ಸೋಮವಾರ, ಆಗಸ್ಟ್ 18, 2025

ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ - ಡಾ.ಪ್ರಕಾಶ ಗ.ಖಾಡೆ

 

ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ



ಡಾ.ಪ್ರಕಾಶ .ಖಾಡೆ

ಲೇಖಕರ ಮಾತು

   ಎರಡು ಶತಮಾನಗಳ ಕಾಲ ಪರಕೀಯರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದ ಅಖಂಡ ಭಾರತದ ವಿಮೋಚನೆಗಾಗಿ ದೇಶವ್ಯಾಪಿ ನಡೆದ ಹೋರಾಟಗಳ ಚರಿತ್ರೆಯೇ ರೋಮಾಂಚನವನ್ನುಂಟು ಮಾಡುವಂಥದು. ತಾಯಿ ನಾಡನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಹಲವಾರು ದೇಶಭಕ್ತರು ತಮ್ಮ ಬೆವರು, ರಕ್ತ ಸುರಿಸಿ ತಂದ ಸ್ವಾತಂತ್ರ್ಯದ ಇತಿಹಾಸವೇ ಮರೆಯಲಾಗದು.

    ಹಲವರ ತ್ಯಾಗ ಬಲಿದಾನದ ಪ್ರತೀಕವಾಗಿ ನಮ್ಮ ಭಾರತಕ್ಕೆ  15 ಅಗಸ್ಟ 1947 ರಂದು ಸ್ವಾತಂತ್ರ್ಯ ದೊರೆಯುವದರೊಂದಿಗೆ ಮುಕ್ತತೆಯ ಸಂಭ್ರಮ ಅನುಭವಿಸಿದೆವು. ಈಗ ಸ್ವತಂತ್ರ್ಯದ ಅಮೃತಮಹೋತ್ಸವ ಕಾಲ , ಭಾರತ ಸಾತಂತ್ರ್ಯಕ್ಕೆ 75 ವರುಷಗಳು ತುಂಬಿದ ಸವಿ ನೆನಪಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕರ್ನಾಟಕದ 75 ಸ್ವಾತಂತ್ರ್ಯ ಕೇಂದ್ರಗಳನ್ನು ಗುರುತಿಸಿ , ಕುರಿತು 75 ಕೃತಿಗಳನ್ನು ಹೊರತರುತ್ತಿರುವುದು ಒಂದು ಸಾರ್ಥಕ ಕಾರ್ಯ.

       ಕಾರ್ಯದ ಒಂದು ಭಾಗವಾಗಿ ನಾನು ಬಾದಾಮಿಯನ್ನು ಕೇಂದ್ರವಾಗಿಟ್ಟುಕೊಂಡು ಪರಿಸರದ ಸ್ವಾಂತತ್ರ್ಯ ಹೋರಾಟದ ಕ್ಷಣಗಳನ್ನು ವಿವಿಧ ಮೂಲಗಳಿಂದ ದಾಖಲಿಸಿದ್ದೇನೆ, ಹಾಗೆ ನೋಡಿದರೆ ಬಾದಾಮಿ ಪರಂಪರೆಯಿಂದಲೂ ತನ್ನ ಖ್ಯಾತಿಯನ್ನು ಉಳಿಸಿಕೊಂಡು ಬಂದ ಪ್ರದೇಶ. ಚಾಲುಕ್ಯರ ಕಾಲದಿಂದಲೂ ನೆಲ ಕ್ಷಾತ್ರ ತೇಜ್ಜಸ್ಸಿಗೆ ಖ್ಯಾತಿ ಪಡೆದಿದೆ. ಬ್ರಿಟಿಷರು ಮೊದಲು ಬಾದಾಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿದರು. ಮುಂದೆ ಮರಾಠಾ ಶೂರ ಸೇನಾನಿ ಒಕ್ಕಣ್ಣ ನರಸಿಂಹನಿಂದ ಬ್ರಿಟಿಷರೇ ಒಕ್ಕಲೇಳಬೇಕಾಯಿತು. ನಂತರ ನಡೆದ ಹೋರಾಟಗಳೇ ಮೈ ರೋಮಾಂಚÀನಗೊಳಿಸುವಂಥದು. ಬ್ರಿಟಿಷರ ವಿರುದ್ದ ಬಾದಾಮಿ ಪರಿಸರದ ಗುಳೇದಗುಡ್ಡ, ಕೆರೂರು, ನೀರಲಕೇರಿ ಮೊದಲಾದ ಕಡೆಗಳಲ್ಲಿ ನಡೆದ ಹೋರಾಟದ ಚಿತ್ರಣ ಹೊತ್ತಿಗೆಯಲ್ಲಿದೆ.

       ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ 75 ಶಕ್ತಿ ಕೇಂದ್ರಗಳನ್ನು ಗುರುತಿಸಿ ಮೊದಲಬಾರಿಗೆ ಹೊಸ ಚರಿತ್ರೆಯನ್ನು ಕಟ್ಟಿಕೊಡುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ.ವಸಂತಕುಮಾರ ಅವರ ಕಾರ್ಯ ಸಾರ್ಥಕವಾದುದು. ಕಾರ್ಯದಲ್ಲಿ ಐವರು ಸಂಪಾದಕರನ್ನು ತೊಡಗಿಸಿ ನಾಡಿನ 75 ಲೇಖಕರಿಂದ ಕೃತಿಗಳನ್ನು ರೂಪಿಸಿಕೊಡುವ ಕಾರ್ಯದಲ್ಲಿ ನನ್ನನ್ನೂ ಒಬ್ಬ ಸಂಪಾದಕರನ್ನಾಗಿ ಆಯ್ಕೆ ಮಾಡಿ ಗುರುತರ ಕಾರ್ಯ ವಹಿಸಿಕೊಟ್ಟ ಮಾನ್ಯ ಅಧ್ಯಕ್ಷರ ಪ್ರೀತಿಗೆ ಶರಣು. ನನ್ನೊಂದಿಗೆ ಮಾಲೆಯ ಸಂಪಾದಕರಾದ ಡಾ.ಮೃತ್ಯುಂಜಯ ರುಮಾಲೆ, ನರೇಂದ್ರಕುಮಾರ, ಡಾ.ಎಸ್.ಜಿ.ರಾಮದಾಸರೆಡ್ಡಿ ಹಾಗೂ ರಾಜಲಕ್ಷ್ಮೀ ಕೋಡಿಬೆಟ್ಟು ಅವರಿಗೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕ್ರಿಯಾಶೀಲ ರಜಿಸ್ಟ್ರಾರ್ ಕರಿಯಪ್ಪ. ಎನ್. ಅವರಿಗೆ ಅಕಾಡೆಮಿ ಸಮಸ್ತ ಸದಸ್ಯರಿಗೆ, ಹರೀಷ್, ಸುಚಿತ್ರಾ ಮತ್ತು ನಯನಾ ಅವರಿಗೆ , ಕೃತಿ ರೂಪುಗೊಳ್ಳಲು ಅಪೂರ್ವ ಮಾಹಿತಿ ಒದಗಿಸಿದ ಡಾ.ವಿನಯಕುಮಾರ ಹಿರೇಮಠ ಅವರಿಗೆ ಮತ್ತು ಪತ್ನಿ ಅನ್ನಪೂರ್ಣ ಮತ್ತು ನಮ್ಮೆಲ್ಲ ಕುಟುಂಬವರ್ಗದವರಿಗೆ ನನ್ನ ಕೃತಜ್ಞತೆಗಳು.

ಡಾ.ಪ್ರಕಾಶ .ಖಾಡೆ,  ಸೆಕ್ಟರ್ ನಂ.63, ನವನಗರ, ಬಾಗಲಕೋಟೆ. ಮೊ.9845500890


ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ

ಡಾ.ಪ್ರಕಾಶ .ಖಾಡೆ

 

 

       ಬಾದಾಮಿ ಕರ್ನಾಟಕದ ಶಕ್ತಿ ಕೇಂದ್ರ. ಪುರಾತನ ಮತ್ತು ಐತಿಹಾಸಿಕವಾಗಿ ಬಾದಾಮಿಗೆ ವಿಶ್ವದಲ್ಲಿಯೇ ತುಂಬಾ ಮಹತ್ವದ ಸ್ಥಾನವಿದೆ. ಇಲ್ಲಿನ ನೀರು, ಗಾಳಿ, ಮಣ್ಣು ಅತ್ಯಂತ ಸಮೃದ್ಧವೂ ಆರೋಗ್ಯಪೂರ್ಣವೂ ಆಗಿದೆ. ಹೀಗಾಗಿ ಚರಿತ್ರೆಯಲ್ಲಿ ಬಾದಾಮಿ ಪರಿಸರಕ್ಕೆ ಮೊದಲಿನಿಂದಲೂ ಮಹತ್ವದ ಸ್ಥಾನವಿದೆ. ಇಲ್ಲಿ ರಾಜರು, ರಾಣಿಯರು ಹಾಗೂ ಪ್ರಜೆಗಳು ಶೂರರು, ಧೀರರೂ ಹಾಗೂ ಸಾಂಸ್ಕøತಿಕ ಕಳಕಳಿವುಳ್ಳವರಾಗಿದ್ದರು ಎಂಬುದು ಇತಿಹಾಸದ ಪುಟಗಳು ಸಾರುತ್ತವೆ. ಅಷ್ಟೇ ಅಲ್ಲ ಇಲ್ಲಿನ ಪ್ರತಿ ಶಿಲ್ಪಕಲೆಯ ವಾಸ್ತು ರಚನೆ ಬೆರಗು ಹುಟ್ಟಿಸುವಂಥದು, ಹೀಗಾಗಿ ಬಾದಾಮಿ ಅಂದರೆ ಅದು ಕನ್ನಡ, ಕರುನಾಡಿನ ಒಂದು ಮರೆಯಲಾಗದ ಅಸ್ಮಿತೆ, ಅಷ್ಟೇ ಅಲ್ಲ ಇದರ ಕೀರ್ತಿ ಅನನ್ಯನ್ಯವಾದುದು. ಬಾದಾಮಿ ಹಲವು ಹೋರಾಟಗಳ ಮೊತ್ತ. ಚರಿತ್ರೆಯ ಪುಟಗಳಲ್ಲಿ ಶಾಸ್ವತ ಸ್ಥಾನ ತನ್ನದಾಗಿಸಿಕೊಂಡ ಪರಿಸರ. ಇದರ ಕಥೆಯೇ ರೋಚಕವಾದುದು. ಬಾದಾಮಿ ಚಾಲುಕ್ಯರ ಚರಿತ್ರೆಯಂತೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದುಕೊಂಡು ಬಂದಿದೆ. ಹಾಗೇನೇ ಭಾರತ ಸ್ವಾತಂತ್ರ್ಯ ಹೋರಾಟದಲ್ಲೂ ನೆಲದ ಇತಿಹಾಸ ಮರೆಯಲಾಗದಂಥದು.

 

ರಾಷ್ಟ್ರೀಯ ಜಾಗೃತಿ    

     ಸ್ವಾತಂತ್ರ್ಯ ಎನ್ನುವುದು ಪ್ರತಿ ಜೀವಿತ ಪ್ರಾಣಿಯ ಸಾಮಾಜಿಕ ಹಕ್ಕು, ಅದನ್ನು ಯಾರೂ ಯಾವ ಕಾಲಕ್ಕೂ ಕಸಿದುಕೊಳ್ಳಲಾರರು. ಇದರ ರಕ್ಷಣೆಗಾಗಿ ಮನುಷ್ಯ ತನ್ನದೇಯಾದ ರಕ್ಷಣಾತ್ಮಕ ನಿಲುವು ಮತ್ತು ನೆಲೆ ಹೊಂದಿರುತ್ತಾನೆ. ಇದು ವ್ಯಕ್ತಿಗತವಾದ ಸ್ವಾತಂತ್ರ್ಯ ಪ್ರಜ್ಞೆ. ಆದರೆ ಇದು ಒಂದು ಸಮುದಾಯ, ಒಂದು ಜನಾಂಗ, ಒಂದು ದೇಶ ಸ್ವಾತಂತ್ರ್ಯಕ್ಕಾಗಿ ತನ್ನ ಇರುವನ್ನು ಪ್ರಕಟಿಸುವ ಅಲ್ಲಿನ ಒಬ್ಬೊಬ್ಬರ ಕಾಳಜಿಗಿಂತ ಒಟ್ಟು ಸಮೂಹದ ತುರ್ತಾಗಿರುತ್ತದೆ. ಹೀಗಾಗಿ ಇದನ್ನು ಹೋರಾಟದ ಚಳುವಳಿಯ , ಪ್ರತಿಭಟಣೆಯ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಹೋರಾಟದ ಪ್ರಜ್ಞೆ ಜಾಗೃತವಾಗಿರುವುದು ಎಲ್ಲ ಅಕ್ಷರಸ್ಥ, ಮುಂದುವರೆದ ಜನರಲ್ಲಿ ಮಾತ್ರ ಅಲ್ಲ , ತೀರಾ ಹಿಂದುಳಿದ , ಅನಕ್ಷರಸ್ಥರ ನೆಲೆಯಲ್ಲೂ ಇದು ಗರಿಗೆದರಿದೆ. ಕೇವಲ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಆಂತರಿಕ ಒಳ ಜಗಳದ ಲಾಭ ಪಡೆದು ಇಡೀ ಭಾರತದ ಆಡಳಿತ ಚುಕ್ಕಾಣಿಯನ್ನೇ ಹಿಡಿಯುವಲ್ಲಿ ಯಶಸ್ವಿಯಾದರು. ಅವರ ಆಡಳಿತವು ಬರುಬರುತ್ತಾ ಭಾರತೀಯರ ಮೇಲಿನ ದಬ್ಬಾಳಿಕೆಯತ್ತ ತಿರುಗಿದಾಗ ಜನತೆ ರೋಸಿಹೋಗಿರಾಷ್ಟ್ರೀಯ ಜಾಗೃತಿಮೂಡಲು ಕಾರಣವಾಯಿತು.

        ಕ್ರಿ.. 1857 ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಚಳುವಳಿಯು ಅತ್ಯಲ್ಪ ಕಾಲದಲ್ಲಿ ಅಂತ್ಯವಾದರೂ , ಮುಂದೆ ಅದು ಹೊತ್ತಿಸಿದ ಜ್ಯೋತಿ ಆರಿಸಲು ಯಾವ ಶಕ್ತಿಯಿಂದಲೂ ಸಾಧ್ಯವಾಗಲಿಲ್ಲ. 1887 ದಂಗೆಯನ್ನು ಬ್ರಿಟಿಷರುಸಿಪಾಯಿ ದಂಗೆಎಂದು ಕರೆದರೂ ಭಾರತೀಯ ಇತಿಹಾಸಕಾರರು ಅದನ್ನುಪ್ರಥಮ ಸ್ವಾತಂತ್ರ್ಯ ಸಂಗ್ರಾಮಎಂದು ಕರೆದಿದ್ದಾರೆ. ಭಾರತ ಸ್ವಾತಂತ್ರ್ಯಕ್ಕಾಗಿ 1885 ರಿಂದ 1904 ವರೆಗೆ ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ, ಲಾಲಾ ರಜಪತರಾಯ, ಬಿಪಿನ ಚಂದ್ರಪಾಲ ( ಲಾಲ್, ಬಾಲ್, ಪಾಲ್) ಮುಂತಾದವರು ಶ್ರಮಿಸಿದರು. 1905 ರಿಂದ ತೀವ್ರಗಾಮಿಗಳಾದ ಭಗತಸಿಂಗ್ , ಚಂದ್ರಶೇಖರ ಆಜಾದ್, ನೇತಾಜಿ ಸುಭಾಷಚಂದ್ರ ಭೋಸ್ ರವರು ಸಾತಂತ್ರ್ಯ ಚಳುವಳಿಗೆ ಉಗ್ರ ಹೋರಾಟದ ಕಿಚ್ಚು ಹಚ್ಚಿದರು. ಮುಂದೆ ಗಾಂಧೀಜಿಯವರ ಆಗಮನದಿಂದಾಗಿ ಸ್ವಾತಂತ್ರ್ಯ ಚಳುವಳಿಯು ಅಹಿಂಸಾ ಮಾರ್ಗ ಅನುಸರಿಸಿದ್ದು ನಮ್ಮ ಕಣ್ಣ ಮುಂದಿರುವ ಇತಿಹಾಸವಾಗಿದೆ.

 

 ಬಾದಾಮಿ ಕೋಟೆಯ ಮುತ್ತಿಗೆ.  

   ಪಂಚನದಿಗಳಿಂದ ಸಮೃದ್ಧವಾಗಿದ್ದ, ಕಲೆ, ಸಂಸ್ಕøತಿಗೆ ವಿಶ್ವವಿಖ್ಯಾತಿ ಪಡೆದಿದ್ದ ಅವಿಭಜಿತ ವಿಜಯಪುರ ಜಿಲ್ಲೆಗೆ ಬ್ರಿಟಿಷರು 1818 ರಲ್ಲಿ ಪ್ರವೇಶಮಾಡಿದರು. 1800 ರಲ್ಲಿ ಬಾಗಲಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳು ಮರಾಠಾ ಪೇಶ್ವೆ ಆಳರಸರ ಆಳ್ವಿಕೆಗೆ ಒಳಪಟ್ಟಿದ್ದವು. 1817 ರಲ್ಲಿ ಪೇಶ್ವೆ ಮತ್ತು ಬ್ರಿಟಿಷರ ಸಂಬಂಧ ಹದಗೆಡುತ್ತದೆ. ಯುದ್ದಗಳು ಆರಂಭವಾಗುತ್ತವೆ. ಜನರಲ್ ಮನ್ರೋ 1818 ಫೆಬ್ರವರಿ 13 ರಂದು ಬಾದಾಮಿ ಕೋಟೆಯನ್ನು ಮುತ್ತಿದನು.

     ಸ್ಥಳೀಯರ ಪ್ರಬಲ ವಿರೋಧದ ನಡುವೆ ಫೆಬ್ರವರಿ 18 ರಂದು ಬಾದಾಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಬ್ರಿಟಿಷರು ಜಿಲ್ಲೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಿದರು. ಬಾದಾಮಿ ವಶಪಡಿಸಿಕೊಂಡ ಜನರಲ್ ಮನ್ರೋ ಫೆಬ್ರವರಿ 22 ರಂದು ಯಾವುದೇ ಪ್ರಬಲ ವಿರೋಧವಿಲ್ಲದೆ ಬಾಗಲಕೋಟೆಯನ್ನು ವಶಪಡಿಸಿಕೊಂಡನು. ಮುಂದೆ 1818 ಮೇ 17 ಹೊತ್ತಿಗೆ ಕೃಷ್ಣಾ ನದಿಯ ಉತ್ತರ ಭಾಗವನ್ನು ಅಂದರೆ ಅಖಂಡ ವಿಜಯಪುರ ಜಿಲ್ಲೆಯನ್ನು ಆಕ್ರಮಿಸಿಕೊಂಡು ಭಾಗವನ್ನು ಮುಂಬಯಿ ಗವರ್ನರ್ ಆಳ್ವಿಕೆಗೆ ಒಳಪಡಿಸಲಾಯಿತು. ಜಮಖಂಡಿಯನ್ನು ಪಟವರ್ಧನರ ಆಳ್ವಿಕೆಗೆ, ಮುಧೋಳವನ್ನು ಘೋರ್ಪಡೆ ಅವರಿಗೆ ವಹಿಸಿಕೊಡಲಾಯಿತು. ದಕ್ಷಿಣ ಭಾಗದ ಕಂದಾಯ ಆಯುಕ್ತನಾದ ಡಬ್ಲೂ. ಹಾರ್ಟನ ಸಲಹೆಯಂತೆ 1864 ಡಿಸೆಂಬರ್ ದಲ್ಲಿ  ಇಂಡಿ, ಹಿಪ್ಪರಗಿ, ವಿಜಯಪುರ, ಮನಗೂಳಿ, ಮುದ್ದೇಬಿಹಾಳ, ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ  ಒಳಗೊಂಡು ಕಲಾದಗಿ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಮುಂದೆ ಸೆಂಟ್ ಕ್ಲಾರ್ ವಿಲ್ಕಿನ್ಸ ಸಲಹೆಯಂತೆ 1885 ರಿಂದ ಜಿಲ್ಲಾ ಕೇಂದ್ರವನ್ನು ಕಲಾದಗಿಯಿಂದ ವಿಜಯಪುರಕ್ಕೆ ವರ್ಗಾಹಿಸಲಾಯಿತು. ಈಗ 1997 ರಿಂದ ಬಾಗಲಕೋಟೆ ಜಿಲ್ಲೆ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿದೆ.

