ಮಂಗಳವಾರ, ಮೇ 14, 2013

ಕನ್ನಡ ತತ್ತ್ವಪದ ಸಾಹಿತ್ಯ : ಡಾ.ಪ್ರಕಾಶ ಗ.ಖಾಡೆ



                             ಕನ್ನಡ ತತ್ತ್ವಪದ ಸಾಹಿತ್ಯ :ಜಾನಪದ,ಅನುಭಾವ ಮತ್ತು ಆಧ್ಯಾತ್ಮದ ಮೇರುನಿಧಿ


                                                             - ಡಾ.ಪ್ರಕಾಶ ಗ. ಖಾಡೆ,ಬಾಗಲಕೋಟ
                             

     ಕನ್ನಡ ಸಾಹಿತ್ಯದಲ್ಲಿ ಹದಿನಾರರಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಸಮೃದ್ಧವಾಗಿ ಬೆಳೆದುಕೊಂಡು ಬಂದ ತತ್ತ್ವಪದ ಸಾಹಿತ್ಯವು ಶರಣರ ವಚನ, ದಾಸರ ಕೀರ್ತನೆಗಳಂತೆ ಕಂಡರೂ ಜನಸಾಮಾನ್ಯರ ನಾಲಗೆಯ ಮೇಲೆ ಸುಲಭವಾಗಿ ಹರಿದಾಡಿ ಭಜನೆ ಮೊದಲಾದ ಸಂದರ್ಭಗಳ ಮೂಲಕ ಹೆಚ್ಚು ಜನಮುಖಿಯಾಯಿತು.. ನವೋದಯ ಆರಂಭದ ಕನ್ನಡ ಕಾವ್ಯವನ್ನು ರೂಪಿಸಿದವರು ಯಾರು ಎಂಬ ಬಗ್ಗೆ ಮುಖ್ಯ ಪ್ರಶ್ನೆಯನ್ನು ಹಾಕಿಕೊಂಡು ಉತ್ತರಕ್ಕಾಗಿ ನಿಂತಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ 18-19ನೆಯ ಶತಮಾನದಲ್ಲಿ ಕನ್ನಡ ಕಾವ್ಯ ಲೋಕವನ್ನು ಬೆಳಗಿದ ಅನುಭಾವಿ ಕವಿಗಳಾದ ತತ್ತ್ವ ಪದಕಾರರು, ಲಾವಣಿಕಾರರು ಮುಖ್ಯರಾಗುತ್ತಾರೆ.  ತತ್ತ್ವಪದಗಳನ್ನು ಅನುಭಾವ ಸಾಹಿತ್ಯವೆಂದೂ ಕರೆಯಲಾಗುತ್ತಿದೆ. ತತ್ತ್ವಪದ ಸಾಹಿತ್ಯವನ್ನು ಶಿಷ್ಟಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕೆ? ಜನಪದ ಸಾಹಿತ್ಯ ಪರಂಪರೆÉಗೆ ಸೇರಿಸಬೇಕೆ? ಎಂಬ ಗೊಂದಲಗಳು ಇವೆ.
         ಬಸವರಾಜ ಸಬರದ ಅವರು ‘ಹೈದರಾಬಾದ್ ಕರ್ನಾಟಕದ ತತ್ತ್ವಪದಗಳು’ ಕೃತಿಯಲ್ಲಿ ಈ ಪ್ರಶ್ನೆ ಎತ್ತಿಕೊಂಡು  ಚರ್ಚಿಸಿದ್ದಾರೆ. ಅವರ ಒಟ್ಟು ಚರ್ಚೆಯ ಸಾರವನ್ನು ಹೀಗೆ ಪಟ್ಟಿ ಮಾಡಬಹುದು.
1. ತತ್ತ್ವಪದ ಸಾಹಿತ್ಯದ ಪ್ರಾರಂಭದ ಘಟ್ಟವನ್ನು ಅಂದರೆ 12ನೆಯ ಶತಮಾನದಲ್ಲಿ ಸ್ವರ ವಚನಗಳನ್ನು ರಚಿಸಿದ. ಸಕಲೇಶ ಮಾದರಸ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಈ ಮುಂತಾದ ವಚನಕಾರರನ್ನು ಈಗಾಗಲೇ ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸಲಾಗಿದೆ.
2. ಎರಡನೆಯ ಘಟ್ಟದಲ್ಲಿ ತತ್ತ್ವ ಪದಗಳನ್ನು ರಚಿಸಿ ತತ್ತ್ವಪದ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳನ್ನು ಕೂಡಾ ಶಿಷ್ಟ ಸಾಹಿತ್ಯ ಪರಂಪರೆಯಲ್ಲಿಯೇ ಸೇರಸಲಾಗಿದೆ. ಈ ಎರಡೂ ಘಟ್ಟಗಳು ಶಿಷ್ಟ ಸಾಹಿತ್ಯ ಚರಿತ್ರೆಯಲ್ಲಿ ಸೇರ್ಪಡೆಯಾಗಿರುವುದು ಸೂಕ್ತವೇ ಆಗಿದೆ.
3. ಹೊಸಗನ್ನಡ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಭಿಸುವುದನ್ನು ಕೈಬಿಟ್ಟು ಹೊಸಗನ್ನಡ ಸಾಹಿತ್ಯದ ಪ್ರಾರಂಭವನ್ನು ತತ್ತ್ವಪದಕಾರರಿಂದ ಪ್ರಾರಂಭಿಸಬೇಕಾಗಿದೆ ಎಂದು ಕಿ.ರಂ. ನಾಗರಾಜ ಅವರು ಅಭಿಪ್ರಾಯ ಪಡುತ್ತಾರೆ. ಕಿ.ರಂ. ನಾಗರಾಜ ಅವರ ಅಭಿಪ್ರಾಯಕ್ಕೆ  ಭಿನ್ನವಾಗಿ ತತ್ತ್ವಪದ ಅಥವಾ ಭಜನೆ ಹಾಡಿನ ಸಾಹಿತ್ಯವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸಬೇಕಾಗುತ್ತದೆ ಎಂದು ಅನೇಕ ಜಾನಪದ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.
