
ಕಿವಿಯಿದ್ದು ಕಿವುಡಾಗಿ
ವಿಚಾರ ಶೂನ್ಯಳಾಗಿ
ಅಖಂಡ ಸತ್ಯದ ಆದ್ಯಂತಗಳ ನಡುವಿನ
ಪಂಚೇಂದ್ರೀಯ ರಹಿತ ಮುತ್ತೈದೆ.........
ಬದುಕು ಬಳಲಿತೇಕೇ
ಹೀಗೇ ಏಕಾಂಗಿಯಾಗಿ...............?
ಬಲಿಯಾಯಿತೇಕೇ
ಒಬ್ಬಂಟಿಯಾಗಿ................?
ಹೇಳೇ.................
ಅದು ತುಂಬು ಬದುಕೇ ?
ಹೇಳೇ.................
ಅದು ತುಂಬು ಬದುಕೇ                            
           *




*
ವಿದ್ಯಾ ಕುಂದರಗಿ,
ಉಪನ್ಯಾಸಕರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ಧಾರವಾಡ
ಮೊ. - 9900221367

ಸೋಮವಾರ, ಜುಲೈ 8, 2013

ಮಕ್ಕಳ ಸಾಹಿತ್ಯ ಹೀಗಿರಲಿ..-ಡಾ.ಪ್ರಕಾಶ ಗ.ಖಾಡೆ

                    ಮಕ್ಕಳ ಸಾಹಿತ್ಯ ಹೀಗಿರಲಿ..
                                                          -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

         ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು ಕಟ್ಟಿಕೊಡುವ ಕೆಲಸ ಆ ಕಾಲದಲ್ಲಿ ಬೆಳಗಾವಿ ಮತ್ತು ಧಾರವಾಡಗಳಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳಿಂದ ನಡೆಯಿತು.ಹೀಗೆ ನಡೆದ ಪ್ರಕ್ರಿಯೆಯು ಮಕ್ಕಳ ಸಾಹಿತ್ಯದ ರಚನೆಗಳಿಗೆ ಸಾರ್ವತ್ರಿಕತೆಯನ್ನು ಒದಗಿಸಿಕೊಟ್ಟಿತು.ಸಾಹಿತ್ಯದ ಎಲ್ಲ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕೆ ಇದೆ.ಸರಳವಾದ ಶಬ್ದ,ಪದಗಳ ಪುನರುಕ್ತಿ,ಲಯಗಾರಿಕೆ,ಪ್ರಾಸ,ನಾಟಕೀಯ ಸಂಭಾಷಣೆ ಮುಂತಾದ ಲಕ್ಷಣಗಳನ್ನು ಪಡೆದುಕೊಂಡಿರುವ ಮಕ್ಕಳ ಸಾಹಿತ್ಯ ಪ್ರಧಾನವಾಗಿ ಮಕ್ಕಳಲ್ಲಿ ಜ್ಞಾನದಾಹವನ್ನು ತಣಿಸಿ ಸೃಜನಾತ್ಮಕತೆಯನ್ನು ,ಕಲ್ಪನಾಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ.
ಮಕ್ಕಳ ಸಾಹಿತ್ಯವನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಬಹುದು.
