ಗುರುವಾರ, ಫೆಬ್ರವರಿ 6, 2014

ಗಜಲ್ : ಹೇಮಲತಾ ವಸ್ತ್ರದ.




ಗಜಲ್ : ಹೇಮಲತಾ ವಸ್ತ್ರದ.


Hemalatha Vastrad
Hemalatha Vastrad

ಹೂವಿಗೆ ರೆಕ್ಕೆ ಬಂದಿರುವುದ ಈ ಜಗವೇನು ಬಲ್ಲದು
ಮನ ಗುಲ್ಮೊಹರ್ ಚಿಗುರಿರುವುದ ಈ ಜಗವೇನು ಬಲ್ಲದು

ಅವನು ಸಂತೆಯೊಳಗಿನ ಸಂತನಂತೆ ಎದ್ದು ಹೋದ
ನಾನು ಅವನಾಗಿ ಉಸಿರಾಡುತಿರುವುದ ಈ ಜಗವೇನು ಬಲ್ಲದು

ಮಾತು ಮಾತು ಮಾತು ಅಹಂ ತಣಿಸಲದೇಸು ಮಾತು
ಮೌನದೊಳಗೂ ಮಾತಿರುವುದ ಈ ಜಗವೇನು ಬಲ್ಲದು

ಚೆಂದುಟಿಗಳ ಮೇಲಣ ಮಂದಹಾಸದ ಮಧು
ಹೇಳಲಾರದೇಸೋ ವೇದನೆಗಳಿರುವುದ ಈ ಜಗವೇನು ಬಲ್ಲದು

ಜಗ ನೀತಿ ನಿಯಮಗಳ ಪೀಠ
ಹೃದಯವನೆ ಬಲಿ ಕೊಟ್ಟಿರುವದ ಈ ಜಗವೇನು ಬಲ್ಲದು

ಹಾಸದೊಳಗಿನ ಹಗೆ ಮತ್ಸರದ ಹೊಗೆ
ಬೆಳಕಿನ ಹೆಣ ತೇಲಿರುವದ ಈ ಜಗವೇನು ಬಲ್ಲದು

ಆಡುವರು ಕಾಡುವರು ನೋವು ನೀಡುವರು
ನೋವುಗಳೆ ಶಿಖರ ಮೆಟ್ಟಿಲಾಗಿರುವುದ ಈ ಜಗವೇನು ಬಲ್ಲದು

ಲುಪ್ತವಾಗದೀ ಅಪವಾದಗಳ ಬೇತಾಳದ
ಚಮ್ಮಾವುಗೆ ಮೆಟ್ಟಿಕೊಂಡಿರುವುದ ಈ ಜಗವೇನು ಬಲ್ಲದು

ದಹಿಸುವ ಬದುಕು ಹಸಿ ಕದಳಿ
ಹೇಮೆಯೊಡಲದು ಜೀವಸೆಲೆಯಾಗಿರುವದ ಈ ಜಗವೇನು ಬಲ್ಲದು.

**************

ಡಾ. ಪ್ರಕಾಶ ಗ. ಖಾಡೆ, ಪರಿಚಯ ಮತ್ತು ಅವರ ಕವನಗಳು-- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.

ಡಾ. ಪ್ರಕಾಶ ಗ. ಖಾಡೆ,ಬಾಗಲಕೋಟ ಪರಿಚಯ ಮತ್ತು ಅವರ ಕವನಗಳು

- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.
ವಿಭಾಗ ಸಂಪಾದಕರು, ಕಾವ್ಯ ಸಿಂಚನ ವಿಭಾಗ

  ಮೊದಲನುಡಿ:

ಪ್ರೀತಿಯ ಕಾವ್ಯಪ್ರೇಮಿಗಳೇ,
ನಿಮ್ಮೆಲ್ಲರ ಮೆಚ್ಚುಗೆಗೆ ಗಳಿಸುತ್ತಿರುವ "ಕಾವ್ಯ-ಸಿಂಚನ"ವಿಭಾಗಕ್ಕೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು.."ಕವಿ-ಕಾವ್ಯ"ಗಳ ಅನ್ವೇಷಣೆ ಕಷ್ಟಕರವಾದರೂ"ಅನೇಕತೆಯಲ್ಲಿ ಏಕತೆ" ಕಾಣುವ ಭಾಗ್ಯ ನನ್ನದು.

