ಶನಿವಾರ, ಜುಲೈ 6, 2013

ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ-ಡಾ.ಖಾಡೆ

 ವಿಶೇಷ ಲೇಖನ :
                                                   
                              ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ 

                                                                 -ಡಾ.ಪ್ರಕಾಶ ಗ.ಖಾಡೆ
( ಜನತೆಯ ಸಂಸ್ಕೃತಿಯ ಶಿಲಾಶಾಸನಗಳಾಗಿರುವ ಜನಪದರ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.)

       ಕನ್ನಡದಲ್ಲಿ ಈಗ ಚುಟುಕು ಸಾಹಿತ್ಯ ರಚನೆಯ ಭರಾಟೆ ನಡೆಯುತ್ತಿದೆ. ಹಿರಿಯ ತಲೆಮಾರಿನ ಕವಿಗಳೊಂದಿಗೆ ಇವತ್ತು ಹೊಸ ತಲೆಮಾರಿನ ಯುವ ಜನಾಂಗ ಈ ಬಗೆಯ ರಚನೆಯಲ್ಲಿ ತೊಡಗಿರುವುದು ಈ ಪ್ರಕಾರದ ಜನಪ್ರಿಯತೆ ಸಾರುತ್ತದೆ. ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತವಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಿಕವಾಗಿ ಮನಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯ. ಈ ಬಗೆಯ ರಚನೆಗಳಿಗೆ ಸೀಮೆ-ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನಾಧರಿಸಿ ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲ ಹೊತ್ತು ಚಿಂತನೆಗೆ ತೊಡಗಿಸಬೇಕು.
    ಚುಟುಕು ರಚನೆ ನಮ್ಮ ಅಕ್ಷರಸ್ಥ ಕವಿಗಳ ಕೈಯಲ್ಲಿ ಮಾತ್ರ ರಚನೆ ಆಗುವಂಥದು ಅಲ್ಲ. ಅದು ಅನೇಕ ಬಾರಿ ಅನಕ್ಷರಸ್ಥ ಜನರಾಡುವ ಮಾತಿನಲ್ಲಿ ಹೊರಹೊಮ್ಮುತ್ತದೆ. ಅನುಭವಸ್ಥ ಜನ ಸೃಷ್ಟಿಸುವ ಅನೇಕ ನಾಣ್ನುಡಿ ಗಾದೆಮಾತುಗಳು ಒಂದು ಬಗೆಯಲ್ಲಿ ನಮ್ಮ ಇಂದಿನ ಚುಟುಕು ರಚನೆಗಳನ್ನು ಹೋಲುತ್ತವೆ. ಒಂದು ಉದಾಹರಣೆಯ ಮೂಲಕ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳೋಣ. ಹಳ್ಳಿಗಳಲ್ಲಿ ಅನೇಕ ಬಗೆಯ ಜನರನ್ನು ಕಾಣುತ್ತೇವೆ. ಅವರ ವೃತ್ತಿ ಮನೋಭಾವದ ಮೂಲಕ ಅವರನ್ನು ಗುರುತಿಸುತ್ತೇವೆ. ಇಲ್ಲಿ ಒಂದು ಕಲ್ಲು ಎರಡು ಕುಟುಂಬಗಳ ಬದುಕಿಗೆ ಆಧಾರವಾದ ಬಗೆಗೆ ನಮ್ಮ ಜನಪದರಲ್ಲಿ ಒಂದು ನಾಣ್ನುಡಿ ಹೀಗೆ ಹೇಳುತ್ತದೆ.