1.ಶಿಶು ಪ್ರಾಸದ ರಚನೆಗಳು : ಮೂರರಿಂದ ಆರು ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರಾಣಿ ,ಪಕ್ಷಿಗಳ ಬಗ್ಗೆ ಕುತೂಹಲವಿರುತ್ತದೆ.ಮಗು ತನ್ನ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯಿಸಿಕೊಳ್ಳುವ ಪರಿಯೇ ಬೆರಗು ಹುಟ್ಟಿಸುತ್ತದೆ.ಇಂಥಲ್ಲಿ ನಮ್ಮ ರಚನೆಗಳು ಪುಟ್ಟ ಪುಟ್ಟ ಸಾಲುಗಳ ಮೂಲಕ ಮಗುವಿನ ಮನಸ್ಸನ್ನು ಸೆಳೆದುಕೊಳ್ಳುವಂತೆ ಇರಬೇಕಾಗುತ್ತದೆ. ‘ಒಂದು ಎರಡು ಬಾಳೆಲೆ ಹರಡು.’, ‘ನನ್ನಪಾಟಿ ಕರಿಯದು ಸುತ್ತು ಕಟ್ಟು ಬಿಳಿಯದು’,‘ಬೇಬಿ ಬೇಬಿ ಸಣ್ಣಾಕಿ’,’ಬಸ್ಸು ಬಂತು ಬಸ್ಸು’..ಇಂಥ ಮೊದಲಾದ ರಚನೆಗಳನ್ನು ಮಕ್ಕಳು ಅಭಿನಯದ ಮೂಲಕ ಕಲಿಯುವ ಪರಿ ಚೈತನ್ಯದಾಯಕವಾಗಿದೆ.ಇಂಥಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸುವುದು ಕೇವಲ ಗಿಳಿ ಪಾಠ ಮಾತ್ರವಾಗಿ ಬಿಡುತ್ತದೆ.ಈ ಅಪಾಯವನ್ನು ಮೀರಿ ನಮ್ಮ ಸಾಹಿತಿಗಳು ಬರೆಯಬೇಕಾಗಿದೆ.
  2. ಅತಿಮಾನುಷ ಕಥೆಗಳು : ಆರರಿಂದ ಒಂಬತ್ತು ವರ್ಷದ ಎಳೆಯ ಮಕ್ಕಳು ಸಾಹಸ,ಚಮತ್ಕಾರಿಕ ಮತ್ತು ನೀತಿದಾಯಕ ಕಥನ ಗೀತೆ,ಕಥೆಗಳಿಗೆ ಮಾರುಹೊಗುತ್ತಾರೆ.ಇಂಥ ರಚನೆಗಳಿಗೆ ಆಕರ್ಷಿತರಾಗುತ್ತಾರೆ.ಅಜ್ಜಿಯ ಕಥೆಗಳು,ಕುತೂಹಲ ತಣಿಸುವ ರಂಜನೀಯ ಕಥೆಗಳು,ಅತಿಮಾನುಷ ಕಥೆಗಳು ಈ ಬಗೆಯ ರಚನೆಗಳ ಮೂಲಕ ಮಕ್ಕಳು ಹೊಸದೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ.ಪ್ರಾಣಿ ,ಪಕ್ಷಿಗಳ ಸಾಹಸ ಕಥೆಗಳು,ಕಣ್ಣಿಗೆ ಕಾಣದ ಲೋಕದ ಜನರ ಚಮತ್ಕಾರಗಳು ಈ ವಯಸ್ಸಿನ ಮಕ್ಕಳಿಗೆ ಬೇಕು.ರೋಚಕ ರಚನೆಯ ಸಾಹಿತ್ಯ ನಮ್ಮ ಮಕ್ಕಳ ಸಾಹಿತಿಗಳಿಂದ ಹೆಚ್ಚಾಗಿ ಬರಬೇಕಾಗಿದೆ.
3.ಮೌಲ್ಯಾಧಾರಿತ ರಚನೆಗಳು : ಒಂಬತ್ತರಿಂದ ಹದಿಮೂರು ವರ್ಷ ವಯಸ್ಸಿನ ಮಕ್ಕಳು ಅಕ್ಷರ ಬಲ್ಲವರು ಹಾಗೂ ಒಂದಿಷ್ಟು ತಿಳುವಳಿಕೆ ಉಳ್ಳವರೂ ಆಗಿರುತ್ತಾರೆ.ಇಂಥ ಮಕ್ಕಳಿಗೆ ಸ್ನೇಹ,ಸಹಕಾರ,ರಾಷ್ಟ್ರಪ್ರೇಮ,ಗೌರವ, ಪ್ರಾಮಾಣಿಕತೆ ಮೊದಲಾದ ಮೌಲ್ಯ ಬಿತ್ತುವ ರಚನೆಗಳು ಬೇಕು.ಜೊತೆಗೆ ಚಾರಿತ್ರಿಕ.ಪೌರಾಣಿಕ,ಮಹಾಪುರುಷರ ಕಥೆಗಳು ,ವೈಜ್ಞಾನಿಕ ಅದ್ಭುತಗಳು,ಸಮಕಾಲೀನರ ಸಾಹಸಗಳು ಮೊದಲಾದ ಸಂಗತಿಗಳ ಕಡೆ ಈ ವಯೊಮಾನದ ಮಕ್ಕಳು ಆಕರ್ಷಿತರಾಗುತ್ತಾರೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ.