    1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ವಿಜಯಪುರ ಬಾಗಲಕೋಟೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಳು ನಡೆದಿವೆ, ಅದರಲ್ಲೂ 1824 ಸಿಂದಗಿ ಬಂಡಾಯ, 1840 ಬಾದಾಮಿ ಬಂಡಾಯ ಮತ್ತು ಬಹುಮುಖ್ಯವಾಗಿ 1857 ರಲ್ಲಿಯೇ ನಡೆದ ಹಲಗಲಿ ಬಂಡಾಯ ಜಿಲ್ಲೆಯಲ್ಲಿ ಹೊತ್ತಿಸಿದ ಸ್ವಾತಂತ್ರ್ಯದ ಕಿಚ್ಚು ದಾಖಲಾರ್ಹವಾದುದು. ಸಿಂದಗಿಯಲ್ಲಿ ಡಿಸೆಂಬರ್ 1824 ರಲ್ಲಿ ಚಿದಂಬರ ದೀಕ್ಷಿತರ ನಾಯಕತ್ವದಲ್ಲಿ ಬ್ರಿಟಿಷರ ತೆರಿಗೆ ನೀತಿಯನ್ನು ವಿರೋಧಿಸಿ ಹೋರಾಟ ನಡೆಯಿತು. ದಿವಾಕರ ದಿಕ್ಷೀತ , ರಾವಜಿ ರಾಸ್ತಿಯಾ, ಬಾಳಪ್ಪ ದೇಶಪಾಂಡೆ, ಟಕ್ಕಳಿಕಿಯ ಶೆಟ್ಟಿಯಪ್ಪ ಮುಂತಾದವರು ಕೂಡಿ ಹೋರಾಟ ಮಾಡಿ ಸಿಂದಗಿ ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿ ಠಾಣೆ ನಿರ್ಮಿಸಿದರು. ಅಮೃತರಾವ್ ವಿನಾಯಕರಾವ್ ಅವರು ಕೋಟೆಯ ಮೇಲೆ ಧ್ವಜ ಹಾರಿಸಿದರು. ಧಾರವಾಡದ ಕಲೆಕ್ಟರ್ ಆಗಿದ್ದ ಸ್ಟೀವನ್ಸನ್ ಸಿಂದಗಿಗೆ ಸೈನ್ಯ ಕಳಿಸಿ ಸಿಂದಗಿ ಕೋಟೆ ವಶಪಡಿಸಿಕೊಂಡನು.

 

ಬಾದಾಮಿ ಬಂಡಾಯ

    ಚಾಲುಕ್ಯ ದೊರೆಗಳ ರಾಜಧಾನಿಯಾಗಿ ಮೆರೆದಿದ್ದ ಬಾದಾಮಿಯನ್ನು ಕೇಂದ್ರ ಸ್ಥಳವಾಗಿಟ್ಟುಕೊಂಡು ಬ್ರಿಟಿಷ್ ಸರಕಾರ ಇಲ್ಲಿ ತನ್ನ ಆಳ್ವಿಕೆಯನ್ನು ಆರಂಭಮಾಡಿತು. ಹೀಗೆ ಬಾದಾಮಿಯಲ್ಲಿ ತನ್ನ ಆಡಳಿತ ಪ್ರಾರಂಭಿಸಿದ ಬ್ರಿಟಿಷ ಸರಕಾರದ ವಿರುದ್ಧ ಮುಂದೆ ಮೂರು ದಶಕಗಳ ನಂತರ ಸಶಸ್ರ್ತ ಬಂಡಾಯವೊಂದು ನಡೆಯಿತು. ಇದೇ 1840 ಬಾದಾಮಿ ಬಂಡಾಯ. ಸಾತಾರದ ದಿವಾನನ ಮಗ ನರಸಿಂಹ ಪೇಟಕರ (ಒಕ್ಕಣ್ಣ ನರಸಪ್ಪ) ಬ್ರಿಟಿಷರ ವಿರುದ್ಧ ನೇರವಾಗಿ ಯುದ್ದ ಸಾರದೇ ಸಾತಾರದ ವಶದಲ್ಲಿದ್ದ ಬಾದಾಮಿ ಕೋಟೆಗೆ 27. 5. 1841 ರಲ್ಲಿ ಮುತ್ತಿಗೆ ಹಾಕಿ ಸ್ವಾತಂತ್ರ್ಯ ಸಾರಿಕೊಂಡುಛತ್ರಪತಿಎಂಬ ಬಿರುದು ಪಡೆದು ಬ್ರಿಟಿಷರ ಖಜಾನೆ ವಶಪಡಿಸಿಕೊಂಡನು.ಅದರ ಕಥೆ ಹೀಗಿದೆ.

  1841 ರಲ್ಲಿ ಬಂಡಾಯ ನಡೆಸಿದ  ವೀರಯೋಧ ಒಕ್ಕಣ್ಣ ನರಸಪ್ಪ. ಈತನು ಸಾತಾರ ಸಂಸ್ಥಾನದ ಅರಸನಾಗಿದ್ದ ಅತ್ಯಂತ ಕ್ರಾಂತಿಕಾರಿ ಮಹಾರಾಜ ಪ್ರತಾಪಸಿಂಹನ ಬಲಗೈ ಬಂಟನಾಗಿದ್ದ. 1839 ರಲ್ಲಿ ಬ್ರಿಟಿಷ್ ಸರಕಾರ ಮೋಸದಿಂದ ಪಿತೂರಿ ಮಾಡಿ ಸಾತಾರ ಸಂಸ್ಥಾನದ ರಾಜನನ್ನು ಅಧಿಕಾರದಿಂದ ಇಳಿಸಿದುದರಿಂದ ಕೆರಳಿ ಕೆಂಡವಾಗಿದ್ದ ಒಕ್ಕಣ್ಣ ನರಸಪ್ಪನು ತನ್ನ ಮಹಾರಾಜನಿಗಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಕ್ರಿ..1841 ರಲ್ಲಿ ಬಾದಾಮಿಯ ಮೇಲೆ ಮುತ್ತಿಗೆ ಹಾಕಿದನು. ಇದಕ್ಕೂ ಮೊದಲು ಒಕ್ಕಣ್ಣ ನರಸಪ್ಪನು ಕೆಲವು ಕಾಲ ಅಂದಿನ ಹೈದರಾಬಾದ ಸಂಸ್ಥಾನಕ್ಕೊಳಪಟ್ಟಿದ್ದ ದೇವದುರ್ಗದಲ್ಲಿ ನೆಲೆ ನಿಂತು ಅಂದಾಜು ಒಂದು ಸಾವಿರ ಸೈನಿಕರನ್ನೊಳಗೊಂಡ ಅರಬ ರಾಹುಲರನ್ನೊಳಗೊಂಡ ಸೈನ್ಯವನ್ನು ಬಲಪಡಿಸಿದನು. ಮುಂದೆ ಅಲ್ಲಿಂದ ನೇರವಾಗಿ ಬಂದು ಬಾದಾಮಿಯ ಮೇಲೆ ದಾಳಿ ಮಾಡಿದನು. ಇಲ್ಲಿ ಒಕ್ಕಣ್ಣ ನರಸಪ್ಪನ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಬ್ರಿಟಿಷ್ ಸೈನ್ಯ ಬಾದಾಮಿಯಿಂದ ಪಲಾಯನಗೈಯಿತು. ಕಂಪನಿ ಸರಕಾರದಿಂದ ಬಾದಾಮಿಯನ್ನು ವಶಪಡಿಸಿಕೊಂಡ ಒಕ್ಕಣ್ಣ ಸರಸಪ್ಪನು ಇದೇ ಸಂಬ್ರಮದಲ್ಲಿ ಬಾದಾಮಿ ಕೋಟೆಯ ಮೇಲೆ ಸಾತಾರ ರಾಜ್ಯದ ಧ್ವಜವನ್ನು ಹಾರಿಸಿ ಸಂಭ್ರಮಿಸಿದನು. ಬಾದಾಮಿ ಆಡಳಿತ ವಹಿಸಿಕೊಂಡ ತಾನು ಸಾತಾರದ ಮಹಾರಾಜನ ಸಾಮಂತನೆಂದು ಘೋಷಿಸಿಕೊಂಡು ರಾಜ್ಯಭಾರ ಆರಂಭಸಿದನು.

        ಸಂಭ್ರಮ ಬಹಳ ದಿನ ಉಳಿಯಲಿಲ್ಲ, ದೇಸಿಯ ಹೋರಾಟಗಾರರೊಬ್ಬನ ಕೈಯಲ್ಲಿ ಒಕ್ಕಣ್ಣ ನರಸಪ್ಪನ ಆಡಳಿತವಿರುವುದು ಕಂಪನಿ ಸರಕಾರಕ್ಕೆ ಸಹಿಸಿಕೊಳ್ಳುವುದಾಗಲಿಲ್ಲ. ಒಕ್ಕಣ್ಣ ನರಸಪ್ಪ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಬ್ರಿಟಿಷರು ಬೆಟ್ಟಿಂಗ್ಟನ್ ಮತ್ತು ಎಂ.ಎನ್.ಷಾ ನೇತೃತ್ವದಲ್ಲಿ ಸೈನ್ಯ ಕಳಿಸಿ ಬಾದಾಮಿಗೆ ಮತ್ತಿಗೆ ಹಾಕಿತು. ತನಗೆ ಎದುರಾದ ಒಕ್ಕಣ್ಣ ನರಸಪ್ಪನ ಅಲ್ಪ ಸೇನೆಯ ಪ್ರತಿರೋಧವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತು. ಬಾದಾಮಿ ಕೋಟೆಯನ್ನು ಸಂಹಾರ ಮಾಡಿತು. ತನ್ನೆಲ್ಲ ಬಲವನ್ನು ಒಟ್ಟುಗೂಡಿಸಿ ಹೋರಾಡಿದ ದೇಸಿ ಹೋರಾಟಗಾರ ಬ್ರಿಟಿಷರ ವಿರುದ್ಧ ಸೋಲ ಬೇಕಾಯಿತು. ಬ್ರಿಟಿಷರು ನರಸಿಂಹನನ್ನು ಬಂಧಿಸಿ ಬಾದಾಮಿ ಬಂಡಾಯವನ್ನು ವಿಫಲಗೊಳಿಸಿದರು. ಇದರ ಇತಿಹಾಸವನ್ನು ಜನಪದ ಲಾವಣಿಕಾರರು ಬಾದಾಮಿ ಮೇಲಿನ ದಾಳಿಯ ಅನ್ಯಾಕ್ರಮಣವನ್ನು ಪದಕಟ್ಟಿ ಹಾಡಿದ್ದಾರೆ.

ಕುಂಪಣಿಯವರು ಮಾಡ್ಯಾರ ಸಂವಾರ

ನಾಡಮೇಗಿನ ಜನಾ ಮರುಗಿತೋ ಮರಮರಾ

ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಧರಾ

ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ

ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಗಡಾ

ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ.

ಬ್ರಿಟಿಷರು ಪ್ರದೇಶವನ್ನು ಅದೆಂತು ಆಕ್ರಮಿಸಿಕೊಂಡರೆಂಬುದನ್ನು ಸ್ಥಳೀಯ ಚರಿತ್ರೆಗಳು ಸಾರುತ್ತವೆ.

     ಕ್ರಿ..1857 ರಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಬಂಡಾಯ ಭುಗಿಲೆದ್ದ ಸಂದರ್ಭದಲ್ಲಿ ಜಿಲ್ಲೆಯ ಜಮಖಂಡಿಯೂ ಸ್ಪಂದಿಸಿತು. ಇದರ ಹಿಂದೆ ಜಮಖಂಡಿ ಸಂಸ್ಥಾನದ ರಾಮಚಂದ್ರರಾಯನ ಕೈವಾಡವಿದೆ ಎಂದು ಬ್ರಿಟಿಷರು ಆತನನ್ನು ಬಂಧಿಸಿ ಬೆಳಗಾವಿ ಜೈಲಿನಲ್ಲಿಟ್ಟರು. ಆತನನ್ನು ಉಳಿಸಲು ಜಮಖಂಡಿ ಸೈನ್ಯದಲ್ಲಿದ್ದ ರಜಪೂತ ಸಿಪಾಯಿ ಛೋಟುಸಿಂಗನು ಸ್ವಾತಂತ್ರ್ಯ ಬಂಡಾಯಕ್ಕೆ ತಾನೇ ಕಾರಣನೆಂದು ಬ್ರಿಟಿಷರ ಪೊಲಿಟಿಕಲ್ ಏಜೆಂಟ್ ಮ್ಯಾನಸನ್ನನ ಮುಂದೆ ಹೇಳಿಕೆ ಕೊಟ್ಟು ನೇಣುಗಂಬವನ್ನೇರಿದನು. ಕ್ರಿ.. 1859 ರಲ್ಲಿ ದೊರೆ ರಾಮಚಂದ್ರರಾಯನು ನಿರಪರಾಧಿ ಎಂದು ಬಿಡುಗಡೆಹೊಂದಿದನು. ಛೊಟುಸಿಂಗ ಬಲಿದಾನ ಅಮರವಾದುದು, ಅವನ ತ್ಯಾಗದ ಪ್ರತೀಕವಾಗಿ ಅವನ ಸಮಾಧಿ ಜಮಖಂಡಿಯಲ್ಲಿದೆ.

 

1857 ಚಾಂದಕವಟೆ ಬಂಡಾಯ :

ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಆಖಂಡ ವಿಜಯಪುರ ಜಿಲ್ಲೆಯಲ್ಲೂ ನಡೆಯಿತು. ಚಾಂದಕವಟೆಯ ದೇಶಮುಖರಾದ ಬಸಲಿಂಗಪ್ಪನವರು, ವಿಜಯಪುರದ ಸಿರಿಶೆಟ್ಟಿ ಅವರು ಬ್ರಿಟಿಷರ ವಿರುದ್ದ ಬಂಡಾವೆದ್ದರು. ಬಸಲಿಂಗಪ್ಪ ಹಾಗೂ ಅವರ ಮಗನನ್ನು ಸರಕಾರ ಬಂಧಿಸಿ ಜಹಗೀರನ್ನು ಮುಟ್ಟುಗೋಲು ಹಾಕಿಕೊಂಡಿತು.

 

1857 ಹಲಗಲಿ ಬಂಡಾಯ              

ಬಾಗಲಕೋಟೆ ಜಿಲ್ಲೆಯ ಈಗಿನ ಬೀಳಗಿ ತಾಲೂಕಿನ ಹಲಗಲಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ರಾಷ್ಟ್ರದಲ್ಲಿಯೇ ಗುರುತಿಸಿಕೊಂಡ ಗ್ರಾಮ. ಹಲಗಲಿ ಆಗ ಮುಧೋಳ ಸಂಸ್ಥಾನಕ್ಕೆ ಸೇರಿದ್ದ ಒಂದು ಸಣ್ಣ ಹಳ್ಳಿ . ಬೇಡರೇ ಇಲ್ಲಿನ ಪ್ರಧಾನ ನಿವಾಸಿಗಳು. ಹಲಗಲಿಯಲ್ಲಿ ಸಿಡಿದ ಸ್ವಾತಂತ್ರ್ಯದ ಕಿಡಿಯ ಸ್ವರೂಪವೇ ಬೇರೆ. ಆಗಿನ ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿ ಲೆಫ್ಟಿನಂಟ್ ಕರ್ನಲ್ ಸೆಟನಕರ್ ಎಂಬಾತ 1857 ನಿಶ್ಯಸ್ರ್ತೀಕರಣ ಶಾಸನದಂತೆ ಒಂದು ಆಜ್ಞೆ ಹೊರಡಿಸಿದ ,ಇದರ ಪ್ರಕಾರ ಯಾರೊಬ್ಬರೂ ತಮ್ಮಲ್ಲಿ ಪರವಾನಿಗಿಯಿಲ್ಲದೇ ಶಸ್ರ್ತಗಳನ್ನುನ್ನಿಟ್ಟುಕೊಳ್ಳುವಂತಿಲ್ಲ ಮತ್ತು ಇರುವ ಶಸ್ರ್ತಾಸ್ರ್ತಗಳನ್ನುರಿಜಿಸ್ಟರ್ಮಾಡಿಸಬೇಕಾಗಿತ್ತು. ಭಾರತೀಯರನ್ನು ನಿರಾಯುಧರನ್ನಾಗಿ , ನಿರ್ವೀರ್ಯರನ್ನಾಗಿ ಮಾಡುವ ಹವಣಿಕೆಯ ವಿರುದ್ಧ ಸಿಡಿದೆದ್ದು ನಿಂತ ಕೀರ್ತಿ ಹಲಗಲಿಯ ಬೇಡರಿಗೆ ಸಲ್ಲುತ್ತದೆ.

         ಹಲಗಲಿ ಬೇಡರು ಕಾಯ್ದೆಯ ವಿರುದ್ಧ ಬಂಡಾಯವೆದ್ದರು. ಕಾರಣ ಬೇಡರು ಬೇಟೆಯಾಡಿ ಜೀವನ ಸಾಗಿಸುತ್ತಿರುವದರಿಂದ ಅವರಿಗೆ ಶಸ್ರ್ತಾಸ್ರ್ತಗಳು ಅವಶ್ಯಕವಾಗಿದ್ದವು. ಆದ್ದರಿಂದ ಕಾಯ್ದೆ ವಿರೋಧಿಸಿದ ಬೇಡ ನಾಯಕರಾದ ಜಿಡಗಪ್ಪ ಜಿಡಗಣ್ಣವರ, ಬಾಲಪ್ಪ, ಹನುಮಪ್ಪ, ರಾಮವ್ವ ಮುಂತಾದವರು ಬಂಡಾಯವೇಳಲು ಜನರನ್ನು ಹುರಿದುಂಬಿಸಿದರು. ಶಸ್ರ್ತಾಸ್ರ್ತಗಳನ್ನು ಒಪ್ಪಿಸುವುದು ಇದು ಇವರ ಆತ್ಮ ಗೌರವದ ಪ್ರಶ್ನೆಯಾಗಿತ್ತು. ಬೇಡರು ತಮ್ಮಲ್ಲಿರುವ ಎಲ್ಲ ಆಯುಧಗಳನ್ನು ಒಪ್ಪಿಸಬೇಕೆಂದು ಆಜ್ಞೆಗೆ ಪ್ರಬಲ ವಿರೋಧ ವ್ಯಕ್ತವಾಯಿತು. ಜನಪದ ಲಾವಣಿಕಾರರೇ ಉಲ್ಲೇಖಿಸಿದಂತೆ  ವಿಲಾಯಿತಿಯಿಂದ ಕಂಪಣಿ ಸರಕಾರ ಹುಕುಮ ಕಳುಹಿಸಿದ, ಜನರಲ್ಲಿರುವ ಕತ್ತಿ, ಕಠಾರಿ, ಕೈಚೂರಿ, ಬಾಕು, ಗುರ್ದಿ, ಸುರಾಯಿ, ಚಕ್ರ, ಬಾಳಿಯ ಭರ್ಚಿ, ಬಿಚ್ಚುಗತ್ತಿ, ಬಾಣ ಬಿಲ್ಲು, ಪಟಾಕ, ಪಿಸ್ತೂಲ, ಕರುಲಿ, ತೇಗಾ, ಜಾಲಗೊಡಲಿ, ಶಸ್ರ್ತ ತೋಪು, ತುಬಾಕಿ, ಹೊಡವು, ಮದ್ದುಗುಂಡು ಎಲ್ಲವನ್ನೂ ತಂದು ಒಪ್ಪಿಬೇಕು, ಮುಚ್ಚಿ ಇಟ್ಟವರಿಗೆ ಮೂರು ವರ್ಷ ಬೇಡಿ, ಕೊಡದೇ ಸತಾಯಿಸುವವರನ್ನು ಕಡಿದು ಹಾಕಬೇಕುಇದು ಆಜ್ಞೆಯಾಗಿತ್ತು.

