ಗುರುವಾರ, ಮೇ 30, 2013

ಕವಿತೆ : ಡಾ. ಶಿವಾನಂದ ಕುಬಸದ

                         
ಇಷ್ಟು ಮಾಡಿದ್ದೇನೆ.
"ಇಷ್ಟು ಮಾಡಿದ್ದೇನೆ..!
ಗೆಳೆಯ ಕೇಳಿದನೊಬ್ಬ
ವೈದ್ಯನಲ್ಲವೇ ನೀನು
ಎಷ್ಟು ಮಾಡಿದ್ದೀಯಾ ..

ಹೌದಲ್ಲವೇ
ಎಷ್ಟು ಮಾಡಿದ್ದೇನೆ ನಾನು

ಅಂದು...
ನೀನಂಜಿ ಥರಗುಟ್ಟುತಿರುವಾಗ
ನಿನಗೆ ಆಸರೆಯಿತ್ತ ನನ್ನ ಕೈಗಿಂತ
ಧೃಡವಾದ್ದು ಇನ್ನೊಂದಿಲ್ಲ
ಜಗದೊಳಗೆ ಎಂದೆನಿಸಿತ್ತು
ನಿನ್ನ ಕಂದನುಸಿರಿಗೆ
ಆಗ ನನ್ನುಸಿರ ತುಂಬಿ
ಬರಮಾಡಿಕೊಂಡಿದ್ದೆ. 
ಇಷ್ಟು ಮಾಡಿದ್ದೇನೆ.... !!

ಮೊನ್ನೆ ..
ನಿನ್ನ ಹಡೆದಾತನಿಗೆ
ಎದೆನೋವು ಬಂದಾಗ
ಜಾಗರಣೆ ಮಾಡಿದ್ದೆ ಅವನೊಂದಿಗಿದ್ದು
ಸುಸ್ತಾಗಿ ದಣಿವಾಗಿ
ನೀವೆಲ್ಲ ನಿದ್ರಿಸಲು
ಅವನ ಬಳಿ ನಾನಿದ್ದೆ ನಿಮ್ಮ ಪರವಾಗಿ
ಇಷ್ಟು ಮಾಡಿದ್ದೇನೆ.... !!

ನಿನ್ನೆ..
ನಿನ್ನ ಮನದನ್ನೆ
ಇನ್ನೊಂದು ಹೆರುವಾಗ
ನನ್ನ ರಕ್ತವನಿತ್ತು
ನಿನ್ನ ಪ್ರೀತಿಯ ಕೊಂಡಿ
ಕಳಚಿ ಬೀಳದ ಹಾಗೆ
ಜತನಗೊಳಿಸಿದ್ದೇನೆ.
ಇಷ್ಟು ಮಾಡಿದ್ದೇನೆ.... !!

ಇಂದು ..
ನೀನು ನಾನರಿಯದ
ಮರಣ ಮುಖಿಯೊಬ್ಬನನು
ಅವರಾರೋ ತಂದು ಬಿಟ್ಟು ಹೋದಾಗ
ನನ್ನವರು ನನಗಾಗಿ ಊಟಕ್ಕೆ ಕಾಯ್ದರೂ
ಎಲ್ಲವನು ಮರೆತು
ಅವನನುಪಚರಿಸಿದ್ದೇನೆ.
ಇಷ್ಟು ಮಾಡಿದ್ದೇನೆ.... !!

ನಾಳೆ ...
ನಿನ್ನ ದೇಹದೊಳಗೇನೋ
ಏರು ಪೇರಾದಾಗ
ಶನಿವಾರ ರವಿವಾರ
ರಜೆಯ ಪರಿವಿಲ್ಲದೆಯೇ
ನಿನ್ನ ಮನೆ - ಮಸಣದ
ನಡುವೆ
ತಡೆಯಾಗಬಲ್ಲೆ.

ಹೌದು ಗೆಳೆಯಾ
ನಾನು
ಇಷ್ಟೇ ಮಾಡಿದ್ದೇನೆ....!!

-ಡಾ. ಶಿವಾನಂದ ಕುಬಸದ

(''ವೃತ್ತಿ ಅನುಭವ'' ಹಾಗು "ಫೇಸ್ ಬುಕ್ " ಬರಹವೊಂದರ ಪ್ರೇರಣೆಯಿಂದ