4. ಎಂ.ಎಸ್.ಸುಂಕಾಪುರ, ಪಿ.ವಿ.ಮಲ್ಲಾಪುರ, ಎಂ. ಜಿ. ಬಿರಾದಾರ ಹಾಗೂ  ಶಾಂತರಸ ಅವರು ಈ ತತ್ತ್ವಪದ ಸಾಹಿತ್ಯವನ್ನು ಜನಪದ ಸಾಹಿತ್ಯದ ಭಾಗವೆಂದೇ ಗುರುತಿಸುತ್ತಾರೆ. ಲಾವಣಿಕಾರರಂತೆ ಜನಪದ ಸಾಹಿತಿಗಳಾಗುತ್ತಾರೆ ಎಂದು ಇವರ ವಿಶ್ಲೇಷಣೆ.
ಒಟ್ಟಾರೆ ಈ ಚರ್ಚೆಯ ಫಲಿತ ಇಷ್ಟು:ತತ್ತ್ವಪದ ಸಾಹಿತ್ಯವು ಶಿಷ್ಟ ಹಾಗೂ ಜನಪದ ಎರಡೂ ಸಾಹಿತ್ಯ ಪರಂಪರೆಗೆ ಸೇರಿದ್ದಾಗಿದೆ. ಧರ್ಮ ಸಮನ್ವಯ, ಭಾಷಾ ಸಮನ್ವಯ ಪ್ರಾದೇಶಿಕ ಸಮನ್ವಯವನ್ನು ಸಾಧಿಸುವುದರೊಂದಿಗೆ ತತ್ತ್ವಪದವು ಸಾಹಿತ್ಯ ಸಮನ್ವಯವನ್ನು ಸಾಧಿಸಿದೆ. ಇದು ತತ್ತ್ವ ಪ್ರೌಢವಾದುದೂ, ಶಿಷ್ಟ ಪರಂಪರೆಗೆ ಸೇರಿದುದು ಆದರೆ, ಇದರ ಅಭಿವ್ಯಕ್ತಿಯ ಕ್ರಮ ಜನಪದವಾಗಿದೆ. ಇಲ್ಲಿ ಉಲ್ಲೇಖಿಸಿದ ಮೊದಲ ಹಾಗು ಎರಡನೆಯ ಘಟ್ಟಗಳನ್ನು ಶಿಷ್ಟ ಸಾಹಿತ್ಯ ಪರಂಪರೆಗೆ ಸೇರಿಸುವುದು, ಇತ್ತೀಚಿನ ಬೆಳವಣಿಗೆಯಾದ ಮೂರನೆಯ ಘಟ್ಟವನ್ನು ಜನಪದ ಸಾಹಿತ್ಯ ಪರಂಪರೆಗೆ ಸೇರಿಸುವುದು.
    ಈ ಚರ್ಚೆಯು ತತ್ತ್ವಪದ ಸಾಹಿತ್ಯವು ಜನಪದ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ತೆರೆದು ತೋರಿತು. ಜಾನಪದ ಪ್ರಜ್ಞೆಯ ಅಭಿವ್ಯಕ್ತಿಯೇ ಪ್ರಧಾನವಾಗಿ ಗುರುತಿಸಿಕೊಂಡಿತು ಮತ್ತು ಜನಪದ ರೂಪವೇ ಆಗಿ ಆಧುನಿಕ ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದಿತು. ಶಿಷ್ಟ ಕವಿಗಳಿಂದ ಪ್ರಾರಂಭವಾದ ತತ್ತ್ವಪದ ಸಾಹಿತ್ಯ ಪ್ರಕಾರ 19-20ನೆಯ ಶತಮಾನದಲ್ಲಿ ಜನಪದ ಕವಿಗಳ ವಶವಾಯಿತು. ಕನ್ನಡ ಶಿಷ್ಟ ಸಾಹಿತಿಗಳ ಮೇಲೆ ಜಾನಪದದ ಪ್ರಭಾವ ದಟ್ಟವಾಗಿರುವಂತೆ, ಕನ್ನಡ ಜನಪದ ಸಾಹಿತಿಗಳ ಮೇಲೆ ಶಿಷ್ಟ ಸಾಹಿತ್ಯದ ಪ್ರಭಾವವೂ ಆಗಿದೆ. ಇದಕ್ಕೆ ತತ್ತ್ವಪದ ಸಾಹಿತ್ಯ ಪ್ರಕಾರವೇ ಪ್ರಮುಖ ಸಾಕ್ಷಿಯಾಗಿದೆ. ಇವೆರಡೂ ಸಂಸೃತಿಗಳಲ್ಲಿ ಕೊಡು ಕೊಳ್ಳುವಿಕೆಯ ಕೆಲಸ ನಡೆದೇ ಇರುತ್ತದೆ. ತತ್ತ್ವಪದ ರಚನೆ ಜನಪದ ಕವಿಗಳಿಂದ ಪ್ರಾರಂಭವಾದ ಕೂಡಲೇ ಹಳ್ಳಿಗಳಲ್ಲಿ ಭಜನಾ ಮಂಡಳಿಗಳು ಹುಟ್ಟಿಕೊಂಡವು. ಅನೇಕ ಆಶು ಕವಿಗಳು ಬೆಳೆದು ನಿಂತರು. ಭಜನಾ ಮೇಳವಿಲ್ಲದ ಹಳ್ಳಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ಈ ಮಾಧ್ಯಮ ಬೆಳೆದು ನಿಂತಿತು. ಶಿಶುನಾಳ ಷರೀಫ್, ಕಡಕೋಳ ಮಡಿವಾಳಪ್ಪನಂತಹ ತತ್ತ್ವಪದಕಾರರು ಜನಪದ ಪರಂಪರೆಗೆ ಸೇರಿದರೂ ತಮ್ಮ ಪದಗಳಲ್ಲಿ ಗಹನವಾದ ತತ್ತ್ವಗಳನ್ನು ಹೇಳಿದ್ದಾರೆ. ಅನುಭಾವದೆತ್ತರವನ್ನು ತಲುಪಿದ್ದಾರೆ. ಇವರು ಪಡೆದ ಸಂಸ್ಕಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಶಿಷ್ಟ ಪರಂಪರೆಯಲ್ಲಿ ಬರುವ ತತ್ತ್ವಪದಕಾರರಿಗೆ ವಿಶೇಷವಾದ ಗುರು ಕಂಡು ಬರುವುದಿಲ್ಲ. ಆದರೆ ಜನಪದ ಪರಂಪರೆಯಲ್ಲಿ ಬರುವ ತತ್ತ್ವಪದಕಾರರು ಗುರುವಿನ ಸಂಸ್ಕಾರದಿಂದ ತಾವು ಕವಿಗಳಾಗಿ ಬೆಳೆದು ನಿಂತಿದ್ದಾರೆ. ಅದನ್ನವರು ಭಕ್ತಿಯಿಂದ ಸ್ಮರಿಸಿದ್ದಾರೆ. ಒಬ್ಬೊಬ್ಬ ತತ್ತ್ವಪದಕಾನ ಹಿಂದೆ ಒಬ್ಬೊಬ್ಬ ಗುರು ಇದ್ದಾನೆ ಜನಪದ ಪರಂಪರೆ ಅದನ್ನು ಸ್ವೀಕರಿಸಿಕೊಂಡು ಬೆಳೆದಿದೆ.