ಅದಕ್ಕೆ ಜನರ ಪ್ರತಿಕ್ರಿಯೆ ಇದಾಗಿತ್ತು,

ಹಲ್ಲ ಕಿತ್ತಿದ ಹಾವಿನ ಪರಿಯು ನಮಗೆ ಆದಿತಲ್ಲಾ

ರಂಡಿ ಮುಸುಕು ಹಾಕಿ ತಿರುಗಿದರೆ ನಮ್ಮ ಮಾನ ಉಳಿಯುದಿಲ್ಲ

ಮಗ್ಗುಲದಾಗಿನ ಹೆಣತಿ ಕೊಟ್ಟಹಂಗ ಅತಿ ಹೇಡಿ ಆದೇವಲ್ಲಾ

ಸತ್ತ ಹೆಣಕೆ ಶೃಂಗಾರ ಮಾಡಿದ ಪರಿ ಆದೀತಲ್ಲಾ

ಸಾವಕಾರ್ರು ನಮ್ಮ ಜೀವ ಹೋದೀತಂತ ಚಿಂತೆ ಮಾಡೇರಲ್ಲಾ

ಹಗಲ ಮನಿ ಹೊಕ್ಕ ಹಣ ಹೋದರ ಕೇಳುವವರೆ ಇಲ್ಲ

       ಆದ್ದರಿಂದ ಶಸ್ತ್ರಾಸ್ರ್ತ ಒಪ್ಪಿಸುವುದು ಖಡಾಖಂಡಿತವಾಗಿ ಸಾಧ್ಯವಿಲ್ಲಾ ಎನ್ನುತ್ತಾರೆ. ಆಗ ಹೆನ್ರಿಹ್ಯಾವಲಾಕ್ ನೇತೃತ್ವದಲ್ಲಿ ಹಲಗಲಿ ಮೇಲೆ ಬ್ರಿಟಿಷ್ ಸೈನ್ಯ ದಾಳಿ ಮಾಡುತ್ತದೆ. ಹಲಗಲಿ ಬೇಡರು ಪ್ರಬಲವಾಗಿ ಹೋರಾಡುತ್ತಾರೆ. ಬ್ರಿಟಿಷ್ ಸೈನ್ಯ  ಸೋತು ಪಲಾಯನಗೈಯುತ್ತದೆ. ದಾಳಿಯಲ್ಲಿ ಹ್ಯಾವಲಾಕ್ನನ್ನು ಹತ್ಯೆ ಮಾಡಲಾಗುತ್ತದೆ. . ಸೇಡು ತೀರಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿ ಲೆಫ್ಟಿನಂಟ್ ಕರ್ನಲ್ ಸೆಟನ್ಕರ್ ಸೈನ್ಯದೊಂದಿಗೆ ರಾತ್ರಿ ವೇಳೆಯಲ್ಲಿ ಹಲಗಲಿ ಮೇಲೆ ದಾಳಿ ಮಾಡಿ ಊರಿಗೆ ಬೆಂಕಿ ಹಚ್ಚಿಸುತ್ತಾನೆ. ಛಲ ಬಿಡದೇ ಬೇಡರು ಹೋರಾಡುತ್ತಾರೆ, ಆದರೂ  ಹಲಗಲಿ ಸರ್ವನಾಶವಾಗಿ ಹೋಯಿತು .ಸುಮಾರು 300 ಬೇಡರನ್ನು ಬಂಧಿಸುತ್ತಾರೆ. ರಾಜದ್ರೋಹದ ಆಪಾದನೆ ಮೇಲೆ 19 ಜನರನ್ನು ವಿಚಾರಣೆಗೆ ಒಳಪಡಿಸಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸುತ್ತಾರೆ. ಇವರಲ್ಲಿ  13 ಜನರನ್ನು ಮುಧೋಳ ಸಂತೆಯ ದಿನ 11..12.1857 ಬಹಿರಂಗವಾಗಿ  ಗಲ್ಲಿಗೇರಿಸಲಾಯಿತು. ಉಳಿದ 6 ಜನ 3 ದಿನಗಳ ನಂತರ 14.12.1857 ರಂದು  ಹಲಗಲಿಯಲ್ಲಿ ಗಲ್ಲಿಗೇರಿಸಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ಇದೊಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಮರೆಯಲಾಗದ ಘಟನೆ.

       ವೀರ ಸಿಂಧೂರ ಲಕ್ಷ್ಮಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಜಿಲ್ಲೆಗಳಲ್ಲಿ ಆತನ ಹೋರಾಟ ತೀವ್ರವಾಗಿತ್ತು. ಸಿಂಧೂರ ಲಕ್ಷ್ಮಣ ಬ್ರಿಟಿಷರ ವಿರುದ್ದ ಹೋರಾಡಿದ ಒಬ್ಬ ಕಲಿ. ಉಳ್ಳವರಿಗೆ ಸಿಂಹಸ್ವಪ್ನವಾಗಿ ಇಲ್ಲದವರಿಗೆ ಆತ್ಮೀಯನಾಗಿದ್ದ. ಪರಕೀಯ ಹಾಗೂ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಡುತ್ತಲೆ ಸಮಾಜವಾದದ ಕನಸುಕಂಡ ಮಾನವತಾವಾದಿ, ಆದರೆ ಬ್ರಿಟಿಷ ಸರಕಾರ ಅವನನ್ನು ಒಬ್ಬ ದ್ರೋಹಿಯನ್ನಾಗಿ, ಕಳ್ಳನನ್ನಾಗಿ, ಕೊಲೆಗಡುಕನಾಗಿ ಚಿತ್ರಿಸುತ್ತಾ ತನ್ನ ಎಂದಿನ ಕುತಂತ್ರದ ಬಲೆಯನ್ನು ಸಿಂಧೂರ ಲಕ್ಷ್ಮಣನ ಮೇಲೆ ಬೀಸಿತು. ಬಾಗಲಕೋಟೆ ಜಿಲ್ಲೆಯ ಬೀಳಗಿ ಗುಡ್ಡದಲ್ಲಿ ಬ್ರಿಟಿಷರಿಂದ ಹತ್ಯೆಯಾಗಿ ವೀರ ಮರಣವನ್ನಪ್ಪುವ ಮೂಲಕ ಸಿಂಧೂರ ಲಕ್ಷ್ಮಣ ದೇಶಪ್ರೇಮಿಗಳಿಗೊಂದು ಸ್ಪೂರ್ತಿಯಾದ.

 

1905 ಸ್ವದೇಶಿ ಚಳುವಳಿ

    1905 ರಲ್ಲಿ ಲಾರ್ಡಕರ್ಜನ್ ಬಂಗಾಳ ವಿಭಜನೆ ಮಾಡಿದನು. ಇದರ ವಿರುದ್ಧ ಭಾರತೀಯರು ಹೋರಾಟಕ್ಕಿಳಿದರು. ಬ್ರಿಟಿಷರ ಆರ್ಥಿಕತೆಗೆ ಪೆಟ್ಟು ನೀಡಬೇಕೆಂದು ದೇಶಾದ್ಯಂತ ಸ್ವದೇಶಿ ಚಳುವಳಿಯನ್ನು ಆರಂಭಿಸಿದರು. ಬಾಗಲಕೋಟೆಯಲ್ಲಿ ಜಯರಾವ್ ನರಗುಂದ ಅವರ ಮುಂದಾಳತ್ವದಲ್ಲಿ ಸ್ವದೇಶಿ ಚಳುವಳಿಯು ವಿದೇಶಿ ಸಕ್ಕರೆ, ಸೀಮೆ ಎಣ್ಣೆ ಮತ್ತು ವಿದೇಶಿ ಬಳೆಗಳ ವಿರುದ್ಧ ಬಹಿಷ್ಕಾರ ಹಾಕುವ ಮೂಲಕ ಆರಂಭಗೊಂಡಿತು. ಮುಧೋಳದಲ್ಲಿ ರಾಮಾಚಾರ್ಯ ಕಟ್ಟಿಯವರ ನೇತೃತ್ವದಲ್ಲಿ ತಾತ್ಯಾ ತಾಸಗಾಂವಕರ, ಭೀಮು ದೇವಳೆ, ಗಂಗಾರಾಮ್ ಪೇಂಟರ್, ಸ್ವದೇಶಿ ಪ್ರಚಾರ ಆರಂಭಿಸಿದರು. ಗಣಪತಿ ಉತ್ಸವಗಳಲ್ಲಿ ಸ್ವದೇಶಿ ಪ್ರಚಾರ ಪದ್ಯಗಳನ್ನು ಹಾಡಿ ಜನರ ಮನಸ್ಸಿನ ಮೇಲೆ ಸ್ವದೇಶಿ ವಸ್ತುಗಳನ್ನು ಕೊಳ್ಳುವಂತೆ ಛಾಪು ಮೂಡಿಸುತ್ತಿದ್ದರು. ದೀಪಾವಳಿ ನರಕ ಚತುರ್ದಶಿಯಂದು ವಿದೇಶಿ ಬಳೆತೊಟ್ಟ ಮಹಿಳೆಯರ ಕೈಯಿಂದ ಆರತಿ ಮಾಡಿಸಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಮಾರುಕಟ್ಟೆ ಜಾತ್ರೆ, ಉತ್ಸವಗಳಲ್ಲಿ ವಿದೇಶಿ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡುವುದು ಜಿಲ್ಲೆಯಾದ್ಯಂತ ಆರಂಭಗೊಂಡಿತು. ವಿದೇಶಿ ವಸ್ತುಗಳ ದಹನವಾದವು. ಸ್ವದೇಶಿ ಬ್ರುಶ್, ಗುಂಡಿ ತಯಾರಿಕೆ ಕಾರ್ಖಾನೆಗಳು ಮುಧೋಳದಲ್ಲಿ ಆರಂಭಗೊಂಡವು. ಬಾಗಲಕೋಟೆಯಲ್ಲಿಸ್ವದೇಶಿ ವ್ಯಾಪಾರೋತ್ತೇಜಕ ಸಂಸ್ಥೆ’, ‘ಸ್ವದೇಶಿ ಅಂಗಡಿಹಾಗೂಸ್ವರಾಜ್ಯ ಸಂಸ್ಥೆಆರಂಭಿಸಲು ಜಯರಾವ್ ನರಗುಂದ, ಜೋರಾಪುರ, ಯಲಗುರ್ದರಾವ್ ಧಾರವಾಡಕರ ಅವರು ನಿರ್ಧರಿಸಿದರು. ಆಲೂರು ವೆಂಕಟರಾಯರು, ಜಯರಾವ ನರಗುಂದ, ಗೋವಿಂದರಾವ್, ಛಬ್ಬಿ ಮುಂತಾದವರು ಕೂಡಿ 1908 ರಲ್ಲಿಕೃಷಿ ಕರ್ಮೋತ್ತೇಜಕ ಮಂಡಳಿಎಂಬ ಕಂಪನಿ ಆರಂಭಿಸಿದರು. ವಿದೇಶಿ ಶಾಲೆ ಮತ್ತು ಕಾಲೇಜುಗಳನ್ನು ಬಿಟ್ಟು ಹೊರಬಂದಾಗ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಾಗಲಕೋಟೆಯಲ್ಲಿ 1908 ವಿಜಯದಶಮಿಯಂದುಶ್ರೀ ಕೃಷ್ಣ ಪಾಠಶಾಲೆಆರಂಭಗೊಂಡಿತು.

 

1916 ಹೋಂರೂಲ್ ಚಳುವಳಿ

    ಲೋಕಮಾನ್ಯ ತಿಲಕರ ಕಟ್ಟಾ ಅನುಯಾಯಿಗಳಾಗಿದ್ದ ಶ್ರೀನಿವಾಸ ಕೌಜಲಗಿಯವರು 1918 ರಲ್ಲಿ ವಿಜಯಪುರದಲ್ಲಿ ಹೋಂ ರೂಲ್ ಲೀಗ್ನ್ನು ಸ್ಥಾಪಿಸಿದರು. ಇದರ ಅಧ್ಯಕ್ಷತೆಯನ್ನು ಕೌಜಲಗಿಯವರೇ ವಹಿಸಿದ್ದು, ದಾಜಿ ರಾಮಚಂದ್ರ ಲಿಮಯ ಕಾರ್ಯದರ್ಶಿಗಳಾಗಿದ್ದರು, 50 ಜನ ಸದಸ್ಯರಿದ್ದರು. ಮುದ್ದೆಬಿಹಾಳದಲ್ಲಿ ಜುಲೈ 1, 1918 ರಂದು ಹೊಂ ರೂಲ್ ಲೀಗ್ ಗ್ರಂಥಾಲಯ ಆರಂಭವಾಯಿತು. ಮುದ್ದೇಬಿಹಾಳದ ವಕೀಲರಾದ ವೆಂಕಟೇಶ ಜೋಶಿಯವರು ಗ್ರಂಥಾಲಯದ ಕಾರ್ಯದರ್ಶಿಗಳಾದರೆ ಮುದ್ದೆಬಿಹಾಳದ ಎಲ್ಲ ವಕೀಲರು ಸದಸ್ಯರಾಗಿದ್ದರು. ಗ್ರಂಥಾಲಯಕ್ಕೆ ರಾಷ್ಟ್ರೀಯ ಪತ್ರಿಕೆಗಳಾದಯಂಗ್ ಇಂಡಿಯಾ’,‘ನ್ಯೂ ಇಂಡಿಯಾ’, ‘ಕೇಸರಿಗಳನ್ನು ತರಿಸುತ್ತಿದ್ದರು. ಮುಂಬೈ ಪ್ರಾಂತ್ಯದ ರಾಜಕೀಯ ಪರಿಷತ್ತು ವಿಜಯಪುರದಲ್ಲಿ 1918 ಮೇ 5 ರಿಂದ 8 ವರೆಗೆ ಸರದಾರ್ ವಲ್ಲಭ ಭಾಯಿ ಪಟೇಲರ ಸಹೋದರರಾದ ಬ್ಯಾರಿಸ್ಟರ್ ವಿಠ್ಠಲ ಬಾಯಿ ಪಟೇಲರ ಅಧ್ಯಕ್ಷತೆಯಲ್ಲಿ ಜರುಗಿತು. ಕೌಜಲಗಿ ಶ್ರೀನಿವಾಸರಾಯರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ತಿಲಕರು, ಮಹಾತ್ಮಾ ಗಾಂಧಿಜಿಯವರು, ಸಿ.ರಾಜಗೋಪಾಚಾರಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ವಿಜಯಪುರಕ್ಕೆ ಹೋಗುವಾಗ ಗಾಂಧೀಜಿಯವರು ಬಾಗಲಕೋಟೆಗೆ ಭೇಟಿ ನೀಡಿದ್ದರು.

 

1920-22 ಅಸಹಕಾರ ಚಳುವಳಿ

          ಅಸಹಕಾರ ಚಳುವಳಿ ಮತ್ತು ಪ್ರಚಾರ ಮಾಡಲು ಗಾಂಧೀಜಿಯವರು ಬಾಗಲಕೋಟೆಗೆ ಭೇಟಿ ನೀಡಿದ್ದರು. ಈಗ ನೂರು ವರ್ಷಗಳ ಹಿಂದೆ ಅಂದರೆ 27 ಮೇ 1921 ರಂದು ರೇಲ್ವೆ ಸ್ಟೇಷನ್ ಹತ್ತಿರ ರಾಷ್ಟ್ರೀಯ ಶಾಲೆಯ ವರಾಂಡದಲ್ಲಿ ಸಭೆ ಏರ್ಪಾಡಾಗಿತ್ತು. ಹತ್ತು ಸಾವಿರ ಜನರು ಸೇರಿದ್ದರು. ಅಸಹಕಾರ ತತ್ವಗಳಾದ ವಿದೇಶಿ ಶಾಲಾ ಕಾಲೇಜುಗಳ ಬಹಿಷ್ಕಾರ, ವಿದೇಶಿ ವಸ್ತುಗಳ ಬಹಿಷ್ಕಾರ ಕುರಿತು ಮಾತನಾಡಿದರು. ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಖಾದಿಯ ಬದಲಾಗಿ ಕಾಗದದಲ್ಲಿ ಮಾಡಿದ್ದನ್ನು ಕಂಡು ಗಾಂಧೀಜಿಯವರು , “ಎಲ್ಲಿಯವರೆಗೆ ನಿಮ್ಮ ಧ್ವಜ ಕಾಗದದಲ್ಲಿ ಇರುವದೋ ಅಲ್ಲಿಯವರೆಗೆ ನಮ್ಮ ಸ್ವರಾಜ್ಯ ಕಾಗದದಲ್ಲಿಯೇ ಇರುತ್ತದೆ.” ಎಂದು ಟೀಕಿಸಿದರು. ಮುಂದೆ ತುಳಸಿಗೇರಿ ಗ್ರಾಮದಲ್ಲಿ ಖಾದಿಯ ಧ್ವಜ ತಯಾರಿಕೆ ಕೇಂದ್ರ ಆರಂಭವಾಗಿ ಇವತ್ತಿಗೂ ನಡೆದುಕೊಂಡು ಬಂದಿರುವುದು ಒಂದು ಇತಿಹಾಸ.

   ತಿಲಕರ ಸ್ವರಾಜ್ಯ ಫಂಡಿಗೆ ಬಾಗಲಕೋಟೆ ಜನರು ಒಂದು ಸಾವಿರ ರೂಪಾಯಿ ಸಂಗ್ರಹಿಸಿ ಗಾಂಧೀಜಿಯವರಿಗೆ ನೀಡಿದರು. 10.11.1922 ರಂದು ಸಾಯಂಕಾಲ 6 ಗಂಟೆಗೆ ಬಾಗಲಕೋಟೆಗೆ ಮಜಲಿ. ಕೌಜಲಗಿ ಹನಮಂತರಾವ್, ಹಾಗೂ ಗಂಗಾಧರರಾವ್ ದೇಶಪಾಂಡೆಯವರು ಅಸಹಕಾರ ಚಳುವಳಿ ಪ್ರಚಾರಕ್ಕೆ ಬಂದಾಗ 25 ಸಾವಿರ ಜನರು ರಾಮದಾಸ ದರಬಾರ ಅವರ ಮನೆಯ ವರಾಂಡದಲ್ಲಿ ಸಭೆ ಸೇರಿದ್ದರು. ಬಾಗಲಕೋಟೆಯ ಕಾಂಗ್ರೆಸ್ಸ ಕಮಿಟಿ ಮತ್ತು ಖಿಲಾಫತ್ ಕಮಿಟಿಯಿಂದ ಮಾನಪತ್ರ ಅರ್ಪಿಸಲಾಯಿತು.

 

1930 ಬಿಸನಾಳ ಉಪ್ಪಿನ ಸತ್ಯಾಗ್ರಹ

   ಭಾರತದಲ್ಲಿ ತಯಾರಾಗುವ ಉಪ್ಪಿನ ಮೇಲೆ ಬ್ರಿಟಿಷ್ ಸರಕಾರ ತೆರಿಗೆ ವಿಧಿಸಿತು. ಅನ್ಯಾಯ ಕರದ ವಿರುದ್ಧ ದಂಗೆ ಏಳುವುದರ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಮಣಿಸಬೇಕೆಂದು ಗಾಂಧೀಜಿ ನಿರ್ಧರಿಸಿದರು. ಐತಿಹಾಸಿಕ ದಂಡಿ ಪಾದಯಾತ್ರೆ ಮಾಡಿದರು, ರಾಜ್ಯದಲ್ಲೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲೂ ಉಪ್ಪಿನ ಸತ್ಯಾಗ್ರಹ ನಡೆದಂತೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲೂ  ಬಿಸನಾಳ, ಹೊನಗನಹಳ್ಳಿಗಳಲ್ಲಿ  ಉಪ್ಪಿನ ಸತ್ಯಾಗ್ರಹಗಳು ಜರುಗಿದವು.

    ಸಾಮೂಹಿಕ ಶಾಸನ ಭಂಗವನ್ನು ಅಖಂಡ ವಿಜಯಪುರ ಜಿಲ್ಲೆಯ ಯಾವುದಾದರೊಂದು ಸ್ಥಳದಲ್ಲಿ ಕೈಕೊಳ್ಳಬೇಕೆಂದು ಜಿಲ್ಲೆಯ ಯುದ್ಧ ಮಂಡಳದವರು ಬಾಗಲಕೋಟೆಯಲ್ಲಿ ಸಭೆ ಸೇರಿ ನಿರ್ಣಹಿಸಿದರು. ಮಂಡಳದ ಅಧ್ಯಕ್ಷರಾದ ಹಣಮಂತರಾವ್ ಮೊಹರೆಯವರು ಗಲಗಲಿ ಸಮೀಪವಿದ್ದಬಿಸನಾಳ ಗ್ರಾಮವನ್ನು ಆಯ್ಕೆ ಮಾಡಿದರು. ಬಾಗಲಕೋಟೆಯಿಂದ ಪಾದಯಾತ್ರೆಗೆ ನಿರ್ಣಯಿಸಿದರು. ಬಾಗಲಕೋಟೆಯಿಂದ ಬಿಸನಾಳಕ್ಕೆ ಹೋಗಲು ಪ್ರತಿದಿನ ಇಂತಿಷ್ಟು ದೂರ, ಇಂತಿಷ್ಟು ಸಮಯ ನಡೆದು ಹೋಗಬೇಕೆಂಬ ಸ್ವಯಂ ಸೇವಕರ ತಂಡ ರಚಿಸಲಾಯಿತು .ಇದಕ್ಕೆಲಾಲಾಜಿ ಪಥಎಂದು ಹೆಸರಿಸಿದರು.