    ಬಿದ್ದ ಕಲ್ಲ ಅಗಸಗ
    ಎದ್ದ ಕಲ್ಲ ಪೂಜಾರಿಗೆ
    ಇಲ್ಲಿ ಬರುವ ಕಲ್ಲು ಪಡೆದುಕೊಳ್ಳುವ ಕ್ರಿಯಾ ಮೌಲ್ಯವನ್ನು ಗಮನಿಸಿ, ಅಗಸನು ಬಟ್ಟೆ ತೊಳೆಯುವ ಕಾಯಕಕ್ಕೆ ಕಲ್ಲು ಬಳಸಿಕೊಂಡರೆ, ಪೂಜಾರಿ ಅದನ್ನು  ದೇವರು ಮಾಡಿ ಪೂಜೆ ಪುನಸ್ಕಾರಗಳೊಂದಿಗೆ, ಭಕ್ತರಿಂದ ಬರುವ ಪ್ರಸಾದದಿಂದ ತನ್ನ ಮನೆಯನ್ನು ನಿರ್ವಹಿಸಬಲ್ಲವನಾಗುತ್ತಾನೆ. ಇಂಥ ಸಂಗತಿಗಳನ್ನು ಚುಟುಕಾಗಿ ಕಟ್ಟಿಕೊಡುವ ಅನೇಕ ರಚನೆಗಳನ್ನು ನಮ್ಮ ಜಾನಪದ ಭಂಡಾರದಲ್ಲಿ ಸಿಕ್ಕುತ್ತವೆ. ಜಾನಪದವನ್ನೇ ಉಸಿರಾಗಿಸಿಕೊಂಡಿದ್ದ ನಮ್ಮ ಪೂರ್ವಜರು ಬದುಕಿನ ಅನುಭವಾಮೃತವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಯಾವುದೇ ಒಂದು ವ್ಯವಸ್ಥೆ ಸರಿ ದಾರಿಯಲ್ಲಿ ನಡೆಯಬೇಕಾದರೆ ಆ ವ್ಯವಸ್ಥೆಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಈ ಮಾತನ್ನು ಜನಪದರು ಹೇಳುವುದು ಹೀಗೆ;
         ಹಿರೇರಿಲ್ಲದ ಮನಿ ಅಲ್ಲ,
          ಗುರು ಇಲ್ಲದ ಮಠ ಅಲ್ಲ.

         ವ್ಯವಸ್ಥೆಯನ್ನು ಸರಿದಾರಿಗೆ ತರುವುದು ಅನಿವಾರ್ಯವಾಗಿರುವ ಮುಖಂಡತ್ವವನ್ನು ಈ ರಚನೆ ಸಾರುತ್ತದೆ. ಮನೆ ಮತ್ತು ಮಠಕ್ಕೆ ಒಂದು ಪರಿಪೂರ್ಣತೆ ಬರಬೇಕಾದರೆ ಅದನ್ನು ನಿರ್ವಹಿಸುವ ಕೇಂದ್ರಿಕೃತ ಬದುಕನ್ನು ಇಲ್ಲಿ ಕಾಣುತ್ತೇವೆ. ಇಂದು ರಚನೆಯಾಗುತ್ತಿರುವ ಅನೇಕ ಚುಟುಕುಗಳು ನಮ್ಮ ಬದುಕನ್ನು ಪ್ರತಿನಿಧಿಸುತ್ತಿವೆ. ಇಂದು ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆ ಮೊದಲಾದ ಪಿಡುಗುಗಳ ಬಗ್ಗೆ ಅನೇಕರು ಬರೆದಿದ್ದಾರೆ. ಈ ಬಗೆಯ ರಚನೆಗಳನ್ನು ಜಾನಪದರಲ್ಲೂ ಕಾಣಬಹುದು.
        ಅಮ್ಮನವರು
         ಪಟ್ಟಕ್ಕೆ ಬರುವಾಗ,
         ಅಯ್ಯನವರು
         ಚಟ್ಟಕ್ಕೆ ಏರಿದರು.
         ಇದು ಬಾಲ್ಯವಿವಾಹವನ್ನು ಮತ್ತು ಅದರ ದಾರುಣತೆಯ ದುಷ್ಪರಿಣಾಮ ಸೂಚಿಸುವ ರಚನೆ. ವಯಸ್ಸಿನ ಅಂತರ ಅರಿಯದೇ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಳ್ಳುವ ಜನರ ಮುಖಕ್ಕೆ ರಾಚುವಂತೆ ಇಂಥ ರಚನೆಗಳನ್ನು ಜಾನಪದರು ಕೊಟ್ಟಿದ್ದಾರೆ.  ಇಂಥದೇ ಇನ್ನೊಂದು ರಚನೆ.
          ಆಡುವ  ಹುಡುಗಿಗೆ,
          ಕಾಡುವ ಕೂಸು.