ಆತ್ಮಿಯರೇ,
ಯಾರಾದರೂ ಬಾಲ್ಯದಲ್ಲಿನ ಸವಿ ನೆನಪುಗಳನ್ನು ಮರೆಯಬಹುದೆ? "ಜಾನಪದ" ಅಂದ ತಕ್ಷಣ ಹಳ್ಳಿಗಳ ನೆನಪಾಗುವುದು ಸಹಜ. ಅದರಲ್ಲೂ ಹಳ್ಳಿಗಳ ಸಿರಿ -ಜಾನಪದ ಸೊಗಡು . ಆಹಾ ..?ಎಂಥ ಚಂದಾ....ರೀ? ಅದ್ವಿತೀಯ ಜನಪದ ಗಾಯಕ ಶ್ರೀ ಬಾಳಪ್ಪ ಹುಕ್ಕೇರಿಯವರ "ನಮ್ಮ ಹಳ್ಳಿ ಊರ ನಮಗ ಪಾಡ ....ಯಾತಕ್ಕವ್ವಾ ಹುಬ್ಬಳ್ಳಿ ಧಾರವಾಡ? ಜನಪದ ಕೇಳದ ಜನರೇ ಇಲ್ಲ.

ದಿನ ದಿನಕ್ಕೂ ನಶಿಸಿ ಹೋಗುತ್ತಿದ್ದ ಸತ್ವಯುತ ಜಾನಪದಗಳಿಗಾಗಿ  ಹಳ್ಳಿ-ಹಳ್ಳಿಯಲ್ಲಿಯೂ ಸುತ್ತಾಡಿ ಸತ್ವಯುತ ಜನಪದಗಳನ್ನು ಸಂಗ್ರಹಿಸಿ ಅಳಿದು ಹೋಗಬೇಕಾಗಿದ್ದ ಜನಪದ ಸಾಹಿತ್ಯವನ್ನು "ಹಳ್ಳಿ ಹಬ್ಬಿಸಿದ ಹೂಬಳ್ಳಿ" ,"ಬದುಕೇ ಜಾನಪದ"ಆತ್ಮಕಥೆ ಯನ್ನೂ ಬರೆದು  "ಮುಧೋಳ'ದಲ್ಲಿರುವ "ಜನಪದ ನಿಲಯ"ವೆಂಬ "ಜ್ಞಾನ ಗೃಹ"ದಲ್ಲಿರುವ ಹಿರಿಯ ಜಾನಪದ ಸಾಹಿತಿ ಹಾಗೂ ರಾಜ್ಯದ ಜನಪದ ತಜ್ಞ ರಾದ  ಶ್ರೀ ಗಣಪತಿ ಖಾಡೆಯವರನ್ನು ಅಭಿನಂದಿಸುತ್ತೇನೆ.
ತಂದೆಯವರ ದಾರಿಯಲ್ಲೇ ಸಾಗಿ ಜಾನಪದದ ಸಾಹಿತ್ಯದ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ  ಕವಿ, ಸಾಹಿತಿ, ಸಂದರ್ಶಕ ಹೀಗೆ ಹಲವಾರು ಕನ್ನಡ ಪ್ರಕ್ರಿಯೆಗಳಲ್ಲಿ  ತೊಡಗಿಸಿಕೊಂಡಿರುವ  ಬಾಗಲಕೋಟ ಜಿಲ್ಲೆಯ ಡಾ||ಪ್ರಕಾಶ್ .ಗ.ಖಾಡೆ ಆವರನ್ನು ಈ ವಾರದ ಕವಿಗಳಾಗಿ ಅವರ ಕವಿತೆಗಳೊಂದಿಗೆ ನಿಮ್ಮೆಲ್ಲರಿಗೆ ಪರಿಚಯಿತ್ತಿದ್ದೇನೆ.