ಇಂಥ ಮೊದಲಾದ ರಚನೆಗಳು ಈ ವಯೋಮಾನದ ಮಕ್ಕಳಿಗೆ ಅರ್ಥವಾಗುವುದರೊಂದಿಗೆ,ತುಂಬಾ ರುಚಿಸುತ್ತವೆ.ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಆಸಕ್ತಿಗಳು ಇರುವುದರಿಂದ ಅವರ ಗ್ರಹಣ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಬರೆಯಬೇಕಾದ ಅನಿವಾರ್ಯತೆ ಮಕ್ಕಳ ಸಾಹಿತಿಗಳದ್ದಾಗಿರುತ್ತದೆ. ಮಕ್ಕಳ ಮನಸ್ಸು ಬಾಯಿ ತೆರೆದ ಖಾಲಿ ಬುಟ್ಟಿ ಅದರಲ್ಲಿ ಕಸ ತುಂಬದೇ ರಸ ತುಂಬುವ ಕೆಲಸ ಮಾಡಬೇಕಾದ ಜವಾಬ್ದಾರಿ ಮಕ್ಕಳ ಸಾಹಿತಿಗಳಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ಇವತ್ತು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ.ಹೊಸ ಭಾವ ಹೊಸ ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ, ವಿಜ್ಞಾನ, ವೈದ್ಯಕೀಯ ,ಪರಿಸರ, ಆಕಾಶ ,ಗ್ರಹಣಗಳು, ಕಂಪ್ಯೂಟರ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯವನ್ನು ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ. ಯಾವುದೇ ಮಗು ಅರ್ಧ ಬೆಳೆದ ಮನುಷ್ಯನಲ್ಲ ಮಕ್ಕಳು ಅವರಷ್ಟಕ್ಕೆ ಪರಿಪೂರ್ಣ ವ್ಯಕ್ತಿಗಳು. ಕಾರಣ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನ ಶೀಲರಾಗುವಂತೆ ಮಾಡುವ ಮತ್ತು ತಮ್ಮ ಸುತ್ತಲ ಪ್ರಪಂಚವನ್ನು ಅರಿಯುವಂತೆ ಮಾಡುವ ಯಾವುದೇ ಬರವಣಿಗೆಯೂ ಮಕ್ಕಳ ಸಾಹಿತ್ಯವೆನಿಸಿಕೊಳ್ಳುತ್ತದೆ.ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರಿಕರಾಗಿರುವ ಮಕ್ಕಳು ತಾನೇ ಹೊರಬೇಕು.ಅದಕ್ಕೆ ಸಜ್ಜುಗೊಳಿಸುವ ಸಾಹಿತ್ಯ ಮಕ್ಕಳ ಸಾಹಿತ್ಯವಾಗಿರುವುದು ಅತ್ಯಂತ ಮುಖ್ಯವಾಗಿದೆ.ಆದರೆ ಒಂದು ಅನುಮಾನ ಇನ್ನು ಮುಂದಿನ ದಿನಮಾನಗಳಲ್ಲಿ  ಬರಬಹುದಾದ ಬದಲಾವಣೆಗಳು ನಮ್ಮ ಉಹೆಗೂ ನಿಲುಕದಿರುವದರಿಂದ ನಾವು ನಮ್ಮ ಮಕ್ಕಳನ್ನು ಯಾವ ಭವಿಷ್ಯತ್ತಿಗೆ ತಯಾರು ಮಾಡಬಹುದು? ಎಂಬ ಪ್ರಶ್ನೆ ಮಕ್ಕಳ ಸಾಹಿತಿಗಳನ್ನು ಕಾಡದೇ ಇರಲಾರದು.
=====================================================================
-
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ
            ಮೊ.9845500890

ಶನಿವಾರ, ಜುಲೈ 6, 2013

ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ-ಡಾ.ಖಾಡೆ

 ವಿಶೇಷ ಲೇಖನ :
                                                   
                              ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ 

                                                                 -ಡಾ.ಪ್ರಕಾಶ ಗ.ಖಾಡೆ
( ಜನತೆಯ ಸಂಸ್ಕೃತಿಯ ಶಿಲಾಶಾಸನಗಳಾಗಿರುವ ಜನಪದರ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.)