    ದಿನಾಂಕ 05.05.1930 ರಿಂದ 10.05.1930 ವರೆಗೆ ಒಟ್ಟು ಆರು ದಿನಗಳಲ್ಲಿ ಬಾಗಲಕೋಟೆ, ಗದ್ದನಕೇರಿ, ಬೂದಿಹಾಳ, ಬಾವಲತ್ತಿ, ಕುಂದರಗಿ, ಅರಕೇರಿ, ಸೊನ್ನ, ಬಾಡಗಿ, ಗಲಗಲಿ ಮೂಲಕ 61 ಮೈಲಿ ಸಂಚರಿಸಿ ಬಿಸನಾಳ ತಲುಪಿದರು. 10 ಮೇ 1930 ರಂದು ಮಧ್ಯಾಹ್ನ 2 ಗಂಟೆಗೆ ಸ್ವಯಂ ಸೇವಕರು ಬಿಸನಾಳಕ್ಕೆ ಆಗಮಿಸಿದಾಗ ಸಕಲ ವಾದ್ಯಗಳೊಂದಿಗೆ ಸಾವಿರಾರು ಜನರು ಸ್ವಾಗತಿಸಿ , ಊರೆಲ್ಲಾ ಮೆರವಣಿಗೆ ಮಾಡಿದರು. ನಂತರ ಊರಿನಿಂದ ಒಂದು ಮೈಲು ದೂರದಲ್ಲಿರುವ ಉಪ್ಪನ್ನು ತಯಾರಿಸಲು ಗುರುತಿಸಿದ ಹಳ್ಳಕ್ಕೆ ತೆರಳಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆಯನ್ನು ಹಾಡಿದರು. ಮೊದಲು ಐದು ಜನ ಸ್ವಯಂ ಸೇವಕರು ಹಳ್ಳಕ್ಕೆ ಇಳಿದು ಉಪ್ಪಿನ ಮಣ್ಣನ್ನು ಗಡಿಗೆಯಲ್ಲಿ ತುಂಬಿಕೊಂಡರು. ನಂತರ ಉಳಿದೆಲ್ಲ ಜನರು ಮಣ್ಣನ್ನು ತುಂಬಿಕೊಂಡು ಬಿಸನಾಳಕ್ಕೆ ಬಂದು ಅಗಸಿಯ ಮುಂದೆ ಒಲೆಗಳನ್ನು ಹೂಡಿ ತಾವು ತಂದ ಉಪ್ಪಿನ ಮಣ್ಣನ್ನು ಭಟ್ಟಿ ಇಳಿಸಿ ಶುದ್ಧವಾದ ಉಪ್ಪನ್ನು ತಯಾರಿಸಿದರು. ಇಲ್ಲಿ ತಯಾರಿಸಿದ ಉಪ್ಪನ್ನು ಬಾಗಲಕೋಟೆಯಲ್ಲಿ ಲಿಂಗಾಪುರ ಎಂಬ ಸ್ವಯಂ ಸೇವಕರು ಐದು ರೂಪಾಯಿಗೆ ಲೀಲಾವು ಮಾಡಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಗಲಗಲಿಯ ಹಬ್ಬು, ಬಾಗಲಕೋಟೆಯ ಶ್ರೀನಿವಾಸ ಮಂಗಳವೇಡೆ, ಮೊಹರೆ ಹನಮಂತರಾಯರು, ಕಿರಸೂರ ವಕೀಲರು, ಸಿದ್ದಪ್ಪ ಅಕ್ಕಿಯವರು ಮೊದಲಾದವರು ಭಾಗವಹಿಸಿದ್ದರು. ಡಾ.ನಾ.ಸು.ಹರ್ಡಿಕರ ಅವರ ಆದೇಶದಂತೆ ಬಾಗಲಕೋಟೆಯ ತರುಣ ಸ್ವಯಂ ಸೇವಕರ ತಂಡ ಕೃಷ್ಣ ಪದಕಿಯವರ ನೇತೃತ್ವದಲ್ಲಿ ಮೂರು ತಿಂಗಳ ಕಾಲ ಉಪ್ಪನ್ನು ತಯಾರಿಸಿದರು.

ಬದಾಮಿ ಮತ್ತು ಗುಳೇದಗುಡ್ಡಗಳಲ್ಲಿನ ಸ್ಥಳೀಯರು ಗೋವಾದಿಂದ ಉಪ್ಪನ್ನು ತರಿಸಿ ಕಾನೂನು ಭಂಗ ಮಾಡಿದರು. ಸಿಂದಗಿಯಲ್ಲಿ ಎಸ್.ವೈ.ಪಾಟೀಲ, ವೆಂಕೂಬಾಯಿ ಕೆರೂರು, ತುಳಸಿಬಾಯಿ ಬುರ್ಲಿ ಮತ್ತು ಗಂಗವ್ವ ಅಂಬಲಿ ಇನ್ನು ಕೆಲವು ಮಹಿಳೆಯರು ಸೇರಿದಂತೆ ಉಪ್ಪಿನ ಸತ್ಯಾಗ್ರಹ ನೆರವೇರಿಸಿದ್ದಕ್ಕಾಗಿ ಬಂಧನಕ್ಕೆ ಒಳಗದರು. ಇದೇ ವೇಳೆಯಲ್ಲಿ ವಿಜಯಪುರ ಜಿಲ್ಲೆಯ ಹೊನಗನಹಳ್ಳಿಯಲ್ಲೂ ರಂಗರಾವ್ ದಿವಾಕರ ಅವರ ನೇತೃತ್ವದಲ್ಲಿ ವಿಜಯಪುರದಿಂದ ಹೊನಗನಹಳ್ಳಿಯ ಹತ್ತಿರ ಡೋಣಿ ನದಿಗೆ ಹೋಗಿ ಉಪ್ಪನ್ನು ತಯಾರಿಸಿದರು. ಸಂಜೆಗೆ ಸಭೆಯಲ್ಲಿ ಲೀಲಾವು ಮಾಡಲಾಗಿ ದೇಶಿ ಉಪ್ಪಿನಿಂದ 35 ರೂಪಾಯಿಗಳು ಬಂದವು. ಇದೇ ಪ್ರಕಾರ ಪ್ರತಿದಿನ ಒಬ್ಬೊಬ್ಬರು ಡಿಕ್ಟೇಟರ್ಶಿಪ್ಪಿನಲ್ಲಿ ಉಪ್ಪು ಮಾಡುವ ಸತ್ಯಾಗ್ರಹ ನಡೆಯುತಿತ್ತು. ಹಣಮಂತರಾವ್ ಮೊಹರೆ, ಶ್ರೀನಿವಾಸರಾವ್ ಕೌಜಲಗಿ, ಕಾಕಾ ಕಾರಖಾನೀಸ್ ಮೊದಲಾದವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲಾಯಿತು .ಇವರನ್ನು ದಸ್ತಗೀರ ಮಾಡಿ ಜೈಲಿಗೆ ಒಯ್ಯಲಾಯಿತು.

       ರಾಜ್ಯದ ಅಂಕೋಲೆಯಲ್ಲಿ ಆರಂಭವಾದ ಉಪ್ಪಿನ ಸತ್ಯಾಗ್ರಹ ಅವ್ಯಾತವಾಗಿ 45 ದಿನ ನಡೆಯಿತು. ಉಪ್ಪಿನ ಸತ್ಯಾಗ್ರಹವನ್ನು ಕಾಲಕ್ರಮದಲ್ಲಿ ರದ್ದುಗೊಳಿಸಿ ಅಸಹಕಾರ ಚಳುವಳಿ, ಅರಣ್ಯ ಸತ್ಯಾಗ್ರಹ, ಹೆಂಡದಂಗಡಿಯ ಪಿಕೆಟಿಂಗ್, ಮುಂತಾದ ಆಂದೋಲನಗಳನ್ನು ನಡೆಸಲು ನಿರ್ಣಯ ಕೈಕೊಳ್ಳಲಾಯಿತು. ಒಟ್ಟಿನಲ್ಲಿ 1931-32 ಸತ್ಯಾಗ್ರಹ , ಅಸಹಕಾರ ಚಳುವಳಿಗಳಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ 158 ಜನ ಸ್ವಾತಂತ್ರ್ಯ ಹೋರಾಟಗಾರರು ಸೆರೆಮನೆ ಕಂಡರು.

 

ಹೋರಾಟಕ್ಕೆ ಸಾವಿರ ತೊರೆಗಳು

    ಕರ್ನಾಟಕ ಸಿಂಹ ರೆಂದೇ ಪ್ರಸಿದ್ಧರಾಗಿದ್ದ ಕೌಜಲಗಿ ಶ್ರೀನಿವಾಸರಾಯರು (1873-1940) ಟಿಳಕರ ನಿಕಟ ಸ್ನೇಹಿತರಾಗಿದ್ದರು. ಮಹಾರಾಷ್ಟ್ರ , ಕರ್ನಾಟಕಗಳೆರಡರಲ್ಲೂ ರಾಷ್ಟ್ರೀಯ ಜಾಗೃತಿಗಾಗಿ ದುಡಿದರು. ಅದರಂತೆ ಹಣಮಂತರಾವ ಕೌಜಲಗಿ (1880-1945) ಅವರು 1906 ರಲ್ಲಿ ಸ್ವದೇಸಿ ಚಳುವಳಿ ಕಾಲಕ್ಕೆ ಪ್ರಚಾರ, ಪಿಕೆಟಿಂಗ್ ಮೊದಲಾದವನ್ನು ನಡೆಸಿದ್ದರಲ್ಲದೇಶಿವಾಜಿ ಪ್ಲೇಯಿಂಗ್ ಕ್ಲಬ್ಎಂಬ ಸಂಸ್ಥೆಯ ಆಶ್ರಯದಲ್ಲಿ ಮುಧೋಳದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದರು. ಜಯರಾವ್ ದೇಶಪಾಂಡೆ , ಮೊಹರೆ ಹನಮಂತರಾಯರ  ಬಂಧನದ ಅವಧಿಯಲ್ಲಿಕರ್ನಾಟಕ ವೈಭವರಾಷ್ಟ್ರೀಯ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡು ಮುನ್ನಡೆಸಿದರು.

ಮೊಹರೆ ಹನಮಂತರಾಯರು ( 1892-1960 ) ಉಪ್ಪಿನ ಸತ್ಯಾಗ್ರಹ ಕಾಲಕ್ಕೆ ಜೈಲು ಶಿಕ್ಷೆ ಅನುಭವಿಸಿದರು. 1934 ರಲ್ಲಿ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದಸಂಯುಕ್ತ ಕರ್ನಾಟಕದಿನ ಪತ್ರಿಕೆಯ ಸಂಪಾದಕತ್ವ ವಹಿಸಿ ಅದನ್ನು ಒಂದು ಜನಪ್ರಿಯ ರಾಷ್ಟ್ರೀಯ ದಿನಪತ್ರಿಕೆಯಾಗಿ ಬೆಳೆಸಿದರು.  1937 ರಲ್ಲಿ ಪತ್ರಿಕೆಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು.

ಹರ್ಡೇಕರ ಮಂಜಪ್ಪನವರು ( 1886- 1947 )  ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಹುಟ್ಟಿದ ಇವರು ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ನೆಲೆನಿಂತು ತಮ್ಮ ಬರವಣಿಗೆ ಹಾಗೂ ವಿಧಾಯಕ ಕಾರ್ಯಗಳಿಂದ ಸ್ವಾತಂತ್ರ್ಯ ಚಳುವಳಿಗೆ ಅಪೂರ್ವ ಕೊಡುಗೆ ನೀಡಿದರು. ನೂಲುವುದನ್ನು, ಖಾದಿಯ ಬಳಕೆಯನ್ನು ಜನಪ್ರಿಯಗೊಳಿಸಿದರು. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಜಾಗೃತಿಯಲ್ಲಿ ಹರ್ಡೇಕರ ಮಂಜಪ್ಪನವರು ವಹಿಸಿದ ಪಾತ್ರ ಸ್ಮರಣೀಯವಾದುದು.

  ಕಾಕಾಸಾಹೇ¨ರೆಂದೇ ಜನಪ್ರಿಯರಾದ ಗಣಪತರಾವ ಕಾರಖಾನೀಸ್ ಅವರು ಕರ್ನಾಟಕದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು .ಇವರಿಗೆ 1923 ರಲ್ಲಿ ಪುಣೆಯ ಮುಳಶಿ ಸತ್ಯಾಗ್ರಹದಲ್ಲಿ ನಾಲ್ಕು ತಿಂಗಳ ಶಿಕ್ಷೆಯಾಗಿತ್ತು. ಪದ್ಮಶ್ರೀ ಕಾಕಾಸಾಹೇಬ ಕಾರಖಾನೀಸರು 1937 ರಿಂದ 1942 ರವರೆಗೆ ಅಸೃಶ್ಯತೆ ಮತ್ತು ದೇವದಾಸಿ ಆಚರಣೆ ವಿರುದ್ಧ ಪ್ರಚಾರ ಮಾಡಲು ವ್ಯಾಪಕ ಪ್ರವಾಸವನ್ನು ಕರ್ನಾಟಕ ತುಂಬೆಲ್ಲಾ ಮಾಡಿದರು. ದಲಿತೊದ್ಧಾರ ಮತ್ತು ಸಮಾಜ ಸೇವೆಗಾಗಿ ಸಂಸ್ಥೆಗಳನ್ನು ಕಟ್ಟಿದರು. 1927 ನಂತರ ಸಾಬರಮತಿಯಲ್ಲಿದ್ದು ಖಾದಿಯಲ್ಲಿ ತರಬೇತಿ ಪಡೆದು ಬಂದು ವಿಧಾಯಕ ಕಾರ್ಯ ಕೈಕೊಂಡರು. ಕೌಜಲಗಿ ಶ್ರೀನಿವಾಸರಾಯರೊಂದಿಗೆ ಮಹಾತ್ಮಾ ಗಾಂಧೀಜಿಯವರನ್ನು ವಿಜಯಪುರ ಜಿಲ್ಲೆಗೆ ಕರೆತರುವಲ್ಲಿ ಹಾಗು ಕಾರ್ಯಕ್ರಮ ಸಂಘಟಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಯನ್ನು ತೀವ್ರಗೊಳಿಸಿದವರು ಮಹಾದೇವ ಗೋವಿಂದ ರಾನಡೆಯವರು, ಬಿದರಿಯ ವಾಮನರಾವ ದೇಸಾಯಿಯವರು, ದಾಮು ಅಣ್ಣಾ ಹುಲ್ಯಾಳಕರ, ಶ್ರೀಶೈಲಪ್ಪ ಅಥಣಿ ,ಬರವೆ, ಸಾವಳಗಿಯಿಂದ ಭೂಪಾಲ ನಾಂದ್ರೇಕರ, ಮಂಟೂರು ಸೀತಾಬಾಯಿ ತಿಮಸಾನಿ ಮೊದಲಾದವರು ಮುಖ್ಯರು. ‘ಜಾನ್ಸನ್ ಸಕ್ಕರೆ ಸೇವಿಸಬಾರದು, ಜವಾರಿ ಬೆಲ್ಲ ನಿಮಗೆಲ್ಲಾಎಂಬ ಘೋಷಣೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು. ವಿದೇಶಿ ವಸ್ತ್ರ ಬಹಿಷ್ಕಾರದೊಂದಿಗೆ ಖಾದಿ ಬಟ್ಟೆಗೆ ಜನ ಆಸಕ್ತಿ ತೋರಿದರು.

     ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಕಂಠಿಯವರು ಸ್ವಾತಂತ್ರ್ಯ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. 1941 ರಲ್ಲಿ ವೈಯಕ್ತಿಕ ಸತ್ಯಾಗ್ರಹ ಕೈಕೊಂಡು ಬಂಧನಕ್ಕೊಳಗಾಗಿ ಹತ್ತು ತಿಂಗಳಕಾಲ ಹಿಂಡಲಗಾ ಜೈಲುವಾಸ ಅನುಭವಿಸಿದರು. 1942 ರಲ್ಲಿಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಪುನಃ ಬಂಧಿಸಲ್ಪಟ್ಟರು. ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೇಕರ ಮಂಜಪ್ಪನವರು ಗಾಂಧಿತತ್ವಗಳ ಅನುಷ್ಠಾನದೊಂದಿಗೆ ನೈಷ್ಠಿಕ ಬ್ರಹ್ಮಚಾರಿಯಾಗಿ ಬನವಾಸಿಯಿಂದ ದಾವಣಗೆರೆ, ದಾವಣಗೆರೆಯಿಂದ ಆಲಮಟ್ಟಿಗೆ ಪರಿವ್ರಾಜಕ ಸನ್ಯಾಸಿಯಾಗಿ ಸಂಚರಿಸುತ್ತಾ, ಭವ್ಯಭಾರತದ ಕನಸನ್ನು ಕಾಣುತ್ತ ಅದನ್ನು ಸಾಧಿಸಲು ನಿರಂತರ ಹೋರಾಡಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿ ಸತ್ಯಸಂಧ ಕ್ರಾಂತಿಕಾರಿ ಹೋರಾಟಗಾರರೆನಿಸಿದರು. ಕುಶಾಗ್ರಬುದ್ಧಿಯ ಜಯರಾಮ ದೇಶಪಾಂಡೆಯವರುಕರ್ನಾಟಕ ವೈಭವಪತ್ರಿಕೆಯಲ್ಲಿ  ಆಂಗ್ಲರ ದಬ್ಬಾಳಿಕೆ ಕುರಿತು ಉಗ್ರವಾದ ಲೇಖನಗಳನ್ನು ಬರೆದರು. ಖಾದಿ ಬಟ್ಟೆ ತಯಾರಿಕೆಗೆ ಪ್ರೇರಣೆ ದೊರೆಯಿತು. ಗಾಂಧಿ ಟೊಪ್ಪಿಗೆ ರಾಷ್ಟ್ರೀಯತೆಯ ದ್ಯೋತಕವಾಯಿತು. ಸ್ವಾತಂತ್ರ್ಯ ಹೋರಾಟದ ಚಳುವಳಿಗಾರರಿಗೆ ಮಠಗಳು ,ಮಠಾಧೀಶರು ಆಶ್ರಯ ನೀಡಿದವು. ಸಿಂದಗಿಯ ಸಾರಂಗಮಠ ಶ್ರೀಗಳು, ತಾಳಿಕೋಟಿಯ ಶಿವಬಸವ ಪಟ್ಟದ ದೇವರು ಶ್ರೀ ಖಾಸ್ಗತ ಮಠದ ನೆಲಮನೆಯಲ್ಲಿ ಚಳುವಳಿಗಾರರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದರು. ತಮ್ಮ ವಯಕ್ತಿಕ ಸುಖ ಸಂತೋಷ, ಹಿತಾಶಕ್ತಿಗಳನ್ನು ಬದಿಗೊತ್ತಿ ಮನೆಮಾರು , ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡರು. ಲಾಠಿ ಏಟುಗಳನ್ನು ತಿಂದರು. ಸೆರೆಮನೆವಾಸದ ಕಷ್ಟ ಅನುಭವಿಸಿದರು.

 

ಭಾರತ ಸೇವಾದಳ

       ಸಾಮಾನ್ಯ ಜನರನ್ನು ದೈಹಿಕವಾಗಿ, ನೈತಿಕವಾಗಿ ಹಾಗೂ ಮಾನಸಿಕವಾಗಿ ದೇಶ ಸೇವೆಗೆ ಸಿದ್ಧಗೊಳಿಸಲು ಡಾ.ನಾ.ಸು.ಹರ್ಡೀಕರ ಅವರು 1923 ರಲ್ಲಿ ಕಾಕಿನಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನದಲ್ಲಿ ಸೇವಾದಳವನ್ನು ಪ್ರಾರಂಭಿಸಿದರು. ಅದರ ಶಾಖೆಗಳು ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲಿ ಸ್ಥಾಪನೆಗೊಂಡವು. 1928 ರಲ್ಲಿ ಬಾಗಲಕೋಟೆಯಲ್ಲಿ ಸೇವಾದಳ ಶಾಖೆ ಪ್ರಾರಂಭಗೊಂಡಿತು. ಇದರ ಉದ್ಘಾಟನೆಗೆ ಪಂಡಿತ ಜವಾಹರಲಾಲ ನೆಹರು ಅವರು ಬಂದಿದ್ದರು. ಐದು ದಿನಗಳ ಕಾಲ ಕೃಷಿ ಉತ್ಪನ್ನ ಮಾರಾಟ ಮೇಳ, ನಾಟಕಗಳ ಪ್ರದರ್ಶನ ಏರ್ಪಡಿಸಿ ಜನರನ್ನು ಆಕರ್ಷಿಸಿದರು. ಸೇವಾದಳವು ಬಾಗಲಕೋಟೆಯ ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾಗಿತ್ತು. ಬಾಗಲಕೋಟೆ ಶಾಖೆಗೆ ಕರ್ನಾಟಕದ ವಿವಿಧ ಕಡೆಯಿಂದ ತರಬೇತಿಗಾಗಿ ಸ್ವಯಂ ಸೇವಕರು ಬರುತ್ತಿದ್ದರು. ಇದಕ್ಕೆ ಪ್ರೇರಿತರಾಗಿ ಗುಳೇದಗುಡ್ಡದಲ್ಲಿ ಮುದಕಪ್ಪ ಕಲಬುರ್ಗಿ, ಮಡಿವಾಳಪ್ಪ ಪಟ್ಟಣಶೆಟ್ಟಿ, ಸಾಲಿಗೌಡರ ಮಾಸ್ತರ ಮೊದಲಾದವರು 1938 ರಲ್ಲಿ ಗುಳೇದಗುಡ್ಡದಲ್ಲಿ ಸೇವಾದಳ ಶಾಖೆಯನ್ನು ಪ್ರಾರಂಭಿಸಿದರು. ಇಲ್ಲಿನ ಸ್ವಯಂ ಸೇವಕರಿಗೆ ತರಬೇತಿ ನೀಡಲು ವಿಜಾಪುರದಿಂದ ರಾಜಾರಾಮ ದುಬೆ, ಎಸ್.ನಿಲಿಂಗಪ್ಪ , ಮಂಗಳವೇಡೆ ಶ್ರೀನಿವಾಸರಾಯರು ಮೊದಲಾದವರು ಬರುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಲಾವಣಿಕಾರರು, ಭಜನಾ ಸಂಘಗಳು ಗಾಂಧೀಜಿ, ಸುಭಾಸರ ಸಂದೇಶಗಳನ್ನು ಹಾಡು ಕಟ್ಟಿ ಊರೂರು ತಂಡ ಕಟ್ಟಿ ಜನಜಾಗೃತಿ ಮೂಡಿಸಿದರು.