ಹಳ್ಳಿಯ ಸೊಗಡು ಆಡು ಮಾತು ಆಳಕ್ಕಿಳಿದು ಜನಮನಕ್ಕೆ ಮುಟ್ಟಿಸುವದು ಮೊದಲಿನಿಂದ ಬಂದ ರೂಢಿ. ಒಟ್ಟಾರೆ ಹೇಳಬೇಕಂದರೆ  "ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಖಾಡೆ ಅವರು ಮುಟ್ಟದ ಜಾನಪದವಿಲ್ಲ". ಅವರ ಬರವಣಿಗೆ "ಬತ್ತದಾ ಒರತೆ". ವಂಶ ಪರಂಪರೆ ಯಾಗಿ ಬಳುವಳಿಯಾಗಿ ಪಡೆದ ಶ್ರೀ ಪ್ರಕಾಶ ಖಾಡೆ ಅವರು ನವೋದಯ ಕಾವ್ಯ ತಮಗೇನೂ ಹೊಸದಲ್ಲವೆಂಬಂತೆ ಕಳಿಸಿದ ಎರಡೂ ಕವನಗಳೂ ತುಂಬಾ ಚನ್ನಾಗಿವೆ.

ನೀವೆಲ್ಲ ಬಾಲ್ಯದಲ್ಲಿನ ಆ ಮಾತೃ ಮಮತೆಯನ್ನು ಅನುಭವಿಸಿದ್ದೀರಿ. ಅದರಂತೆ  ಕವಿ ಶ್ರೀ ಪ್ರಕಾಶ್ ಮೊದಲನೆಯ ಕವಿತೆ "ಮತ್ತೆ ಬಾಲ್ಯಕ್ಕೆ..." ಓದುತ್ತಾ ಹೋದಂತೆ ನಾನು ಭಾವುಕನಾಗಿ ಅತ್ತು ಬಿಟ್ಟೆ. ಹುಟ್ಟಿದ 2 ತಿಂಗಳಿನಲ್ಲಿ ತಾಯಿಯನ್ನು ಕಳೆದುಕೊಂಡ ಎಂಥ ನತದೃಷ್ಟ ನಾನು ಅನ್ನಿಸುತ್ತೆ. ಕವಿ ಪ್ರಕಾಶ್ ತಮ್ಮ  ಬಾಲ್ಯದ ಮಾತೃ ಮಡಿಲಿನ ಮಾತೃಬಂಧದ ಸುಮಧುರ ಅನುಬಂಧವನ್ನೇ ಕಾವ್ಯವನ್ನಾಗಿರಿಸಿಕೊಂಡು ರಚಿಸಿದ ಉತ್ತಮ ಕವಿತೆ ಇದೆಂದರೂ ತಪ್ಪೇನೂ ಇಲ್ಲ.
ಸುಂದರ ಶಬ್ದ, ಸರಳ ಪ್ರಾಸಗಳಿಂದ ಹೆಣೆದ  ಇವರ ನವ್ಯಕಾವ್ಯ ಅಲ್ಲಲ್ಲಿ ಜಾನಪದದ ಸೊಗಡನ್ನು ಬಿಂಬಿಸ್ತಾ ಇದೆ. ಪ್ರಸ್ತುತ ಕವಿತೆಯ  ಮೊದಲ ಎರಡು ಸಾಲುಗಳೇ  ಹೇಳುವಂತೆ "ಅವ್ವನ ನೆನೆಸಿಕೊಂಡಾಗಲೆಲ್ಲ,ಬಾಲ್ಯವೇ ಕಣ್ಣೆದಿರು ಬಿಚ್ಚಿಕೊಳ್ಳುತ್ತದೆ ..." ಎಂಥ ಸುಂದರ ಸವಿ ನೆನಪು. ಮಾತೃ ಮಡಿಲಿನ ಆ ಪ್ರೇಮ, ಅಣ್ಣ-ತಮ್ಮ, ಅಕ್ಕ-ತಂಗಿ, ಆ ಒಡನಾಟ. ಆ ಸಿಟ್ಟು, ನಂತರದ ಮರೆಯಲಾಗದ ಆ ತಾಯಿಯ ಸಾಂತ್ವನ  ಎಲ್ಲವನ್ನೂ ಮನಸಾರೆ ಅನುಭವಿಸಿದ ಕವಿಗೆ ದೊಡ್ದೊರಾಗೋದೇ  ಬೇಡ ಎನ್ನಿಸಿದ್ದು ಸಹಜ. ಅವರಿಗಷ್ಟೇ ಏಕೆ ಹುಟ್ಟಿದ ಪ್ರತಿ ಜೀವಿಯೂ ಬಯಸೋದು ಹಾಗೇನೆ. ಕೊನೆ ಕೊನೆಗೆ ಬಾಲ್ಯದಾಡಿದ, ಆ ಮಾತೃ ಸ್ಪರ್ಶದಲ್ಲಿ ಮರೆತ ಆ ನೋವು ಎಲ್ಲವನ್ನೂ ಅನುಭವಿಸಿದ ಕವಿ ಬೆಳೆದು ದೊಡ್ಡವರಾದ ಮೇಲೆ ನಾವು ಯಾಕೆ ದೊಡ್ಡೋರಾದೆವೋ ?ಛೆ! ನಾವು ದೊಡ್ದೊರಾಗಬಾರದಿತ್ತು? ಎಂದು ಮನದಾಳದ ಅಳಲನ್ನು ತೋಡಿಕೊಂಡಿದ್ದಾರೆ.

