ಮಂಗಳವಾರ, ಮೇ 20, 2014

ಉಮೇಶ ತಿಮ್ಮಾಪುರ ಸಾಹಿತ್ಯಾವಲೋಕನ : ರಾಗಂ ಬರಹ

ಕಾವಲು ನಿಲ್ಲಿಸಿದ್ದೇನೆ ಕಾವ್ಯವನ್ನು


     ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕದಳಿ ಮಹಿಳಾ ವೇದಿಕೆ, ತಾಲೂಕಾ ಶರಣ ಸಾಹಿತ್ಯ ಪರಿಷತ್, ಜಲಮಿತ್ರ ರಂಗ ವೇದಿಕೆ, ಚುಟುಕು ಸಾಹಿತ್ಯ ಪರಿಷತ್, ಮರುಳ ಸಿದ್ಧೇಶ್ವರ ಯುವಕ ಮಂಡಳಗಳ ಸಹಕಾರದೊಂದಿಗೆ ಗೆಳೆಯ ಉಮೇಶ ತಿಮ್ಮಾಪುರ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜನಲ್ಲಿ ದಿನಾಂಕ 20/04/2014 ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ನನ್ನೊಂದಿಗೆ ಕುಂ.ವೀರಭದ್ರಪ್ಪ, ಮುಖ್ಯ ಅತಿಥಿಯ ಪಾತ್ರಕ್ಕೆ ನಾನು. ಗೋಷ್ಠಿ ಒಂದರಲ್ಲಿ ಗೆಳೆಯರಾದ ಪ್ರಕಾಶ ಖಾಡೆ, ವಿದ್ಯಾ ಕುಂದರಗಿ, ಸಾವಿತ್ರಿ ಮುಜುಂದಾರ ಕವಿಗೋಷ್ಠಿಯಲ್ಲಿ ವಡ್ಡಗೆರೆ ನಾಗರಾಜಯ್ಯ, ರಾಜೇಶ್ವರಿ.ಎನ್ ಹಾಗೂ ಉಳಿದ ಇಪ್ಪತ್ನಾಲ್ಕು ಕವಿಗಳು, ಸಮಾರೋಪಕ್ಕೆ ಗೆಳೆಯರಾದ ಡಾ.ಬಾಳಾಸಾಹೇಬ ಲೋಕಾಪೂರ, ವೆಂಕಟಗಿರಿ ದಳವಾಯಿ, ಡಾ. ನಿಂಗು ಸೊಲಗಿ ಹಾಗೂ ಜೋಳದ ಕೂಡ್ಲಿಗಿ.


