ಸೋಮವಾರ, ಜುಲೈ 8, 2013

ಮಕ್ಕಳ ಸಾಹಿತ್ಯ ಹೀಗಿರಲಿ..-ಡಾ.ಪ್ರಕಾಶ ಗ.ಖಾಡೆ

                    ಮಕ್ಕಳ ಸಾಹಿತ್ಯ ಹೀಗಿರಲಿ..
                                                          -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

         ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು ಕಟ್ಟಿಕೊಡುವ ಕೆಲಸ ಆ ಕಾಲದಲ್ಲಿ ಬೆಳಗಾವಿ ಮತ್ತು ಧಾರವಾಡಗಳಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳಿಂದ ನಡೆಯಿತು.ಹೀಗೆ ನಡೆದ ಪ್ರಕ್ರಿಯೆಯು ಮಕ್ಕಳ ಸಾಹಿತ್ಯದ ರಚನೆಗಳಿಗೆ ಸಾರ್ವತ್ರಿಕತೆಯನ್ನು ಒದಗಿಸಿಕೊಟ್ಟಿತು.ಸಾಹಿತ್ಯದ ಎಲ್ಲ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕೆ ಇದೆ.ಸರಳವಾದ ಶಬ್ದ,ಪದಗಳ ಪುನರುಕ್ತಿ,ಲಯಗಾರಿಕೆ,ಪ್ರಾಸ,ನಾಟಕೀಯ ಸಂಭಾಷಣೆ ಮುಂತಾದ ಲಕ್ಷಣಗಳನ್ನು ಪಡೆದುಕೊಂಡಿರುವ ಮಕ್ಕಳ ಸಾಹಿತ್ಯ ಪ್ರಧಾನವಾಗಿ ಮಕ್ಕಳಲ್ಲಿ ಜ್ಞಾನದಾಹವನ್ನು ತಣಿಸಿ ಸೃಜನಾತ್ಮಕತೆಯನ್ನು ,ಕಲ್ಪನಾಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ.
ಮಕ್ಕಳ ಸಾಹಿತ್ಯವನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಬಹುದು.
1.ಶಿಶು ಪ್ರಾಸದ ರಚನೆಗಳು : ಮೂರರಿಂದ ಆರು ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರಾಣಿ ,ಪಕ್ಷಿಗಳ ಬಗ್ಗೆ ಕುತೂಹಲವಿರುತ್ತದೆ.ಮಗು ತನ್ನ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯಿಸಿಕೊಳ್ಳುವ ಪರಿಯೇ ಬೆರಗು ಹುಟ್ಟಿಸುತ್ತದೆ.ಇಂಥಲ್ಲಿ ನಮ್ಮ ರಚನೆಗಳು ಪುಟ್ಟ ಪುಟ್ಟ ಸಾಲುಗಳ ಮೂಲಕ ಮಗುವಿನ ಮನಸ್ಸನ್ನು ಸೆಳೆದುಕೊಳ್ಳುವಂತೆ ಇರಬೇಕಾಗುತ್ತದೆ. ‘ಒಂದು ಎರಡು ಬಾಳೆಲೆ ಹರಡು.’, ‘ನನ್ನಪಾಟಿ ಕರಿಯದು ಸುತ್ತು ಕಟ್ಟು ಬಿಳಿಯದು’,‘ಬೇಬಿ ಬೇಬಿ ಸಣ್ಣಾಕಿ’,’ಬಸ್ಸು ಬಂತು ಬಸ್ಸು’..ಇಂಥ ಮೊದಲಾದ ರಚನೆಗಳನ್ನು ಮಕ್ಕಳು ಅಭಿನಯದ ಮೂಲಕ ಕಲಿಯುವ ಪರಿ ಚೈತನ್ಯದಾಯಕವಾಗಿದೆ.ಇಂಥಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸುವುದು ಕೇವಲ ಗಿಳಿ ಪಾಠ ಮಾತ್ರವಾಗಿ ಬಿಡುತ್ತದೆ.ಈ ಅಪಾಯವನ್ನು ಮೀರಿ ನಮ್ಮ ಸಾಹಿತಿಗಳು ಬರೆಯಬೇಕಾಗಿದೆ.
  2. ಅತಿಮಾನುಷ ಕಥೆಗಳು : ಆರರಿಂದ ಒಂಬತ್ತು ವರ್ಷದ ಎಳೆಯ ಮಕ್ಕಳು ಸಾಹಸ,ಚಮತ್ಕಾರಿಕ ಮತ್ತು ನೀತಿದಾಯಕ ಕಥನ ಗೀತೆ,ಕಥೆಗಳಿಗೆ ಮಾರುಹೊಗುತ್ತಾರೆ.ಇಂಥ ರಚನೆಗಳಿಗೆ ಆಕರ್ಷಿತರಾಗುತ್ತಾರೆ.ಅಜ್ಜಿಯ ಕಥೆಗಳು,ಕುತೂಹಲ ತಣಿಸುವ ರಂಜನೀಯ ಕಥೆಗಳು,ಅತಿಮಾನುಷ ಕಥೆಗಳು ಈ ಬಗೆಯ ರಚನೆಗಳ ಮೂಲಕ ಮಕ್ಕಳು ಹೊಸದೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ.ಪ್ರಾಣಿ ,ಪಕ್ಷಿಗಳ ಸಾಹಸ ಕಥೆಗಳು,ಕಣ್ಣಿಗೆ ಕಾಣದ ಲೋಕದ ಜನರ ಚಮತ್ಕಾರಗಳು ಈ ವಯಸ್ಸಿನ ಮಕ್ಕಳಿಗೆ ಬೇಕು.ರೋಚಕ ರಚನೆಯ ಸಾಹಿತ್ಯ ನಮ್ಮ ಮಕ್ಕಳ ಸಾಹಿತಿಗಳಿಂದ ಹೆಚ್ಚಾಗಿ ಬರಬೇಕಾಗಿದೆ.