ಎರಡನೆಯ "ಅದಕಂದರ ಬದುಕ" ಕವಿತೆಯಲ್ಲಿ ಬಳಸಿದ ಪ್ರಾಸ ಪದಗಳ ಬಳಕೆ ನಿಜಕ್ಕೂ ಚನ್ನಾಗಿದೆ. ಆಡು ನುಡಿಯಲ್ಲಿ ಬೇರೆವಂಥ ಅವರ ಬತ್ತದ "ಒರತೆ" ಜನಪದದಲ್ಲಿ ಪ್ರಾವಿಣ್ಯತೆ ಪಡೆದಿರುವ ಕವಿ ಶ್ರೀ ಪ್ರಕಾಶ್ .ಗ.ಖಾಡೆ ಅವರು ಗ್ರಾಮ್ಯಭಾಷೆಯನ್ನು ಶಿಷ್ಟಪದಗಳ ಜತೆ ಜತೆ ಬೆರೆಸಿದ್ದು ನಾಡಿನ ಜಾನಪದ ಸೊಗಡಿನ ಕಾವ್ಯಕ್ಕೆ ಮೆರಗು ನೀಡಿದೆ.

"ಹರೆಯದ ಹೆಣ್ಣಿನ  ಬದುಕಿನ ಸತ್ಯ"ಮೂಲ ಕಾವ್ಯವಸ್ತು ವನ್ನಾಗಿರಿಸಿದ ಕವಿತೆಗೆ ನೀಡಿದ  ಶೀರ್ಷಿಕೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಎಷ್ಟೊಂದು ಮಾರ್ಮಿಕ ಈ ಚರಣ-
"ಹೊಸಾ ಚೆಲುವಿಕಿ ಕಂಡವರ ಒಲವಿಕಿ
ಸೇರಿ ಬೆಳೆಸಿತ ಸಂಬಂಧ
ಇರುತನಾ ಎಂಥ ಆನಂದ
ಹೂವಾಗಿ ಅರಳಿದ ವ್ಯಾಳೇಕ ಏಸೋಂದು ದುಂಬಿ ಸಾಲ||"