 

ಧ್ವಜ ಸತ್ಯಾಗ್ರಹ

     ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವುದು ಅಪರಾಧವಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚಳುವಳಿಗಾರರು ಬಾಗಲಕೋಟೆಯ ಪ್ರಮುಖ ಓಣಿಗಳಾದ ಹಳಪೇಟೆ, ಹೊಸಪೇಟೆ ಮತ್ತು ಜೈನಪೇಟೆಗಳಲ್ಲಿ ಸಂಚರಿಸಿ ಅಗಸ್ಟ್ 30 ,1930 ರಂದು ನಗರಸಭೆ ಮೇಲೆ ಧ್ವಜಾರೋಹಣ ಮಾಡಿದರು. 2 ಅಕ್ಟೋಬರ್ 1930 ರಂದು ಗುಳೇದಗುಡ್ಡ ನಗರಸಭೆ ಮೇಲೆ ಪೊಲೀಸರ ಸರ್ಪಗಾವಲಿನ ನಡುವೆ ಫಕೀರವ್ವ ಹಂಪಿಹೊಳಿ ಎಂಬ ಮುಸ್ಲಿಂ ಮಹಿಳೆ ತನ್ನ ಸೀರಿಗೆ ಕಚ್ಚಿ ಹಾಕಿಕೊಂಡು ನಗರಸಭೆ ಕಟ್ಟಡದ ಮೇಲೇರಿ ರಾಷ್ಟ್ರಧ್ವಜ ಹಾರಿಸಿದಳು. 6 ಜುಲೈ 1930 ರಂದು ಹುನಗುಂದದ ತುಂಬೆಲ್ಲಾ ರಾಷ್ಟ್ರಧ್ವಜ ಮೆರವಣಿಗೆ ಮಾಡಿ ದೇಸಾಯಿ ರಾಘವೇಂದ್ರರಾವರವರು ಸಹಕಾರಿ ಸಂಘದ ಮೇಲೆ ಧ್ವಜಾರೋಹಣ ಮಾಡಿದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಹೋರಾಟ ತೀವ್ರವಾಗಿ ನಡೆಯಿತು.

 

ಪಾನ ನಿಷೇಧ

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ರಚನಾತ್ಮಕ ಕಾರ್ಯಗಳನ್ನು ಗಾಂಧೀಜಿಯವರ ಸೂಚನೆಯಂತೆ ಅವಿಭಜಿತ ವಿಜಯಪುರ ಜಿಲ್ಲೆಯಲ್ಲೂ ಕೈಕೊಳ್ಳಲಾಯಿತು. ಅದರಲ್ಲಿ ಪಾನ ನಿಷೇಧವೂ ಒಂದು. ರಾಷ್ಟ್ರೀಯ ಆಂದೋಲನದ ಭಾಗವಾಗಿ ಸಿಂದಿ ಗಿಡಗಳನ್ನು ಕಡೆಯುವದು, ಸಿಂದಿ ಮಾರಾಟ ನಿಷೇಧಿಸಿದರು. ಬಾದಾಮಿ ಪರಿಸರದ ಭಾಗಗಳಾದ ಗುಳೆದಗುಡ್ಡ, ಪರ್ವತಿ.ತೋಗುಣಸಿ, ಕೆಲವಡಿ,ಶಿರೂರು ಮುಂತಾದ ಕಡೆಗಳಲ್ಲಿ ಹೋರಾಟಗಾರರಾದ ಮುದಕಪ್ಪ ಕಲಬುರ್ಗಿ ಅವರು ಮತ್ತು ಅವರ ಸ್ನೇಹಿತರು ಸಿಂಧಿಗಿಡಗಳನ್ನು ಕಡಿಯುತ್ತಿದ್ದರು. ಊರಲ್ಲಿ ಸಿಂದಿ (ಸೆರೆ) ಯನ್ನು ಮಾರಲು ಒಂಟೆ ಹಾಗೂ ಕುದುರೆ ಮೇಲೆ ಹರವಿ ಮತ್ತು ಚರ್ಮದ ಚೀಲದಲ್ಲಿ ತರುತ್ತಿರುವಾಗ ಹೋರಾಟಗಾರರು ಕಲ್ಲೇಸೆದು ಅವನ್ನು ನಾಶ ಮಾಡುತ್ತಿದ್ದರು. ಸಿಂದಿಯ ಮೇಲೆ ಹಾಡು ಕಟ್ಟಿ ಹಾಡುತ್ತಿದ್ದರು.

ಕುಂಟ ಕುದುರಿಯ ಮೇಲೆ

ಕುಣಕೋತ ಬರತಾಳ

ಈಚಲ ಮರದವ್ವ :

ಕಾಸು ಕೊಟ್ಟರ

ಕೈಲಾಸ ತೋರಿಸತಾಳ

ಈಚಲ ಮರದವ್ವ.

    ಸರಾಯಿ ಅಂಗಡಿ ಮುಂದೆ ಪಿಕೆಟಿಂಗ್ ಮಾಡಿ ಅನೇಕ ಹೋರಾಟಗಾರರು ಬಂಧನಕ್ಕೆ ಒಳಗಾದರು. ಬಾದಾಮಿ ತಾಲೂಕಿನ ಕೆರೂರ ಹತ್ತಿರದ ಮಮಟಗೇರಿಯಲ್ಲಿ ಒಂದು ಗಂಟೆ ಅವಧಿಯಲ್ಲಿ ಎರಡು ಸಾವಿರ ಸಿಂಧಿ ಗಿಡಗಳನ್ನು ಕಡಿದು ಹಾಕಲಾಯಿತು. ಬಾಗಲಕೋಟೆಯ ಸೀತಾಬಾಯಿ ಬಳ್ಳೊಳ್ಳಿ, ಯಂಕೂಬಾಯಿ ಪರ್ವತಿಕರ, ತುಂಗಾಬಾಯಿ ಮಿರ್ಜಿ, ಚಂಪಾಬಾಯಿ ಬಾಟಿ, ಪದ್ಮಾವತಿಬಾಯಿ ಶಿವಮೊಗ್ಗಿ, ಲಕ್ಷ್ಮೀಬಾಯಿ ಪದಕಿ ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ ಸರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ಯಶಸ್ವಿಯಾಗಿ ನಡೆಯಿತು. ಅಂದಿನ ಜಿಲ್ಲಾಧಿಕಾರಿಗಳ ವರದಿಯಂತೆ ಸರಕಾರ ಸರಾಯಿ ಮಾರಾಟದಿಂದ 1.40.000 ರೂ. ಆದಾಯ ಬರುವ ಬದಲಾಗಿ 80,000 ರೂಪಾಯಿಗೆ ಇಳಿಯಿತು.

 

ಅರಣ್ಯ ಸತ್ಯಾಗ್ರಹ

    ಕೆರೂರದಲ್ಲಿ ನಡೆದ ಅರಣ್ಯ ಸತ್ಯಾಗ್ರಹಕ್ಕೆ ಬಗಲಕೋಟೆಯಿಂದ ಹೋಗುವ ಸ್ವಯಂ ಸೇವಕರಿಗೆ ಬಾಗಲಕೋಟೆ ಮೋಟಾರ ಕಂಪನಿಯ ಮಾಲೀಕರಾದ ಬೀಡಕರ ಅವರು ಎರಡು ಬಸ್ಸು ವ್ಯವಸ್ಥೆ ಮಾಡುತ್ತಿದ್ದರು. ಮುಂದೆ ಬ್ರಿಟಿಷ್ ಸರಕಾರ ಇವರ ಬಸ್ಸಿನ ಪರವಾನಿಗೆಯನ್ನು ರದ್ದುಗೊಳಿಸಿತು. ಲೋಕಮಾನ್ಯ ಮೋಟಾರ್ ಸರ್ವಿಸ್ ಅನಂತರಾವ್ ದೇಶಪಾಂಡೆಯವರು ಸತ್ಯಾಗ್ರಹಕ್ಕೆ ತೆರಳುವ ಸ್ವಯಂ ಸೇವಕರ ಯಾತ್ರೆಗೆ ಊಟದ ಪಾಕೆಟ್ ಗಳನ್ನು ಸಾಗಿಸಲು ನೆರವಾದರು.

 

ಖಾದಿ ಪ್ರಚಾರ

     ಭಾರತದಿಂದ ಕಚ್ಚಾ ವಸ್ತುಗಳನ್ನು ಇಂಗ್ಲಂಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ಸಿದ್ಧ ವಸ್ತುಗಳನ್ನಾಗಿ ತಯಾರಿಸಿ ಪುನಃ ಭಾರತದಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಅದರಲ್ಲಿ ಮುಂಬೈ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶವು ಹತ್ತಿ ಬೆಳೆಯಲು ಪ್ರಸಿದ್ಧವಾಗಿತ್ತು. ಇಲ್ಲಿಯ ಹತ್ತಿಯನ್ನು ಮ್ಯಾಂಚೆಸ್ಟರ್ಗೆ ಸಾಗಿಸಿ ಸಿದ್ಧ ಉಡುಪುಗಳನ್ನು ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡತೊಡಗಿದರು. ಇದರಿಂದ ಭಾರತೀಯ ಬಟ್ಟೆಗಳಿಗೆ ಮಾರುಕಟ್ಟೆ ಇಲ್ಲದಂತಾಯಿತು.

         ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಅನೇಕ ನೇಕಾರಿಕೆಯ ಕುಟುಂಬಗಳಿದ್ದವು ಅದರಲ್ಲೂ ಇಳಕಲ್ಲು, ಗುಳೇದಗುಡ್ಡ, ರಬಕವಿ, ಬನಹಟ್ಟಿ ಭಾಗಗಳಲ್ಲಿ ಅತಿ ಹೆಚ್ಚು ನೇಕಾರರಿದ್ದು, ಇವರ ಪಾರಂಪರಿಕ ಉದ್ಯೋಗವಾದ ಹತ್ತಿಯ ಹಂಜಿ ತೆಗೆಯುವುದು, ನೂಲುವುದು, ನೇಯುವುದು, ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಯಗಳು ಅವಸಾನದ ಅಂಚಿಗೆ ಬಂದವು. ಒಪ್ಪತ್ತಿನ ಊಟಕ್ಕಾಗಿ ನೇಕಾರರು ಪರದಾಡುವಂತಾಯಿತು. ಸಂದರ್ಭದಲ್ಲಿ ಸ್ವದೇಶಿ ಬಟ್ಟೆ ತಯಾರಿಕೆಗೆ ಹಾಗೂ ಖಾದಿ ಪ್ರಚಾರಕ್ಕೆ ಗಾಂಧೀಯವರು ಕರೆ ನೀಡಿದ್ದರಿಂದ ಜಿಲ್ಲೆಯಲ್ಲಿ ಇದಕ್ಕೆ ವ್ಯಾಪಕವಾಗಿ ಬೆಂಬಲ ದೊರೆಯಿತು.

 

ವಯಕ್ತಿಕ ಸತ್ಯಾಗ್ರಹ

  1938 ರಲ್ಲಿ ಜಗತ್ತು ಮತ್ತೊಂದು ಭಯಾನಕ ಯುದ್ದಕ್ಕೆ ತಳ್ಳಲ್ಪಟ್ಟಿತು. ಸಾಮ್ರಾಜ್ಯಶಾಹಿಗಳಾದ ಬ್ರಿಟಿಷರು ತಮ್ಮ ರಕ್ಷಣೆಗಾಗಿ ಹಾಗೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ದ ಎಂಬ ಯಜ್ಞಕುಂಡದಲ್ಲಿ ಭಾರತೀಯರನ್ನು ಆಹುತಿಕೊಡಲು ನಿರ್ಧರಿಸಿ ಭಾರತೀಯರ ಒಪ್ಪಿಗೆ ಇಲ್ಲದೇ ಇವರನ್ನು ಯುದ್ದಕ್ಕೆ ದೂಡಿದರು. ಶಾಂತಿದೂತರಾದ ಮಹಾತ್ಮಾ ಗಾಂದಿಜಿಯವರು ಇದನ್ನು ವಿರೋಧಿಸಿ ದೇಶಾದ್ಯಂತ ವಯಕ್ತಿಕ ಸತ್ಯಾಗ್ರಹ ಮಾಡುವಂತೆ ಕರೆಕೊಟ್ಟರು. ಮೊದಲಬಾರಿಗೆ ವಿನೋಬಾ ಭಾವೆಯವರು ಸತ್ಯಾಗ್ರಹಿಯಾಗಿ ಬಂಧನಕ್ಕೆ ಒಳಗಾದರು. ದಿನಾಂಕ 24 ಎಪ್ರೀಲ್ 1940 ರಂದು ವಿಜಯಪುರ ಜಿಲ್ಲಾ ಕಾಂಗ್ರಸ್ಸ ಕಮಿಟಿ ಸಭೆ ಸೇರಿ 408 ಜನರ ಸತ್ಯಾಗ್ರಹಿಗಳ ಸಹಿ ಮಾಡಿದ ಪಟ್ಟಿಯನ್ನು ಗಾಂಧೀಜಿಯವರಿಗೆ ನೀಡಿದಾಗ ಇವರಲ್ಲಿ 271 ಜನರಿಗೆ ವೈಯಕ್ತಿಕ ಸತ್ಯಾಗ್ರಹಕ್ಕೆ ಗಾಂಧೀಜಿಯವರು ಅನುಮತಿ ನೀಡಿದರು. ವಯಕ್ತಿಕ ಸತ್ಯಾಗ್ರಹ ಮಾಡುವವರು ಇಂಥ ದಿನ ಸರಕಾರದ ವಿರುದ್ಧ ತನು, ಮನ, ಧನದಿಂದ ಸತ್ಯಾಗ್ರಹ ಮಾಡುತ್ತೇನೆಂದು ಘೋಷಿಸಿ ಸತ್ಯಾಗ್ರಹ ಮಾಡುತ್ತಿದ್ದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ 242 ಜನ ಸತ್ಯಾಗ್ರಹಿಗಳು ಬಂಧನಕ್ಕೆ ಒಳಗಾದರು

1942 ಚಲೇಜಾವ್ ಚಳುವಳಿ

    1942 ಅಗಸ್ಟ್ 9 ರಂದು ಮುಂಬೈಯಲ್ಲಿ ಅಖಿಲ ಭಾರತ ಕಾಂಗ್ರೆಸ್ಸ ಅಧಿವೇಶನ ನಡೆಯಿತು. ಮಹಾತ್ಮಾ ಗಾಂಧೀಜಿಯವರು ಕ್ವಿಟ್ ಇಂಡಿಯಾ ನಿರ್ಣಯವನ್ನು ಮಂಡಿಸಿದರು. ಸಭೆ ನಿರ್ಣಯವನ್ನು ಅನುಮೋದಿಸಿತು. ಅಂದು ರಾತ್ರಿಯೇ ಎಲ್ಲ ನಾಯಕರ ಬಂಧನವಾಯಿತು. 1942 ಬ್ರಿಟಿಷರೇ ಭಾರತ ಬಿಟ್ಟು ತೊಲಗಿಚಳುವಳಿ ಕಾಲಕ್ಕೆ ಅಖಂಡ ವಿಜಯಪುರ ಜಿಲ್ಲೆಯಲ್ಲೂ ಅಭೂತಪೂರ್ವ ಜಾಗೃತಿಯನ್ನು ಕಂಡಿತು. ಇದು ಗಾಂಧೀಜಿಯವರ ಕೊನೆಯ ಹೋರಾಟದ ಅಸ್ತ್ರವಾಗಿತ್ತು. ಚಳುವಳಿಯು ಆರಂಭವಾಗುವುದಕ್ಕಿಂತ ಮೊದಲೇ ನಾಯಕರನ್ನು ಸರಕಾರ ಬಂಧಿಸಿದ್ದರಿಂದ ಚಳುವಳಿ ಹಿಂಸಾತ್ಮಕ ರೂಪ ಪಡೆಯಿತು.

 

ಗುಳೇದಗುಡ್ಡ ಕರ್ನಾಟಕದ ಬಾರ್ದೋಲಿ

ಬಾದಾಮಿ ಪರಿಸರದ ಗುಳೇದಗುಡ್ಡವೂ ಸ್ವಾತಂತ್ರ್ಯ ಹೋರಾಟದ ಒಂದು ಕೇಂದ್ರವಾಗಿತ್ತು. ಅಂದು ಊರು ಕರ್ನಾಟಕದ ಬಾರ್ದೋಲಿ ಎಂದು ಹೆಸರುವಾಸಿಯಾಗಿತ್ತು. ಸುತ್ತಲೂ ಗುಳೇ ರೀತಿಯಲ್ಲಿ ಗುಡ್ಡಗಳಿಂದ ಆವೃತ್ತವಾಗಿರುವ ಗುಳೇದಗುಡ್ಡವು ಹಿಂದಿನಂತೆ ಇಂದೂ ಸಹ ನೇಕಾರಿಕೆ, ರೇಷ್ಮೆ ಖಣಗಳಿಗೆ ಖ್ಯಾತಿ ಪಡೆದಿದೆ. ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಗುಳೇದಗುಡ್ಡದ ಸಿದ್ಧರಾಮಪ್ಪ ತಿಪ್ಪಾ, ಮಡಿವಾಳಪ್ಪ ಪಟ್ಟಣಶೆಟ್ಟಿ, ಸಂಗಪ್ಪ ಹುನಗುಂದ, ಮುದಕಪ್ಪ ಕಲಬುರ್ಗಿ,ಗುಂಡುಭಟ್ಟ ಜೋಶಿ, ಬಾಪೂರಾವ ಬಾಸೂತ್ಕರ, ಶಿವಪ್ಪ ಸಿಂಗದ, ನಿಜಪ್ಪ ನಿಡಗುಂದಿ, ಬಂದಗಿಸಾಬ ರಂಗರೇಜ, ಸಾಬಣ್ಣ ಶಿಂಧೆ, ಹುಚ್ಚಪ್ಪ ಚಿಂದಿ, ಫಕೀರವ್ವ ಹಂಪಿಹೊಳಿ, ಶಿವಪುತ್ರಪ್ಪ ಪಟ್ಟಣಶೆಟ್ಟಿ ಮೊದಲಾದವರು ಹೋರಾಟದ ಮುಂಚೂಣಿಯಲ್ಲಿದ್ದರು.

ಗುಳೇದಗುಡ್ಡದ ಪುರಸಭೆಯ ಮೇಲೆ 2.10.1930 ರಂದು ರಾಷ್ಟ್ರೀಯ ಧ್ವಜವನ್ನು ಹಾರಿಸಲಾಯಿತು.ಆಗಿನ ಕಾಲದಲ್ಲಿ ನಗರಸಭೆ,ಜಿಲ್ಲಾ ಲೋಕಲ್ ಬೋರ್ಡ, ಮುಂತಾದ ಸಾರ್ವಜನಿಕ ಸ್ಥಳಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬಾರದೆಂಬ ನಿರ್ಭಂದವನ್ನು ಬ್ರಿಟಿಷ್ ಸರಕಾರ ಹೇರಿತ್ತು. ನಿರ್ಭಂದವನ್ನು ಮುರಿದು ಓರ್ವ ಮುಸ್ಲಿಂ ಮಹಿಲೇ ಫಕೀರವ್ವ ಹಂಪಿಹೊಳಿ ಧೈರ್ಯ ಉತ್ಸಾಹದಿಂದ ತನ್ನ ಸೀರೆಗೆ ಕಚ್ಚೆ ಹಾಕಿಕೊಂಡು ಪೊಲೀಸರ ಕಾವಲಿನಲ್ಲಿಯೇ ನಗರಸಭೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆದಳು.

