ಬುಧವಾರ, ಡಿಸೆಂಬರ್ 10, 2014

ಕರ್ನಾಟಕದ ಗಾಂಧಿ


ಕರ್ನಾಟಕದ ಗಾಂಧಿ ನೀಲಕಂಠಜಿ ಗಣಾಚಾರಿ.
EmailPrintFontSizeFontSize

 ಡಾ.ಪ್ರಕಾಶ ಗ.ಖಾಡೆ
ಗಾಂಧಿ ತತ್ವಗಳ ಅನುಷ್ಠಾನದಲ್ಲಿ ತಮ್ಮ ಜೀವಿತದ ಉದ್ದಕ್ಕೂ ದುಡಿದು ಗಾಂಧಿ ಕನಸಿನ ಆದರ್ಶ ಗ್ರಾಮಗಳ ಸ್ಥಾಪನೆಯಲ್ಲಿ ಕರ್ನಾಟಕದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಹೆಸರಾದ ನೀಲಕಂಠಜಿ ಗಣಾಚಾರಿಯವರು 94 ವರ್ಷಗಳ ಸಾರ್ಥಕ ಬದುಕನ್ನು ಬದುಕಿ 2010 ಡಿಸೆಂಬರ್ 14 ರಂದು ನಮ್ಮನ್ನಗಲಿದರು.ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರನೂರ ಗ್ರಾಮದಲ್ಲಿ ಸಮಾಧಿಯಿದ್ದು ಇಲ್ಲಿ ಪ್ರತಿ ವರ್ಷ ಗಾಂಧಿಲೋಕದ ಅವಧೂತ ನೀಲಕಂಠಜಿ ಅವರ ಪುಣ್ಯತಿಥಿ  ಜರುಗುತ್ತಿದೆ.
ನೀಲಕಂಠ ಗೊರಚಯ್ಯ ಗಣಾಚಾರಿ ಅವರು ಜೂನ 10 ,1916 ರಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು.ಬಾಲಕರಿರುವಾಗಲೇ ಸ್ವಾತ್ರಂತ್ಯ ಚಳುವಳಿಯಲ್ಲಿ ಧುಮುಕಿದರು.ಬಾಲಕ ನೀಲಕಂಠ 4 ನೇ ತರಗತಿ ಓದುತ್ತಿರುವಾಗಲೇ ಎಲ್ಲೆಡೆ ಸ್ವರಾಜ್ಯ ಆಂದೋಲದ ಮಾತು. ವಿದ್ಯಾರ್ಥಿ ನೀಲಕಂಠನನ್ನು ಶಿಕ್ಷಕರು ಹೊಸೂರಿನಿಂದ ಬೈಲಹೊಂಗಲಕ್ಕೆ ವರ್ತಮಾನ ಪತ್ರಿಕೆಗಳನ್ನು ತರಲು ಕಳಿಸುತ್ತಿದ್ದರು.ಹೊಸೂರು ಗಂಡುಮೆಟ್ಟಿನ ನೆಲ.ಸ್ವಾತ್ರಂತ್ಯ ಆಂದೋಲನಕ್ಕೆ ಈ ಪುಟ್ಟ ಗ್ರಾಮದ ಕೊಡುಗೆ ದೊಡ್ಡದು.ಇಲ್ಲಿ ಗಾಂಧಿ,ನೆಹರು,ವಲ್ಲಭಾಯಿ ಪಟೇಲರು ಬಂದುಹೋಗಿದ್ದಾರೆ.ಈ ಹೋರಾಟಗಾರರ ಪ್ರಭಾವವೇ ನೀಲಕಂಠಜಿ ಅವರ ಮೇಲಾಗಿ ಇವರು ಆಗಿನಿಂದಲೇ ಇಡೀ ಬದುಕನ್ನು ರಾಷ್ರಕ್ಕಾಗಿ ಮುಡಿಪಿಟ್ಟರು.