ಅರಳಿದ ಹೂವಿನ ಮಕರಂದವನರಸುವ ಸುತ್ತ ಹಾರಾಡುತ್ತಿರುವ ದುಂಬಿಗಳ ಹೋಲಿಸುತ್ತ -ಯೌವ್ವನದ ಹೊಸಿಲಲ್ಲಿ ನಿಂತಿರುವ ಹೆಂಗಳೆಯರಿಗೆ  "ಅದಕಂದರ ಬದುಕ" ಕವಿತೆಯ ಕೊನೆಯ ಚರಣದಲ್ಲಿ ಅರಿತೋ ಅರಿಯದೆಯೋ ಮಾಡಿದ ತಪ್ಪಿಗೆ ಫಲ ಅನುಭವಿಸೋಳು ಹೆಣ್ಣೇ ..
" ಬಿದ್ದ ಬೀಜದ ಮೊಳಕಿ
ಮತ್ತು ಹೊಸಾ ಹಾದಿ ಹುಡುಕಿ
ಗಾಳಿದಾಳಿಗಿ ಹಾರಿ ಹಾರ್ಯಾಡಿ
ಉಳಿದ್ಹಾಂಗ ಆತ ಸುಮ್ಮಕ-
ಯಾಕ ಬೇಕ ನೂಕ
ನೊಂದವರ ಹಾಡಿರಲಿ ಬೆಳಕ ಹರಿವತನಕ||

ಮೂಲಕ ಎಚ್ಚರಿಸುವ  ಸಂತೈಸುವ ರೀತಿ ಮೆಚ್ಚುಗೆಯಾಯ್ತು. ಬರೆದ  ಕಾವ್ಯ-ಹಾಡುವ ಹಾಡು  ಜನ ಮನ ತಲುಪುವಂತಾದರೆ, ಸ್ತ್ರೀ ಶೋಷಿತ ಸಮಾಜದ ಪರಿವರ್ತನೆಯಾಗುವಲ್ಲಿ ನೆರವಾದರೆ  ಬರೆದ ಕವಿತೆ ಸಾರ್ಥಕವಾದೀತು ಎಂದು ನನ್ನ ಅನಿಸಿಕೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅನುಭವಿ, ಕವಿ ಶ್ರೀ ಪ್ರಕಾಶ್ .ಗ. ಖಾಡೆ ಅವರ ಕವಿತೆಗಳು ನಿಮ್ಮೆಲ್ಲರ ಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವೇ ಇಲ್ಲ. ಆದರೂ ಇದರ ತೀರ್ಪುಗಾರರು ನೀವು  ಓದುಗರು. ನಿಮ್ಮ ಮುಕ್ತ ಪ್ರತಿಕ್ರಿಯೆಯೇ ಕವಿಗಳಿಗೆ ಹೆಚ್ಚಿನ ಸ್ಫೂರ್ತಿ. ಸಾಹಿತಿ, ಕವಿ ಶ್ರೀ ಪ್ರಕಾಶ್ ಗ.ಖಾಡೆ ಅವರ ಮುಂದಿನ ಸಾಹಿತ್ಯ ಪ್ರಕ್ರಿಯೆಗಳಿಗೆ ಯಶಸ್ಸನ್ನು ಕೋರುವೆ.
- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.
ವಿಭಾಗ ಸಂಪಾದಕರು, ಕಾವ್ಯ ಸಿಂಚನ ವಿಭಾಗ

ಕವಿ ಪರಿಚಯ : 

ಡಾ|| ಪ್ರಕಾಶ ಗ. ಖಾಡೆ,ಬಾಗಲಕೋಟ.
ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ. ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರಗೊಂಡಿವೆ.
ಈವರೆಗೆ "ಗೀತ ಚಿಗಿತ", "ಪ್ರೀತಿ ಬಟ್ಟಲು", "ತೂಕದವರು", ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಜಾನಪದ ಹೆಬ್ಬಾಗಿಲು, "ಮುನ್ನುಡಿ ತೋರಣ", ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ, ಮೌನ ಓದಿನ ಬೆಡಗು ಸೇರಿದಂತೆ 21 ಕೃತಿಗಳು ಪ್ರಕಟ.