    ಮೌಖಿಕ ಪರಂಪರೆಯ ತತ್ತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲ ಕೂಸಿನಂತೆ ಜತನ ಮಾಡಿಕೊಂಡು ಬಂದರು. ತತ್ತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದವರ ಜತೆ ಬೆರತು ಜಾತಿ ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು. ಎಚ್. ಎಸ್. ಶಿವಪ್ರಕಾಶ್ ಅವರು ಇದನ್ನೇ ‘ಎಲ್ಲ ಜಾತಿಯ ಮರಗಳು ಕಾಡು’ ಎಂದು ಕರೆದು ಗ್ರಾಮೀಣ ಸೊಗಡಿನ ಬಂಧುತ್ವ, ಬಾಂಧವ್ಯಕ್ಕೆ ಈ ಕಾವ್ಯದ ಅಪ್ಪಟ ದೇಸಿತನವನ್ನು ಪ್ರಕಟಿಸಿದರು.
ಭಜನಾ ಸಮುದಾಯಗಳು :
     ಭಜನೆಗಳ ಮೂಲಕ ತತ್ತ್ವಪದಗಳು ಬಳಕೆಯಾಗುತ್ತ ಉಳಿದುಕೊಂಡು ಬಂದವು. ನಮ್ಮ ಗ್ರಾಮಗಳಲ್ಲಿ ‘ಭಜನೆ ಹಚ್ಚುವ’ ಸಂದರ್ಭಗಳಿಗೆ ಇಂಥದೇ ಕಾರಣ ಎಂಬುದಿಲ್ಲ. ಅಮವಾಸ್ಯೆ, ಹಣ್ಣಿಮೆ, ಹಬ್ಬ ಹರಿದಿನ, ಸಾವು, ಸಂಭ್ರಮ, ಕಾರ್ತಿಕ, ಕಾರಣಿಕ- ಹೀಗೆ ಮನೆ, ಮಠ, ಗುಡಿ ಗುಂಡಾರವೆನ್ನದೆ ಎಲ್ಲಿ ಬೇಕಾದಲ್ಲಿ ಹಾಡುವುದು ಇದೆ. ಶುಭ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುವ ಈ ಭಜನೆ ಹಳ್ಳಿಗರ ಜ್ಞಾನ ಕ್ಷೇತ್ರವನ್ನು ವಿಸ್ತರಿಸುವ ಮತ್ತು ಬದುಕು ಹಸನುಗೊಳಿಸುವ ದಿಸೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಭಜನಾ ಸಮುದಾಯಗಳು ತತ್ತ್ವಪದಗಳ ವಾಹಕರಾಗಿ ಪರಂಪರೆಯಲ್ಲಿ ಬೆಳೆದುಕೊಂಡು ಬಂದವು. ಭಜನೆಕಾರರ ಮೂಲಕ ಮೌಖಿಕವಾಗಿ ಉಳಿದುಕೊಂಡು ಬಂದ ಈ ಪದಗಳು ವಿವಿಧ ನೆಲೆಗಳಲ್ಲಿ ಭಿನ್ನರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ‘ತತ್ತ್ವಪದಕಾರರು ತಮ್ಮ ಸಾಹಿತ್ಯವನ್ನು ಮೌಖಿಕವಾಗಿ ಹಾಡಿದರು. ಅದನ್ನು ಬಳಸುವ ಸಂದರ್ಭಗಳು ಬಂದಾಗ ಬಳಸುವವರು ಮೋಡಿ, ಕನ್ನಡ ಲಿಪಿಯಲ್ಲಿ ಬರೆದುಕೊಳ್ಳುತ್ತಿದ್ದರು. ಬಹು ಭಾಷೆಯಲ್ಲಿ ತತ್ತ್ವಪದಗಳನ್ನು ಕವಿಗಳೇ ಹಾಡಿರುವುದು ಸರಿಯಷ್ಟೇ. ಜನ ಸಮುದಾಯಗಳೂ ತತ್ತ್ವಪದಗಳನ್ನೂ ತಮಗೆ ಪ್ರಿಯವಾದ ಭಾಷೆಗೆ ಪರಿವರ್ತಿಸಿಕೊಂಡು ಹಾಡಿದ್ದಾರೆ. ಬೇರೆ ಬೇರೆ ಪ್ರದೇಶದ ಭಜನಾ ಮೇಳಗಳು ತಮಗೆ ಹತ್ತಿರದ ಸ್ಥಳೀಯ ತತ್ತ್ವಪದಕಾರರ ಹಾಡುಗಳನ್ನು ಬಳಸಿಕೊಂಡು ಹಾಡುತ್ತಿದ್ದವು. ಇಂಥ ಭಜನಾ ಮೇಳಗಳು ಸೊಲ್ಲಾಪುರ, ಪಚಿಡಾರಾಪುರ, ಕಲಬುರ್ಗಿ, ಗಾಣಾಗಾಪುರ, ಶ್ರೀಶೈಲ, ಹಂಪಿ, ಮಂತ್ರಾಲಯ, ಮುಂತಾದ ಪ್ರಸಿದ್ಧ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳು ಪ್ರಿಯವಾದರೆ ಅಂಥ ಹಾಡುಗಳನ್ನು ತಮ್ಮ ಭಾಷೆಗೆ ಪರಿವರ್ತಿಸಿಕೊಂಡು ಹಾಡುತ್ತಿದ್ದವು” ಎಂಬುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿದ್ದಾರೆ.