ರಾಷ್ಟ್ರೀಯ ಚಳುವಳಿಗೆ ಪೂರಕವಾಗಿ ಗುಳೇದಗುಡ್ಡದಲ್ಲಿ ದತ್ತಾತ್ರೇಯ ವ್ಯಾಯಾಮ ಶಾಲೆಯನ್ನು ಮಹಾತ್ಮಾ ಗಾಂಧೀಜಿ ಅವರ ಹುಟ್ಟಿದ ದಿನದ ನೆನಪಿಗಾಗಿ 2.10.1932 ರಂದು ಮಡಿವಾಳಪ್ಪ ಪಟ್ಟಣಶೆಟ್ಟಿ ಮತ್ತು ಸಿದ್ರಾಮಪ್ಪ ತಿಪ್ಪಾ ಅವರು ಸ್ಥಾಪಿಸಿದರು. ಕೇಂದ್ರ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕೇಂದ್ರವಾಗಿತ್ತು. ರಾಜೇಸಾಬ ಜಮಾದಾರ ಎಂಬ ಪೊಲೀಸ ಅಧಿಕಾರಿವು ಯುವಕರು ಕೆಟ್ಟ ಚಟಕ್ಕೆ ಬೀಳಬಾರದು ವ್ಯಾಯಾಮ ಶಾಲೆಯ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲಿ ಎಂಬ ಸದುದ್ದೇಶದಿಂದ ಪೊಲೀಸ ಆಧಿಕಾರಿಯ ಪ್ರೇರಣೆಯಿಂದ ಶಾಲೆಯನ್ನು ಸ್ಥಾಪಿಸಲಾಗಿತ್ತು. ಇಲ್ಲಿ  ಮುದಕಪ್ಪ ಸಿದ್ರಾಮಪ್ಪ  ಕಲಬುರ್ಗಿ, ಸಾಲಿಗೌಡ ಮಾಸ್ತರ, ಯಳಮೇಲಿ ಷಣ್ಮುಖಪ್ಪ, ಶಿವಪುತ್ರಪ್ಪ ಪಟ್ಟಣಶೆಟ್ಟಿ, ಗಾಣಿಗೇರ ಮುರಗೆಪ್ಪ ಮೊದಲಾದವರು ವ್ಯಾಯಾಮದಲ್ಲಿ ಪರಿಣಿತರಾದರು, 06-05-1930 ರಂದು ಗುಳೇದಗುಡ್ಡದ ನಗರಸಭೆ ಹತ್ತಿರದ ಬಯಲಿನಲ್ಲಿ ಏಳು ಎಂಟು ಸಾವಿರ ಜನ ಸಭೆ ಸೇರಿ ಗಾಂಧಿಯವರ ಬಂಧನ ವಿರೋಧಿಸಿದರು. ಸಭೆಯಲ್ಲಿ ತಿಪ್ಪಣ್ಣ ಶಾಸ್ತ್ರಿಯವರು ಮಾತನಾಡಿದರು. ನಗರಸಭೆಯ ಹತ್ತಿರವಿದ್ದ ಬಯಲಿಗೆಮಹಾತ್ಮಗಾಂಧಿ ಚೌಕಎಂದು ಹೆಸರಿಡಲು ಬಾಸೂತ್ಕರ್ ಅವರು ಸೂಚಿಸಿದಾಗ ಸಭೆಯ ಒಮ್ಮತದಿಂದÀ ಅದನ್ನು ಒಪ್ಪಿತು.

 

ಬಾದಾಮಿ ತಾಲೂಕು ಖಜಾನೆ ಲೂಟಿ

ಅಂಬಲಿ ಚೆನ್ನಬಸಪ್ಪನವರು ಕರ್ನಾಟಕದಲ್ಲಿ ಚಲೇಜಾವ ಚಳುವಳಿ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರಿಂದ ಅವರಿಂದ ಬ್ರಿಟಿಷ ಸರಕಾರದ ವಿರುದ್ದವಾಗಿ ಭಾಗದಲ್ಲಿ ಅನೇಕ ಹೋರಾಟಗಳು ನಡೆದವು.ಅಂಬಲಿಅವರೊಂದಿಗೆ ಬಾದಾಮಿ ಭಾಗದಲ್ಲಿ ಶರಣಯ್ಯ ವಸ್ತ್ರದ,ಸಿದ್ದಪ್ಪ ಮಾಳವಾಡ,ಮಹಾರುದ್ರಪ್ಪ ಪಟ್ಟಣಶೆಟ್ಟಿ,ಹೂಲಿ ವೆಂಕಟರೆಡ್ಡಿ, ಸಿದ್ದರಾಮಪ್ಪ ತಿಪ್ಪಾ,ಮುದಕಪ್ಪ ಕಲಬುರ್ಗಿ,ಸಾಲಿಗೌಡರ ಮಾಸ್ತರ ಮೊದಲಾದವರು ಹೋರಾಟಕ್ಕೆ ಜೊತೆಯಾಗಿದ್ದರು. ಭಾಗದಲ್ಲಿ ಸಂಯುಕ್ತ ಕರ್ನಾಟಕ ಮತ್ತು ಕರ್ನಾಟಕ ವೈಭವ ಪತ್ರಿಕೆಗಳು ದೇಶ ಹಾಗೂ ರಾಜ್ಯದ ವಿವಿಧಡೆಗಳಲ್ಲಿ ನಡೆಯುತ್ತಿರುವ ಚಳುವಳಿ ಬಗೆಗೆ ಮಾಹಿತಿಯನ್ನು ನೀಡುತ್ತಿದ್ದವು.ಇದಲ್ಲದೇ ಭಾಗಕ್ಕೆ ಬೇರೆ ಬೇರೆ ಊರುಗಳಲ್ಲಿ ನಡೆಯುವ ಚಳುವಳಿ ಮಾಹಿತಿಗಳು ಬರುತ್ತಿದ್ದವು.ಅವು ಇತರರಿಗೆ ಸುಲಭವಾಗಿ ತಿಳಿಯದಂತೆ ಸಾಂಕೇತಿಕ ಭಾಷೆಯಲ್ಲಿ ಹೇಳಲಾಗುತ್ತಿತ್ತು.’ಬ್ಯಾಡಗಿಯಲ್ಲಿ ಚಳುವಳಿ ತೀವ್ರವಾಗಿದ್ದರೆ,ಮೆಣಸಿನಕಾಯಿ ಬೆಲೆ ತೇಜಿ ಇದೆ ಎಂದು,ಚಳುವಳಿ ಮಂದ ಗತಿಯಲ್ಲಿದ್ದರೆ ನಮ್ಮಲ್ಲಿ ವ್ಯಾಪಾರವಿಲ್ಲ,ಬೆಲೆ ಕುಸಿದಿದೆ ಎಂದು ಬರುತ್ತಿದ್ದವು. ಅಂದಿನ ದಿನಗಳಲ್ಲಿ ಮನೆ ಮಠ ಬಿಟ್ಟು ದೇಶಕ್ಕಾಗಿ ಜೀವನವನ್ನು ತ್ಯಾಗ ಮಾಡಲು ಸಿದ್ಧರಿದ್ದ ಚಳುವಳಿಗಾರರ ಮೇಲೆ ಸುಳ್ಳು ಆರೋಪಗಳು ಬರುತ್ತಿದ್ದವು. ಹೊಳೆ ಆಲೂರಿನ ಸ್ಟೇಷನ್ ಮಾಸ್ತರ ಟಿಕೀಟಿನ ಹಣವನ್ನು ತಾನೆ ತೆಗೆದುಕೊಂಡು ಚಳುವಳಿಗಾರರು ಲೂಟಿ ಮಾಡಿದ್ದಾರೆಂದು ಆರೋಪಿಸಿದ್ದನು.ಇದನ್ನು ವಿರೋಧಿಸಿದ ಚಳುವಳಿಗಾರರು ಸ್ಟೇಷನ್ ಗೆ ಮುತ್ತಿಗೆ ಹಾಕಿದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡನು.

ಬಾದಾಮಿ ಬಳಿಯ ಗೋವಿನಕೊಪ್ಪ ದಲ್ಲಿ ಸುಮಾರು ಮೂವತ್ತರಷ್ಟು ಚಳುವಳಿಗಾರರು ಸೇರಿ 22. 1. 1943 ರಂದು ಅಂಚೆ ಕಛೇರಿಯ ವ್ಯವಸ್ಥಾಪಕನ ಸಹೋದರನಿಂದ ಕಛೇರಿಯ ಬೀಗದ ಕೈಯನ್ನು ಕಿತ್ತುಕೊಂಡು ಕಛೇರಿಯಲ್ಲಿದ್ದ ಅಂಚೆಗಳನ್ನು ಸುಟ್ಟು ಹಾಕಿದರು. ಗುಳೇದಗುಡ್ಡದ ದತ್ತಾತ್ರೇಯ ವ್ಯಾಯಾಮ ಶಾಲೆಯ ಯುವಕರಾದ ರಾಚಪ್ಪ ಶೆಟ್ಟರ, ಶಿವನಗೌಡ ಸಾಲಿಗೌಡರ, ಸಿದ್ರಾಮಪ್ಪ ತಿಪ್ಪಾ,ಮುದಕಪ್ಪ ಕಲಬುರ್ಗಿ, ಚನ್ನಪ್ಪ ಹರವಿ ಚೊಳಚಗುಡ್ಡದ ಸಿದ್ದಪ್ಪ ಮಾಳವಾಡ ಮುಂತಾದವರು ಸೇರಿ ಅಂಬಲಿ ಚನ್ನಬಸಪ್ಪನವರ ಮಾರ್ಗದಶ್ನದಲ್ಲಿ ಭಾಗದಲ್ಲಿ ತಾರ ತಂತಿ ಕತ್ತರಿಸಿದರು.

  ಗುಳೇದಗುಡ್ಡದ ಗುಡ್ಡದ ಮೇಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೂಗತರಾಗಿ ಬಂದರು. ಬೇರೆ ಊರುಗಳಿಂದ ಹಲವು ಚಳುವಳಿಗಾರರನ್ನು ಕರೆಸಿ ಅಂದು ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಾದಾಮಿ ತಾಲೂಕು ಖಜಾನೆ ಲೂಟಿ ಮಾಡಲು ಯೋಜನೆಯೊಂದನ್ನು ಸಿದ್ದಪಡಿಸಿ ಗುಪ್ತ ಸಭೆ ನಡೆಸಿದರು.ಬಾದಾಮಿ ಖಜಾನೆಯಲ್ಲಿ ರೈತರಿಂದ ಸಂಗ್ರಹಿಸಿದ್ದ ಅರವತ್ತು ಸಾವಿರ ತಗಾದೆ ಹಣ ಸಂಗ್ರಹಿಸಲಾಗಿತ್ತು.ಅದನ್ನು ರಕ್ಷಿಸಲು ಬಲವಾದ ಪೊಲೀಸಕಾವಲು ಪಡೆ ಇತ್ತು. ಯಾರಾದರೂ ಖಜಾನೆ ಮೇಲೆ ದಾಳಿ ಮಾಡಲು ಮುಂದಾದರೆ ಕಾವಲು ಕಾಯುವ ಪೊಲೀಸ ಗಂಟೆ ಬಾರಿಸಿದರೆ ಸಶಸ್ತ್ರವಾಗಿ ಇತರ ಪೊಲೀಸರು ಬರುತ್ತಿದ್ದರು. ಹೀಗಾಗಬಾರದೆಂದು ಗಂಟೆ ಬಾರಿಸುವುದನ್ನು ತಡೆಯಬೇಕೆಂದು ಇಬ್ಬರು ಚಳುವಳಿಗಾರರನ್ನು ನೇಮಿಸಲಾಯಿತು.ಒಂದು ವೇಳೆ ಗಂಟೆ ಬಾರಿಸಿದರೆ ಅಥವಾ ಲೂಟಿ ಮಾಡುವಾಗ ಪೊಲೀಸರು ದಾಳಿ ಮಾಡಿದರೆ ಅವರಿಗೆ ಕವಣೆಗಳಿಂದ ಕಲ್ಲು ಬೀಸಲು ಚಳುವಳಿಗಾರರ ಒಂದು ಪಡೆ ರಚನೆಗೊಂಡಿತ್ತು. ಆದರೆ ಇದೇ ಸಮಯದಲ್ಲಿ ಗುಳೇದಗುಡ್ಡದಲ್ಲಿ ಬಟ್ಟೆ ಅಂಗಡಿ ಲೂಟಿಯಾಗಿದ್ದರಿಂದ ಜಿಲ್ಲಾ ಕೇಂದ್ರದಿಂದ ಹೆಚ್ಚಿನ ಪೊಲೀಸರು ಗುಳೇದಗುಡ್ಡಕ್ಕೆ ಬಂದಿದ್ದರಿಂದ ಅಂಬಲಿ ಅವರು ಯೋಜನೆ ಕೈ ಬಿಡುವಂತಾಯಿತು ಆದರೆ ಅವರ ಹೋರಾಟಗಳು ನಿರಂತರವಾಗಿದ್ದವು.

ಚೊಳಚಗುಡ್ಡದ ಶಂಕರಗೌಡರು ,ಸಿದ್ದಪ್ಪ ಮಾಳವಾಡ ಹಾಗೂ ಗುಳೇದಗುಡ್ಡದ ಚಳುವಳಿಗಾರರು ಸೇರಿಕೊಂಡು ಹೊಳೆ ಆಲೂರು ನಿಲ್ದಾಣವನ್ನು ನಾಶ ಪಡಿಸಲು ಮುಂದಾದರು. ಸ್ಟೇಷನ್ ಮಾಸ್ತರನ ಹತ್ತಿರ ಹೋಗಿ ತಿನ್ನಲು ಕಬ್ಬು ನೀಡಿದರು. ಆಗ ಸ್ಟೇಷನ್ ಮಾಸ್ತರ ತನ್ನ ಕೈಯಲ್ಲಿದ್ದ ಬಂದೂಕನ್ನು ಕೆಳಗೆ ಇಟ್ಟು ಕಬ್ಬು ತಿನ್ನಲು ಮುಂದಾದ ,ಚಳುವಳಿಗಾರರು ಆತನನ್ನು ಥಳಿಸಿ ಕೈಕಾಲು ಕಟ್ಟಿ ದೂರದ ಎರಿ ಹೊಲದಲ್ಲಿ ಎಸೆದು ನಿಲ್ದಾಣಕ್ಕೆ ಬೆಂಕಿ ಹಚ್ಚಿ ಸುಟ್ಟರು.

ನೀರಲಕೇರಿಯಲ್ಲಿ ಗೂಡ್ಸ್ ರೈಲು ಉರುಳಿಸಿದ್ದು.

    ಗುಳೇದಗುಡ್ಡ ಹಾಗೂ ಬಾಗಲಕೋಟೆ ಚಳುವಳಿಗಾರರು ಚನ್ನಬಸಪ್ಪ ಅಂಬಲಿಯವರ ನೇತೃತ್ವದಲ್ಲಿ ನೀರಲಕೇರಿ ಹತ್ತಿರ 1942 ನವೆಂಬರ್ 3 ರಂದು ಧಾನ್ಯ ತುಂಬಿದ್ದ ಗೂಡ್ಸ್ ಗಾಡಿ ಹಳಿತಪ್ಪಿಸಿದ್ದರಿಂದ ರೈಲು ಉರುಳಿತು. ದಿನಾಂಕ 13 ನವೆಂಬರ್ 1942 ರಂದು ಬಾಗಲಕೋಟೆ ಮತ್ತು ಕಡ್ಲಿಮಟ್ಟಿ ನಡುವಿನ ರೈಲು ಕಂಬಿ ಕೀಳಲಾಯಿತು. ಬಾಗಲಕೋಟೆ ಬಳಿಯ ಮಲ್ಲಾಪುರ ಬಳಿ 8 ಫೂಲ್ಗಳನ್ನು ಜಂಗೀನ ಮುರಗಯ್ಯನವರು, ಶಿವಪುತ್ರಪ್ಪ ಪಟ್ಟಣಶೆಟ್ಟಿ ಮೊದಲಾದವರು ಕೆಡವಿ ಹಾಕಿದರು. ತಾಳಿಕೋಟಿಯ ಶ್ರೀಶೈಲಪ್ಪ ಮಸಳಿ, ದತ್ತು ಹಂಚಾಟೆ, ಪ್ರತಾಪಸಿಂಗ್ ಗೌಡಗೇರಿ, ಕುಬೇರಪ್ಪಾ ಭೂಸಾರೆ, ಗುರುನಾಥ ಪುಕಾಳೆ, ತಮ್ಮಾಜಿ ಮಿರಜಕರ, ಢವಳಗಿಯ ನಾಗೇಂದ್ರ ಕಪಟಕರ, ತುಳಜಾರಾಮ ಉತ್ತೂರಕರ ಮೊದಲಾದವರು ಹಾಗೂ ವಿಜಯಪುರದ ಇನ್ನೂರು ಜನ ಕೂಡಿಕೊಂಡು ವಿಜಯಪುರ ಹತ್ತಿರದಲ್ಲಿರುವ ಮಿಂಚನಾಳ ರೇಲ್ವೇ ಸ್ಟೇಶನ್ ಗೆ ಬೆಂಕಿ ಹಚ್ಚಿ ನಡುರಾತ್ರಿಯಲ್ಲಿ ಗುಪ್ತವಾಗಿ ಪರಾರಿಯಾದರು. ಇಲ್ಲಿ ಬಹುಪಾಲು ಹೋರಾಟಗಾರರು ಪೋಲೀಸರ ಕೈಗೆ ಸಿಕ್ಕು ಲಾಠಿ ಏಟು ತಿಂದು ಜೈಲು ಸೇರಿದರು. ಇಂಥ ಅನೇಕ ಹೋರಾಟಗಳು ಇಲ್ಲಿ ನಡೆದವು.  ಮಹಾರಾಷ್ಟ್ರದ ವಿಸಾಪುರ ಜೈಲಿನಲ್ಲಿ ಬಂಧಿಯಾಗಿದ್ದ ಬುರ್ಲಿ ಬಿಂದು ಮಾಧವರು ಬಂಧಿಗಳನ್ನು ಬೆಳಿಗ್ಗೆ ಎಲ್ಲರನ್ನು ಬೇಗ ಎಬ್ಬಿಸಿ ಭಗವದ್ಗೀತೆ, ಮಹಾಭಾರತ, ರಾಮಾಯಣ ಕಾವ್ಯಗಳನ್ನು ಪಠಿಸಲು ಕಲಿಸುತ್ತಿದ್ದರು. ಬೇವೂರಿನ ಪರಪ್ಪ ಸಜ್ಜನರು ಅರಣ್ಯ ಸತ್ಯಾಗ್ರಹ ಮತ್ತು ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಬ್ರಿಟಿಷ್ ಸರಕಾರ ಬಂಧಿಸಿ ಯರವಾಡ ಜೈಲಿನಲ್ಲಿಟ್ಟಿದ್ದರು.

   ಒಟ್ಟಾರೆ 1857 ರಿಂದ 1947 ವರೆಗೆ ನಡೆದ ಸ್ವಾತಂತ್ರ್ಯ ಚಳುವಳಿಯ ವಿವಿಧ ಹಂತಗಳಲ್ಲಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ತೀವ್ರತರವಾಗಿ ಸ್ಪಂದಿಸಿದವು. ಆರಂಭದಲ್ಲಿ 1857 ದಂಗೆಯ ಸಮಯದಲ್ಲಿ ಹಲಗಲಿ ಬೇಡರು ಬಂಡಾಯವೆದ್ದಿದ್ದರು, ನಂತರ ತೀವ್ರಗಾಮಿಗಳ ಕಾಲದಲ್ಲಿ ತಿಲಕರ ಪ್ರಭಾವಕ್ಕೆ ಒಳಗಾಗಿ ಸ್ವದೇಶಿ ಚಳುವಳಿ ಮಾಡಿ ಯಶಸ್ವೀಯಾದರು .ಮಹಾತ್ಮಾ ಗಾಂಧೀಜಿಯವರು ಚಳುವಳಿ ನಾಯಕತ್ವ ವಹಿಸಿಕೊಂಡಾಗ ಅಹಿಂಸಾತ್ಮಕ ಚಳುವಳಿ ಆರಂಭಿಸಿದರು. ಎಲ್ಲ ಹೋರಾಟಗಳ ಮೊತ್ತವಾಗಿ 1947 ಅಗಸ್ಟ್ 15 ರಂದು ದೇಶ ಸ್ವತಂತ್ರವಾಗುವ ಮೂಲಕ ಮಾತೃಭೂಮಿಯ ವಿಮೋಚನೆ ಸಾರಲಾಯಿತು. ಎಲ್ಲೆಲ್ಲೋ ಸಂಭ್ರಮ ಮನೆ ಮಾಡಿತು, ಅದರ ಕಥೆಯೇ ಒಂದು ರೋಮಾಂಚನವಾದುದು.

