ಮಂಗಳವಾರ, ನವೆಂಬರ್ 5, 2013

ಭಾವ ಹನಿಗಳು -ಡಾ.ಖಾಡೆ

  ಭಾವ ಹನಿಗಳು
******************

ಡಾ.ಪ್ರಕಾಶ ಗ.ಖಾಡೆ


ಕೊರಡಲ್ಲಿ 
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರ ಮರೆಸುತ್ತದೆ.
**********
ಓಡುವ ಬದುಕಿನಲಿ
ಇರಬೇಕು ಸದಾ ಚಲಿಸುತ,
ಮುಗಿಯದ ಪಯಣದ
ನೆನಪುಗಳು ಅನವರತ.
*********
ಮುಂಜಾವು
ತೆರೆದುಕೊಳ್ಳುತ್ತದೆ.
ನಡುಹಗಲು
ದೂರ ನಡೆಸುತ್ತದೆ.
ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ.
*********
ಈ ದೇಹ
ಮಾಂಸ ಖಂಡಗಳ ಮುದ್ದೆ
ಹೇಳುತ್ತಾರೆ ವೇದಾಂತಿಗಳು :
ಕೇಳಿ ನೋಡಿ
ಇದರೊಳಗಿನ ಶಕ್ತಿ
ಬುದ್ದಿಮತ್ತೆ,ಎಷ್ಟೊಂದು
ಸೃಷ್ಟಿಸಿದೆ ಮತ್ತೆ ಮತ್ತೆ.
********
ಈ ಕಂಗಳು 
ಹೊರನೋಟಕ್ಕೆ
ಬರೀ ರೆಪ್ಪೆ ಒಳಗಿನ ಗುಡ್ಡೆ,
ಒಂದಿಷ್ಟು ಹನಿ ತರಿಸುವ ರಸಧಾರೆ.
ಇಷ್ಟೆ ಅಲ್ಲ
ಭಾವನೆಗಳ ಮಹಾಪೂರ.
********
ಕಗ್ಗತ್ತಲ ದಾರಿಯಲ್ಲಿ
ಬಾನ ಚುಕ್ಕಿಗಳದೇ ಬೆಳಕು :
ಬೆಂಗಾಡಿನ ಹಾದಿಯಲ್ಲಿ 
ವರತೆಗೆ ಸಿಕ್ಕುವ
ನೀರೇ ಜೀವನದಿ.
*******
ಹೋರಾಟ 
ಪ್ರತಿಭಟಣೆಗೆ ಒಂದು
ಸಣ್ಣ ಉದಾಹರಣೆ :
ಕಾಗೆ ಗೂಡಲ್ಲಿ ಬೆಳೆವ
ಮರಿ ಕೋಗಿಲೆಯ
ಬೆಳವಣಿಗೆ.
*******