ಗುರುವಾರ, ಫೆಬ್ರವರಿ 6, 2014

ಬಸೂ ಅವರ ಪದ್ಯಗಳು.


ಬಸೂ ಅವರ ಪದ್ಯಗಳು.
 

Basavaraj Sulibhavi 

1
ಬೆಳಗು ಲೋಕ ದಿಟ್ಟಿಸಿದ ಹೂ ಸಂಜೆ ಗರ್ಭಗುಡಿಯಲ್ಲಿ ಕಣ್ಮುಚ್ಚಿತು
ಗೆಳೆಯಾ ಇಷ್ಟೇ ಪದಗಳಲಿ ಇಂಡಿಯಾದ ಚಿತ್ರ ಪೂರ್ಣಗೊಂಡಿತು 

2
ಚಿನ್ನದಸರ ಪ್ರಗತಿಪರನ ಕೊರಳ ಬಂಧನ ಬಯಸಿತು
ಚಳುವಳಿಯ ಕಥೆ ಪೂರ್ಣ ಮುಗಿಯಲು ಇಷ್ಟೇ ಸಾಕಾಯಿತು

3
ಬೀದಿಯ ನಗುವಿಗೆ ಸೂತಕದ ಮನೆಯ ಬಿದಿರುಮೆಳೆ ಹೂ ಕಂಡಿತು
ಮುಳುಗುವ ಕೈ ತೇಲಿಬಂದ ಮುಳ್ಳುಕಂಟಿಯನೇ ತಬ್ಬಿಕೊಂಡಿತು

4
ಇರುಳ ಚಳಿಗಾಳಿಗೆ ನಿಲ್ದಾಣದಲಿ ಕೈ ತಾಗಿದವರು ಜೋಡಿಯಾದರು
ಬೀದಿಬೆಂಕಿಯೆದುರು ಬೆಚ್ಚಗಾಗಲು ಹುಚ್ಚು ಕನಸು ಮೈಲಿಗೆ ಬಿಟ್ಟು ಓಡಿಬಂದವು

5
ಏನೋ ಬರೆಯಬಹುದಾಗಿದ್ದ ಖಾಲಿಕಾಗದ ಮುದುಡಿ ಗಾಳಿಗಂಟಿತು
ನನ್ನದೇ ಕವಿತೆಗಳು ಪಕ್ಕದ ಹಾದಿಯಲಿ ಅಪರಿಚಿತರಂತೆ ನಡೆದುಹೋದವು

6
ನಗುವ ಮಗಳು ಆಟವಾಡುವುದ ನೋಡಿ ಕವಿತೆ ಬರೆಯಬೇಕೆನಿಸಿತು
ಕ್ಷಮಿಸು ಓದುಗ ಕಾಗದದ ತುಂಬ ಅಳಲ ಶಬ್ದಗಳೇ ತುಂಬಿಕೊಂಡವು

7
ಬದಲಾದ ಮನೆಯಲ್ಲಿ ಅವಳು ರೊಟ್ಟಿ ಬಡಿವ ಸದ್ದಾಯಿತು
ಈ ಮನೆಯ ಹೆಂಚಿನಲ್ಲೂ ನೀರು ಮಳಮಳಿಸುವ ಅನುಭವಾಯಿತು

8
ಚಾಕು ಚೂರಿ ಬಂದೂಕು ಬಿಡಿ, ಜಿರಲೆ ಕಂಡರೂ ಹೆದರುವವರಿದ್ದರು
ಎಂದಿಗೂ ಕನಸು ಕೊಂದವರು ಕೊಲೆಗಾರರ ಪಟ್ಟಿಯಲ್ಲಿ ಬರಲೇ ಇಲ್ಲ

9
ಮಗಳು ಗೀಚಿದ್ದ ಪ್ರೇಮ ಕವನ ವರನ ಕುರಿತೇ ಬರೆದಿದ್ದೆಂದು ಅವ್ವ ಪರಿಚಯಿಸಿದಳು.
ಆ ಮಾತುಗಳ ಕೇಳಿಯೂ ದೂರದಲಿ ಒಂಟಿ ನಿಂತ ಕಣ್ಣುಗಳು ಯಾಕೊ ಒದ್ದೆಯಾದವು.

10
ಕಿಸೆ ತುಂಬ ರೊಕ್ಕ ಇಟ್ಟುಕೊಂಡೇ ಹೊಸ್ತಿಲೊಳಗೆ ಕಾಲಿರಿಸಿದ್ದರು
ದೀಪವಾರಿಸಿ ಮೈತುಂಬ ಹಲ್ಲಹಚ್ಚಿ ತುಟಿಗೆ ಕತ್ತಲಂಟಿಸಿ ಹೋದರು

11
ಕುಣಿಯುತಿದೆ ಕಿವುಡರಂಗಳದಲ್ಲಿ ಗಾಂಧಿ ಗೆಜ್ಜೆಯ ಕೋಲು
ಎಲ್ಲರ ಬಾಯಲ್ಲೂ ಒಂದೇ ದನಿ ಅಹಾ.. ನಾದವು ಅದ್ಭುತ

12
ಮೊದಲ ಹೆಜ್ಜೆಯಲ್ಲೇ ಕಲ್ಲೆಂದು ದೂರ ಸರಿದರು
ಕಲ್ಲಿನಿಂದ ಮನೆ ಮಾಡಿಕೊಂಡವರು ಬೆಚ್ಚಗಿದ್ದರು

13
ಕವಿ ಉದುರುವ ಹೂವಿನ ಹಾಗೆ
ಕವಿತೆ ಹೂ ಉದುರಿದ ಮೇಲೂ ಉಳಿವ ಗಂಧದ ಹಾಗೆ..

14
ಕವಿತೆ ಎಂದರೆ ಇಷ್ಟೇ
ಬರೆದ ಮೇಲೆ ಬೆಳೆಯುತ್ತಲೇ ಹೋಗುವುದು

15
ಎಳೆಬಿಸಿಲ ಅಂಗಳದಲ್ಲಿ ಕವಿತೆ ಕೊಕ್ಕು ಚಾಚಿತು
ಹೊಸದಾರಿಯ ಯಾವುದೊ ತಿರುವಿನಲ್ಲಿ ಹಕ್ಕಿಯ ಪುಕ್ಕ ಬಿದ್ದಿತ್ತು

16
ಹೆರುವಾಗ ಇನ್ನು ಮುಂದೆ ಗಂಡನ ಸಹವಾಸವೇ ಬೇಡವೆಂದು ನರಳಿದಳು
ಹೆತ್ತು ನಾಲ್ಕು ತಿಂಗಳಾಗುವ ಮುನ್ನವೇ ನಾಚುತ್ತ ಮೆಲ್ಲನೆ ಗಂಡನೆದೆಗಾನಿದಳು

************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