       ಕನ್ನಡದಲ್ಲಿ ಈಗ ಚುಟುಕು ಸಾಹಿತ್ಯ ರಚನೆಯ ಭರಾಟೆ ನಡೆಯುತ್ತಿದೆ. ಹಿರಿಯ ತಲೆಮಾರಿನ ಕವಿಗಳೊಂದಿಗೆ ಇವತ್ತು ಹೊಸ ತಲೆಮಾರಿನ ಯುವ ಜನಾಂಗ ಈ ಬಗೆಯ ರಚನೆಯಲ್ಲಿ ತೊಡಗಿರುವುದು ಈ ಪ್ರಕಾರದ ಜನಪ್ರಿಯತೆ ಸಾರುತ್ತದೆ. ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತವಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಿಕವಾಗಿ ಮನಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯ. ಈ ಬಗೆಯ ರಚನೆಗಳಿಗೆ ಸೀಮೆ-ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನಾಧರಿಸಿ ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲ ಹೊತ್ತು ಚಿಂತನೆಗೆ ತೊಡಗಿಸಬೇಕು.
    ಚುಟುಕು ರಚನೆ ನಮ್ಮ ಅಕ್ಷರಸ್ಥ ಕವಿಗಳ ಕೈಯಲ್ಲಿ ಮಾತ್ರ ರಚನೆ ಆಗುವಂಥದು ಅಲ್ಲ. ಅದು ಅನೇಕ ಬಾರಿ ಅನಕ್ಷರಸ್ಥ ಜನರಾಡುವ ಮಾತಿನಲ್ಲಿ ಹೊರಹೊಮ್ಮುತ್ತದೆ. ಅನುಭವಸ್ಥ ಜನ ಸೃಷ್ಟಿಸುವ ಅನೇಕ ನಾಣ್ನುಡಿ ಗಾದೆಮಾತುಗಳು ಒಂದು ಬಗೆಯಲ್ಲಿ ನಮ್ಮ ಇಂದಿನ ಚುಟುಕು ರಚನೆಗಳನ್ನು ಹೋಲುತ್ತವೆ. ಒಂದು ಉದಾಹರಣೆಯ ಮೂಲಕ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳೋಣ. ಹಳ್ಳಿಗಳಲ್ಲಿ ಅನೇಕ ಬಗೆಯ ಜನರನ್ನು ಕಾಣುತ್ತೇವೆ. ಅವರ ವೃತ್ತಿ ಮನೋಭಾವದ ಮೂಲಕ ಅವರನ್ನು ಗುರುತಿಸುತ್ತೇವೆ. ಇಲ್ಲಿ ಒಂದು ಕಲ್ಲು ಎರಡು ಕುಟುಂಬಗಳ ಬದುಕಿಗೆ ಆಧಾರವಾದ ಬಗೆಗೆ ನಮ್ಮ ಜನಪದರಲ್ಲಿ ಒಂದು ನಾಣ್ನುಡಿ ಹೀಗೆ ಹೇಳುತ್ತದೆ.