      ತತ್ತ್ವಪದಗಳು ಕನ್ನಡದಲ್ಲಿ ಬಗೆ ಬಗೆಯ ಹೆಸರುಗಳಿಂದ ಬೆಳೆದುಕೊಂಡು ಬಂದಿವೆ. ಪರಮಾತ್ಮನ ಬಗೆಗಿನ ಅನುಭಾವ ಈ ಪದಗಳಲ್ಲಿ ವ್ಯಕ್ತಗೊಂಡುದರಿಂದ ಇದಕ್ಕೆ ಅನುಭಾವ ಪದಗಳೆಂದೂ, ಇವನ್ನು ಏಕತಾರಿಯಂತಹ ವಾದ್ಯದೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದೂ, ಅಂತರಂಗದ ಅರಿವಿನ ಮೂಲಭೂತ ತತ್ತ್ವಗಳನ್ನು, ಆಧ್ಯಾತ್ಮಿಕ ತತ್ತ್ವಗಳನ್ನು ಇವು ಒಳಗೊಂಡಿರುವುದರಿಂದ ಇವಕ್ಕೆ ತತ್ತ್ವಪದಗಳೆಂದೂ, ಇವನ್ನು ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಪದಗಳೆಂದೂ ಕರೆದುಕೊಂಡು ಬರಲಾಯಿತು. ಒಟ್ಟಿನಲ್ಲಿ ಇವು ಮೌಖಿಕ ಸಾಹಿತ್ಯದ ಗಮನಾರ್ಹ ಕಾವ್ಯ ಪ್ರಕಾರಗಳಗಿವೆ.
ತತ್ವಪದ ಸಾಹಿತ್ಯ ಪರಂಪರೆ :
       ತತ್ತ್ವಪದ ಪರಂಪರೆಯಲ್ಲಿ ಮುಪ್ಪಿನ ಷಡಕ್ಷರಿ (1500), ಚಿದಾನಂದ ಅವಧೂತರು (1750), ರಾಮಪುರದ ಬಕ್ಕಪ್ಪ (1750), ಸಾರವಾಡ ಚಿಕ್ಕಪ್ಪಯ್ಯ (1758), ಹಾಗಲವಾಡಿ ಮದ್ವೀರೆ ಸ್ವಾಮಿಗಳು (1750), ಮೈಲಾರದ ಬಸವಲಿಂಗ ಶರಣರು (1700), ನಿಂಬರಗಿ ಮಹಾರಾಜರು (1750), ಶಂಕರಾನಂದರು (1750), ನೀರಲಕೇರಿ ಪಂಚಾಕ್ಷರಿ (1800), ಕೂಡಲೂರು ಬಸವಲಿಂಗ ಶರಣರು (1800), ಸರ್ಪಭೂಷಣ ಶಿವಯೋಗಿ (1825), ಬಾಲಲೀಲಾ ಮಹಾಂತ ಶರಣರು (1850), ಶಿಶುನಾಳ ಶರೀಫ್ ಸಾಹೇಬ (1840), ಕಡಕೋಳ ಮಡಿವಾಳಪ್ಪ (1850), ಮೊದಲಾದವರು ಪ್ರಮುಖರಾಗಿದ್ದಾರೆ.
          ಈ ಪರಂಪರೆಯಲ್ಲಿ ಮುಸ್ಲಿಂ ತತ್ತ್ವಪದಕಾರರ ಸಾಧನೆ ಗಮನಾರ್ಹವಾದುದು. ಕರ್ನಾಟಕದ ಉತ್ತರ ಭಾಗದಲ್ಲಿ ದೀರ್ಘಕಾಲ ‘ಹಿಂದೂ-ಮುಸ್ಲಿಂ’ ಎರಡೂ ಸಮುದಾಯಗಳು ಕೂಡಿ ಬಾಳುತ್ತ ಬಂದಿವೆ. ಎರಡು ಸಂಸ್ಕøತಿಗಳ ನಡುವೆ ಸಂಘರ್ಷ ಸಾಮರಸ್ಯಗಳು ಏರ್ಪಟ್ಟಿವೆ. ಮುಖ್ಯವಾಗಿ ಮುಸ್ಲಿಂ ತತ್ತ್ವಪದಕಾರರು ಎರಡು ಸಂಸ್ಕøತಿಗಳ ಸಾಮರಸ್ಯ ಮತ್ತು ಬಾಂಧವ್ಯಕ್ಕೆ ಅಪರೂಪದ ಕೊಡುಗೆ ನೀಡಿದರು. ಚನ್ನೂರ ಜಲಾಲಸಾಬ (1700), ಮೇಟ್ನಳ್ಳಿ ಹಸನಸಾಬ (1855), ಕೋಹಿನೂರ ಹಸನ (1875), ದೇಗಾವಿ ಹಜರತ್ (1917), ಮಂಜಿಲಾನ ಖಾದರಸಾಬ (1930), ಅರವಲಿ ಬಿಜಲಿ ವಸ್ತಾದಿ (1930), ಸಾವಳಗಿ ಮಹಮ್ಮದಸಾಬ (1917), ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಮೊದಲಾದವರು ಹೆಸರಾಗಿದ್ದಾರೆ. ಮುಸ್ಲಿಂ ಪ್ರಭುತ್ವವಾದಿಗಳ ಆಳ್ವಿಕೆಯ ಅಧಿಕೃತ ಭಾಷೆ ಉರ್ದು ಇದ್ದುದರಿಂದ ಕನ್ನಡ ಸಾಹಿತ್ಯ ರಚನೆಗೆ ತೊಂದರೆಯಾಯಿತೆಂದು ಆಧುನಿಕರ ಹೇಳಿಕೆಗೆ ಅನುವು ಸಿಗದಂತೆ ಈ ಮುಸ್ಲಿಮ್ ತತ್ತ್ವಪದಕಾರರು ಕನ್ನಡದಲ್ಲಿ ತತ್ತ್ವಪದಗಳನ್ನು ಹಾಡಿರುವುದು ವಿಶೇಷವಾಗಿದೆ. ಹೀಗೆ ಹಲವು ನೆಲೆಯಲ್ಲಿ ಹರಿದು ಬಂದ ತತ್ತ್ವಪದ ಸಾಹಿತ್ಯ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದಾಗ ಮೂಡಿ ಬಂದ ಕನ್ನಡದ ಕಾವ್ಯ ಚರಿತ್ರೆಯಲ್ಲಿ ಪ್ರತಿಷ್ಠಿತ ಸ್ಥಾನ
ಪಡೆದುಕೊಳ್ಳುತ್ತಿರುವುದು ಇಲ್ಲಿ ದೇಸೀ ಅಧ್ಯಯನಗಳು ಹೆಚ್ಚು ವ್ಯಾಪಕವಾಗಿ ನಡೆದಾಗ ಸಾಧ್ಯವಾಯಿತು.