3.ಮೌಲ್ಯಾಧಾರಿತ ರಚನೆಗಳು : ಒಂಬತ್ತರಿಂದ ಹದಿಮೂರು ವರ್ಷ ವಯಸ್ಸಿನ ಮಕ್ಕಳು ಅಕ್ಷರ ಬಲ್ಲವರು ಹಾಗೂ ಒಂದಿಷ್ಟು ತಿಳುವಳಿಕೆ ಉಳ್ಳವರೂ ಆಗಿರುತ್ತಾರೆ.ಇಂಥ ಮಕ್ಕಳಿಗೆ ಸ್ನೇಹ,ಸಹಕಾರ,ರಾಷ್ಟ್ರಪ್ರೇಮ,ಗೌರವ, ಪ್ರಾಮಾಣಿಕತೆ ಮೊದಲಾದ ಮೌಲ್ಯ ಬಿತ್ತುವ ರಚನೆಗಳು ಬೇಕು.ಜೊತೆಗೆ ಚಾರಿತ್ರಿಕ.ಪೌರಾಣಿಕ,ಮಹಾಪುರುಷರ ಕಥೆಗಳು ,ವೈಜ್ಞಾನಿಕ ಅದ್ಭುತಗಳು,ಸಮಕಾಲೀನರ ಸಾಹಸಗಳು ಮೊದಲಾದ ಸಂಗತಿಗಳ ಕಡೆ ಈ ವಯೊಮಾನದ ಮಕ್ಕಳು ಆಕರ್ಷಿತರಾಗುತ್ತಾರೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ.
ಇಂಥ ಮೊದಲಾದ ರಚನೆಗಳು ಈ ವಯೋಮಾನದ ಮಕ್ಕಳಿಗೆ ಅರ್ಥವಾಗುವುದರೊಂದಿಗೆ,ತುಂಬಾ ರುಚಿಸುತ್ತವೆ.ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಆಸಕ್ತಿಗಳು ಇರುವುದರಿಂದ ಅವರ ಗ್ರಹಣ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಬರೆಯಬೇಕಾದ ಅನಿವಾರ್ಯತೆ ಮಕ್ಕಳ ಸಾಹಿತಿಗಳದ್ದಾಗಿರುತ್ತದೆ. ಮಕ್ಕಳ ಮನಸ್ಸು ಬಾಯಿ ತೆರೆದ ಖಾಲಿ ಬುಟ್ಟಿ ಅದರಲ್ಲಿ ಕಸ ತುಂಬದೇ ರಸ ತುಂಬುವ ಕೆಲಸ ಮಾಡಬೇಕಾದ ಜವಾಬ್ದಾರಿ ಮಕ್ಕಳ ಸಾಹಿತಿಗಳಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ಇವತ್ತು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ.ಹೊಸ ಭಾವ ಹೊಸ ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ, ವಿಜ್ಞಾನ, ವೈದ್ಯಕೀಯ ,ಪರಿಸರ, ಆಕಾಶ ,ಗ್ರಹಣಗಳು, ಕಂಪ್ಯೂಟರ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯವನ್ನು ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ. ಯಾವುದೇ ಮಗು ಅರ್ಧ ಬೆಳೆದ ಮನುಷ್ಯನಲ್ಲ ಮಕ್ಕಳು ಅವರಷ್ಟಕ್ಕೆ ಪರಿಪೂರ್ಣ ವ್ಯಕ್ತಿಗಳು. ಕಾರಣ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನ ಶೀಲರಾಗುವಂತೆ ಮಾಡುವ ಮತ್ತು ತಮ್ಮ ಸುತ್ತಲ ಪ್ರಪಂಚವನ್ನು ಅರಿಯುವಂತೆ ಮಾಡುವ ಯಾವುದೇ ಬರವಣಿಗೆಯೂ ಮಕ್ಕಳ ಸಾಹಿತ್ಯವೆನಿಸಿಕೊಳ್ಳುತ್ತದೆ.ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರಿಕರಾಗಿರುವ ಮಕ್ಕಳು ತಾನೇ ಹೊರಬೇಕು.ಅದಕ್ಕೆ ಸಜ್ಜುಗೊಳಿಸುವ ಸಾಹಿತ್ಯ ಮಕ್ಕಳ ಸಾಹಿತ್ಯವಾಗಿರುವುದು ಅತ್ಯಂತ ಮುಖ್ಯವಾಗಿದೆ.ಆದರೆ ಒಂದು ಅನುಮಾನ ಇನ್ನು ಮುಂದಿನ ದಿನಮಾನಗಳಲ್ಲಿ  ಬರಬಹುದಾದ ಬದಲಾವಣೆಗಳು ನಮ್ಮ ಉಹೆಗೂ ನಿಲುಕದಿರುವದರಿಂದ ನಾವು ನಮ್ಮ ಮಕ್ಕಳನ್ನು ಯಾವ ಭವಿಷ್ಯತ್ತಿಗೆ ತಯಾರು ಮಾಡಬಹುದು? ಎಂಬ ಪ್ರಶ್ನೆ ಮಕ್ಕಳ ಸಾಹಿತಿಗಳನ್ನು ಕಾಡದೇ ಇರಲಾರದು.
=====================================================================
-
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ
            ಮೊ.9845500890