    ಬಿದ್ದ ಕಲ್ಲ ಅಗಸಗ
    ಎದ್ದ ಕಲ್ಲ ಪೂಜಾರಿಗೆ
    ಇಲ್ಲಿ ಬರುವ ಕಲ್ಲು ಪಡೆದುಕೊಳ್ಳುವ ಕ್ರಿಯಾ ಮೌಲ್ಯವನ್ನು ಗಮನಿಸಿ, ಅಗಸನು ಬಟ್ಟೆ ತೊಳೆಯುವ ಕಾಯಕಕ್ಕೆ ಕಲ್ಲು ಬಳಸಿಕೊಂಡರೆ, ಪೂಜಾರಿ ಅದನ್ನು  ದೇವರು ಮಾಡಿ ಪೂಜೆ ಪುನಸ್ಕಾರಗಳೊಂದಿಗೆ, ಭಕ್ತರಿಂದ ಬರುವ ಪ್ರಸಾದದಿಂದ ತನ್ನ ಮನೆಯನ್ನು ನಿರ್ವಹಿಸಬಲ್ಲವನಾಗುತ್ತಾನೆ. ಇಂಥ ಸಂಗತಿಗಳನ್ನು ಚುಟುಕಾಗಿ ಕಟ್ಟಿಕೊಡುವ ಅನೇಕ ರಚನೆಗಳನ್ನು ನಮ್ಮ ಜಾನಪದ ಭಂಡಾರದಲ್ಲಿ ಸಿಕ್ಕುತ್ತವೆ. ಜಾನಪದವನ್ನೇ ಉಸಿರಾಗಿಸಿಕೊಂಡಿದ್ದ ನಮ್ಮ ಪೂರ್ವಜರು ಬದುಕಿನ ಅನುಭವಾಮೃತವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಯಾವುದೇ ಒಂದು ವ್ಯವಸ್ಥೆ ಸರಿ ದಾರಿಯಲ್ಲಿ ನಡೆಯಬೇಕಾದರೆ ಆ ವ್ಯವಸ್ಥೆಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಈ ಮಾತನ್ನು ಜನಪದರು ಹೇಳುವುದು ಹೀಗೆ;
         ಹಿರೇರಿಲ್ಲದ ಮನಿ ಅಲ್ಲ,
          ಗುರು ಇಲ್ಲದ ಮಠ ಅಲ್ಲ.

         ವ್ಯವಸ್ಥೆಯನ್ನು ಸರಿದಾರಿಗೆ ತರುವುದು ಅನಿವಾರ್ಯವಾಗಿರುವ ಮುಖಂಡತ್ವವನ್ನು ಈ ರಚನೆ ಸಾರುತ್ತದೆ. ಮನೆ ಮತ್ತು ಮಠಕ್ಕೆ ಒಂದು ಪರಿಪೂರ್ಣತೆ ಬರಬೇಕಾದರೆ ಅದನ್ನು ನಿರ್ವಹಿಸುವ ಕೇಂದ್ರಿಕೃತ ಬದುಕನ್ನು ಇಲ್ಲಿ ಕಾಣುತ್ತೇವೆ. ಇಂದು ರಚನೆಯಾಗುತ್ತಿರುವ ಅನೇಕ ಚುಟುಕುಗಳು ನಮ್ಮ ಬದುಕನ್ನು ಪ್ರತಿನಿಧಿಸುತ್ತಿವೆ. ಇಂದು ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆ ಮೊದಲಾದ ಪಿಡುಗುಗಳ ಬಗ್ಗೆ ಅನೇಕರು ಬರೆದಿದ್ದಾರೆ. ಈ ಬಗೆಯ ರಚನೆಗಳನ್ನು ಜಾನಪದರಲ್ಲೂ ಕಾಣಬಹುದು.
        ಅಮ್ಮನವರು
         ಪಟ್ಟಕ್ಕೆ ಬರುವಾಗ,
         ಅಯ್ಯನವರು
         ಚಟ್ಟಕ್ಕೆ ಏರಿದರು.
         ಇದು ಬಾಲ್ಯವಿವಾಹವನ್ನು ಮತ್ತು ಅದರ ದಾರುಣತೆಯ ದುಷ್ಪರಿಣಾಮ ಸೂಚಿಸುವ ರಚನೆ. ವಯಸ್ಸಿನ ಅಂತರ ಅರಿಯದೇ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಳ್ಳುವ ಜನರ ಮುಖಕ್ಕೆ ರಾಚುವಂತೆ ಇಂಥ ರಚನೆಗಳನ್ನು ಜಾನಪದರು ಕೊಟ್ಟಿದ್ದಾರೆ.  ಇಂಥದೇ ಇನ್ನೊಂದು ರಚನೆ.
          ಆಡುವ  ಹುಡುಗಿಗೆ,
          ಕಾಡುವ ಕೂಸು.