     ತತ್ತ್ವಪದ ಸಾಹಿತ್ಯ ನವೋದಯ ಕಾವ್ಯದ ಅಪ್ಪಟ ಮಾದರಿಗಳಿಗೆ ಪೂರಕವಾಗಿವೆ. ಸೃಜನಶೀಲ ಕಾವ್ಯದ ಎಲ್ಲ ಬಗೆಯ ಲಕ್ಷ ಲಕ್ಷಣ ರೀತಿ ನೀತಿಗಳನ್ನು ಆಗಲೇ ಕಟ್ಟಿಕೊಂಡಿದ್ದ ಈ ರಚನಕಾರರು ಎಲ್ಲ ಬಗೆಯ ವಸ್ತು ಸಂಗತಿಗಳಿಗೆ ಪ್ರತಿಸ್ಪಂದಿಸಿದರು. ಅವರ ಕವಿತೆಗಳು ಸಾಮಾಜಿಕ ಬದುಕನ್ನು, ಬದುಕಿನ ಜಂಜಾಟ, ತಾಪತ್ರಯಗಳಿಗೆ ಉತ್ತರ ರೂಪವಾಗಿ ಉದಾಹರಣ ಸಂದರ್ಭಗಳನ್ನು ಬಳಸಿಕೊಂಡು ಹಾಡಿಕೊಂಡು ಬಂದರು. ಪ್ರಕೃತಿ, ಪಕ್ಷಿ, ಪ್ರಾಣಿ, ಸೂರ್ಯ, ಚಂದ್ರ, ಹೊಳೆ ಹಳ್ಳ, ಸಾವು, ಬದುಕು ಎಲ್ಲ ಎಲ್ಲಕ್ಕೂ ಪ್ರತೀಕ, ಹೋಲಿಕೆ, ಆಧ್ಯಾತ್ಮ, ಅನುಭಾವ ಬಳಸಿ ಸರಳ, ಸುಲಭವಾಗಿ ಯಾರೂ ಹಾಡಿಕೊಂಡು ಆಡಿಕೊಂಡು ಸಂಭ್ರಮಿಸುವ ರೀತಿಯಲ್ಲಿ ಕಟ್ಟಿ ಹಾಡಿದರು. ಡಾ. ಕೆ. ಸಿ. ಶಿವಾರೆಡ್ಡಿ ಅವರ ಅಭಿಪ್ರಾಯದಂತೆ “ತತ್ತ್ವಪದಕಾರರ ಪ್ರಧಾನ ಸಾಮಗ್ರಿ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚಳವಳಿಯಾದ ವಚನ ಹಾಗೂ ದಾಸ ಸಾಹಿತ್ಯದ ನೆಲೆಯಿಂದ ಬಂದದ್ದು. ಆದರೆ ಆ ಸಾಮಗ್ರಿಯನ್ನು ವರ್ತಮಾನದ ಸಂದರ್ಭವನ್ನು ಹೊರತುಪಡಿಸುವಂತೆ ಅವರು ಪುನರ್ ನಿರ್ಮಾಣ ಮಾಡುತ್ತಾರೆ. ಹೀಗಾಗಿ ತತ್ತ್ವಪದಕಾರರ ರಚನೆಗಳು ಪಾಂಡಿತ್ಯದ ಪ್ರಭಾವದಿಂದ ಪಾರಾಗಲು ಸಾಧ್ಯವಾಗದೆ ಹೋಗಿವೆ. ಆದರೂ ತತ್ತ್ವಪದಕಾರರ ಒಟ್ಟು ಸೃಷ್ಟಿ ಕನ್ನಡ ಸಂಸ್ಕøತಿಯ ಸಂದರ್ಭದಲ್ಲಿ ಗಂಭೀರವಾದ ಸೃಜನಶೀಲ ದಾಖಲೆಯಾಗಿವೆ’ಎಂದಿರುವುದು ತತ್ತ್ವಪದಕಾರರ ಹಿರಿಮೆಯನ್ನು ಸಾರಲಾಗಿದೆ.
     ಆಧುನಿಕ ಕಾಲದ ಅನೇಕ ಸಂವೇದನೆಗಳಿಗೆ ತತ್ತ್ವಪದಕಾರರ ಸ್ಪಂದನವಿದೆ. 20ನೇ ಶತಮಾನದ ‘ಸಂವೇದನೆ’ಯೂ ಮೌಖಿಕ ಸಾಹಿತ್ಯದಲ್ಲಿ ಮೂಡಿ ಬಂದಿದೆ. ರಾಷ್ಟ್ರೀಯವಾದ, ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಪಿಡುಗು, ಭ್ರಷ್ಟಾಚಾರ, ಹೋ ಟೇಲ್, ವಕೀಲ, ಕೋರ್ಟ್ ಮುಂತಾದವು ತತ್ತ್ವಪದ ಸಾಹಿತ್ಯದಲ್ಲಿ ಕುತೂಹಲಕಾರಿಯಾಗಿ ವ್ಯಕ್ತವಾಗಿದೆ. ಅಷ್ಟೇ ಏಕೆ ನವೋದಯ ಕಾವ್ಯದ ಅನೇಕ ಲಕ್ಷಣಗಳು ಕೂಡಲೂರು ಬಸಲಿಂಗಪ್ಪನ ತತ್ತ್ವಪದಗಳಲ್ಲಿ ಆಧುನಿಕತೆ ಉಂಟು ಮಾಡಿದ ಬಿಕ್ಕಟ್ಟುಗಳು ,ವಡಕಿ ತಾತಪ್ಪಯ್ಯನ ತತ್ತ್ವಪದಗಳಲ್ಲಿ ವ್ಯಕ್ತವಾಗಿವೆ. ಆಧುನಿಕರಲ್ಲದ ಆದರೆ ಆಧುನಿಕ ಕಾಲಘಟ್ಟದಲ್ಲಿ ಬದುಕಿ ಬಾಳಿದ ವಡಕಿ ತಾತಪ್ಪಯ್ಯ, ನಿಜಲಿಂಗ ಭದ್ರೇಶ್ವರ, ಶಿಲ್ಲಪ್ಪ ಮುಂತಾದ ತತ್ತ್ವಪದಕಾರರ ಸಾಹಿತ್ಯದಲ್ಲಿ ತಾಂತ್ರಿಕವಾದ  ಆಧುನಿಕ ಸಂವೇದನೆಗಳಿರುವುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿರುವುದು ತತ್ತ್ವಪದಕಾರರು ಕನ್ನಡ ನವೋದಯದ ಮೊದಲ ಹರಿಕಾರರಾಗುತ್ತಾರೆಂಬುದು ಇನ್ನೂ ಸ್ಪಷ್ಟವಾಗುತ್ತದೆ.
     ಗ್ರಾಮ್ಯವನ್ನು ಬಳಸಿ ಈ ತತ್ತ್ವಪದಕಾರರು ತಮ್ಮ ಅಂತರಂಗದ ಸೂಕ್ಷ್ಮ ಭಾವನೆಗಳನ್ನು, ಆರೋಗ್ಯಕರ ಪ್ರೇಮವನ್ನು, ಬ್ರಿಟಿಷರ ದಬ್ಬಾಳಿಕೆ ಮತ್ತು ‘ಕ್ರೂರ’ ಯಂತ್ರ ನಾಗರಿಕತೆಯ ಸಂದರ್ಭದಲ್ಲಿ ಅಭಿವ್ಯಕ್ತಿಸಿದರು. ತಮ್ಮ ಸುತ್ತಣ ಸಮುದಾಯದ ಸಂದರ್ಭಗಳಲ್ಲಿ ನಾಶಗೊಳ್ಳುತ್ತಿದ್ದ ಮನುಷ್ಯ ಸಂಬಧಗಳನ್ನು ಕುರಿತು ಅವರು ಪದ ಕಟ್ಟಿ ಹಾಡಿದರು.
ಗಡಗಿ ತೊಳೆದು ಅಡಗಿ ಮಾಡಮ್ಮ | ತನುವೆಂಬ
ಗಡಗಿ ತೊಳೆದು ಅಡಗಿ ಮಾಡಮ್ಮ