     ಚಿಕ್ಕಮಂಗಳೂರು, ಹರಿಹರ, ಹೂವಿನ ಹಡಗಲಿ ಮಾರ್ಗವಾಗಿ ಹಿಂದಿನ ದಿನ ಮುಂಡರಗಿಯನ್ನು ತಲುಪಿದ ನಾನು ಸರಿಯಾಗಿ ಎರಡು ರಾತ್ರಿ ಉತ್ತರ ಕರ್ನಾಟಕದ ಊಟ, ವಿಚಾರ ಹಾಗೂ  ಪ್ರೀತಿಯ ಜಾತ್ರೆಯಲ್ಲಿ ಇದ್ದೆ ಎಂದೇ ಹೇಳಬೇಕು. 
ಕಾವಲು ನಿಲ್ಲಿಸಿದ್ದೇನೆ
ಕಾವ್ಯವನ್ನು, ಸತ್ಯ ಸಂಘರ್ಶಗಳ
ಬೆನ್ನಿಗೆ ಪದ ಗುಚ್ಚಗಳನ್ನೇರಿಸಿ
ಜಾತಿ-ಮತದ ಗಡಿಯಲಿ
ಸಾಲು ಕಟ್ಟಿದ್ದೇನೆ ಸಮಾನತೆಯ
ಅಸಮಾನತೆಯ ಕಟುಸಂಕೋಲೆಯ
ಲಾಂಛನ ಕಿತ್ತೆಸೆದು
        ಹೀಗೆ ಕವಿತೆಗೊಂದು ಕಾಯಕ ಕಟ್ಟಿ ‘ಬಿರಿದ ನೆನಪುಗಳು’, ‘ಮೆಘಧ್ವನಿ’, ‘ತ್ವಯ್ದ ಬದುಕಿನ ಸಾಲು’. ‘ಒರತೆ’, ‘ಕಾಡುದಾರಿಯ ಕಂದಿಲುಗಳು’, ‘ನಡುಹಗಲ ಸಂಜೆ’, ‘ಸಮುಕ್ಷ’, ‘ಕಥಾಲೋಕ’ ಹತ್ತು ಹಲವಾರು ಕೃತಿಗಳನ್ನು ರಚಿಸಿ, ನನ್ನೊಂದಿಗೆ ನಮ್ಮವನಾಗಿ ಎಲ್ಲರನ್ನು ‘ಅಣ್ಣಾ’ ಎನ್ನುವ ಸಂಬೋಧನೆಯಿಂದಲೇ ಬಾಚಿ ತಬ್ಬುವ ಉಮೇಶನ ಸಾಹಿತ್ಯದ ವಿಮರ್ಶೆಗೆ ಇನ್ನೂ ದೀರ್ಘವಾದ ದಾರಿಯಿದೆ, ಸಮಯವೂ ಇದೆ. ಆದರೆ ಬರಹವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಎತ್ತಿಕೊಂಡಿರುವ ಇಂಥ ಗೆಳೆಯನನ್ನು ಪ್ರೋತ್ಸಾಹಿಸಬೇಕಾದುದು ನಮ್ಮ ಧರ್ಮವಾಗಿದೆ. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಉಮೇಶ ಇದೇ ಮುಂಡರಗಿ ತಾಲೂಕಿನ ಕೆಲುರು ಗ್ರಾಮದವ. 42 ವಯಸ್ಸಿನ ಈ ನನ್ನ ಗೆಳೆಯನಿಗೆ ಸಾವಿರಾರು ಕನಸುಗಳು ಇವೆ. ಅವುಗಳನ್ನು ಕಾಪಾಡಿಕೊಂಡರೆ ಸಾಗಿದಷ್ಟು ದಾರಿಯೂ ಇದೆ. ಅವನ ಕಾವ್ಯ ಕುರಿತು ಮುಂಡರಗಿಯಲ್ಲಿ ಮಾತನಾಡುತ್ತ ನಾನು ಒಂದು ಮಾತನ್ನು ಹೇಳಿದೆ : With the magnanimity of innocence poets take birth, but alas! With individual hypocrisy they die. ಇದೊಂದು ಸ್ಥಳೀಯ ರೋಗ. ಎಷ್ಟೆಲ್ಲ ಪ್ರತಿಭೆ ಇರುವ ಅದೆಷ್ಟೋ ಬರಹಗಾರರು ಇದರಿಂದ ಬಿಡಿಸಿಕೊಳ್ಳುವದಾಗಿಲ್ಲ. ಪರಸ್ಪರ ಕಾಲೆಳೆಯುವದರಲ್ಲಿ ಯೇ ಕಾಲ ಕರಗಿ ಹೋಗಿದೆ. 
     ಸಂತೋಷದ ಸಂಗತಿ ಇದರಿಂದ ಹೊರತಾದವನು ಗೆಳೆಯ ಉಮೇಶ ತಿಮ್ಮಾಪೂರ. ಇವನ ಅನೇಕ ರಚನೆಗಳಲ್ಲಿ ನನಗೆ ಇಷ್ಟವಾದ ಒಂದು ರಚನೆ ನಿಮ್ಮೊಂದಿಗೆ. . . . .

ನೀನೆಂದರೆ
ಮೈಮುರಿದು ಮಲಗಿದ ಬೆಟ್ಟ
ಸುಖ ಸ್ಪರ್ಶ ನೀಡುವ
ತಂಗಾಳಿ
ತಲೆಯ ತೆವಲಿನ ತುರುಬ
ಬತ್ತಿ ಹೆಣೆದ ಜಡೆಗೆ
ತೀಡಿ ಮಾಡಿದ
ಮುತ್ತು ಮಾಲೆ

ನೀನೆಂದರೆ. .
ಕಾಡು ತೋಪಿನ ಮಾವು
ರೆಂಬೆಗಿಳಿದಾ ಗೊಂಚಲು
ಹಸಿದ ಹೊಟ್ಟೆ ತಣಿದ
ರಸಪಾಕ

ನೀನೆಂದರೆ. .
ಹರಿವ ನೀರ್ಝೆರೆ
ತುಳುಕಿ ದಡ ಸೇರುವ
ತೆರೆ
ಸರಿದ ಕತ್ತಲಿನ
ಸೆರಗ ಮುಡಿಯಲಿ ತುಂಬುವ
ಹಗಲ ಬೆಳಕಿನ
ಕಣ್ಣ ಮಂಜು

ನೀನೆಂದರೆ. .
ಒಡಲು ಬಿರಿದ
ನೆಲದೊಡತಿಯ
ಮಳೆಯ ಮುಂಜಾವ
ಎದೆಯೊಳಗ
         ಪುಳಕಗೊಂಡ ಜಲಕನ್ಯ           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