ಮುಧೋಳ, ಶಿವಮೊಗ್ಗ ಮತ್ತು ವಿಜಾಪುರಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ|| ಪ್ರಕಾಶ ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಜಾನಪದ ವಿದ್ವಾಂಸರ ಸಾಲಿನಲ್ಲಿ ಡಾ.ಖಾಡೆ ಅವರದು ಎದ್ದು ತೋರುವ ಹೆಸರು. ಬಾಗಲಕೋಟ ಜಿಲ್ಲಾಡಳಿತವು 2014 ರ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿದೆ.

ವಿಳಾಸ:  ಡಾ. ಪ್ರಕಾಶ. ಗ. ಖಾಡೆ.
‘ಶ್ರೀಗುರು’ ಸರಸ್ವತಿ ಬಡಾವಣೆ,ಸೆಕ್ಟರ್ ನಂ.63, ನವನಗರ, ಬಾಗಲಕೋಟ.
ಮೊ: 9845500890
e-mail:drprakashkhade@gmail.com



- See more at: http://suddibantwala.com/article/view/20#sthash.1k53oiIJ.dpuf
ಕೃಪೆ :ಸುದ್ದಿ ಬಂಟ್ವಾಳ

ಬಸೂ ಅವರ ಪದ್ಯಗಳು.


ಬಸೂ ಅವರ ಪದ್ಯಗಳು.
 

Basavaraj Sulibhavi 

1
ಬೆಳಗು ಲೋಕ ದಿಟ್ಟಿಸಿದ ಹೂ ಸಂಜೆ ಗರ್ಭಗುಡಿಯಲ್ಲಿ ಕಣ್ಮುಚ್ಚಿತು
ಗೆಳೆಯಾ ಇಷ್ಟೇ ಪದಗಳಲಿ ಇಂಡಿಯಾದ ಚಿತ್ರ ಪೂರ್ಣಗೊಂಡಿತು 

2
ಚಿನ್ನದಸರ ಪ್ರಗತಿಪರನ ಕೊರಳ ಬಂಧನ ಬಯಸಿತು
ಚಳುವಳಿಯ ಕಥೆ ಪೂರ್ಣ ಮುಗಿಯಲು ಇಷ್ಟೇ ಸಾಕಾಯಿತು

3
ಬೀದಿಯ ನಗುವಿಗೆ ಸೂತಕದ ಮನೆಯ ಬಿದಿರುಮೆಳೆ ಹೂ ಕಂಡಿತು
ಮುಳುಗುವ ಕೈ ತೇಲಿಬಂದ ಮುಳ್ಳುಕಂಟಿಯನೇ ತಬ್ಬಿಕೊಂಡಿತು

4
ಇರುಳ ಚಳಿಗಾಳಿಗೆ ನಿಲ್ದಾಣದಲಿ ಕೈ ತಾಗಿದವರು ಜೋಡಿಯಾದರು
ಬೀದಿಬೆಂಕಿಯೆದುರು ಬೆಚ್ಚಗಾಗಲು ಹುಚ್ಚು ಕನಸು ಮೈಲಿಗೆ ಬಿಟ್ಟು ಓಡಿಬಂದವು

5
ಏನೋ ಬರೆಯಬಹುದಾಗಿದ್ದ ಖಾಲಿಕಾಗದ ಮುದುಡಿ ಗಾಳಿಗಂಟಿತು
ನನ್ನದೇ ಕವಿತೆಗಳು ಪಕ್ಕದ ಹಾದಿಯಲಿ ಅಪರಿಚಿತರಂತೆ ನಡೆದುಹೋದವು

6
ನಗುವ ಮಗಳು ಆಟವಾಡುವುದ ನೋಡಿ ಕವಿತೆ ಬರೆಯಬೇಕೆನಿಸಿತು
ಕ್ಷಮಿಸು ಓದುಗ ಕಾಗದದ ತುಂಬ ಅಳಲ ಶಬ್ದಗಳೇ ತುಂಬಿಕೊಂಡವು