ಅನುಭಾವದಡುಗೆಯ ಮಾಡಿ ಎಡಿಯ ಮಾಡಮ್ಮ
ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ


ಕರ್ಮವೆಂಬ ಜೋಳ ಬೀಸವ್ವ | ನೀ
ಧರ್ಮ ಜರಡಿಯಿಂದ ಹಿಟ್ಟ ಸೋಸವ್ವ

ನಿರ್ಮಳಾತ್ಮ ನೀರ ಹಾಕವ್ವಾ | ನೀ
ನೇಮದಿಂದ ಕಣಕ ನಾದವ್ವಾ
   
    ಹೀಗೆ ಸಾಗುವ ಕಡಕೋಳ ಮಡಿವಾಳಪ್ಪನವರ ತತ್ತ್ವಪದದಲ್ಲಿ  ದೇಹವನ್ನು ಗಡಿಗೆಗೆ, ಅನುಭಾವವನ್ನು ಅಡಿಗೆಗೆ ಹೋಲಿಸಿದ್ದಾರೆ. ಅನುಭಾವದಡಿಗೆಯನ್ನು ಮಾಡಲು ಕರ್ಮವೆಂಬ ಜೋಳ ಬೀಸಿ ಧರ್ಮವೆಂಬ ಜರಡಿಯಿಂದ ಹಿಟ್ಟು ಸಾರಣಿಸಿ ಅದರಲ್ಲಿ ನಿರ್ಮಳಾತ್ಮ ನೀರು ಹಾಕಿ ನಾದಬೇಕು., ನಾದಿ ಸಂಚಿತ ಕರ್ಮದ ಹಂಚನ್ನು ತೊಳೆದು ಹಂಚಿಕಿಂದ ಜ್ಞಾನದ ಅಗ್ನಿ ಉರಿಸಿ ಸಂಚಿನಿಂದ ಪರರೊಟ್ಟಿ ಬೇಯಿಸಬೇಕೆನ್ನುವಲ್ಲಿ ಅರ್ಥಪೂರ್ಣ ಅನುಭಾವವನ್ನು ಪ್ರಕಟಿಸುತ್ತಾರೆ.
     ಶಿಶುನಾಳ ಶರೀಫ್ ಸಾಹೇಬರ ತತ್ತ್ವಪದಗಳು ಕನ್ನಡದಲ್ಲಿ ಜನಪ್ರಿಯತೆಯಿಂದ ಮೆರೆಯುತ್ತಿವೆ. ಈ ಜನಪ್ರಿಯತೆಗೆ ಕಾರಣ ಮೂಲದಲ್ಲಿ ಮೌಖಿಕ ಕಾವ್ಯವಾಗಿದ್ದ ಈ ಪದಗಳು ಪಠ್ಯ ರಚನೆಗಳಾಗಿ ಉಳಿದುಕೊಂಡಾಗ ನಮ್ಮ ಕನ್ನಡದ ಪ್ರಸಿದ್ಧ ಗಾಯಕರು ಅವನ್ನು ಹಾಡಿ ತೋರಿಸಿದಾಗ ಶರೀಫ್‍ರ ಕಾವ್ಯ ಕೀರ್ತಿ ಬೆಳಗಿತು. ‘ಸದ್ಗುರು ಸಾಕಿದ ಮದ್ದಾನೆ’ ಎಂದು ಹೆಸರಾದ ಶರೀಫ್‍ರಿಗೆ ಗೋವಿಂದ ಭಟ್ಟರು ಗುರುಗಳು. ಶರೀಫ್‍ರ ತತ್ತ್ವಪದಗಳಲ್ಲಿ ಜೀವನ ಮತ್ತು ಆಧ್ಯಾತ್ಮ ಹಾಸು ಹೊಕ್ಕಾಗಿದೆ. ಜನಪದರ ಎಲ್ಲಾ ಬಗೆಯ ಸತ್ವ, ಶಕ್ತಿಗಳನ್ನು ಮೈದುಂಬಿಕೊಂಡು ರಚಿತವಾದ ಅವರ ಕಾವ್ಯ ಅದನ್ನು ತೊಟ್ಟಿಕ್ಕಿದೆ.

     ‘ಸಂಸಾರಿಕನ ಮನಸ್ಸನ್ನು ಈ ಲೋಕದಿಂದ ಆ ಲೋಕಕ್ಕೆ ಕರೆದಪಯ್ಯುವ ಶರೀಫ್‍ರ ಗೀತೆಗಳಲ್ಲಿ ಅನುಭಾವ ತತ್ತ್ವ ಸೂಸಾಡಿದೆ. ಜೀವ ಪರಮದ ಐಕ್ಯ, ಬಾಳಿನ ಆಶ್ವಾಸತತೆ, ಅಸಾರಗಳ ಸೃಷ್ಟಿ ಚಿತ್ರಣವಿದ್ದರೂ ಅವು ಬರೀ ಉಪದೇಶಕ್ಕಾಗಿ ಮಾತ್ರ ಬರೆದವುಗಳಲ್ಲ, ಅದರೊಳಗೆ ಕೇವಲ ಆತ್ಮ ವಿಚಾರವೊಂದೇ ಇಲ್ಲ, ತತ್ತ್ವಜ್ಞಾನದ ಜೊತೆಗೆ ಸಾಹಿತ್ಯದ ಸವಿ ಸೊಗಸು ಸೂಸುವುದನ್ನು ಕಾಣುತ್ತೇವೆ. ಅವುಗಳನ್ನು ನಾಡಿನ ಗಾಯಕರೂ ಭಜನಾ ಮೇಳದವರೂ ಹಾಡಿ ನಲಿಯುತ್ತಾರೆ.
     “ಶರೀಫ್‍ರ ಹಾಡುಗಳೆಂದರೆ ಅರುಹಿನ ಅತ್ಮರತಿಯಲ್ಲಿ ಬಿಗಿಯಾಗಿ ಬಿರುಕಿಲ್ಲದಂತೆ ನೇಯ್ದ ಆತ್ಮಗೀತೆಗಳು” ಎಂದು ಕರೆದಿರುವ ಡಾ. ಮಲ್ಲಿಕಾರ್ಜುನ ಸಿಂದಗಿ ಅವರು ‘ಒಂದು ನಿಟ್ಟಿನಲ್ಲಿ ಅವು ವ್ಯಕ್ತಿಗತ, ಮಗದೊಂದು ನಿಲುವಿನಲ್ಲಿ ಸರ್ವಮಾನ್ಯ, ವಿಶ್ವಮಾನ್ಯ, ಇಹದ ಪಡಿ ಪದಾರ್ಥಗಳಿಗೆ ಪರದ ಅಮೃತ ಲೇಪನ ಲೇಪಿಸಿ, ಅಸತ್ಯವಾದವುಗಳಿಗೆ ನಿತ್ಯತ್ವವನ್ನು ಕೊಟ್ಟು, ಎಲ್ಲಿಯೂ ಅರ್ಥ ಕೆಡದಂತೆ, ಅಸಹ್ಯವೆನಿಸದಂತೆ, ಶಿವಲೋಕದ ಹಿರಿಮೆಯನ್ನು ಸರಳವಾಗಿ ತತ್ತ್ವದಲ್ಲಿ ಹಣೆದ ದೈವೀ ನೇಕಾರರು ಎಂದು ಕರೆದುದರಲ್ಲಿ ಸಾರ್ಥಕತೆ ಇದೆ.