          ಆಡಿ ನಲಿದಾಡಬೇಕಾದ ವಯಸ್ಸಿನಲ್ಲಿ ಹೆಣ್ಣುಮಗು ಸಂಸಾರದ ಭಾರ ಹೊರುವ ಮತ್ತು ಮಕ್ಕಳ ಪಾಲನೆಯಲ್ಲಿ ತನ್ನ ಬದುಕನ್ನು ಕಳೆದುಕೊಳ್ಳುವ ಚಿತ್ರಣ ಈ ರಚನೆಯಲ್ಲಿದೆ. ಗಾದೆಗಳು ವೇದಕ್ಕೆ ಸಮ ಎಂಬ ಮಾತಿದೆ. ವೇದದಷ್ಟೇ ಮೌಲ್ಯವನ್ನು ನಾವು ನಮ್ಮ ಗಾದೆಗಳಲ್ಲಿ ಗುರುತಿಸಿದ್ದೇವೆ. ಗಾದೆಗಳ ರಚನೆಯ ಹಿಂದೆ ಅನೇಕರ ಬದುಕು ಕೆಲಸ ಮಾಡಿರುತ್ತದೆ. ಈ ಗಾದೆಗಳು ಜಗತ್ತಿನ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿವೆ. ಭಾಷೆಯಿರುವ ಕಡೆಯಲ್ಲೆಲ್ಲ ಗಾದೆಗಳಿವೆ. ಗಾದೆ ಇಲ್ಲದ ಭಾಷೆ ಇಲ್ಲ. ಭಾಷೆ ಇಲ್ಲದ ಜನಾಂಗವಿಲ್ಲ. ಗಾದೆಗಳು ಇಂದಿನ ಚುಟುಕು ಸಾಹಿತ್ಯ ರಚನೆಯನ್ನೇ ಹೋಲುತ್ತವೆ.  ಪುರಾಣ ಇತಿಹಾಸಗಳೊಂದಿಗೆ ಅವರ ಜ್ಞಾನಕ್ಷೇತ್ರ ವಿಸ್ತರಿಸುತ್ತದೆ.ಪೂರ್ವಜರ ಅನುಭಾವದ ನುಡಿಗಳು ಯಾವುದಕ್ಕೂ ಹೊರತಾಗಿಲ್ಲ.
        ಹೆಣ್ಣಿನಿಂದ ರಾವಣ ಕೆಟ್ಟ
        ಮಣ್ಣಿನಿಂದ ಕೌರವ ಕೆಟ್ಟ  
ಎಂಬ ಮಾತು ದುರುಳ ಸಂಸ್ಕøತಿಯ ಅವನತಿಯನ್ನು ಬಯಲು ಮಾಡುತ್ತದೆ.ತವರು ಸಂಸ್ಕøತಿಯನ್ನು ಬಣ್ಣಿಸುವ ಮತ್ತು ಪರಿಚಯಿಸುವ ಅನೇಕ ರಚನೆಗಳು ನಮ್ಮ ಜಾನಪದಲ್ಲಿವೆ.ತವರಿನಲ್ಲಿ ಹೆಣ್ಣು ಪ್ರಧಾನ ಮತ್ತು ಕೇಂದ್ರ ಸ್ಥಾನ.ಹೆಣ್ಣಿನ ಸುತ್ತ ಸುತ್ತುವ ಅನೇಕ ಜನಪದ ರಚನೆಗಳು ಅವಳ ಬದುಕನ್ನು ಪರಿಚಯಿಸುವ ವಿಶ್ವಕೋಶಗಳಾಗಿವೆ.
       ಗಂಜಿಯ ಕುಡಿದರೂ
       ಗಂಡನ ಮನಿಲೇಸು
ಎಂಬಲ್ಲಿ ತವರು ಮನೆಯಲ್ಲಿ ಎಷ್ಟು ಆಸ್ತಿ ಇದ್ದರೂ ಅದು ಹೆಣ್ಣಿಗೆ ಕೊನೆಯ ತನP ಜೊತೆ ಇರುವುದಿಲ್ಲ.ಯಾರ ಹಂಗಿಲ್ಲದೇ ಉಣ್ಣುವ ತನ್ನ ಮನೆಯ ಗಂಜೀಯೇ ಶ್ರೇಷ್ಠವಾದುದು ಎಂಬುದು ಜನಪದರ ನೀತಿ ವಾಕ್ಯ.ಉಪಕಾರ ಸ್ಮರಣೆಗೆ ಒಂದು ರಚನೆ ಹೀಗಿದೆ.