ಗಾಂಧೀಜಿ 1937 ರಲ್ಲಿ ಬೆಳಗಾವಿ ಜಿಲ್ಲೆ ಹುದಲಿ ಗ್ರಾಮಕ್ಕೆ ಬಂದಾಗ ಇವರು ಗಾಂಧಿ ಒಟ್ಟಿಗೆ 50 ಮೈಲು ನಡೆದುಕೊಂಡು ಹೋದರು.ಅಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆಯಿತು.ನೀಲಕಂಠಜಿ ಅವರ ಖಾದಿ ಮತ್ತು ಗಾಂಧಿ ತತ್ವಗಳ ಒಲವನ್ನು ಕಂಡ ಗಾಂಧಿವಾದಿ ಕೌಜಲಗಿ ಹನಮಂತರಾಯರು ತಮ್ಮ ಚರಕಾ ಸಂಘದಲ್ಲಿ ಸೇರಿಸಿಕೊಂಡು ಖಾದಿಯ ಶಿಕ್ಷಣಕ್ಕಾಗಿ ಇವರನ್ನು ವಾರ್ಧಾಕ್ಕೆ ಕಳಿಸಲಾಯಿತು.ಮುಂದೆ ಹುದಲಿಯ ಜಮ್ನಾಲಾಲ ಖಾದಿ ವಿದ್ಯಾಲಯದಲ್ಲಿ ಖಾದಿ ಶಿಕ್ಷಣ ಪೂರೈಸಿದರು.1942 ರ ಚಳುವಳಿ ಸಂದರ್ಭದಲ್ಲಿ ಮುನವಳ್ಳಿ ಬಳಿ ಇವರನ್ನು ಬಂಧಿಸಿ 5 ತಿಂಗಳುಗಳ ಕಾಲ ಜೈಲಿಗೆ ಹಾಕಿದರು.ಜೈಲಿನಿಂದ ಬಿಡುಗಡೆಯಾಗಿ ಬಂದು ಖಾದಿ ನೇಯ್ಗೆಯ ಶಿಕ್ಷಣ ಕೊಡಲು ಅಮರಗೋಳ,ಗೊಬ್ಬರಗುಂಪಿ,ಹುಣಸೀಕಟ್ಟಿ ಗ್ರಾಮಗಳಿಗೆ ತೆರಳಿದರು.ಅಮರಗೋಳದಲ್ಲಿ ಮಾಡುತ್ತಿದ್ದ ಇವರ ಕೆಲಸದ ವರದಿ ಗಾಂಧೀಜಿಯವರನ್ನು ತಲುಪಿದಾಗ ಗಾಂಧಿಜಿಯವರ ಕಾರ್ಯದರ್ಶಿಯವರಿಂದ ನೀಲಕಂಠಜಿ ಅವರಿಗೆಪತ್ರ ಬಂತು. ಅದರಲ್ಲಿ "ತಾವು ಹಳ್ಳಿಗಳಲ್ಲಿ ಸೇವಾ ಸಲುವಾಗಿ ಕೂತಿದ್ದೀರಿ,ಅದರ ವರದಿಯನ್ನು ನನಗೆ ತೋರಿಸಿದರು.ಗಾಂಧಿಜಿಯವರು ಇದನ್ನೇ ಇಚ್ಛೆ ಮಾಡುತ್ತಾರೆ,ಹೊಸ ತರುಣರು ಹಳ್ಳಿ ಹಳ್ಳಿಗೆ ಹೋಗಿ ಸೇವೆ ಮಾಡಲಿಕ್ಕೆ ತೊಡಗಬೇಕು.ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿ ಗಾಂಧೀಜಿಯವರ ಆಶೀವರ್ಾದವಿದೆ".ಸೇವಾಶ್ರಮದ ವಿದ್ಯಾಲಯದ ಪ್ರಾಚಾರ್ಯ ನರಹರಿ ಪರೇಖ ಈ ಪತ್ರ ಬರೆದಾಗ ನೀಲಕಂಠಜಿ ಅವರಿಗೆ ಹಳ್ಳಿಗಳಲ್ಲಿ ಕೆಲಸ ಮಾಡುವ ಶ್ರದ್ಧೆ ಮತ್ತಷ್ಟು ಬೆಳೆಯಿತು.     ನೀಲಕಂಠಜಿಯವರು ವಿನೋಬಾರ ಕರೆಯ ಮೇರೆಗೆ ಕೇರಳ,ತಮಿಳುನಾಡು.ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧಕ್ಕಾಗಿ ಪಾದಯಾತ್ರೆ ಕೈಕೊಂಡು ಜನಜಾಗೃತಿ ಮೂಡಿಸಿದರು.

