ಶುಕ್ರವಾರ, ಏಪ್ರಿಲ್ 26, 2013


                                           ಅಂಬರದೊಳಗನ ಅಕ್ಕಮಹಾದೇವಿಯರು    
                                                                       ವಿದ್ಯಾ ಕುಂದರಗಿ

ಬಹಿರಂಗದಲಿ,
ಬದುಕ  ಸಾಮ್ರಾಜ್ಯದೊಳಗೆ
ಅರಮನೆಯ ಮೃಗಗಳಿಗಂಜಿ,
ಉಡುತಡಿಯ ಅಡಿಅಡಿಯಲ್ಲೂ
ಉದರ ಪಾತಕಗಳ ಬೆನ್ನಿಗೆ ಕಟ್ಟಿಕೊಂಡೇ
ಅಟ್ಟಾಡಿಸಿ ದುಡಿದರೂ
ಹಸಿವೆಗೆ ಅಟ್ಟುಂಡು
ತೃಷೆಗೆ ಸೇದಿ ಕುಡಿದರೂ
‘ನಾನೇ ಆಳರಸ...’ಎನುವ
ಕೌಶಿಕ ಭಾವಗಳ ತೃಷೆಗೆ
ತಂಪೆರೆದ ಜೀವನದಿ,
ಮತ್ತೆ ಹಳಿಯುತ್ತೇವೆ ದುರ್ವಿಧಿ.

ಹೊರಗೊರಗೆ,
ಮುಕ್ತಳಾಗಿದ್ದಾಳೆ,
ಮೆರವಣಿಗೆ ಹೊರಟಿದ್ದಾಳೆ,
ಬಂಧನ ಕಳಚಿದ್ದಾಳೆ....
ಎಂದು ಭೋರಿಡುತ್ತಲೇ
ಪೊರೆ ಕಳಚಿದ ಭಾವ ......

ಹೃದಯ ಹಂದರದೊಳಗೆಲ್ಲೊ
ಸೀತೆ, ಸಾವಿತ್ರಿ, ರೇಣುಕೆ, ಮಂಡೋದರಿಯರ
ಮಹಾ ಸತಿತ್ವ ಮೊರೆತ.....
ಅಹಲ್ಯೆ, ಊರ್ಮಿಳೆ, ಶಬರಿಯರ
ಪವಿತ್ರಾತ್ಮದ ಕೊರೆತ......
ಅಂಬೆ,ಕುಂತಿ,ದ್ರೌಪದಿಯರ
ಪ್ರಯೋಗ ಪಥ.....
ಎಲ್ಲರ ತಲ್ಲಣ,ತನನ,ರಣರಣ.

ಥೇಟ್ ಪಡಿಯಚ್ಚುಗಳು
ನಾವು
ಎನೇಂದರೇನು?
ರಣಭಯಂಕರ ಅಭಯಾರಣ್ಯದೊಳಗೆ
ಹಂಬಲದ ಗೂಡು ಕಟ್ಟಿ,
ಬಂಧಗಳ ಅಡಕಲೊಟ್ಟಿ,
ಭಾವಗಳ ಬೀಡುಬಿಟ್ಟಿರುವ ....
ಸಾಂತ್ವನದ ಬೆನ್ನು ತಟ್ಟಿರುವ
ನಾವು-ನೀವುಗಳು






ಅಂತರಂಗದೊಳಗೆ
ಆಸೆಯಳಿದು ಭಾವ ಬೆತ್ತಲಾದರೂ
ಮೈಸುತ್ತಿಕೊಂಡಿರುವ ಅಗಣಿತಸೂತ್ರಗಳ
ಭವಪಾಶ ಬಿಡಿಸಿಕೊಳ್ಳಲಾಗದ......,
ಬಂಧಮುಕ್ತ ಕದಳಿ ಕೂಡ
ಅಗಮ್ಯ,ಅಗೋಚರ,ಅಪ್ರತಿಮ
ಅರಸಿ ಹೊರಟ
ಅಂಬರದೊಳಗನ ಅಕ್ಕಮಹಾದೇವಿಯರು.

     *  ವಿದ್ಯಾ.ಕುಂದರಗಿ.
       



















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