          ಆಡಿ ನಲಿದಾಡಬೇಕಾದ ವಯಸ್ಸಿನಲ್ಲಿ ಹೆಣ್ಣುಮಗು ಸಂಸಾರದ ಭಾರ ಹೊರುವ ಮತ್ತು ಮಕ್ಕಳ ಪಾಲನೆಯಲ್ಲಿ ತನ್ನ ಬದುಕನ್ನು ಕಳೆದುಕೊಳ್ಳುವ ಚಿತ್ರಣ ಈ ರಚನೆಯಲ್ಲಿದೆ. ಗಾದೆಗಳು ವೇದಕ್ಕೆ ಸಮ ಎಂಬ ಮಾತಿದೆ. ವೇದದಷ್ಟೇ ಮೌಲ್ಯವನ್ನು ನಾವು ನಮ್ಮ ಗಾದೆಗಳಲ್ಲಿ ಗುರುತಿಸಿದ್ದೇವೆ. ಗಾದೆಗಳ ರಚನೆಯ ಹಿಂದೆ ಅನೇಕರ ಬದುಕು ಕೆಲಸ ಮಾಡಿರುತ್ತದೆ. ಈ ಗಾದೆಗಳು ಜಗತ್ತಿನ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿವೆ. ಭಾಷೆಯಿರುವ ಕಡೆಯಲ್ಲೆಲ್ಲ ಗಾದೆಗಳಿವೆ. ಗಾದೆ ಇಲ್ಲದ ಭಾಷೆ ಇಲ್ಲ. ಭಾಷೆ ಇಲ್ಲದ ಜನಾಂಗವಿಲ್ಲ. ಗಾದೆಗಳು ಇಂದಿನ ಚುಟುಕು ಸಾಹಿತ್ಯ ರಚನೆಯನ್ನೇ ಹೋಲುತ್ತವೆ.  ಪುರಾಣ ಇತಿಹಾಸಗಳೊಂದಿಗೆ ಅವರ ಜ್ಞಾನಕ್ಷೇತ್ರ ವಿಸ್ತರಿಸುತ್ತದೆ.ಪೂರ್ವಜರ ಅನುಭಾವದ ನುಡಿಗಳು ಯಾವುದಕ್ಕೂ ಹೊರತಾಗಿಲ್ಲ.
        ಹೆಣ್ಣಿನಿಂದ ರಾವಣ ಕೆಟ್ಟ
        ಮಣ್ಣಿನಿಂದ ಕೌರವ ಕೆಟ್ಟ  
ಎಂಬ ಮಾತು ದುರುಳ ಸಂಸ್ಕøತಿಯ ಅವನತಿಯನ್ನು ಬಯಲು ಮಾಡುತ್ತದೆ.ತವರು ಸಂಸ್ಕøತಿಯನ್ನು ಬಣ್ಣಿಸುವ ಮತ್ತು ಪರಿಚಯಿಸುವ ಅನೇಕ ರಚನೆಗಳು ನಮ್ಮ ಜಾನಪದಲ್ಲಿವೆ.ತವರಿನಲ್ಲಿ ಹೆಣ್ಣು ಪ್ರಧಾನ ಮತ್ತು ಕೇಂದ್ರ ಸ್ಥಾನ.ಹೆಣ್ಣಿನ ಸುತ್ತ ಸುತ್ತುವ ಅನೇಕ ಜನಪದ ರಚನೆಗಳು ಅವಳ ಬದುಕನ್ನು ಪರಿಚಯಿಸುವ ವಿಶ್ವಕೋಶಗಳಾಗಿವೆ.
       ಗಂಜಿಯ ಕುಡಿದರೂ
       ಗಂಡನ ಮನಿಲೇಸು
ಎಂಬಲ್ಲಿ ತವರು ಮನೆಯಲ್ಲಿ ಎಷ್ಟು ಆಸ್ತಿ ಇದ್ದರೂ ಅದು ಹೆಣ್ಣಿಗೆ ಕೊನೆಯ ತನP ಜೊತೆ ಇರುವುದಿಲ್ಲ.ಯಾರ ಹಂಗಿಲ್ಲದೇ ಉಣ್ಣುವ ತನ್ನ ಮನೆಯ ಗಂಜೀಯೇ ಶ್ರೇಷ್ಠವಾದುದು ಎಂಬುದು ಜನಪದರ ನೀತಿ ವಾಕ್ಯ.ಉಪಕಾರ ಸ್ಮರಣೆಗೆ ಒಂದು ರಚನೆ ಹೀಗಿದೆ.