ಅಳಬ್ಯಾಡ ತಂಗಿ ಅಳಬ್ಯಾಡ | ನಿನ್ನ
ಕಳುಹ ಬಂದವರೆಲ್ಲ ಉಳುವಿಕೊಂಬುವರೇನೆ||

      ಗ್ರಾಮ್ಯ ಭಾಷೆಯ ನುಡಿ ಸಾಲುಗಳಲ್ಲಿ ಹೆಣೆದಿರುವ ಈ ಪದ ಮದುವೆಯಾದ ಹೆಣ್ಣು ಮೊದಲ ಸಲ ಅತ್ತೆಯ ಮನೆಗೆ ಹೋಗುವ ಭಾವಮಯವಾದ ಸನ್ನಿವೇಶವನ್ನು ಸೃಜಿಸಿದರೂ ಕೊನೆಗೆ ಅನುಭಾವದ ನೆಲೆಗೆ ತಂದು ಹಚ್ಚುತ್ತವೆ. ‘ಮಿಡಿಕ್ಯಾಡಿ ಮದಿವ್ಯಾದಿ, ಹುಡುಕಾಡಿ ಮಾಯದ ಮರವೇರದಿ’ ಎಂತೆಲ್ಲ ಮಾತುಗಳು ಜೀವ ತಾನಾಗಿ ಭೋಗಕ್ಕೆ, ಮಾಯೆಗೆ ಒಲಿದದ್ದನ್ನು ಸೂಚಿಸುತ್ತದೆ. ತವರು ಮನೆ ಜೀವದ ನಿಜ ನೆಲೆಗೆ ರೂಪಕವಾಗುತ್ತದೆ.
       ತತ್ತ್ವಪದಕಾರರು ಬಳಸುವ ಭಾಷೆಯಲ್ಲಿ ಜನರಾಡುವ ಮಾತಿಗೆ ಕಾವ್ಯತ್ವವನ್ನು ತುಂಬಿದರು.
ಹಾಲ ಕಾಸವ್ವ ತಂಗಿ ಹಾಲು ಕಾಸು
ನಿಂದು ಒಳ್ಳೆ ಮನಸ
ಹಾಲ ಕಾಸಿ ಹೆಪ್ಪ ಹಾಕಿ ಕೆನಿಯ ಬಡಸ
ಇದು ಬಹಳ ಸೊಗಸ
            (ತೆಲಗಬಾಳ ರೇವಪ್ಪ, 1790)

ನೆಚ್ಚಿಕಿಲ್ಲದ ಕಾಯಾ ನೀರಮ್ಯಾಲಿನ ಗುಳ್ಳಿ
ಗುಳ್ಳಿ ಒಡೆದ ಮ್ಯಾಲ ಆಗಿ ಹೋಯಿತು ಸಂತಿ
              (ಕಡ್ಲೆವಾಡ ಸಿದ್ದಪ್ಪ, 1811)

ಆಡೋ ಗುಗ್ಗಳ ಅಡಿಗಡಿನಾಡಿಸೋ ಗುಗ್ಗಳ
ಅಡಿಯಾಡಿ ಉಗ್ಗಡಿಸೋ ಗುಗ್ಗಳ
             (ಮೋಟನಳ್ಳಿ ಹಸನಸಾಹೇಬ, 1955)

ಹರಗ್ಯಾನ ಹಿಂಡ ಹೊಡದು ಸರಗೈ ಬಿತ್ತಪ್ಪ
ಬಕನೈದು ಬರತಾವ ಮ್ಯಾಲಿಂದ ಮ್ಯಾಲ
ಅವು ಸೇರಿ ಮಾಡತಾವ ಕಿಲ ಕಿಲ
ಭಾರಾ ಸೀತನಿ ಇದ್ದಲ್ಲಿ ನೂರಾರ
ಕೂಡತಾವ ದಾರಾರಿ ತೆನಿಯ ಮ್ಯಾಲ
             (ಬೇನೂರಿನ ಖಾಕಿಪೀರ, 1874)

ಅಳ್ಳಿಮುದ್ದಿ ಕಂಡ ಬೆಕ್ಕು ಬೆಣ್ಣೆಯೆಂದು ತಿಳಿತು
ಸುಳ್ಳೇ ಬಾಯಿ ಹಾಕಿ ಸತ್ತಿತು | ತಿಳಿ ಇದರಂತೆ
ಮಳ್ಳ ನಿನ್ನ ಭ್ರಾಂತಿ, ತಳ್ಳೋ ಸಂಸಾರ
ಚಿಂತಿ ಸುಳ್ಳೇ ಹಚಗೊಂಡು ಕುಂತಿ
            (ಮಾದನ ಹಿಪ್ಪರಗಾ ಸಿದ್ಧರಾಮ ಶಿವಯೋಗಿ, 1891)

ಘಾಸಿ ಆದ ಈ ಹೇಸಿ ಸಂಸಾರ ಯಾನೆ ಹ್ಯಾಂಗ ಆದಿತ್ತೋ
ಕಾಸು ತುಗೊಂಡು ಕಾಶಿಗೆ ಹೋದರ ಪಾಪ ಹ್ಯಾಂಗ ಹೋಗಿತ್ತೋ
             (ಮಹಾಗಾಂವ ಮೀರಸಾಬ, 1971)

ಆಲಾವಿನಾಡಿರೋ | ಪೀರನ ಆಲಾವಿನಾಡಿರೋ
ಬಸವೈ ಕೆವಸೈ ದೂಲಯಾಲ ಅನ್ನಿರಿ ಜನರೇ
           (ನೀರಲಕೇರಿ ಬಸವಲಿಂಗ ಶರಣ, 1812)

ತಿಳಿದು ನೋಡುವುದು ಸುಜ್ಞಾನ
ಮನ ತೊಳೆದು ನೋಡುವುದು ಮಹಾಜ್ಞಾನ !
ತಿಳಿಯದೆ ತೊಳೆಯದೆ ಮೂರು ಮಲಗಳೊಳ್
ಮುಳುಮುಳುಗ್ಯಾಡುವುದು ಅಜ್ಞಾನ
          (ಮರಕುಂದಿ ಬಸವಣ್ಣಪ್ಪ, 1780)

ಹದವಾಗಿ ಹದಿಮೂರು ತೂತಿಂದ ಹುಟ್ಟಿ ಬಂದದ ಗಡಗಿ
ಮಾಡಲಾಕ ಕಲ್ತರ ನೀಡಲಾಕ ಬರತಾದ ಅನುಭಾವದ ಅಡಗಿ
          (ಕೊಹಿನೂರ ಹಸನಸಾಬ, 1894)
  …….ಹೀಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಮೌಖಿಕ ಕಾವ್ಯ ಸೃಷ್ಟಿಯ ಸಂದರ್ಭವು ಜನಪದದ ನುಡಿ, ಪದ ಬಳಕೆ, ಜನಪದರ ಆಶಯದೊಂದಿಗೆ ಮೂಡಿ ಬಂದವು. ಒಬ್ಬೊಬ್ಬ ಪದಕಾರನು ತನ್ನ ರಾಚನಿಕ ವಿಶಿಷ್ಟತೆಯಿಂದ ಜಾನಪದ ಲೋಕವನ್ನು ಬೆಳೆಸಿದರು. ಉದ್ದಕ್ಕೂ ಬೆಳೆದು ಬಂದ ಈ ಪರಂಪರೆ ಆಧುನಿಕ ಕನ್ನಡ ಕಾವ್ಯ ರೂಪವನ್ನು ಯಾವ ಬಿಗುವು ಇಲ್ಲದೆ ಕಟ್ಟಿ ಕೊಟ್ಟಿತು. ಆಧುನಿಕ ಕಾವ್ಯ ಇಂಥ ರೂಪ ರಚನೆಗಳನ್ನೇ ಹೊತ್ತಕೊಂಡು ಮುದ್ರಣ ಸಂಸ್ಸøತಿಯಲ್ಲಿ ಒಡಮೂಡಿ ಬಂದವು.