7
ಬದಲಾದ ಮನೆಯಲ್ಲಿ ಅವಳು ರೊಟ್ಟಿ ಬಡಿವ ಸದ್ದಾಯಿತು
ಈ ಮನೆಯ ಹೆಂಚಿನಲ್ಲೂ ನೀರು ಮಳಮಳಿಸುವ ಅನುಭವಾಯಿತು

8
ಚಾಕು ಚೂರಿ ಬಂದೂಕು ಬಿಡಿ, ಜಿರಲೆ ಕಂಡರೂ ಹೆದರುವವರಿದ್ದರು
ಎಂದಿಗೂ ಕನಸು ಕೊಂದವರು ಕೊಲೆಗಾರರ ಪಟ್ಟಿಯಲ್ಲಿ ಬರಲೇ ಇಲ್ಲ

9
ಮಗಳು ಗೀಚಿದ್ದ ಪ್ರೇಮ ಕವನ ವರನ ಕುರಿತೇ ಬರೆದಿದ್ದೆಂದು ಅವ್ವ ಪರಿಚಯಿಸಿದಳು.
ಆ ಮಾತುಗಳ ಕೇಳಿಯೂ ದೂರದಲಿ ಒಂಟಿ ನಿಂತ ಕಣ್ಣುಗಳು ಯಾಕೊ ಒದ್ದೆಯಾದವು.

10
ಕಿಸೆ ತುಂಬ ರೊಕ್ಕ ಇಟ್ಟುಕೊಂಡೇ ಹೊಸ್ತಿಲೊಳಗೆ ಕಾಲಿರಿಸಿದ್ದರು
ದೀಪವಾರಿಸಿ ಮೈತುಂಬ ಹಲ್ಲಹಚ್ಚಿ ತುಟಿಗೆ ಕತ್ತಲಂಟಿಸಿ ಹೋದರು

11
ಕುಣಿಯುತಿದೆ ಕಿವುಡರಂಗಳದಲ್ಲಿ ಗಾಂಧಿ ಗೆಜ್ಜೆಯ ಕೋಲು
ಎಲ್ಲರ ಬಾಯಲ್ಲೂ ಒಂದೇ ದನಿ ಅಹಾ.. ನಾದವು ಅದ್ಭುತ

12
ಮೊದಲ ಹೆಜ್ಜೆಯಲ್ಲೇ ಕಲ್ಲೆಂದು ದೂರ ಸರಿದರು
ಕಲ್ಲಿನಿಂದ ಮನೆ ಮಾಡಿಕೊಂಡವರು ಬೆಚ್ಚಗಿದ್ದರು

13
ಕವಿ ಉದುರುವ ಹೂವಿನ ಹಾಗೆ
ಕವಿತೆ ಹೂ ಉದುರಿದ ಮೇಲೂ ಉಳಿವ ಗಂಧದ ಹಾಗೆ..

14
ಕವಿತೆ ಎಂದರೆ ಇಷ್ಟೇ
ಬರೆದ ಮೇಲೆ ಬೆಳೆಯುತ್ತಲೇ ಹೋಗುವುದು

15
ಎಳೆಬಿಸಿಲ ಅಂಗಳದಲ್ಲಿ ಕವಿತೆ ಕೊಕ್ಕು ಚಾಚಿತು
ಹೊಸದಾರಿಯ ಯಾವುದೊ ತಿರುವಿನಲ್ಲಿ ಹಕ್ಕಿಯ ಪುಕ್ಕ ಬಿದ್ದಿತ್ತು

16
ಹೆರುವಾಗ ಇನ್ನು ಮುಂದೆ ಗಂಡನ ಸಹವಾಸವೇ ಬೇಡವೆಂದು ನರಳಿದಳು
ಹೆತ್ತು ನಾಲ್ಕು ತಿಂಗಳಾಗುವ ಮುನ್ನವೇ ನಾಚುತ್ತ ಮೆಲ್ಲನೆ ಗಂಡನೆದೆಗಾನಿದಳು

************