       ಕಲ್ಲಲ್ಲಿ ಇಟ್ಟವನ
       ಬೆಲ್ಲದಲ್ಲಿ ಇಡಬೇಕು.
ಎಂಬಲ್ಲಿ ಅಪಕಾರ ಮಾಡಿದರೂ ಉಪಕಾರ ಮಾಡು ಎಂಬ ನೀತಿ ಇದೆ.ವ್ಯಂಗ್ಯ,ವಿಡಂಬನೆಗಳಿಂದಲೂ ಜನಪದರ ರಚನೆಗಳು ಹೊರತಾಗಿಲ್ಲ.ಚುಟುಕು ಕವಿತೆಗಳ ಲಕ್ಷಣಗಳಲ್ಲಿ ವಿಡಂಬನೆ,ಕಟಕಿ,ವ್ಯಂಗ್ಯವು ಪ್ರಧಾನವಾದುದು.
      ಅಂಗಡ್ಯಾಗ ಇರೋದು ಕಪಾಟ
      ನಮ್ಮ ರಾಯರ ತೆಲಿ ಸಪಾಟ
ಎಂಬಲ್ಲಿ ವಿಡಂಬನೆ ಇದೆ.ಜನಪದರ ಕಲ್ಪನೆಯ ಸೊಗಸು ಹೃದಯಪೂರ್ಣವಾದುದು.ತನ್ನ ಗಂಡನ ಹೆಸರು ಹೇಳುವ ಒಡಪಿನ ಒಂದು ರಚನೆ ಹೀಗಿದೆ.
      ಬೆಳದಿಂಗಳ ಬೆಳಕ
      ಕಲ್ಲ ಸಕ್ಕರಿ ಹಳಕ
      ನಕ್ಷತ್ರ ಮ್ಯಾಲ ಕುಂತ
      ಅಕ್ಷರ ಬರೀತಾನ
ಇಂದು ರಚನೆಯಾಗುತ್ತಿರುವ ಚುಟುಕುಗಳು ಒಳಗೊಳ್ಳುವ ಎಲ್ಲ ಲಕ್ಷಣಗಳನ್ನು ಅವಕ್ಕೂ ಮಿಗಿಲಾಗಿ ಜನಪದರ ರಚನೆಗಳಲ್ಲಿ ಕಾಣುತ್ತೇವೆ.ಜನತೆಯ ಸಂಸ್ಕøತಿಯ ಶಿಲಾಶಾಸನಗಳಾಗಿರುವ ಈ ಬಗೆಯ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು.ಸಂಕೀರ್ಣತೆಯತ್ತ ವಾಲುತ್ತಿರುವ ಇಂದಿನ ಚುಟುಕುಗಳು,ಹನಿಗವನಗಳು ಪ್ರಧಾನವಾಗಿ ಸಮಾಜಮುಖಿಯಾದರೂ ಅವು ಬಯಸುವ ಲಯಗಾರಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.ನಮ್ಮ ಯುವ ಪೀಳಿಗೆಯ ಬರಹಗಾರರು ಹನಿಗವನ ರಚನೆಗೆ ತೊಡಗುವ ಮೊದಲು ಜನಪದರ ಆಡುನುಡಿಯ ಸೊಗಸಿನಲ್ಲಿ ಬೆರೆತು ಅವರ ನುಡಿಗಟ್ಟುಗಳನ್ನು ಅರಗಿಸಿಕೊಳ್ಳಬೇಕು.ಅಂದಾಗ ಅಪರೂಪದ ರಚನೆಗಳು ಚುಟುಕು ಸಾಹಿತ್ಯ ಪ್ರಕಾರದಲ್ಲಿ ದಕ್ಕುತ್ತವೆ.ವಿಶಾಲ ಜೀವನಾನುಭವದ ಚುಟುಕು ಸಾಹಿತ್ಯಕ್ಕೆ ಜನಪದವೇ ಮೂಲ ಮತ್ತು ಅನಿವಾರ್ಯವಾಗಿದೆ.
                                                                                            - ಡಾ.ಪ್ರಕಾಶ ಗ.ಖಾಡೆ.
==============================================
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ-587103,ಮೊ.-9845500890