       ಕಲ್ಲಲ್ಲಿ ಇಟ್ಟವನ
       ಬೆಲ್ಲದಲ್ಲಿ ಇಡಬೇಕು.
ಎಂಬಲ್ಲಿ ಅಪಕಾರ ಮಾಡಿದರೂ ಉಪಕಾರ ಮಾಡು ಎಂಬ ನೀತಿ ಇದೆ.ವ್ಯಂಗ್ಯ,ವಿಡಂಬನೆಗಳಿಂದಲೂ ಜನಪದರ ರಚನೆಗಳು ಹೊರತಾಗಿಲ್ಲ.ಚುಟುಕು ಕವಿತೆಗಳ ಲಕ್ಷಣಗಳಲ್ಲಿ ವಿಡಂಬನೆ,ಕಟಕಿ,ವ್ಯಂಗ್ಯವು ಪ್ರಧಾನವಾದುದು.
      ಅಂಗಡ್ಯಾಗ ಇರೋದು ಕಪಾಟ
      ನಮ್ಮ ರಾಯರ ತೆಲಿ ಸಪಾಟ
ಎಂಬಲ್ಲಿ ವಿಡಂಬನೆ ಇದೆ.ಜನಪದರ ಕಲ್ಪನೆಯ ಸೊಗಸು ಹೃದಯಪೂರ್ಣವಾದುದು.ತನ್ನ ಗಂಡನ ಹೆಸರು ಹೇಳುವ ಒಡಪಿನ ಒಂದು ರಚನೆ ಹೀಗಿದೆ.
      ಬೆಳದಿಂಗಳ ಬೆಳಕ
      ಕಲ್ಲ ಸಕ್ಕರಿ ಹಳಕ
      ನಕ್ಷತ್ರ ಮ್ಯಾಲ ಕುಂತ
      ಅಕ್ಷರ ಬರೀತಾನ
ಇಂದು ರಚನೆಯಾಗುತ್ತಿರುವ ಚುಟುಕುಗಳು ಒಳಗೊಳ್ಳುವ ಎಲ್ಲ ಲಕ್ಷಣಗಳನ್ನು ಅವಕ್ಕೂ ಮಿಗಿಲಾಗಿ ಜನಪದರ ರಚನೆಗಳಲ್ಲಿ ಕಾಣುತ್ತೇವೆ.ಜನತೆಯ ಸಂಸ್ಕøತಿಯ ಶಿಲಾಶಾಸನಗಳಾಗಿರುವ ಈ ಬಗೆಯ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು.ಸಂಕೀರ್ಣತೆಯತ್ತ ವಾಲುತ್ತಿರುವ ಇಂದಿನ ಚುಟುಕುಗಳು,ಹನಿಗವನಗಳು ಪ್ರಧಾನವಾಗಿ ಸಮಾಜಮುಖಿಯಾದರೂ ಅವು ಬಯಸುವ ಲಯಗಾರಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.ನಮ್ಮ ಯುವ ಪೀಳಿಗೆಯ ಬರಹಗಾರರು ಹನಿಗವನ ರಚನೆಗೆ ತೊಡಗುವ ಮೊದಲು ಜನಪದರ ಆಡುನುಡಿಯ ಸೊಗಸಿನಲ್ಲಿ ಬೆರೆತು ಅವರ ನುಡಿಗಟ್ಟುಗಳನ್ನು ಅರಗಿಸಿಕೊಳ್ಳಬೇಕು.ಅಂದಾಗ ಅಪರೂಪದ ರಚನೆಗಳು ಚುಟುಕು ಸಾಹಿತ್ಯ ಪ್ರಕಾರದಲ್ಲಿ ದಕ್ಕುತ್ತವೆ.ವಿಶಾಲ ಜೀವನಾನುಭವದ ಚುಟುಕು ಸಾಹಿತ್ಯಕ್ಕೆ ಜನಪದವೇ ಮೂಲ ಮತ್ತು ಅನಿವಾರ್ಯವಾಗಿದೆ.
                                                                                            - ಡಾ.ಪ್ರಕಾಶ ಗ.ಖಾಡೆ.
==============================================
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ-587103,ಮೊ.-9845500890