ಮಹಾರಾಷ್ಟ,ರಾಜ್ಯಸ್ಥಾನ,ಉತ್ತರ ಪ್ರದೇಶ,ಬಿಹಾರ ಮೊದಲಾದ ರಾಜ್ಯಗಳಲ್ಲಿ ಸರ್ವೋದಯ ಕೆಲಸಕ್ಕಾಗಿ ಒಂದು ವರ್ಷಗಳ ಕಾಲ ಸಂಚರಿಸಿದರು.ಗಾಂಧಿ ತತ್ವಗಳ ರಚನಾತ್ಮಕ ಕಾರ್ಯ ಮಾಡಲು ಹೊಸೂರು, ಗುರ್ಲಹೊಸೂರು ,ಗೊಬ್ಬರಗುಂಪಿ, ನರಗುಂದ, ಕಲಹಾಳ, ಶಿಗ್ಲಿ, ಉಗಲವಾಟ, ಮಲಘಾಣ, ಕೃಷ್ಣ ಕಿತ್ತೂರ, ಸುರೇಬಾನ ಮತ್ತು ನರೆನೂರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಸತ್ಯ,ಅಹಿಂಸೆಗಳ ಮೂಲಕ ಖಾದಿ ಗ್ರಾಮೋದ್ಯೋಗ,ಪಾನ ನಿರೋಧ, ಗೋಹತ್ಯಾ ನಿಷೇಧ, ಗ್ರಾಮ ಸುಧಾರಣೆ, ಗ್ರಾಮ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದರು. ಹೊಸೂರು, ಶಿಗ್ಲಿ, ಸುರೇಬಾನ, ಶಿರೋಳ, ಮಲಘಾಣ, ಕೃಷ್ಣ ಕಿತ್ತೂರುಗಳಲ್ಲಿ ಪ್ರೌಢ ಶಾಲೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.ಅನೇಕ ಹಳ್ಳಿಗಳಲ್ಲಿ ಇವರು ಇಡೀ ಊರನ್ನೇ ಹಿಂಸಾರಕ್ಕೆ ಇಳಿಸುತ್ತಿದ್ದ ಮನೆತನದ ವಾಜ್ಯಗಳನ್ನು ಶಾಂತಿ ಸಮಾಧಾನಗಳಿಂದ ಬಗೆಹರಿಸಿ ಸೌಹಾರ್ದತೆಯ ವಾತಾವರಣ ಮೂಡಿಸಿದ್ದಾರೆ. ಗಾಂಧಿ ತತ್ವಗಳನ್ನು ಎಲ್ಲ ವಿಧಗಳಿಂದಲೂ ಕಾರ್ಯರೂಪಕ್ಕೆ ತಂದ ಇವರ ಅಪಾರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು 1992ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ಮಕ್ಕಳಾದ ಪಂಚಾಕ್ಷರಯ್ಯ ಗಣಾಚಾರಿ, ಗಂಗಯ್ಯಾ ಗಣಾಚಾರಿ ಬಂಧುಗಳಾದ ಡಾ.ರುದ್ರಯ್ಯಾ ಭಂಡಾರಿ ಮೊದಲಾದವರು ನೀಲಕಂಠಜಿಯವರ ತತ್ವಾದರ್ಶಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ನೀಲಕಂಠಜಿ ಗಣಾಚಾರಿಯವರು ತಮ್ಮ 94 ನೇ ವಯಸ್ಸಿನಲ್ಲಿ ಸೇವೆಯಲ್ಲಿರುವಾಗಲೇ ಡಿಸೆಂಬರ್ 14.2010 ರಲ್ಲಿ ತೀರಿಕೊಂಡರು.ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಸಮಾಧಿಯಿದ್ದು ಸ್ಮಾರಕವಾಗಿ ನಿರ್ಮಾಣವಾಗುತ್ತಿದೆ.ಪ್ರತಿ ವರ್ಷ ಜರುಗುವ ಪುಣ್ಯತಿಥಿ ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆಯಿಂದ ಅದರಲ್ಲೂ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು, ಗಾಂಧಿ ಅನುಯಾಯಿಗಳು,ಮಠಾಧೀಶರು ಪಾಲ್ಗೊಳ್ಳುತ್ತಾರೆ. ವಿಜಯಪುರದ ಶ್ರೀ ಸಿದ್ದೇಶ್ವರಸ್ವಾಮಿಜಿ ಮೊದಲಾದವರು ಪಾಲ್ಗೊಳ್ಳುವ ಈ ಬಾರಿಯ ಪುಣ್ಯತಿಥಿ ಕಾರ್ಯಕ್ರಮವು ಡಿಸೆಂಬರ 10 ರಂದು ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಜರುಗುತ್ತಿದೆ.
ಲೇಖಕರ ವಿಳಾಸ :
ಡಾ.ಪ್ರಕಾಶ ಗ.ಖಾಡೆ.ಶ್ರೀಗುರು,ಮನೆ ನಂ. ಎಸ್.135.ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.-9845500890



Related Tags: Neelakanthaji Ganachari, Karnataka Gandhi, Badami Taluk, Dr. Prakash Khade, kannada Article,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