  [ ಪ್ರಬಂಧ ಸಿದ್ದಪಡಿಸುವ ಸಂದರ್ಭದಲ್ಲಿ ಡಾ.ಅಮರೇಶ ನುಗಡೋಣಿಯವರ ‘ನುಡಿವ ಬೆಡಗು’,ಡಾ,ಕೆ.ಸಿ.ಶಿವಾರೆಡ್ಡಿಯವರ ‘ಕನ್ನಡದ ಹಾಡು ಪಾಡು’, ಡಾ.ಬಸವರಾಜ ಸಬರದ ಅವರ ‘ಹೈದರಾಬಾದ ಕರ್ನಾಟಕದ ತತ್ತ್ವಪದಕಾರರು’ ಹಾಗೂ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರ ’ಶರೀಫ ಸಾಹೇಬರ ಗೀತೆಗಳು’ ಹಾಗೂ ನನ್ನ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ‘ ಕೃತಿಗಳ ನೆರವು ಪಡೆದಿದ್ದೇನೆ.-ಲೇಖಕ ]*




       - ಡಾ.ಪ್ರಕಾಶ ಗ. ಖಾಡೆ
      ‘ಶ್ರೀಗುರು’ ,ಸರಸ್ವತಿ ಬಡಾವಣೆ,
      ಸೆಕ್ಟರ್ ನಂ. 63, ನವನಗರ,
      ಬಾಗಲಕೋಟ.
      ಮೊ.9845500890.
                                                             

ಕವಿತೆಗಳು :ವಿದ್ಯಾ ಕುಂದರಗಿ















ಬಯಲ  ಬದುಕಿಗೆ ..............

ಬಾಗಿಲೇಕೆ? ಗೋಡೆ ಏಕೆ?
ಛತ್ತಛಾವಣಿ ಮುಚ್ಚು ಏಕೆ?
ಹೊಚ್ಚಲೇಕೇ? ಬಚ್ಚಲೇಕೇ?
ಮುಚ್ಚುಮರೆಯ ತೆರೆಯೇ ಇಲ್ಲ
ಬಯಲ ಆಲಯದಲ್ಲಿ
ಬದುಕು ಬಯಲಿನಂತಿರಲು.

ನಸುಕಿನಲೆದ್ದು ಹೊದ್ದ ಕಲತ್ತಲೆಯ ಕಣ್ಣು ಕಟ್ಟಿ
ಅದೇ ಕಂಟಿ,ಕಂದರ, ಹೆಬ್ಬಂಡೆಗಳಿಗೆ
ಮರೆ,ಆಸರೆಯ ಮೊರೆ.........
ಇಲ್ಲದಿರೆ ಕಾಯಬೇಕು ಕಾರಿರುಳ.
ಭೇದ,ಭವಣೆ,ಸ್ಥಾವರಗಳ ಬಹಿರ್ದೆಶೆ...
ಮೈ ಮನಸ್ಸು ನಿರುಮ್ಮಳ.
ಮತ್ತೇ ಬಟ್ಟೆ ಕಳಚಿ, ಭಾವ ತೊಳೆದು
ಶುದ್ಧಿ ಕೈಂಕರ್ಯದಲ್ಲಿ
ಕಣ್ಣು ಮುಚ್ಚೇ ಕಾರ್ಯವಾಸಿ

ಒಣ ರೊಟ್ಟಿ, ನೆನೆದ ಕಾಳಿಗೆ
ಸವಿ ತರುವ ಎಳೆಗಾಯಿ, ಚಿಗುರೆಲೆ,
ಮಣ್ಣಲ್ಲಿ ಮಣ್ಣಾಗುವ.
ಕೆಸರಲ್ಲಿ ತೇವವಾಗುವ
ಕೈಗಳಿಗಿಲ್ಲ ಮಡಿ,ಮುಚ್ಚಟೆಯ ಸೂತಕ
ತೆನೆಯುತ್ತ,ತೊನೆಯುತ್ತ
ಹಸಿರ ಮಡಿಲೊಳಗೆ
ರಾಶಿ,ರಾಶಿ ಸುರಿದ ಕಾಳು,
ಭೂಮಿಯೊಡಲ ಕಣಜದೊಳಗೆ
ಭದ್ರವಾದ ನಾಳೆ ಬೀಜ.

ಹೊದಿಕೆಯೊಳಗೆ ತಂಬೆರಲರ ಕಚಗುಳಿ
ಕಿಲಿಕಿಲಿಸುವ ಮಿಂಚುಳ್ಳಿ
ಕತ್ತಲೆಯ ಗರ್ಭದೊಳಗೆ
ಬೆಳಕ ಕಿಡಿಯ ಬಿತ್ತಿ
ಮರಿ ಹಾಕುತ್ತದೆ ಪ್ರಕೃತಿ
ಬಯಲ ಬದುಕ ಸಂತತಿ    

       - ವಿದ್ಯಾ ಕುಂದರಗಿ



               
                                       









ಬೆಳಕ ತರುವೆನೆಂದವಗೆ

ಕರಿಮುಗಿಲಿನ ಕೆಳಗೆ
ಬಿಳಿ ಹೆಣ್ಣಿನ ಅಳಲು
ಸಂಗ ನಿಂತೊಮ್ಮೆ ನೋಡು
ಅನುಭವಿಸು,ಅರ್ಥೈಸು

ಬೆಳಕ ತರುವೆನೆಂದು
ಸೂರ್ಯನ ಹಿಂದೆ ಓಡೋಡುವ
ನೀನು ಮುಟ್ಟಬಲ್ಲೆಯಾ
ಪಣತೊಟ್ಟು ನೀನಿಟ್ಟ ಗುರಿ.

ಸೂರ್ಯನಿಗೆ ಸಾವಿಲ್ಲ
ನಿನಗವನಷ್ಟು ಆಯುಷ್ಯವಿಲ್ಲ
ಕತ್ತಲಿಲ್ಲದಿರೆ
ಬೆಳಕಿಗೆ ಬದುಕಿಲ್ಲ

ಯೋಚಿಸು,ಮನಸಾರೆ
ಇಚ್ಛಿಸು ಒಂದೇ ಒಂದು ಸಾರಿ
ನೀನೆ ಇಚ್ಛಿಸು
ದೈವೇಚ್ಛೆಯಲ್ಲೇನಿದೆ?

ಹಣೆಬರಹ ಹಳಿದು
 ಹರಣ ಮಾಡಬೇಡ ಕಾಲ
ಪುಟ್ಟ ಹಣತೆಯಾಗು ಸಾಕು
ದಟ್ಟ ಕತ್ತಲೆಯ ಈ ಬದುಕಿಗೆ.


              -  ವಿದ್ಯಾ.ಕುಂದರಗಿ.