    ನಾವಿಂದು ಹಲವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರ ಜನಿಸಿದ ಹೊಸತೆಲೆಮಾರಿನ ಯುವಕ ಯುವತಿಯರು ರಾಷ್ಟ್ರಪ್ರೇಮ, ಸಾಮಾಜಿಕ ಜವಾಬ್ದಾರಿ, ಸೇವಾಮನೋಭಾವಗಳ ದೀಕ್ಷೆ ತೊಡಬೇಕಾಗಿದೆ. ಇದಕ್ಕೆ ಅವರಲ್ಲಿ ಪ್ರೇರೆಪಣೆ, ಉತ್ಸಾಹ, ಹುಮ್ಮಸ್ಸು ತುಂಬಲು ವೀರ ಸ್ವಾತಂತ್ರ್ಯ ಸೇನಾನಿಗಳ ಕಥೆಗಳನ್ನು ಅರಿಯುವುದು ಅಗತ್ಯವಾಗಿದೆ.

 

ಅನುಬಂಧ 1.

ಸಾಬಣ್ಣನವರ ಧ್ವಜಾರೋಹಣಕ್ಕೂ 75 ಇತಿಹಾಸ

ಸಿ.ಎಂ.ಜೋಶಿ , ಗುಳೇದಗುಡ್ಡ

   ಗುಳೇದಗುಡ್ಡದ ಸಾಬಣ್ಣ ಶಿಂಧೆ ಅವರು ಒಬ್ಬ ಅಪ್ಪಟ ಸ್ವತಣತ್ರ್ಯ ಹೋರಾಟಗಾರರು.1 ನೇ ಡಿಸೆಂಬರ್ 1907 ರಲ್ಲಿ ಜನಿಸಿದ ಸಾಬಣ್ಣನವರು ತಮ್ಮ 10 ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಬೆಳೆಸಿಕೊಂಡಿದ್ದರು.5 ನೇ ಶಾಲೆಗೆ ಹೋದ ಅವರಿಗೆ ಹೋರಾಟದ ದಿನಗಳು ಶಾಲೆಯಿಂದ ದೂರ ಮಾಡಿದವು.ಗಾಂಧಿಜಿಯವರ ಮೇಲೆ ಅನನ್ಯ ಭಕ್ತಿ ಭಾವವಿಟ್ಟುಕೊಂಡಿದ್ದ ಸಾಬಣ್ಣನವರು ತಾವು ವಾಸಿಸುವ ಗಲ್ಲಿಗೆ ಭಾರತಮಾತಾ ಎಂದು ಹೆಸರಿಟ್ಟಿದ್ದರು.1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ಸ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.ಬ್ರಿಟಿಷರ ಕಣ್ಣು ತಪ್ಪಿಸಲು ಕೆಲವು ಸಲ ಸ್ತ್ರೀ ವೇಷಧರಿಸಿ ಇವರು ತಿರುಗಾಡಿದ ಉದಾಹರಣೆಗಳಿವೆ.ಟೆಲಿಫೋನ್ ತಂತಿ ಕಟ್ ಮಾಡುವುದು, ರೈಲು ಹಳಿ ಕಿತ್ತುವುದು, ಅಂಚೆಪೆಟ್ಟಿಗೆ ನಾಶ ಮಾಡುವುದು ಮುಂತಾದ ಬ್ರಿಟಿಷರ ವಿರುದ್ಧದ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.

ಅಗಸ್ಟ್ 15 ಸ್ವಾತಂತ್ರಯೋತ್ಸವಕ್ಕೆ 75 ಇತಿಹಾಸ ಸಂಭ್ರಮವಾದರೆ ಅಂದು ನಡೆಯುವ ಸ್ವಾತಂತ್ರ್ಯ ಹೋರಾಟಗಾರ ,ದೇಶ ಭಕ್ತ ದಿ.ಸಾಬಣ್ಣನವರ ಮನೆ ಮುಂದಿನ ಧ್ವಜಾರೋಹಣಕ್ಕೂ 75 ಇತಿಹಾಸ.ಹೌದು ,ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಕಂಠಿಪೇಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಸಾಬಣ್ಣ ಶಿಂಧೆ ಅವರು 1947 ಅಗಸ್ಟ್ 15 ರಂದು ಆತ್ಮೀಯರೊಂದಿಗೆ ಸ್ವಾತಂತ್ರ್ಯೊತ್ಸವದ ಸಂಭ್ರಮದ ನಿಮಿತ್ತ ಹಾರಿಸಿದ್ದ ರಾಷ್ಟ್ರ ಧ್ವಜಾರೋಹಣವು ಪ್ರಸ್ತುತ ವರ್ಷದ ಸ್ವಾತಂತ್ರಯೋತ್ಸವದವರೆಗೆ ನೆರವೇರಿಸಿಕೊಂಡು ಬಂದಿರುವುದು ದೇಶಭಕ್ತಿಯನ್ನು ಹೆಚ್ಚಿಸುವಂತೆ ಮಾಡಿದೆ.

ಸ್ವಾತಂತ್ರ್ಯ ದೊರೆತ ದಿನವೇ ಸಾಬಣ್ಣನವರು ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು ಸುಮಾರು 40 ವರ್ಷಗಳ ಕಾಲ ತಾವೇ ಧ್ವಜಾರೋಹಣ ನೆರವೇರಿಸಿಕೊಂಡು ಬಂದಿದ್ದರು.1986 ರಲ್ಲಿ ಸಾಬಣ್ಣನವರು ತೀರಿದ ಬಳಿಕ ಅವರ ಕುಟುಂಬವರ್ಗದವರು ಸುಮಾರು 10 ವರ್ಷಗಳಕಾಲ ಧ್ವಜಾರೋಹಣ ಮುಂದುವರಿಸಿ ನಂತರ ಗಣ್ಯವ್ಯಕ್ತಿಗಳನ್ನು ಧ್ವಜಾರೋಹಣಕ್ಕೆ ಸ್ವಾಗತಿಸಿ ಧ್ವಜಾರೋಹಣ ಮಾಡುವ ಮೂಲಕ ದೇಶಭಕ್ತಿ ಮೆರೆಯುತ್ತಿರುವುದು ರಾಜ್ಯದಲ್ಲಿಯೇ ವಿಶೇಷ ಹಾಗೂ ದೇಶಭಕ್ತಿಗೆ ಮಾದರಿಯಾಗಿದ್ದಾರೆ.

ಸ್ವಾತಂತ್ರ್ಯಹೋರಾಟಗಾರ ಸಾಬಣ್ಣನವರು 40 ವರ್ಷ ತಾವೇ ಧ್ವಜಾರೋಹಣ ಮಾಡಿದ್ದು ನಂತರ 10 ವರ್ಷ ಕುಟುಂಬಸ್ಥರು ಧ್ವಜಾರೋಹಣ ಮಾಡಿಕೊಂಡು ಬಂದು ನಂತರ ಪ್ರತಿ ವರ್ಷ ಪ್ರಮಖ ಹಿರಿಯರು ಹಾಗೂ ಯುವ ಮುಖಂಡರನ್ನು ಆತ್ಮೀಯವಾಗಿ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸುತ್ತಿದ್ದಾರೆ. ಅಂತಹ ಗಣ್ಯ ವ್ಯಕ್ತಿಗಳಾದ ಹಿರಿಯ ನೇಕಾರ ದಾನಪ್ಪ ಬಂಡಿ, ಕುರುಹಿನಶೆಟ್ಟಿ ಸಮಾಜದ ಬಸಪ್ಪ ಕುಮುಚಗಿ ಗೌಡ್ರು, ಹಿರಿಯ ಸಮಾಜ ಸೇವಕ ರಾಚಪ್ಪ ಗೊಗ್ಗಲ, ದೇವಾಂಗ ಸಮಾಜದ ಹಿರಿಯರಾದ ರಂಗಪ್ಪ ಶೇಬಿನಕಟ್ಟಿ, ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ, ಯುವ ನೇತಾರ ಹಣಮಂತ ಮಾವಿನಮರದ, ಹೊಳಬಸು ಶೆಟ್ಟರ , ಕೊರೊನಾ ವಾರಿಯರ್ಸ ಡಾ.ನಾಗರಾಜ ಕುರಿ ಹಾಗೂ ಡಾ.ಬಸವರಾಜ ಬಂಟನೂರ ಧ್ವಜಾರೋಹಣ ಮಾಡಿದ್ದು ವಿಶೇಷ.

ಓಣಿಯಲ್ಲಿ ಹಬ್ಬದ ವಾತಾವರಣ ;

ಅಗಸ್ಟ್ 15 ಬಂದರೆ ಸಾಕು ಪ್ರತಿವರ್ಷ ಸಾಬಣ್ಣನವರ ಮನೆ ಮುಂದೆ ಹಬ್ಬದ ವಾತಾವರಣ ಕಳೆಗಟ್ಟಯತ್ತದೆ. ಓಣಿಯಲ್ಲಿ ಯುವಕರು ಸೇರಿದಂತೆ ಪ್ರತಿಯೊಬ್ಬರು ಉತ್ಸಾಹದಿಂದ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸುತ್ತಾರೆ. ಮಕ್ಕಳಿಗೆ ಸಿಹಿ ಹಂಚಿ ದೇಶಪ್ರೇಮ ಮೆರೆಯುತ್ತಾರೆ. ಸ್ವಾತಂತ್ರ್ಯ ನಂತರ ಸಾಬಣ್ಣನವರಿಗೆ ಸರಕಾರ ನೀಡುತ್ತಿದ್ದ ಮಾಶಾಸನವನ್ನು ಒಂದು ವರ್ಷ ಮರಳಿ ಕಳಿಸಿ ದೇಶಪ್ರೇಮ ಮೆರೆದಿದ್ದರು. ಕಾರಣ ಕೇಳಿದರೆ ದೇಶದ ರಕ್ಷಣೆಗೆ ನಿಂತ ಸೈನಿಕರ ಸೇವೆಗಾಗಿ ಎಂದು ಖುಷಿಯಿಂದ ಹೇಳುತ್ತಿದ್ದರಂತೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದ ತಮ್ಮ ಮನೆ ಮುಂದೆ ಧ್ವಜಾರೋಹಣ ಮಾಡುತ್ತಿದ್ದ ಗುಳೇದಗುಡ್ಡದ ಸಾಬಣ್ಣ ಶಿಂಧೆ ಅವರು 1986 ರಲ್ಲಿ ಮರಣ ಹೊಂದಿದ ಬಳಿಕ ಅವರ ಕುಟುಂಬವರ್ಗ ಇಂದಿಗೂ ಧ್ವಜಾರೋಹಣ ಮುಂದುವರೆಸಿದೆ.

( ಕೃಪೆಕನ್ನಡಪ್ರಭ 15.8.2021 )

 

ಅನುಬಂಧ 2

 

ಕರ್ನಾಟಕದ ಗಾಂಧಿ ನೀಲಕಂಠಜಿ ಗಣಾಚಾರಿ.

    ಗಾಂಧಿ ತತ್ವಗಳ ಅನುಷ್ಠಾನದಲ್ಲಿ ತಮ್ಮ ಜೀವಿತದ ಉದ್ದಕ್ಕೂ ದುಡಿದು ಗಾಂಧಿ ಕನಸಿನ ಆದರ್ಶ ಗ್ರಾಮಗಳ ಸ್ಥಾಪನೆಯಲ್ಲಿ ಕರ್ನಾಟಕದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಹೆಸರಾದ ನೀಲಕಂಠಜಿ ಗಣಾಚಾರಿಯವರು 94 ವರ್ಷಗಳ ಸಾರ್ಥಕ ಬದುಕನ್ನು ಬದುಕಿ 2010 ಡಿಸೆಂಬರ್ 14 ರಂದು ನಮ್ಮನ್ನಗಲಿದರು. ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರನೂರ ಗ್ರಾಮದಲ್ಲಿ ಸಮಾಧಿಯಿದ್ದು , ಇಲ್ಲಿ ಪ್ರತಿ ವರ್ಷ ಗಾಂಧಿಲೋಕದ ಅವಧೂತ ನೀಲಕಂಠಜಿ ಅವರ ಪುಣ್ಯತಿಥಿ  ಜರುಗುತ್ತಿದೆ.

     ನೀಲಕಂಠ ಗೊರಚಯ್ಯ ಗಣಾಚಾರಿ ಅವರು ಜೂನ 10 ,1916 ರಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು. ಬಾಲಕರಿರುವಾಗಲೇ ಸ್ವಾತ್ರಂತ್ಯ ಚಳುವಳಿಯಲ್ಲಿ ಧುಮುಕಿದರು. ಬಾಲಕ ನೀಲಕಂಠ 4 ನೇ ತರಗತಿ ಓದುತ್ತಿರುವಾಗಲೇ ಎಲ್ಲೆಡೆ ಸ್ವರಾಜ್ಯ ಆಂದೋಲದ ಮಾತು. ವಿದ್ಯಾರ್ಥಿ ನೀಲಕಂಠನನ್ನು ಶಿಕ್ಷಕರು ಹೊಸೂರಿನಿಂದ ಬೈಲಹೊಂಗಲಕ್ಕೆ ವರ್ತಮಾನ ಪತ್ರಿಕೆಗಳನ್ನು ತರಲು ಕಳಿಸುತ್ತಿದ್ದರು. ಹೊಸೂರು ಗಂಡುಮೆಟ್ಟಿನ ನೆಲ. ಸ್ವಾತ್ರಂತ್ಯ ಆಂದೋಲನಕ್ಕೆ ಪುಟ್ಟ ಗ್ರಾಮದ ಕೊಡುಗೆ ದೊಡ್ಡದು. ಇಲ್ಲಿ ಗಾಂಧಿ, ನೆಹರು, ವಲ್ಲಭಾಯಿ ಪಟೇಲರು ಬಂದುಹೋಗಿದ್ದಾರೆ. ಹೋರಾಟಗಾರರ ಪ್ರಭಾವವೇ ನೀಲಕಂಠಜಿ ಅವರ ಮೇಲಾಗಿ ಇವರು ಆಗಿನಿಂದಲೇ ಇಡೀ ಬದುಕನ್ನು ರಾಷ್ರಕ್ಕಾಗಿ ಮುಡಿಪಿಟ್ಟರು.

       ಗಾಂಧೀಜಿ 1937 ರಲ್ಲಿ ಬೆಳಗಾವಿ ಜಿಲ್ಲೆ ಹುದಲಿ ಗ್ರಾಮಕ್ಕೆ ಬಂದಾಗ ಇವರು ಗಾಂಧಿ ಒಟ್ಟಿಗೆ 50 ಮೈಲು ನಡೆದುಕೊಂಡು ಹೋದರು. ಅಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ನೀಲಕಂಠಜಿ ಅವರ ಖಾದಿ ಮತ್ತು ಗಾಂಧಿ ತತ್ವಗಳ ಒಲವನ್ನು ಕಂಡ ಗಾಂಧಿವಾದಿ ಕೌಜಲಗಿ ಹನಮಂತರಾಯರು ತಮ್ಮ ಚರಕಾ ಸಂಘದಲ್ಲಿ ಸೇರಿಸಿಕೊಂಡು ಖಾದಿಯ ಶಿಕ್ಷಣಕ್ಕಾಗಿ ಇವರನ್ನು ವಾರ್ಧಾಕ್ಕೆ ಕಳಿಸಲಾಯಿತು. ಮುಂದೆ ಹುದಲಿಯ ಜಮ್ನಾಲಾಲ ಖಾದಿ ವಿದ್ಯಾಲಯದಲ್ಲಿ ಖಾದಿ ಶಿಕ್ಷಣ ಪೂರೈಸಿದರು. 1942 ಚಳುವಳಿ ಸಂದರ್ಭದಲ್ಲಿ ಮುನವಳ್ಳಿ ಬಳಿ ಇವರನ್ನು ಬಂಧಿಸಿ 5 ತಿಂಗಳುಗಳ ಕಾಲ ಜೈಲಿಗೆ ಹಾಕಿದರು. ಜೈಲಿನಿಂದ ಬಿಡುಗಡೆಯಾಗಿ ಬಂದು ಖಾದಿ ನೇಯ್ಗೆಯ ಶಿಕ್ಷಣ ಕೊಡಲು ಅಮರಗೋಳ, ಗೊಬ್ಬರಗುಂಪಿ, ಹುಣಸೀಕಟ್ಟಿ ಗ್ರಾಮಗಳಿಗೆ ತೆರಳಿದರು. ಅಮರಗೋಳದಲ್ಲಿ ಮಾಡುತ್ತಿದ್ದ ಇವರ ಕೆಲಸದ ವರದಿ ಗಾಂಧೀಜಿಯವರನ್ನು ತಲುಪಿದಾಗ ಗಾಂಧಿಜಿಯವರ ಕಾರ್ಯದರ್ಶಿಯವರಿಂದ ನೀಲಕಂಠಜಿ ಅವರಿಗೆ ಪತ್ರ ಬಂತು. ಅದರಲ್ಲಿ "ತಾವು ಹಳ್ಳಿಗಳಲ್ಲಿ ಸೇವಾ ಸಲುವಾಗಿ ಕೂತಿದ್ದೀರಿ, ಅದರ ವರದಿಯನ್ನು ನನಗೆ ತೋರಿಸಿದರು. ಗಾಂಧಿಜಿಯವರು ಇದನ್ನೇ ಇಚ್ಛೆ ಮಾಡುತ್ತಾರೆ, ಹೊಸ ತರುಣರು ಹಳ್ಳಿ ಹಳ್ಳಿಗೆ ಹೋಗಿ ಸೇವೆ ಮಾಡಲಿಕ್ಕೆ ತೊಡಗಬೇಕು. ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿ ಗಾಂಧೀಜಿಯವರ ಆಶೀರ್ವಾದವಿದೆ". ಸೇವಾಶ್ರಮದ ವಿದ್ಯಾಲಯದ ಪ್ರಾಚಾರ್ಯ ನರಹರಿ ಪರೇಖ ಪತ್ರ ಬರೆದಾಗ ನೀಲಕಂಠಜಿ ಅವರಿಗೆ ಹಳ್ಳಿಗಳಲ್ಲಿ ಕೆಲಸ ಮಾಡುವ ಶ್ರದ್ಧೆ ಮತ್ತಷ್ಟು ಬೆಳೆಯಿತು.    

        ನೀಲಕಂಠಜಿಯವರು ವಿನೋಬಾರ ಕರೆಯ ಮೇರೆಗೆ ಕೇರಳ, ತಮಿಳುನಾಡು. ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧಕ್ಕಾಗಿ ಪಾದಯಾತ್ರೆ ಕೈಕೊಂಡು ಜನಜಾಗೃತಿ ಮೂಡಿಸಿದರು. ಮಹಾರಾಷ್ಟ, ರಾಜ್ಯಸ್ಥಾನ, ಉತ್ತರ ಪ್ರದೇಶ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಸರ್ವೋದಯ ಕೆಲಸಕ್ಕಾಗಿ ಒಂದು ವರ್ಷಗಳ ಕಾಲ ಸಂಚರಿಸಿದರು. ಗಾಂಧಿ ತತ್ವಗಳ ರಚನಾತ್ಮಕ ಕಾರ್ಯ ಮಾಡಲು ಹೊಸೂರು, ಗುರ್ಲಹೊಸೂರು, ಗೊಬ್ಬರಗುಂಪಿ. ನರಗುಂದ, ಕಲಹಾಳ, ಶಿಗ್ಲಿ. ಬಾದಾಮಿ ತಾಲೂಕು ಉಗಲವಾಟ, ಮಲಘಾಣ. ಕೃಷ್ಣ ಕಿತ್ತೂರ, ಸುರೇಬಾನ ಮತ್ತು ನರೆನೂರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡರು. ಇಲ್ಲಿಗಾಂದೀಜಿಯವರ ತತ್ವಗಳಾದ ಸತ್ಯ, ಅಹಿಂಸೆಗಳ ಮೂಲಕ ಖಾದಿ ಗ್ರಾಮೋದ್ಯೋಗ, ಪಾನ ನಿರೋಧ, ಗೋಹತ್ಯಾ ನಿಷೇಧ,ಗ್ರಾಮ ಸುಧಾರಣೆ, ಗ್ರಾಮ ಸ್ವಚ್ಛತೆ, ಗ್ರಾಮಸ್ವರಾಜ್ಯ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದರು. ಹೊಸೂರು, ಶಿಗ್ಲಿ, ಸುರೇಬಾನ, ಶಿರೋಳ, ಮಲಘಾಣ, ಕೃಷ್ಣ ಕಿತ್ತೂರುಗಳಲ್ಲಿ ಪ್ರೌಢ ಶಾಲೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗಾಂಧಿಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಲು ಕರೆನೀಡಿದರು.

