ಗುರುವಾರ, ಫೆಬ್ರವರಿ 6, 2014

ಗಜಲ್ : ಹೇಮಲತಾ ವಸ್ತ್ರದ.




ಗಜಲ್ : ಹೇಮಲತಾ ವಸ್ತ್ರದ.


Hemalatha Vastrad
Hemalatha Vastrad

ಹೂವಿಗೆ ರೆಕ್ಕೆ ಬಂದಿರುವುದ ಈ ಜಗವೇನು ಬಲ್ಲದು
ಮನ ಗುಲ್ಮೊಹರ್ ಚಿಗುರಿರುವುದ ಈ ಜಗವೇನು ಬಲ್ಲದು

ಅವನು ಸಂತೆಯೊಳಗಿನ ಸಂತನಂತೆ ಎದ್ದು ಹೋದ
ನಾನು ಅವನಾಗಿ ಉಸಿರಾಡುತಿರುವುದ ಈ ಜಗವೇನು ಬಲ್ಲದು

ಮಾತು ಮಾತು ಮಾತು ಅಹಂ ತಣಿಸಲದೇಸು ಮಾತು
ಮೌನದೊಳಗೂ ಮಾತಿರುವುದ ಈ ಜಗವೇನು ಬಲ್ಲದು

ಚೆಂದುಟಿಗಳ ಮೇಲಣ ಮಂದಹಾಸದ ಮಧು
ಹೇಳಲಾರದೇಸೋ ವೇದನೆಗಳಿರುವುದ ಈ ಜಗವೇನು ಬಲ್ಲದು

ಜಗ ನೀತಿ ನಿಯಮಗಳ ಪೀಠ
ಹೃದಯವನೆ ಬಲಿ ಕೊಟ್ಟಿರುವದ ಈ ಜಗವೇನು ಬಲ್ಲದು

ಹಾಸದೊಳಗಿನ ಹಗೆ ಮತ್ಸರದ ಹೊಗೆ
ಬೆಳಕಿನ ಹೆಣ ತೇಲಿರುವದ ಈ ಜಗವೇನು ಬಲ್ಲದು

ಆಡುವರು ಕಾಡುವರು ನೋವು ನೀಡುವರು
ನೋವುಗಳೆ ಶಿಖರ ಮೆಟ್ಟಿಲಾಗಿರುವುದ ಈ ಜಗವೇನು ಬಲ್ಲದು

ಲುಪ್ತವಾಗದೀ ಅಪವಾದಗಳ ಬೇತಾಳದ
ಚಮ್ಮಾವುಗೆ ಮೆಟ್ಟಿಕೊಂಡಿರುವುದ ಈ ಜಗವೇನು ಬಲ್ಲದು

ದಹಿಸುವ ಬದುಕು ಹಸಿ ಕದಳಿ
ಹೇಮೆಯೊಡಲದು ಜೀವಸೆಲೆಯಾಗಿರುವದ ಈ ಜಗವೇನು ಬಲ್ಲದು.

**************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