       ಅನೇಕ ಹಳ್ಳಿಗಳಲ್ಲಿ ಇವರು ಇಡೀ ಊರನ್ನೇ ಹಿಂಸಾಚಾರಕ್ಕೆ ಇಳಿಸುತ್ತಿದ್ದ ಮನೆತನದ ವಾಜ್ಯಗಳನ್ನು ಶಾಂತಿ ಸಮಾಧಾನಗಳಿಂದ ಬಗೆಹರಿಸಿ ಸೌಹಾರ್ದತೆಯ ವಾತಾವರಣ ಮೂಡಿಸಿದ್ದಾರೆ. ಗಾಂಧಿ ತತ್ವಗಳನ್ನು ಎಲ್ಲ ವಿಧಗಳಿಂದಲೂ ಕಾಂರ್iರೂಪಕ್ಕೆ ತಂದ ಇವರ ಅಪಾರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು 1992 ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇವರ ಮಕ್ಕಳಾದ ಪಂಚಾಕ್ಷರಯ್ಯ ಗಣಾಚಾರಿ, ಗಂಗಯ್ಯಾ ಗಣಾಚಾರಿ. ಬಂಧುಗಳಾದ ಡಾ.ರುದ್ರಯ್ಯಾ ಭಂಡಾರಿ ಮೊದಲಾದವರು ನೀಲಕಂಠಜಿಯವರ ತತ್ವಾದರ್ಶಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

    ನೀಲಕಂಠಜಿ ಗಣಾಚಾರಿಯವರು ತಮ್ಮ 94 ನೇ ವಯಸ್ಸಿನಲ್ಲಿ ಸೇವೆಯಲ್ಲಿರುವಾಗಲೇ ಡಿಸೆಂಬರ್ 14. 2010 ರಲ್ಲಿ ತೀರಿಕೊಂಡರು. ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಸಮಾಧಿಯಿದ್ದು ಸ್ಮಾರಕವಾಗಿ ನಿರ್ಮಾಣವಾಗುತ್ತಿದೆ. ಪ್ರತಿ ವರ್ಷ ಜರುಗುವ ಪುಣ್ಯತಿಥಿ ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆಯಿಂದ ಅದರಲ್ಲೂ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು, ಗಾಂಧಿ ಅನುಯಾಯಿಗಳು, ಮಠಾಧೀಶರು ಪಾಲ್ಗೊಳ್ಳುತ್ತಾರೆ. ವಿಜಯಪುರದ ಶ್ರೀ ಸಿದ್ದೇಶ್ವರಸ್ವಾಮಿಜಿ ಮೊದಲಾದವರು ಪಾಲ್ಗೊಂಡ  ಪುಣ್ಯತಿಥಿ ಕಾರ್ಯಕ್ರಮವು 2014 ಡಿಸೆಂಬರ 10 ರಂದು ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಜರುಗಿತು.

ಡಾ.ಪ್ರಕಾಶ .ಖಾಡೆ 

#

 

  ಅನುಬಂಧ -3

      ಬೇರೆ ಬೇರೆ ಉದ್ದೇಶಗಳಿಗಾಗಿ ಭಾರತಕ್ಕೆ ಬಂದ ಬ್ರಿಟಿಷ್ ಅಧಿಕಾರಿಗಳಲ್ಲಿ ಅನೇಕರು ಅನಿವಾರ್ಯವಾಗಿ ಕರ್ನಾಟಕದ ನೆಲದಲ್ಲೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿ ಬಂದದ್ದು ಅಂದಿನ ಒಂದು ಸಹಜ ಸಂಗತಿ. ಹಾಗೆ ಕರ್ನಾಟಕಕ್ಕೆ ಬಂದ ಅನೇಕರು ಕರ್ತವ್ಯಕ್ಕಷ್ಟೇ ತಮ್ಮ ಕೆಲಸಗಳನ್ನು ಸೀಮಿತಗೊಳಿಸಿಕೊಳ್ಳದೇ ಬಿಡುವಿನ ವೇಳೆಯಲ್ಲಿ ಇಲ್ಲಿನ ಸಾಂಸ್ಕøತಿಕ ಜಗತ್ತಿಗೆ ಪ್ರವೇಶಿಸತೊಡಗಿದ್ದರಿಂದ ಅನೇಕ ಅಮೂಲ್ಯ ಸಂಪತ್ತು ನಮಗೆ ದೊರೆಯಿತು. ರೈಸ್. ಕಿಟ್ಟೆಲ್, ಗೋವರ್, ಮೊಗ್ಲಿಂಗ್, ರೀವ್, ಮುಂತಾದವರು ಕನ್ನಡಕ್ಕೆ ಮಾಡಿದ ಉಪಕಾರ ಅಷ್ಟಿಷ್ಟಲ್ಲ. ಅವರ ಹಾದಿಯಲ್ಲಿಯೇ ವಿದ್ವಾಂಸರಾದ ಡಾ.ಜಾನ್ ಫೆಯ್ಫುಲ್ ಫೀಟ್ ಅವರು ಕೂಡ ನಡೆದು ಕನ್ನಡ ಶಾಸನ ಕ್ಷೇತ್ರಕ್ಕೆ , ಕನ್ನಡ ಇತಿಹಾಸ ಕ್ಷೇತ್ರಕ್ಕೆ , ಕನ್ನಡ ಜಾನಪದ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಫ್ಲೀಟ್ ಅವರು ಕೆಲಕಾಲಇಂಡಿಯನ್ ಆಂಟಿಕ್ವರಿಪತ್ರಿಕೆಯ ಸಂಪಾದಕರಾಗಿದ್ದರು. ಅವಧಿಯಲ್ಲಿ ಹಿಂದೆಯೇ ಸಂಗ್ರಹಿಸಿಟ್ಟುಕೊಂಡಿದ್ದ ಹಾಡುಗಳಲ್ಲಿ ಒಂದೊಂದೇ ಲಾವಣಿಯನ್ನು ಆಗಾಗ ಪ್ರಕಟಿಸತೊಡಗಿದರು. ಹೀಗೆ 1885- 1890 ನಡುವೆ ಐದು ಲಾವಣಿಗಳನ್ನು ಪ್ರಕಟಿಸಿದರು. ( ಪ್ಲೀಟ್ ರು ಸಂಪಾದಿಸಿದ ಲಾವಣಿಗಳಲ್ಲಿ ಎರಡು ಲಾವಣಿಗಳು ಬಾದಾಮಿ ಬಂಡಾಯವನ್ನು ಪ್ರತಿನಿಧಿಸುವುದರಿಂದ  ಅವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.)

 

ಬಾದಾಮಿ ಕಿಲ್ಲೆ ಕೆಡವಿದ ಪದ

 

ಭಾದೂರ ಕಟ್ಟಿಸಿದಂಥ ಬಾದಾಮಿ ಕಿಲೇಕ

ಬಂತೋ ಪ್ರಳಯಕಾಲ

ಸುತ್ತ ರಾಜ್ಯದೊಳು ಮೇಲಾದ ಕಿಲೆಯ

ಆಯಿತೊ ನೆಲದ ಪಾಲಾ  /ಪಲ್ಲ/

 

ಕಿಲೇದ ಚಮತ್ಕಾರ ಹೇಳಯಿವಿ

ಕೇಳರಿ ಮಜಕೂರಾ

ಗುಡ್ಡದ ಮೇಲೆ ಗಡಾ ಕಾಣತದ

ಭಾಳ ಅಪರಾಂಪರಾ

 

ಮುನ್ನೂರು ಅರವತ್ತು ಕಿಲೇವು

ಕಟ್ಟಿಸಿದ ಭಾದೂರ ಸಾಹೇಬರಾ

ಕುಂಟ ಕುರುಡರಿಗೆ ಅನ್ನಕ್ಷೇತ್ರ

ಅಲ್ಲಿ ಇಟ್ಟಿದ್ದ ಕರಾರಾ

 

ಬಸರ ಹೆಂಗಸರಿಗೆ ಎರಡಾಳಿನ ಕೂಲಿ

ಕೊಟ್ಟಾನ ಮಜೂರಾ

ಒಂಬತ್ತು ವರುಷ ಕಟ್ಟಿದ ಜನ

ಹನ್ನೇರಡು ಸಾವಿರಾ

 

ಸುತ್ತ ಅಳವಾರಿ ಕಬ್ಬಿಣ

ದ್ವಾರಗಸಿ ಇದ್ದವನೂ

ಕಲ್ಲುಗಚ್ಚಿಲೆ ಕಟ್ಟಿದ ಗೋಡಿಗೆ

ಬರದಾರ ಚಿತ್ತಾರಾ /ಚಾಲ/

 

ಬ್ರಾಮರಿಗೆ ಜಂಗಮರಿಗೆ

ಭೂಮಿದಾನ ಪತ್ತರಾ ಪತ್ತರಾ

ಕಾಜಿಮುಲ್ಲಾ ಪಕೀರಗೆ

ಊರಕೊಟ್ಟಾ ಜಾಗೀರಾ ಜಾಗೀರಾ

 

ಸುರ ಶಿಪಾಯಿ ಚಾಕ್ರಿ ಅವರ ಮೇಲೆ

ಇತ್ತು ಬಲ ಪೇರಾ ಪೇರಾ

ವರಟಾರು ಘನ ಶೀದಾ

ಲೋಕದೊಳಗೆ ಜಾಹೀರಾ ಜಾಹೀರಾ

 

ಭೂದಾರನ ಹುಕುಮು ನಡೆಸುತ್ತಿದ್ದ

ಬಲ ದೂರಾ ದೂರಾ / ತೋಡ/

 

ಪುಣ್ಯವಂತ ಮಾರಾಯರ

ಗುರುತಾ ಉಳಿಯಲಿಲ್ಲ ಜರಾ

ಕೂನದ ಕಿಲ್ಲೇವು ಕುಂಪಣಿಯವರು

ಮಡ್ಯಾರ ಸಂಹಾರಾ /1/

ಕಿಲೇ ಕೆಡುವಾಗ ನಾಡ ಮೇಗಿನ ಜನ

ಮರುಗಿತೋ ಮರಾಮರಾ

ಶಿಪಾಯಿ ಸೂರರು ಉಪಾಯ ಏನದೆ

ತಂದಾರ ಕಣ್ಣಿಗಿ ನೀರಾ

 

ಮುತ್ತಿನಂತ ಬುರುಜು ಸುತ್ತಲೆ ಬಿದ್ದವು

ಹೇಳಲೇನ ಹೆಸರಾ

ಹುಡುಗಾಟ ಆದೀತು ಕಲಿಯುಗದೊಳಗ

ತಿಳಿಯ ಚಮತಕಾರಾ

 

ಸರಕಾರ ಬಂದು ಕೆಡವಿದ ಮೇಲೆ

ಯಾರಿಲ್ಲ ಧರಾ

ಕಳಸ ಇಲ್ಲದ ತೇರಿನ ಗತಿ

ಬಾದಾಮಿ ಶೃಂಗಾರಾ

 

ಚಪ್ಪನ್ನ ದೇಶಕ ಪ್ರಸಿದ್ದ ಜಾಗಾ

ಆಳಿಕೆ ಧೋಪಾರಾ

ಸಾದಾಸಿ ನೋಡಲು ಶಾಸ್ತ್ರಸಿದಂತ

ಬಾದಾಮಿ ಕ್ಷೇತ್ರರಾ / ಚಾಲ /

 

ದೇಸಾಯಿ ಅಂತಾನ ಗೋಷವಾದಿತು

ಹಣೆಭಾರಾ ಹಣೆಥಾರಾ

ಯುಗತಿದಿಂದತಿ ತೊಗಂಡರು

ಎಲ್ಲ ರಾಜದ ಕರಾಕರಾ

ಅಲ್ಲಿಂದ ಕಿಲೇ ಅಳಿದಾರೋ

ಗುಡಿಯ ಗೋಪರಾ ಗೋಪರಾ

ದಿನ ಒಂದಕು ಹುಕುಮು ನಡುಸತಾರ

ಇಲ್ಲ ಸ್ಥೀರಾ ಸ್ಥೀರಾ / ತೋಡ /

 

ಕ್ಷಿತಿಯೊಳು ಬಾದಾಮಿ ಪತಿ ವಿರುಪಾಕ್ಷನ

ಕರುಣದಿ ವಿಸ್ತಾರಾ

ತಿಳಿದು ಹೇಳಿದನು ಜಾಣಿಸಿ ಕೇಳಿರಿ

ಬಲ್ಲಂತ ಹಿರಿಯರಾ

 

ಪೇಶವಾನ ಮೊಗಲಾಯಿ ಕಾಲಕೆ

ಲಡಾಯಿ ಆಯಿತ ಟೀಕ

ಏಳನೂರ ಪಾಲಕಿ ಕಾಲಿ ಮಾಡಿದ್ದು

ಟಾವಿಕಿತ್ತೊ ಜನಕ

 

ಹತ್ತೆಂಟ ಸರ್ತಿ ಲಡಾಯಿ ಹೊಡದವರು

ರಾಜ್ಯಕ ಬಿದ್ದು ಬೆಳಕ

ಟೀಪು ಸುಲ್ತಾನ ಭಾದೂರ ಸಾಹೇಬಗ

ಮುತ್ತೂ ಮಾಣಿಕ

 

ಮದ್ದುಗುಂಡು ಜಂಜಾಲು

ಟೋಪುಗಳು ಇದ್ದವು ಅನೇಕ

ಶಾಣೆ ಮನುಷ್ಯನ ಜಾಣಿಸಿ ನೋಡಿರಿ

ಕಂಡ್ಹಂಗ ಪ್ರತಿಲಂಕ / ಚಾಲ /

 

ಕರ್ನಾಟಕ ಪ್ರಾಂತಕ ಆಧಾರ ಇತ್ತು

ಈಗಡಾ ಈಗಡಾ

ಬಡುಕೊಂಡ ಹೋದರೆ ಕೇಳವರಯಾರಿಲ್ಲ

ನಾಡಾ ಕೇಳಾ ನಾಡಾ

ಎಂತ ಹೊತ್ತು ತಂದ್ಯೊ ಪರಮೇಶ್ವರ ಕಿಲೆಯಕ

ಕೇಡಾ ಭಲ ಕೇಡಾ

 

ಕೆಡುವಾಗ ಶಿಡಿಲಿನಂತ ಸಪ್ಪಳಾಯಿತೊ

ಧಡಾಧಡಾ ಧಡಾಧಡಾ

ಧೂಳ ಮುಸುಕಿ ಸೂರ್ಯಂಗೆ ಬಂದ್ಹಾಂಗಾಯಿತು

ನೋಡು ಮೂಡ ನೋಡ ಮೂಡಾ / ತೋಡಾ /

 

ತಿಳಿದು ನೋಡ ಲೆಕ್ಕಾ ಓದಿದ ಮನುಷ್ಯಗೆ

ಕಾಲಗ್ನಾನ ವಳದಿತು ಮನಕಾ /2 /

ಕವಿ -ವಿರುಪಾಕ್ಷ

ಸಂಗ್ರಹ - ಬಾಳಿ ಇಂಟಿ ಗುಳೆದಗುಡ್ಡ 29.01.1874 

ಕೃತಿ - ಪ್ಲೀಟರು ಸಂಗ್ರಹಿಸಿದ ಲಾವಣಿಗಳು.

 

ಅನುಬಂಧ 4.

 

ಮಂಡ್ರೋಲ ಸಾಹೇಬರ ಪದ

ಮೊದಲಿಗೆ ಮಂಡ್ರೋಲ ಸಾಹೇಬ ಬಂದು ಬೇತಮಾಡಿ

ಠಣೆವ್ಹಾಕಲಿಬೇಕೆಂದೊಳ್ಳೇ ಕಿಲ್ಲೆವ ನೋಡಿ / ಪಲ್ಲ /

ಶ್ರೀಮಂತರ ದೌಲತ ಏನು ಮೌಜಿಲಿತ್ತೂ

ಬಲೆ ಭಲೇ ಶಿಪಾಯಿ ಬಿಟ್ಟು ಹೋದರು. 1

 

ಬ್ಯಾಸತ್ತೂ ಸಾಹೇಬ ಗೋಕುಲ್ಯಾ ಲಡಾಯಿ ಮಾಡಿ ಸತ್ತೂ /

ಇಂಗ್ರೇಜರ ದಂಡು ಬಿಡದಲೆ ಬೆನ್ಹತ್ತೂ / ಚಾಲು /

 

ಪುಂಡ ಪಾಳಗಾರರು ಕೂಡೀ

ತಂಮೊಳಗ ತಾವು ಮಾತಾಡಿ

ಕಳಕೊಂಡರು ನೆಂಬಿದ ಗೋಡೀ

ಬಿಟ್ಟುಕೊಟ್ಟು ಹೋದರವರೋಡಿ / ಏರು /

 

ನೆಲೆಯಿಲ್ಲದಾಯಿತೂ ನೀವು ಕೇಳಿರಿಗ

ಪರಂಗೇರ ಠಾಣೆವು ಬಿದ್ದಿತು ಪುಂಣೇದಾಗ / 1 /

ಧಾರವಾಡದ ಕಿಲ್ಲೆವ ಠಾಣೆವ ಹಾಕತಾರಾ

ಅಲ್ಲಿಂದ ತಕ್ಕೊಂಡಾರು ಬೆಳಗಾವಿ ಶಾಪೂರಾ

ಬಾದಾಮಿ ಮೇಲೆ ದಂಡು ಕೂಡಿತೆ ಬಲು ಪೂರಾ

ಗದಗಿನಾ ಸೀಮೆ ಮೇಲೆ ನವಲಗುಂದ ಜೇರಾ / ಚಾಲು /

 

ಡೊಂಬಳದ ಕಿಲ್ಲೆವ ನೋಡಿದಾರು

ಸನ್ಮಾತದಿಂದ ಬೇಡಿದಾರು

ದೊಡ್ಡತೋಪ ತುಂಬಿ ಹೊಡಸಿದಾರೂ

ಕಲ್ಲುಗೋಡಿ ಒಡು ಕೆಡಿಸಿದಾರು/  /ಏರು /

ಕಡದಾಡಲಿಲ್ಲ ಕರ್ನಾಟ ದೇಶದ ಮಂದೀ

ಜಗಳಕ ಜರಿದು ಕೊಟ್ಟು ಹೋದರು ತಾವಂಜಿ / 2 /

 

ಸುತ್ತಲೀ ರಾಜೆವ ಠಾಣೆವ ಹಾಕುತಲಿ

ರೈತರಿಗೆ ರಾಜಿ ಮಾಡಿ ಬರದು ಕೊಟ್ಟರೋಲಿ

ಹಿಂಗ ತಿಳಿಯದ್ಹೋದಿತು ಪರಂಗೇರ ನೆಲಿ

ಏಕರಾಜ್ಯ ಮಾಡಿದಳು ಕುಪಣಿ ಹೆಂಣ ಬಾಲಿ /ಚಾಲು /

 

ಆಕೆ ಹೇಳಿದ ವಚನಾದಿಂದ

ಬಾರ ನೆಡಿತು ಸಾಹೆಬರಾ ಮುಂದ

ತುರ್ಪಿನಾ ಫೌಜು ಹಿಂದಿಂದ

ಬಲಕಚೆರಿ ನೆರೆದಂತೆ ದುಂದ / ಏರು /

 

ರೋಣದಾಸಮತ ತಾಲೂಕ ಸುದ್ದಿಯೇನು

ಇಂಗ್ರೇಜಿ ಮುನಶಿ ಕುಂತು ವಿಚಾರ ಮಾಡಿದಾನು /3 /

ಎಂತೆಂತ ಕಿಲ್ಲೆವು ಬಿದ್ದು ಹೋದುವಲ್ಲ  ಗೋಡೀ

ಮೇಗಿನ ತೋಪುಗಳು ಕಿತ್ತರು ಈಡ್ಯಾಡೀ

ತಂಮ ರಾಜ್ಯೆದ ನಡತಿ ದೇಶಕೆಲ್ಲ ಮಾಡೀ

ರೊಕ್ಕ ತಿಂದವರಿಗ್ಯೆಲ್ಲಾ ಹಾಕುತಾರ ಬೇಡೀ / ಚಾಲು /

 

ಸರದಾರ ಸಾಹೆಬ ಸಟ್ಟೀಲಿ

ಕುಂತನು ಕುರ್ಸೆದ ಮೇಲೆ

ದಂಡ ಯಿಳವಿದ ಸುತ್ತಮುತ್ತಾಲಿ

ರೈತರಿಗೆ ಬರದು ಕೊಟ್ಟರೋಲಿ / ಏರು /

 

ಧರಿಯೊಳಗ ಮೆರೆವ ಬ್ರಹ್ಮೇಶ ಬಟ್ಟಿಗೇರಿ

ಆತನ ಕರುಣವಸಕರಡಿ ಬಾಲ ಸಾರಿ / 4 /

ಸಮಾಪ್ತ

 

..ಪರಿಯ್ಯಾ ಬಿಂನ ವೀರಭದ್ರಯ್ಯಾ ಗಣಾಚಾರಿ ಬಾದಾಮಿ 5.2.1874

ಕವಿ- ಬ್ರಹ್ಮೇಶ ಬಜ್ಜಗೇರಿ

ಕೃತಿ - ಪ್ಲೀಟರು ಸಂಗ್ರಹಿಸಿದ ಲಾವಣಿಗಳು.

 

 

ಡಾ.ಪ್ರಕಾಶ .ಖಾಡೆ, ಮನೆ ನಂ. ಎಸ್.135, ಸೆಕ್ಟರ್ ನಂ.63,  ನವನಗರ, ಬಾಗಲಕೋಟೆ .587103  ಮೊ.9845500890

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